ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ತಪ್ಪಾಗಿದೆ' ಎಂದ ಯಡಿಯೂರಪ್ಪ

Last Updated 16 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಹೌದು, ನಾವು ತಪ್ಪು ಮಾಡಿದ್ದೇವೆ! ನಮ್ಮ ತಪ್ಪಿನಿಂದಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂತು....'
ಹೀಗೆ ಹೇಳಿದ್ದು ಕೆಜೆಪಿಯ ಬಿ.ಎಸ್. ಯಡಿಯೂರಪ್ಪ.

ವಿಧಾನಸಭೆಯಲ್ಲಿ ಬಜೆಟ್ ಮೇಲೆ ಮಂಗಳವಾರ ಚರ್ಚೆ ನಡೆದ ಸಂದರ್ಭದಲ್ಲಿ ಬಿಜೆಪಿಯ ಜಗದೀಶ ಶೆಟ್ಟರ್ ಮಾತನಾಡುತ್ತಾ, `ಕಾಂಗ್ರೆಸ್‌ಗೆ ವಾಸ್ತವವಾಗಿ ಬಹುಮತ ಸಿಕ್ಕಿಲ್ಲ. ಮತ ವಿಭಜನೆಯ ಲಾಭ ಪಡೆದು, ಅದು ಅಧಿಕಾರಕ್ಕೆ ಬಂತು' ಎಂದು ಮೂದಲಿಸಿದರು.

ಕಾಂಗ್ರೆಸ್‌ನ ರಮೇಶಕುಮಾರ್ ಮಾತನಾಡಿ, `ನಮಗಲ್ಲ, ಹಿಂದಿನ ಬಿಜೆಪಿ ಸರ್ಕಾರಕ್ಕೆ ಬಹುಮತ ಇರಲಿಲ್ಲ. ಅದರ ಬಳಿಕ ಬಹುಮತ ಗಳಿಸಲು ಯಡಿಯೂರಪ್ಪ ಏನೆಲ್ಲ ಸರ್ಕಸ್ ಮಾಡಿದರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಅಂತಹ ಪರಿಸ್ಥಿತಿ ನಮ್ಮ ಪಕ್ಷಕ್ಕೆ ಇಲ್ಲ. ನಮಗೆ ಪೂರ್ಣ ಬಹುಮತ ಸಿಕ್ಕಿದೆ. ಸರ್ಕಾರ, ಇನ್ನೂ ಎರಡು ತಿಂಗಳ ಮಗು' ಎಂದು ಸಮರ್ಥಿಸಿಕೊಂಡರು.

ರಮೇಶಕುಮಾರ್ ಅವರ ವ್ಯಂಗ್ಯಮಿಶ್ರಿತ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ ಅವರು, `ಹೌದಪ್ಪ ನಾವು ತಪ್ಪು ಮಾಡಿದ್ದೇವೆ. ತಪ್ಪಿನಿಂದಾಗಿ ಮತ ವಿಭಜನೆ ಆಯಿತು. ಇದರ ಲಾಭ ಕಾಂಗ್ರೆಸ್ ಪಡೆಯಿತು. ವಾಸ್ತವವಾಗಿ ಜನರಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಇಷ್ಟ ಇರಲಿಲ್ಲ' ಎಂದು ಹೇಳಿದರು.

`ಈಗ ನಮಗೆ ತಪ್ಪಿನ ಅರಿವಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಿಮ್ಮನ್ನು (ಕಾಂಗ್ರೆಸ್ ಪಕ್ಷದವರನ್ನು) 7- 8 ಸ್ಥಾನಕ್ಕೆ ಇಳಿಸಿ, ಪುನಃ ನಾವು ಅತ್ತಕಡೆ (ಆಡಳಿತ ಪಕ್ಷ) ಬರುತ್ತೇವೆ. ತಾಳ್ಮೆಯಿಂದ ಕಾಯಿರಿ. ಇದಕ್ಕೆ ಪೂರಕವಾಗಿ ಏನೆಲ್ಲ ಮಾಡಬೇಕೋ ಅದನ್ನು ನಾವು ಒಟ್ಟಾಗಿ ಮಾಡುತ್ತೇವೆ' ಎಂದರು.

ಯಡಿಯೂರಪ್ಪ ಅವರ ಈ ಹೇಳಿಕೆ ಬಿಜೆಪಿ ಸದಸ್ಯರಲ್ಲಿ ಸಂಚಲನ ಉಂಟು ಮಾಡಿತು. `ಅವರು ಪಕ್ಷ ಬಿಟ್ಟು ತಪ್ಪು ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಇನ್ನೇನು ಪಕ್ಷಕ್ಕೆ ಮರುಸೇರ್ಪಡೆಯಾಗುವುದು ಖಚಿತ' ಎಂದು ವಿಧಾನಸಭೆಯ ಮೊಗಸಾಲೆಯಲ್ಲಿ ಬಿಜೆಪಿ ಸದಸ್ಯರು ಸಂತಸ ವ್ಯಕ್ತಪಡಿಸಿದರು.

`ಪಕ್ಷಕ್ಕೆ ಬರಲು ಇಚ್ಛೆ ಇದ್ದರೆ ಯಡಿಯೂರಪ್ಪ ಅರ್ಜಿ ಹಾಕಿಕೊಳ್ಳಿ ಎಂದು ಬಿಜೆಪಿ ಹೈಕಮಾಂಡ್ ಹೇಳಿತ್ತು. ಆದರೆ, ಯಡಿಯೂರಪ್ಪ ಇನ್ನೇನು ಅರ್ಜಿ ಹಾಕಬೇಕಿಲ್ಲ. ಸದನದಲ್ಲೇ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಹೀಗಾಗಿ ಅವರು ಪಕ್ಷಕ್ಕೆ ವಾಪಸ್ಸಾಗುವುದಕ್ಕೆ ಯಾವ ಅಡ್ಡಿಯೂ ಇಲ್ಲ' ಎಂದು ಹೆಸರು ಹೇಳಲು ಇಚ್ಛಿಸದ ಮುಖಂಡರೊಬ್ಬರು ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT