ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆಗೆ ಎನ್‌ಎಸ್‌ಯುಐ ಸಂಘಟನೆ ಒತ್ತಾಯ

Last Updated 29 ನವೆಂಬರ್ 2011, 6:20 IST
ಅಕ್ಷರ ಗಾತ್ರ

ಹರಪನಹಳ್ಳಿ: ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಗಳು ತೀವ್ರ ಹದಗೆಟ್ಟಿದ್ದು, ಕೂಡಲೇ ಅಭಿವೃದ್ಧಿ ಕಾಮಗಾರಿ ಆರಂಭಿಸಬೇಕು ಹಾಗೂ 2 ವರ್ಷಗಳ ಅವಧಿಯಲ್ಲಿ ದುರಸ್ತಿಯ ನೆಪದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರವಾಗಿದ್ದು, ಅದರ ಸಮಗ್ರ ತನಿಖೆಗೆ ಒತ್ತಾಯಿಸಿ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ಸಂಘಟನೆಯ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಪಟ್ಟಣದಲ್ಲಿ ಸೋಮವಾರ ರಸ್ತೆತಡೆದು ಪ್ರತಿಭಟನೆ ನಡೆಸಿದರು.

ಸ್ಥಳೀಯ ಹಿರೇಮೇಗಳಗೇರಿ ಪಾಟೀಲ್ ಸಿದ್ದನಗೌಡ ಪದವಿಪೂರ್ವ ಕಾಲೇಜು ಆವರಣದಿಂದ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು. ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಸಮೀಪದ ವೃತ್ತದಲ್ಲಿ ಸೇರಿ ಬಹಿರಂಗ ಸಭೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಪಿ. ಶಿವಕುಮಾರನಾಯ್ಕ ಮಾತನಾಡಿ,  ತಾಲ್ಲೂಕಿನಲ್ಲಿ ಹಾದುಹೋಗಿರುವ 5ರ ಪೈಕಿ, 4 ಹೆದ್ದಾರಿಗಳ 200ಕಿ.ಮೀ. ನಷ್ಟು ರಸ್ತೆಯ ಸ್ಥಿತಿ ಅಯೋಮಯವಾಗಿದೆ. ರಸ್ತೆಯ ತುಂಬಾ ಗುಂಡಿಗಳು ಬಿದ್ದಿದ್ದು, ಸರಣಿ ಅಪಘಾತಗಳು ಸಂಭವಿಸಿವೆ. ಆದರೂ, ಅಧಿಕಾರಿಗಳು ರಸ್ತೆಯ ದುರಸ್ತಿಗೆ ಮುಂದಾಗಿಲ್ಲ ಎಂದು ಆಕ್ರೋಶ  ವ್ಯಕ್ತಪಡಿಸಿದರು.

ಸಾಕಷ್ಟು ಅನುದಾನ ಬಿಡುಗಡೆಯಾಗಿದ್ದರೂ, ಅಭಿವೃದ್ಧಿ ಕೇವಲ ಕಾಗದದಲ್ಲಿ ಉಳಿದಿದೆ. ಅನುದಾನವನ್ನು ಶಾಸಕರ ಹಿಂಬಾಲಕರು, ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಭ್ರಷ್ಟಕೂಟ ಕಬಳಿಸಿರುವ ಸಾಧ್ಯತೆಗಳಿದ್ದು, ಕೂಡಲೇ ತನಿಖೆ  ನಡೆಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಖಾಜಾಪೀರ್, ಮಾರುತಿ, ಪೀರ್‌ಸಾಬ್, ತೇಜಸ್‌ಬಾಬು, ಸಂತೋಷ್, ನಾಗರಾಜ್, ವೀರೇಶ್, ಚೇತನಕುಮಾರ್, ಕೃಷ್ಣ, ಮಂಜುನಾಥ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT