ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆಗೆ ಬಂದ ಅಧಿಕಾರಿಗಳಿಗೆ ತರಾಟೆ

ನಕಲಿ ವೈದ್ಯರ ಹಾವಳಿ ಆರೋಪ
Last Updated 22 ಜುಲೈ 2013, 10:46 IST
ಅಕ್ಷರ ಗಾತ್ರ

ಕನಕಪುರ: ತಾಲ್ಲೂಕಿನಲ್ಲಿ ನಕಲಿ ವೈದ್ಯರು ಇದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಲು ಮುಂದಾದಾಗ ಅದನ್ನು ವಿರೋಧಿಸಿದ ಸಾರ್ವಜನಿಕರು ಅಧಿಕಾರಿಗಳ ಜತೆ ವಾಗ್ವಾದ ನಡೆಸಿದ ಪ್ರಸಂಗ ಪಟ್ಟಣದ ಕೆ.ಎನ್.ಎಸ್ ವೃತ್ತದ ಬಳಿ ನಡೆಯಿತು.

ಪಟ್ಟಣದಲ್ಲಿ ಕೆಲವರು ವೈದ್ಯಕೀಯ ಶಿಕ್ಷಣ ಪಡೆಯದಿದ್ದರೂ ಕಾನೂನು ಬಾಹಿರವಾಗಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ ಎಂದು ತಾಲ್ಲೂಕು ಐ.ಎಂ.ಎ. ಕಾರ್ಯದರ್ಶಿ ಚೇತನ್ ಟೇಂಕರ್ ದೂರು ನೀಡಿದ್ದರ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಘುನಂದನ್ ನೇತೃತ್ವದ ತಂಡ ವರ್ಧಮಾನ್ ಪಾಲಿಕ್ಲಿನಿಕ್‌ಗೆ ಭೇಟಿ ನೀಡಿ ಪರಿಶೀಲಿಸುವಾಗ ಸಾರ್ವಜನಿಕರು ವಿರೋಧಿಸಿದರು.

`ನವೋದಯ ಕ್ಲಿನಿಕ್ ವೈದ್ಯ ಡಾ.ಚೇತನ್ ಟೇಂಕರ್ ದುರುದ್ದೇಶದಿಂದ ಈ ದೂರು ನೀಡಿದ್ದಾರೆ. ವರ್ಧಮಾನ್ ಕ್ಲಿನಿಕ್ ಸೇರಿದಂತೆ ಹಲವು ವೈದ್ಯರು 15 ವರ್ಷಗಳಿಂದ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ಈವರೆಗೂ ಸಾರ್ವಜನಿಕರಿಗೆ ಔಷಧಿಗಳಿಂದ ಯಾವುದೇ ಅಪಾಯ ಆಗಿಲ್ಲ. ಸಾರ್ವಜನಿಕವಾಗಿ ದೂರು ಬಂದರೆ ಕ್ರಮ ಕೈಗೊಳ್ಳಿ' ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪುರಸಭೆ ಮಾಜಿ ಅಧ್ಯಕ್ಷ ಆರ್.ಕೃಷ್ಣಮೂರ್ತಿಯು ಮಾತನಾಡಿ, ಇಲ್ಲಿನ ಕೆಲವು ವೈದ್ಯರು ದುರುದ್ದೇಶದಿಂದ ನೀಡಿರುವ ದೂರಿನ ಮೇರೆಗೆ ನೀವು ತಪಾಸಣೆ ನಡೆಸುವುದಾದರೆ ಚೇತನ್ ಟೇಂಕರ್ ಅವರನ್ನು ಏಕೆ ಜೊತೆಯಲ್ಲಿ ಕರೆದುಕೊಂಡು ಬಂದಿದ್ದೀರಿ ಅವರಿಗೆ ಯಾವ ಅಧಿಕಾರವಿದೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಪರಿಸ್ಥಿತಿಯ ತೀವ್ರತೆಯನ್ನು ಅರಿತ ಜಿಲ್ಲಾ ಆರೋಗ್ಯಾಧಿಕಾರಿ ಪೋಲಿಸರ ರಕ್ಷಣೆಯಲ್ಲಿ ಚೇತನ್ ಟೇಂಕರ್ ಅವರನ್ನು ಕರೆದುಕೊಂಡು ತೆರಳಿದರು. ತಾಲ್ಲೂಕು ವೈದ್ಯಾಧಿಕಾರಿ ಡಾ.ಶಿವಕುಮಾರ್, ಆಯುಷ್ ಅಧಿಕಾರಿ ಡಾ. ಶೋಭರಾಣಿ ತಂಡದಲ್ಲಿದ್ದರು.

`ತಾಲ್ಲೂಕಿನಲ್ಲಿ 15 ವರ್ಷಗಳಿಂದ ಗಿರಿಜಾ ನರ್ಸಿಂಗ್ ಹೋಮ್‌ನಲ್ಲಿ ಆಯುಷ್ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಅದು ಮುಚ್ಚಿದ ಮೇಲೆ ಸ್ವಂತ ಕ್ಲಿನಿಕ್ ನಡೆಸುತ್ತಿದ್ದೇನೆ. ನನ್ನ ಬೆಳವಣಿಗೆ ಸಹಿಸದೆ ಚೇತನ್ ಅವರು ದೂರು ನೀಡಿದ್ದಾರೆ ಎಂದು ವರ್ಧಮಾನ್ ಪಾಲಿ ಕ್ಲಿನಿಕ್ ಆಯುಷ್ ವೈದ್ಯ ವಿಜಯಕುಮಾರ್.ವಿ.ಶಿರಹಟ್ಟಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT