ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ

Last Updated 25 ಫೆಬ್ರುವರಿ 2012, 5:55 IST
ಅಕ್ಷರ ಗಾತ್ರ

ಮಡಿಕೇರಿ: ನಕಲಿ ಅಂಕಪಟ್ಟಿ ಬಳಸಿ ವಾಹನ ಚಾಲನಾ ಪತ್ರ ಪಡೆದ ಪ್ರಕರಣವು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು. ವಿಷಯ ಪ್ರಸ್ತಾಪಿಸಿದ ಕೇಚಮಾಡ ಸರಿತಾ ಪೂಣಚ್ಚ ಅವರು, ಪ್ರಕರಣದ ಸತ್ಯಾಸತ್ಯತೆ ಬಗ್ಗೆ ತನಿಖೆಯಾಗಬೇಕು ಹಾಗೂ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಒತ್ತಾಯಿಸಿದರು.

ಆಡಳಿತಾರೂಢ ಸದಸ್ಯರು ಸೇರಿದಂತೆ ಪಂಚಾಯಿತಿಯ ಎಲ್ಲ ಸದಸ್ಯರು ತಮ್ಮ ಸಹಮತ ವ್ಯಕ್ತಪಡಿಸಿದರು.
ವಾಹನ ಚಾಲನಾ ಪರವಾನಗಿ ಪತ್ರ ಪಡೆಯಲು ಕನಿಷ್ಠ 7ನೇ ತರಗತಿ ವಿದ್ಯಾಭ್ಯಾಸ ಮಾಡಿರಬೇಕೆಂದು ಸರ್ಕಾರವು 2007ರಲ್ಲಿ ಆದೇಶ ಹೊರಡಿಸಿತು.

ವಾಹನ ಚಾಲಕರಲ್ಲಿ ಸಾಕಷ್ಟು ಜನರು ಅವಿದ್ಯಾವಂತರು ಆಗಿರುವ ಕಾರಣ ಬಡವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಪಡೆದು, ಅದನ್ನು ನಕಲು ಮಾಡಿಕೊಂಡು ಸಾರಿಗೆ ಇಲಾಖೆಗೆ ಸಲ್ಲಿಸಿ, ಚಾಲನಾ ಪತ್ರ ಪಡೆಯುತ್ತಿದ್ದಾರೆ ಎಂದು ಸರಿತಾ ಆರೋಪಿಸಿದರು.

ವಿಶೇಷವಾಗಿ ಹೊರರಾಜ್ಯದವರು ನಕಲಿ ಅಂಕಪಟ್ಟಿಯಲ್ಲಿ ಭಾಗಿಯಾಗಿದಾರೆ. ಪ್ರಕರಣದ ಬಗ್ಗೆ ಇದುವರೆಗೆ ಪೊಲೀಸರಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ದೂರು ನೀಡಿಲ್ಲ. ಇದನ್ನು ನೋಡಿದರೆ  ಅಧಿಕಾರಿಗಳು ಇದರಲ್ಲಿ ಭಾಗಿಯಾಗಿರುವ ಶಂಕೆ ಇದೆ. ಇದರ ಸತ್ಯಾಸತ್ಯತೆ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಕುಶಾಲನಗರದ ಮುಳ್ಳುಸೋಗೆಯಲ್ಲಿ ಪ್ರಾಥಮಿಕ ಶಾಲೆ ಮಾತ್ರ ಇದೆ. ಆದರೆ ಜಗದೀಶ್ ಎನ್ನುವವರು ಚಾಲನಾ ಪತ್ರಕ್ಕಾಗಿ ಸಲ್ಲಿಸಿರುವ ಅಂಕಪಟ್ಟಿಯಲ್ಲಿ ಮುಳ್ಳುಸೋಗೆ ಪ್ರೌಢಶಾಲೆ ಸರ್ಟಿಫಿಕೇಟ್ ಸಲ್ಲಿಸಿದ್ದಾರೆ. ಪ್ರೌಢಶಾಲೆಯೇ ಇಲ್ಲವೆಂದ ಮೇಲೆ ಸರ್ಟಿಫಿಕೇಟ್ ಬರಲು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದರು.

ಇದರಂತೆ ಒಂದೇ ರಿಜಿಸ್ಟರ್ ನಂಬರ್ (0507463) ಇರುವ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯನ್ನು ಅರುಣ್, ಮಹದೇವ ಹಾಗೂ ನಾಸಿರ್ ಎಂಬುವವರು ಸಾರಿಗೆ ಇಲಾಖೆಗೆ ನೀಡಿದ್ದಾರೆ. ರಿಜಿಸ್ಟ್ರರ್ ಸಂಖ್ಯೆ, ಪಡೆದಿರುವ ಅಂಕಗಳು, ಶಾಲೆಯ ಸಂಖ್ಯೆ, ಶಾಲೆಯ ಸೀಲು ಎಲ್ಲವೂ ಒಂದೇ ರೀತಿಯಾಗಿದೆ ಎಂದು ಅವರು ಹೇಳಿದರು.

ಇದೇ ರೀತಿ ನಾಗಣ್ಣ, ಲ್ಯಾನ್ಸಿ ಪೆರೆರಾ ಹಾಗೂ ಶ್ರೀನಿವಾಸ್ ಎನ್ನುವವರು ಒಂದೇ ರೀತಿಯ ಪಿಯುಸಿ ಅಂಕಪಟ್ಟಿಯನ್ನು ಸಲ್ಲಿಸಿದ್ದಾರೆ. ಇಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಜಿ.ಪಂ. ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡಿ, ಪ್ರಕರಣದ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಈ ವಿಷಯ ಚರ್ಚೆಗೆ ಬಂದ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ಗೈರುಹಾಜರಾಗಿದ್ದರು.

ಕ್ರಿಯಾ ಯೋಜನೆಗೆ ಅನುಮೋದನೆ
2012-13ನೇ ಸಾಲಿಗಾಗಿ ಕೊಡಗು ಜಿಲ್ಲಾ ಪಂಚಾಯಿತಿ ರೂಪಿಸಿರುವ ರೂ 80 ಕೋಟಿ ಮೊತ್ತದ ಕ್ರಿಯಾ ಯೋಜನೆಯಲ್ಲಿ ಬದಲಾವಣೆಗೆ ಒಳಪಟ್ಟು ಅನುಮೋದನೆ ನೀಡಲಾಯಿತು. ಕಳೆದ ವರ್ಷದ ಕಾಮಗಾರಿಗಳ ಸಂಪೂರ್ಣ ಮಾಹಿತಿಯನ್ನು ಬಾಂಡ್ ಗಣಪತಿ ಪಡೆದರು.

ಸಭೆಯಲ್ಲಿ ಉಪಾಧ್ಯಕ್ಷೆ ಎಚ್.ಎಂ. ಕಾವೇರಿ, ಸದಸ್ಯರು, ಉಪಕಾರ್ಯದರ್ಶಿ ಎಸ್.ವೈ. ಬಸವರಾಜಪ್ಪ, ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸರಾವ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT