ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆಗೆ ಆಗ್ರಹಿಸಿ ಪತ್ರ ಚಳವಳಿ

Last Updated 3 ಜನವರಿ 2014, 10:58 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ವಿಶ್ವವಿದ್ಯಾಲಯ ನಿರ್ಗಮಿತ ಕುಲಪತಿ ಡಾ.ಎಸ್.ಸಿ.ಶರ್ಮಾ ಅವರ ಅಧಿಕಾರ ಅವಧಿಯಲ್ಲಿ ನಡೆದಿರುವ ಶೈಕ್ಷಣಿಕ, ಆಡಳಿತಾತ್ಮಕ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ವಿವಿಧ ಸಂಘಟನೆ ಮುಖಂಡರು, ಲೇಖಕರು, ಪ್ರಗತಿಪರ ಚಿಂತಕರು ಗುರುವಾರ ಪತ್ರ ಚಳವಳಿ ಆರಂಭಿಸಿದರು.

ರಾಷ್ಟ್ರಪತಿ, ಮುಖ್ಯಮಂತ್ರಿ, ರಾಜ್ಯಪಾಲರು, ಉನ್ನತ ಶಿಕ್ಷಣ ಸಚಿವರು ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದು ಹಾಕಿದರು. ಜಿಲ್ಲೆಯ ಎಲ್ಲೆಡೆಯಿಂದಲೂ ಪತ್ರ ಚಳವಳಿ ನಡೆಸಲಾಗುವುದು ಎಂದು ಡಿವೈಎಫ್‌ಐನ ಎಸ್‌. ರಾಘವೇಂದ್ರ ತಿಳಿಸಿದರು. ಪಿಎಚ್‌.ಡಿ ಪಡೆಯಲು ಎರಡು ವರ್ಷ ಕಡ್ಡಾಯವಾಗಿ ಸಂಶೋಧನೆ ನಡೆಸಬೇಕೆಂದು ಯುಜಿಸಿ ನಿಯಮವಿದ್ದರೂ ಅದನ್ನು ಮೀರಿ ಕೇವಲ ಆರು ವಿದ್ಯಾರ್ಥಿಗಳಿಗೆ ಪಿಎಚ್‌.ಡಿ ನೀಡಿ ಪಕ್ಷಪಾತ ಎಸಗಲಾಗಿದೆ. ಇದು ಯುಜಿಸಿ ನಿಯಮಾವಳಿ ಹಾಗೂ ಸಂವಿಧಾನ ಅನುಚ್ಛೇದ 14–21ರ ಉಲ್ಲಂಘನೆಯಾಗಿದೆ ಎಂದು ದೂರಿದರು.

ವಿಶ್ವವಿದ್ಯಾಲಯದ ಈಗಿನ ಕುಲಪತಿ ಜವಾಬ್ದಾರಿ­ಯಿಂದ ನುಣುಚಿಕೊಳ್ಳುತ್ತಿದ್ದು, ಈಗಾಗಲೇ ನೀಡಿರುವ ಪಿಎಚ್‌.ಡಿ, ಡಿ.ಲಿಟ್‌, ಡಿ.ಎಸ್‌ಸಿ ಪದವಿಗಳನ್ನು ಕೂಡಲೇ ವಾಪಸ್‌ ಪಡೆಯಬೇಕು. ಎಲ್ಲ ಅಕ್ರಮಗಳ ಕುರಿತು ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಚಿಂತಕ ಕೆ.ದೊರೈರಾಜು, ತುಮಕೂರು ವಿ.ವಿ ಸಿಂಡಿಕೇಟ್‌ ಮಾಜಿ ಸದಸ್ಯ ಪ್ರೊ.ಜಿ.ಎಂ.­ಶ್ರೀನಿವಾಸಯ್ಯ, ಅಖಿಲ ಭಾರತ ವಕೀಲರ ಒಕ್ಕೂಟದ ಜಿಲ್ಲಾ ಘಟಕದ ಕಾರ್ಯದರ್ಶಿ ಎಸ್‌.ರಮೇಶ್‌, ತುಮಕೂರು ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಸಿ.ಯತಿರಾಜು, ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಸಯ್ಯದ್‌ ಮುಜೀಬ್‌, ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜವಾಹರ್‌, ಸಾಹಿತಿ ಗಂಗಾಧರಮೂರ್ತಿ, ವಕೀಲರಾದ ಸುಧೀಂದ್ರ, ನವೀನ್‌, ವೆಂಕಟೇಶ್‌, ಸಿಐಟಿಯು ಪ್ರಧಾನ ಕಾರ್ಯದರ್ಶಿ ಎನ್‌.ಕೆ.ಸುಬ್ರಹ್ಮಣ್ಯ, ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಇ.ಶಿವಣ್ಣ, ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್‌.ನಾಗರಾಜ್‌, ಆದಿಮೂರ್ತಿ, ಟಿ.ಡಿ. ಶಾಂತಕುಮಾರ್‌, ನಿವೃತ್ತ ಎಂಜಿನಿಯರ್ ರಾಮಚಂದ್ರಪ್ಪ, ಮುತ್ತುರಾಜ್‌, ಪ್ರಾಂತ ರೈತ ಸಂಘದ ಮುಖಂಡ ಬಿ.ಉಮೇಶ್‌ ಇತರರು ಜಿಲ್ಲಾ ನ್ಯಾಯಾಲಯ ಮುಂಭಾಗದಿಂದ ನಗರದ ಪ್ರಧಾನ ಅಂಚೆ ಕಚೇರಿಯವರೆಗೆ ಮೆರವಣಿಗೆ ಹೊರಟು ಅಲ್ಲಿಂದ ಅಂಚೆ ಪತ್ರ ರವಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT