ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆಗೆ ಸ್ಪಂದಿಸದ ಇಒ: ಎಸಿ ಅಸಮಾಧಾನ

Last Updated 10 ಅಕ್ಟೋಬರ್ 2012, 5:05 IST
ಅಕ್ಷರ ಗಾತ್ರ

ಹರಪನಹಳ್ಳಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುದಾನವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು, ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾದ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರ ಸದಸ್ಯತ್ವ ರದ್ದುಪಡಿಸುವಂತೆ ಕೋರಿ, ಸಾರ್ವಜನಿಕರೊಬ್ಬರು ನೀಡಿದ ದೂರಿನ ಆಧಾರದ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲು, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಉಪ ವಿಭಾಗಾಧಿಕಾರಿ ಇಬ್ರಾಹಿಂ ಮೈಗೂರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಸಾಸ್ವಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ನಾಗರಕೊಂಡ ಗ್ರಾಮವನ್ನು ಪ್ರತಿನಿಧಿಸುತ್ತಿರುವ ಗ್ರಾ.ಪಂ. ಸದಸ್ಯ ಎಚ್.ಟಿ. ಸುಭಾಷ್ ಎಂಬುವವರು, ಉದ್ಯೋಗ ಖಾತ್ರಿ ಯೋಜನೆ ಅಡಿ ಪಂಚಾಯ್ತಿಗೆ ಮಂಜೂರಾದ ಹಣವನ್ನು ತಮ್ಮ ಖಾತೆಗೆ ಅಕ್ರಮವಾಗಿ ವರ್ಗಾಯಿಸಿಕೊಂಡು, ಯೋಜನೆಯ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆಪಾದಿಸಿ, ಸದರಿ ಸದಸ್ಯರನ್ನು ಸದಸ್ಯತ್ವದಿಂದ ವಜಾಗೊಳಿಸುವಂತೆ ಕೋರಿ ಸಾಸ್ವಿಹಳ್ಳಿ ಗ್ರಾಮದ ಶಿವಸಾಲಿ ವೀರಭದ್ರಪ್ಪ ಎಂಬುವವರು ಎಸಿ ಕಚೇರಿಗೆ 2012ರ ಮೇ 21ರಂದು ದೂರು ಸಲ್ಲಿಸಿದ್ದರು.

ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಂಡು, ಕ್ರಮ ಕೈಗೊಂಡಿರುವ ಬಗ್ಗೆ ಕಚೇರಿಗೆ ವರದಿ ಸಲ್ಲಿಸುವಂತೆ ಸೂಚಿಸಿ, 2012ರ ಜೂನ್ 12ರಂದು ತಾಲ್ಲೂಕು ಪಂಚಾಯ್ತಿ ಇಒ ಟಿ. ಪಾಂಡ್ಯಪ್ಪ ಅವರಿಗೆ, ಉಪ ವಿಭಾಗಾಧಿಕಾರಿ (ಉಲ್ಲೇಖ-2ರಂತೆ) ಪತ್ರ ಬರೆದರು. ಎಸಿ ಸೂಚನೆಯ ಹಿನ್ನೆಲೆಯಲ್ಲಿ ಅಸ್ಪಷ್ಟ ಮಾಹಿತಿಯೊಂದಿಗೆ, 2012ರ ಜುಲೈ 19ರಂದು ಇಒ ಪಾಂಡ್ಯಪ್ಪ, ಎಸಿ ಕಚೇರಿಗೆ ವರದಿ ಸಲ್ಲಿಸಿದ್ದರು.

ಅಸ್ಪಷ್ಟವಾದ ಮಾಹಿತಿ  ಹಿನ್ನೆಲೆಯಲ್ಲಿ ಪುನಃ, ಎಸಿ ಅವರು, ಕೂಲಂಕಷವಾಗಿ ಪುನಃ ಪರಿಶೀಲಿಸಿ, ಅಗತ್ಯ ಕ್ರಮ ಜರುಗಿಸುವಂತೆ ಹಾಗೂ ಕ್ರಮ ಕೈಗೊಂಡ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿ, 2012ರ ಆಗಸ್ಟ್ 9ರಂದು(ಉಲ್ಲೇಖ-4) ಪುನಃ ಇಒ ಕಚೇರಿಗೆ ಪತ್ರ ಬರೆದರು.

ಎಸಿ ಅವರ ಮರುಪರಿಶೀಲನಾ ಸೂಚನೆಗೆ ಸರಿಯಾಗಿ ಸ್ಪಂದಿಸದ ಇಒ, `ಎಂ.ಬಿ. ಪುಸ್ತಕದ ದಾಖಲೆ, ಬ್ಯಾಂಕ್ ಪಾಸ್‌ಪುಸ್ತಕದ ದಾಖಲೆಗಳ ಪರಿಶೀಲನಾ ವರದಿ ಸಲ್ಲಿಸದಿರುವ ಕಾರಣ~ ಎಂದು ಅಸ್ಪಷ್ಟ ಮಾಹಿತಿ ನಮೂದಿಸಿ, 2012ರ ಆ. 29ರಂದು, ಪುನಃ, ಎಸಿ ಕಚೇರಿಗೆ ಪತ್ರ ಬರೆದು, ತಮ್ಮ ಹಂತದಲ್ಲಿಯೇ ಸೂಕ್ತ ಕ್ರಮ ವಹಿಸಲು ಕೋರಿದ್ದಾರೆ.

ಅಗತ್ಯ ಕ್ರಮ ಕೈಗೊಳ್ಳುವ ಬದಲು, ತಾವೇ ಕ್ರಮ ಕೈಗೊಳ್ಳಿ ಎಂದು ಅನವಶ್ಯಕವಾಗಿ ಪತ್ರ ಬರೆದ ಹಿನ್ನೆಲೆಯಲ್ಲಿ, ಬೇಸತ್ತ ಎಸಿ ಇಬ್ರಾಹಿಂ ಮೈಗೂರು ಅವರು, ದೂರುದಾರರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಒ ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಪ್ರಕರಣದ ವಿಲೇವಾರಿ ವಿಳಂಬವಾಗುತ್ತಿದೆ.

ಪ್ರಕರಣದಲ್ಲಿ ಅನಗತ್ಯವಾಗಿ ಹಾಗೂ ಅಸ್ಪಷ್ಟವಾದ ಮಾಹಿತಿ ನೀಡುವ ಮೂಲಕ ವಿನಾಕಾರಣ ವಿಳಂಬಧೋರಣೆ ಅನುಸರಿಸಿದ ಟಿ. ಪಾಂಡ್ಯಪ್ಪ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ 2012ರ ಸೆ. 21ರಂದು ಜಿಲ್ಲಾ ಪಂಚಾಯ್ತಿ ಸಿಇಒಗೆ, ಉಪ ವಿಭಾಗಾಧಿಕಾರಿ ಇಬ್ರಾಹಿಂ ಮೈಗೂರು ಪತ್ರ ಬರೆದಿದ್ದು, ಪತ್ರದ ಪ್ರತಿ `ಪ್ರಜಾವಾಣಿ~ಗೆ ಬಳಿ ಲಭ್ಯವಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT