ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪು ದೇಹದೊಳಗಿಂದ ಹೊರಬಂದು...

Last Updated 12 ಡಿಸೆಂಬರ್ 2012, 19:50 IST
ಅಕ್ಷರ ಗಾತ್ರ

`ನಾನು `ಅವನಾಗಿದ್ದಾಗ' ನನ್ನೊಳಗಿದ್ದದ್ದು `ಅವಳು'. ನಿಜ. ದೇಹರೂಪದಲ್ಲಿ ಅವನಾಗಿದ್ದೆ. ಆದರೆ ನಾನು ಅವನಲ್ಲ, ಅವಳು ಎಂದು ನನ್ನೊಳಗೆ ವಿಚಿತ್ರ ಅನುಭವ. ಆದರದು ಹೇಳಿಕೊಳ್ಳಲಾಗದ ವೇದನೆ. ಒಂದಲ್ಲ, ಎರಡಲ್ಲ ಸುಮಾರು ಹದಿನೈದು ವರ್ಷ ಆ ಅವ್ಯಕ್ತ ವೇದನೆ ಮನಸ್ಸನ್ನು ಕದಡಿ ಕಾಡಿತ್ತು. ಏನಾಗಿದ್ದೇನೆ, ಏನು ಮಾಡುತ್ತಿದ್ದೇನೆ ಎಂಬುದೇ ಅರ್ಥವಾಗದ ಸ್ಥಿತಿ.

ನಾನು ತಪ್ಪು ದೇಹದೊಳಗೆ ಇದ್ದೇನೆ ಎಂಬುದು ಮಾತ್ರ ಅರಿವಾಗಿತ್ತು. ವೈಯಕ್ತಿಕ ಸವಾಲುಗಳನ್ನು ಮೆಟ್ಟಿನಿಲ್ಲುವಾಗಲೇ ನನ್ನಂತೆ ಇರುವ ಸಾವಿರಾರು ಜನರ ಸವಾಲುಗಳು ಕಣ್ಣೆದುರು ತೆರೆದುಕೊಳ್ಳಲಾರಂಭಿಸಿತು. ನಾವೂ ಮನುಷ್ಯರೇ. ನಮ್ಮಲ್ಲೂ ಎಲ್ಲರಂತೆ ಬದುಕಬೇಕೆಂಬ ಹಂಬಲವಿದೆ. ಆದರೂ ಉಳಿದವರಿಗೆ ನಮ್ಮಳಗಿನ ನಮ್ಮ`ತನ' ಕಾಣಲಾರದು...' ಮಾತಿಗಿಳಿದಾಗ ಸವೆಸಿದ ದಿನಗಳ ದುಃಖ ದುಮ್ಮಾನಗಳ ಸದ್ದು ಇದ್ದರೂ `ಓಲ್ಗಾ' ನದಿಯ ಹರಿವಿನಷ್ಟೇ ಪ್ರಶಾಂತತೆ ಅವರಲ್ಲಿತ್ತು.

ಹೆಜ್ಜೆ ಹೆಜ್ಜೆಗೂ ಎದುರಾಗುವ ನೋವು ಹತಾಶೆಗಳ ನಡುವೆಯೇ ಅವರ ಜೀವನ. ಅಂಥದೇ ಬದುಕಿನ ಸಾಗರದಲ್ಲಿ, ಬೃಹತ್ ಅಲೆಗಳ ಹೊಡೆತವನ್ನೆದುರಿಸಿ ಈಜಿದವರು ಓಲ್ಗಾ ಬಿ. ಆ್ಯರನ್. ಸಾಮಾಜಿಕ ಕಾರ್ಯಕರ್ತೆಯಾಗಿ ಮಂಗಳಮುಖಿಯರು, ಮಹಿಳೆಯರು ಮತ್ತು ಮಕ್ಕಳು, ಎಚ್‌ಐವಿ ಪೀಡಿತರು ಹಾಗೂ ಸಾಮಾಜಿಕವಾಗಿ ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯಗಳ ಸಬಲೀಕರಣಕ್ಕಾಗಿ ಹತ್ತು ಹಲವು ವರ್ಷಗಳಿಂದ ದುಡಿಯುತ್ತಿರುವ ತಮಿಳುನಾಡಿನ ಓಲ್ಗಾ ಕನ್ನಡಿಗರಿಗೆ ಪರಿಚಯವಾಗಿದ್ದು ತೀರಾ ಇತ್ತೀಚೆಗೆ; ಅದೂ ರೂಪದರ್ಶಿಯಾಗಿ. ನಿರ್ಲಕ್ಷ್ಯಕ್ಕೆ ಒಳಗಾದ ಬೀದರ್ ಕೋಟೆಯ ರಕ್ಷಣೆ ಕುರಿತು ಮಾನವೀಯ ನೆಲೆಗಟ್ಟಿನಲ್ಲಿ ಜಾಗೃತಿ ಮೂಡಿಸುವ ಪತ್ರಿಕಾ ಛಾಯಾಗ್ರಾಹಕ ಕೆ.ವೆಂಕಟೇಶ್ ಅವರ ಪರಿಕಲ್ಪನೆಗೆ ಕೈಜೋಡಿಸಿದವರು ಓಲ್ಗಾ.

ತಮಿಳುನಾಡಿನಲ್ಲಿ ಜನಿಸಿದ ಓಲ್ಗಾ `ಹುಡುಗ'ನಾಗಿದ್ದಾಗಿನ ಹೆಸರು ಬಿನಿ ಆ್ಯರನ್. ಇಬ್ಬರು ಗಂಡು ಮಕ್ಕಳಲ್ಲಿ ಬಿನಿ ಎರಡನೆಯವರು. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡದ್ದರಿಂದ ಸಂಕಷ್ಟಗಳ ಸರಮಾಲೆ ಎದುರಾಯಿತು. ನೋಡಲು ಹುಡುಗನಂತೆ ಕಂಡರೂ ಹೆಣ್ತನದ ವರ್ತನೆ. ಭಾವನೆಗಳು, ಕಲ್ಪನೆಗಳಲ್ಲೂ ಹುಡುಗನಾಗಲು ಸಾಧ್ಯವಾಗಲಿಲ್ಲ. ಶಾಲೆಗೆ ಹೋಗುತ್ತಿದ್ದಾಗಲೂ ಈ ಬಗೆಯ ಗೊಂದಲಗಳು ಮನದೊಳಗೆ ಅಡ್ಡಾಡುತ್ತಿತ್ತು. ಆಗ ಓದಿಗೆ ತೊಂದರೆಯಾಗಿರಲಿಲ್ಲ. ಆಟವಾಡುತ್ತಿದ್ದ ನೆರೆಮನೆ ಹುಡುಗರ ಜೊತೆ ಬೆರೆಯಲು ನಾಚಿಕೆ. ನಾನು ಅವರಂತಲ್ಲ ಎಂಬ ಅಳುಕು.

ನನ್ನೊಳಗೆ-ಹೊರಗೆ ಏನೋ ಅಸಹಜವಾದದ್ದು ಸಂಭವಿಸುತ್ತಿದೆ. ನಾನು ಏನೆಂದು ಎಲ್ಲರೂ ತಿಳಿದಿದ್ದಾರೋ, ಅದು ನಾನಲ್ಲ ಎಂಬುದು ಅವರಿಗೆ ಆಗಲೇ ಅರಿವಾಗತೊಡಗಿತ್ತು. ನಾನು ಹುಡುಗನಲ್ಲ. ಹುಡುಗಿ ಎಂಬ ವಿಚಿತ್ರ ಸತ್ಯವನ್ನು ಆರಂಭದಲ್ಲಿ ಅರಗಿಸಿಕೊಳ್ಳಲಾಗಲಿಲ್ಲ. ಸಮಾಜವನ್ನು ಎದುರಿಸುವುದು ಹೇಗೆಂಬ ಆತಂಕ. ಪ್ರಬುದ್ಧತೆ ಬೆಳೆದಾಗ ಅನಿಸಿದ್ದು, `ತಪ್ಪು ದೇಹದೊಳಗೆ' ಇದ್ದೇನೆ ಎಂದು. ಶಾಲಾದಿನಗಳಲ್ಲಿ ಅಷ್ಟಾಗಿ ಕಾಡದ ಸಮಸ್ಯೆ ಕಾಲೇಜು ಮೆಟ್ಟಿಲು ಏರುವ ಹಂತಕ್ಕೆ ಬಂದಾಗ ದಟ್ಟವಾಗತೊಡಗಿತು.

ಮಕ್ಕಳಲ್ಲಿ ಇಂಥ ವರ್ತನೆ ಕಂಡು ಬಂದಾಗ ತಂದೆ ತಾಯಿ ಗದರಿ ಅವರನ್ನು ಪರಿವರ್ತಿಸಲು ಪ್ರಯತ್ನಿಸುತ್ತಾರೆ. ಇಲ್ಲವೇ ಮನೆಯಿಂದ ಹೊರಹಾಕುತ್ತಾರೆ. ಹೀಗೆ ಮನೆಯಿಂದ ಬೀದಿಗೆ ಬಿದ್ದವರೇ ರಸ್ತೆಗಳಲ್ಲಿ ಅಡ್ಡಗಟ್ಟಿ ಹಣ ಕೇಳುವವರು. ಆದರೆ ಓಲ್ಗಾ ಪಾಲಿಗೆ ಅಂಥ ಸನ್ನಿವೇಶ ಎದುರಾಗಲಿಲ್ಲ. ವೃತ್ತಿಯಲ್ಲಿ ನರ್ಸ್ ಆಗಿದ್ದ ತಾಯಿ ನೆರವಿಗೆ ಬಂದರು. 10ನೇ ತರಗತಿಯ ಪರೀಕ್ಷೆ ಬರೆದ ಬಳಿಕ ಧೈರ್ಯವನ್ನೆಲ್ಲಾ ಒಗ್ಗೂಡಿಸಿ ತನ್ನೊಳಗಿನ ಹೆಣ್ತನವನ್ನು ತಾಯಿಯೊಂದಿಗೆ ಹಂಚಿಕೊಂಡರು.

ಅದೃಷ್ಟವಷಾತ್ ಆಕೆ `ಬೇರೆ' ತಾಯಂದಿರಂತಾಗಿರಲಿಲ್ಲ. `ಮಗಳ' ಅನುಭವಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡು ಆಕೆಯಲ್ಲಿದ್ದ ಭಾವನೆಗಳನ್ನು ಅರ್ಥಮಾಡಿಕೊಂಡರು. ಅಮ್ಮನೊಂದಿಗೆ ಇದನ್ನು ಹಂಚಿಕೊಳ್ಳುವವರೆಗೂ ನನ್ನನ್ನೇ ನಾನು ಸಾಯಿಸಿಕೊಳ್ಳುತ್ತಿದ್ದೇನೆ ಎಂಬ ಭಾವ ಅವರನ್ನು ಕಾಡುತ್ತಿತ್ತು. ತಡಮಾಡದೆ ಅಮ್ಮ ಮನಃಶಾಸ್ತ್ರಜ್ಞರೊಬ್ಬರ ಬಳಿ ಕರೆದೊಯ್ದರು. ಅವರಿಂದ ಕೌನ್ಸೆಲಿಂಗ್ ಪಡೆದ ಬಿನಿಗೆ ಅನಿಸಿದ್ದು ನಾನು ಹೆಣ್ಣಾಗಿ ಬದಲಾಗಬೇಕೆಂದು. ತಜ್ಞರ ಸಲಹೆಯೂ ಅದೇ ಆಗಿತ್ತು.

ಹಾಗೆ ಶಸ್ತ್ರ ಚಿಕಿತ್ಸೆಗೆ ಒಳಗಾದಾಗ ಬಿನಿಗೆ 17 ವರ್ಷ. ಮಹಿಳೆಯಾಗಿ ಸಮಾಜದಲ್ಲಿ ಗೌರವಯುತವಾಗಿ ಬದುಕಬೇಕೆಂಬ ಬಯಕೆ ತೀವ್ರವಾಗಿತ್ತು. ಆದರದು ಈಡೇರುವುದೋ ಅಥವಾ ಇತರೆ ಲಿಂಗಪರಿವರ್ತಿತರಂತೆ ಬದುಕು ಬೀದಿ ಪಾಲಾಗುವುದೋ ಎಂಬ ಭಯವೂ ಮುಂದಿತ್ತು. ಶಸ್ತ್ರಚಿಕಿತ್ಸೆಯ ನಂತರ ಹೆಸರು ಓಲ್ಗಾ ಎಂದು ಬದಲಾಯಿತು. ಬದುಕೂ ಬದಲಾಯಿತು, ಜೊತೆಗೆ ಕಷ್ಟಗಳೂ ಎದುರಾದವು. ಎಲ್ಲರಂತೆ ಕಾಲೇಜಿಗೆ ತೆರಳಿ ಓದುವ ಆಸೆ ಇದ್ದರೂ ಪ್ರವೇಶ ದಕ್ಕಲಿಲ್ಲ.

ಸರ್ಕಾರದ ನಿಯಮಾವಳಿಗಳಲ್ಲಿ ಅವಕಾಶವಿದ್ದರೂ, ಅದರ ತಿಳಿವಳಿಕೆಯೇ ಇರಲಿಲ್ಲ. ಹೀಗಾಗಿ ಮನೆಯಲ್ಲಿಯೇ ಕುಳಿತು ದೂರಶಿಕ್ಷಣ ವ್ಯವಸ್ಥೆ ಮೂಲಕ ಓದು ಮುಂದುವರೆಸುವ ಅನಿವಾರ್ಯತೆ. ಇಂಗ್ಲಿಷ್ ಸಾಹಿತ್ಯ ವಿಷಯದಲ್ಲಿ ಪದವಿ ಪಡೆದುಕೊಂಡರು. ಓದು ಮುಗಿಯುತ್ತಿದ್ದಂತೆ ಕೆಲಸವೂ ಸಿಕ್ಕಿತು. ಜೊತೆಗೆ ಮಾನವಹಕ್ಕುಗಳು ರಕ್ಷಣೆ, ಸಾರ್ವಜನಿಕ ಆಡಳಿತ ಮುಂತಾದ ವಿಷಯಗಳಲ್ಲಿ ವಿಶೇಷ ಕೋರ್ಸ್‌ಗಳನ್ನು ಮಾಡಿದರು.

ಅವರ ಶಿಕ್ಷಣ ಹಾಗೂ ಚಟುವಟಿಕೆ ಎಲ್ಲವೂ ಸಾಮಾಜಿಕ ಬದಲಾವಣೆಯನ್ನೇ ಗುರಿಯಾಗಿರಿಸಿಕೊಂಡಿರುವಂಥದ್ದು. ಅವರೆಲ್ಲಾ ಆಸೆ ಆಕಾಂಕ್ಷೆಗಳಿಗೆ ಮನೆಯಲ್ಲಿ ಸಂಪೂರ್ಣ ಸಹಕಾರ ಸಿಕ್ಕಿತು. ಸುತ್ತಮುತ್ತಲಿನ ಜನ ಆರಂಭದಲ್ಲಿ ವ್ಯಂಗ್ಯದ ನೋಟ ಬೀರುತ್ತಿದ್ದರೂ ಕ್ರಮೇಣ ಓಲ್ಗಾರನ್ನು `ಆಕೆ' ಎಂದು ಪರಿಗಣಿಸಿದರು. ತಾನು ಮಹಿಳೆಯಾಗಿ ಗೌರವಯುತ ಬಾಳು ಸಾಗಿಸಬೇಕೆಂಬ ಬಯಕೆ ಒಂದು ಮಟ್ಟಿಗೆ ಈಡೇರಿತು.

ತನ್ನಂತೆಯೇ ಸಮಸ್ಯೆಗಳನ್ನು ಎದುರಿಸಿದ, ಆದರೆ ಕುಟುಂಬದ ಆಸರೆಯೂ ಸಿಗದೆ, ನೆಲೆ ಇಲ್ಲದೆ ಅಲೆದಾಡುವ ಮಂಗಳಮುಖಿಯರನ್ನು ನೋಡಿದಾಗ ಓಲ್ಗಾ ಮನಮಿಡಿಯುತ್ತಿತ್ತು. ನಿಮ್ಮಂತೆಯೇ ಇವರೂ ಮನುಷ್ಯರು. ತಮ್ಮದಲ್ಲದ ತಪ್ಪಿಗೆ ಅವರ ಬದುಕಿನ ಚಿತ್ರಣ ಬದಲಾಗಿದೆ. ಅದಕ್ಕಾಗಿ ಅವರನ್ನೇಕೆ ದೂರಬೇಕು? ನಿಜ. ಅವರ ದೇಹ ಮತ್ತು ಭಾವನೆ ಎರಡೂ ವಿರುದ್ಧವಾಗಿವೆ. ನಿಮ್ಮ ಗಂಡು ಅಥವಾ ಹೆಣ್ಣು ಕಣ್ಣುಗಳಿಗೆ ಅವರು ನಿಮ್ಮಂತೆ ಕಾಣುತ್ತಿಲ್ಲ.

ಹಾಗೆಂದ ಮಾತ್ರಕ್ಕೆ ಅವರನ್ನು ತುಚ್ಛವಾಗಿ ನೋಡುವುದು ಎಷ್ಟು ಸರಿ? ಸಮಾಜದಲ್ಲಿ ಇವರಿಗೂ ಒಂದು ನೆಲೆ ನೀಡಿ. ಗೌರವ ನೀಡಿ. ನಿಮ್ಮಂತೆಯೇ ಅವರೂ ದುಡಿದು ಬದುಕುತ್ತಾರೆ ಎಂದು ಸಮಾಜಕ್ಕೆ ಮಂಗಳಮುಖಿಯರ ಬದುಕಿನ ವಾಸ್ತವ ಚಿತ್ರಣವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನಕ್ಕೆ ಕೈಹಾಕಿದರು. ಅವರ ಸಮಾಜ ಸುಧಾರಣೆಯ ನೋಟ ಮಂಗಳಮುಖಿಯರೆಡೆಗೆ ಮಾತ್ರವಲ್ಲ, ಅದರಿಂದಾಚೆಯೂ ತುಂಬಿಕೊಂಡಿರುವ ಅಸಮಾನತೆ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸಮಸ್ಯೆಗಳ ಸುತ್ತಲೂ ಹರಿಯಿತು.

ಮಹಿಳೆಯರು ಮತ್ತು ಮಕ್ಕಳ ಸಬಲೀಕರಣ, ಎಚ್‌ಐವಿ ಪೀಡಿತರ ಸಹಾಯಾರ್ಥ ಕಾರ್ಯಕ್ರಮಗಳು ಮತ್ತು ಜಾಗೃತಿ ಮೂಡಿಸುವ ಅಭಿಯಾನಗಳಲ್ಲಿ ಓಲ್ಗಾ ತಮ್ಮನ್ನು ತೊಡಗಿಸಿಕೊಂಡರು. ಸುಮಾರು ಇಪ್ಪತ್ತು ವರ್ಷಗಳಿಂದ ಸಮಾಜಮುಖಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ ಓಲ್ಗಾ. `ಪೆಹಚಾನ್' ಎಂಬ ಸಂಸ್ಥೆಯೊಂದರ ತಮಿಳುನಾಡು ರಾಜ್ಯದ ಯೋಜನಾ ನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರ ಮೊದಲ ಗುರಿ ಜನರಲ್ಲಿ ಬದುಕುವ ಛಲ ಮೂಡಿಸುವುದು.

ತಮ್ಮ ಅನುಭವದ ನೆಲಗಟ್ಟಿನಲ್ಲಿ ಓಲ್ಗಾ ಲಿಂಗ ಪರಿವರ್ತನೆ ಮಾಡಿಸಿಕೊಂಡವರು, ಮನೆಯವರಿಂದ ತಿರಸ್ಕಾರಕ್ಕೊಳಗಾದವರು, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಹಾಗೂ ವಿವಿಧ ಬಗೆಯ ಸಮಸ್ಯೆಗಳಿಗೆ ತುತ್ತಾದ ಸಾಮಾನ್ಯ ಜನರಿಗೆ ಆಪ್ತ ಸಮಾಲೋಚನೆ ಮೂಲಕ ಸ್ಥೈರ್ಯ ತುಂಬುವ ಹಾಗೂ ಮಾರ್ಗದರ್ಶನ ನೀಡುವ ಕಾರ್ಯದಲ್ಲಿ ಅವರು ಮಗ್ನರಾಗಿದ್ದಾರೆ. ಅದು ಅವರ ನೆಚ್ಚಿನ ಕೆಲಸ ಕೂಡ.

ಗಂಡು ದೇಹದಲ್ಲಿ ಹೆಣ್ಣಿನ ಭಾವನೆಗಳು, ಹೆಣ್ಣು ದೇಹದಲ್ಲಿ ಗಂಡಿನ ಭಾವನೆಗಳು ಮೂಡುವುದು ಸಹ ಪ್ರಕೃತಿ ಸಹಜ ಪ್ರಕ್ರಿಯೆ. ಇದು ಮಗು ಹುಟ್ಟಿ ಬೆಳೆದಂತೆ ಬಯಸಿ ಪಡೆಯುವುದಲ್ಲ. ಅದಕ್ಕೆ ಸಮಾಜ, ಮನೆ ವಾತಾವರಣ ಕೂಡ ಕಾರಣವಾಗಬಹುದು. ಇತಿಹಾಸ ಪುರಾಣಗಳಲ್ಲಿಯೂ ಇಂಥ ಅನೇಕ ನಿದರ್ಶನಗಳಿವೆ. ಆದರೆ ಇಂದಿಗೂ ಅವರನ್ನು ಸಮಾಜ ಸ್ವೀಕರಿಸುತ್ತಿಲ್ಲ. ಹೆತ್ತವರೇ ಅವರನ್ನು ತಿರಸ್ಕರಿಸುವಾಗ ಸಮಾಜ ಹೇಗೆ ಅನುಕಂಪ ತೋರುತ್ತದೆ? ನನ್ನಂತೆ ಎಷ್ಟೋ ಜನರನ್ನು ಅವರ ಮನೆಯವರು ಬಯಕೆಗಳಿಗೆ ಸ್ಪಂದಿಸಿ ಆಸ್ಥೆಯಿಂದ ನೋಡಿಕೊಂಡಿದ್ದಾರೆ. ಅದರ ಪ್ರಮಾಣ ಬೆರಳಣಿಕೆಯಷ್ಟು. ಹೆಚ್ಚಿನವರನ್ನು ಮನೆಯಿಂದ ಹೊರಹಾಕುತ್ತಾರೆ.

ಬೀದಿ ಪಾಲಾದವರು, ಎಲ್ಲಿಯೂ ಶಿಕ್ಷಣ, ಕೆಲಸ ಸಿಗದವರು ಇನ್ನೇನು ಮಾಡಲು ಸಾಧ್ಯ? ಭಿಕ್ಷೆ ಬೇಡುತ್ತಾರೆ. ಗದರಿಸಿ ಹಣ ಕೀಳುವ ಮಟ್ಟಕ್ಕೂ ಹೋಗುತ್ತಾರೆ. ಈ ಚಟುವಟಿಕೆ ತಪ್ಪು ನಿಜ. ಆದರೆ ಒಟ್ಟಾರೆ ಸಾಮಾಜಿಕ ವ್ಯವಸ್ಥೆ ಹೀಗಿರುವಾಗ ಅವರು ಬದುಕಲು ಈ ಪ್ರವೃತ್ತಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಗೌರವ, ಪ್ರೀತಿ ಎಲ್ಲದರಿಂದಲೂ ವಂಚಿತರಾದಾಗ ಸಮಾಜ ವಿರೋಧಿ ಚಟುವಟಿಕೆಗಳಿಗೂ ಅವರು ಮುಂದಾಗಬಹುದು. ಆದರೆ ಎಲ್ಲರನ್ನೂ ಆ ದೃಷ್ಟಿಕೋನದಲ್ಲಿ ನೋಡುವುದು ಸರಿಯಲ್ಲ. ಗಂಡು -ಹೆಣ್ಣು ಎಂದು ಪರಿಗಣಿಸಿದ ಜನರೂ ಇಂಥ ತಪ್ಪುಗಳನ್ನು ಮಾಡುವುದಿಲ್ಲವೇ? ಸಮಾನ ದುಃಖಿಗಳು, ನೋವನ್ನು ಹಂಚಿಕೊಂಡವರು ಒಂದಾಗುತ್ತಾರೆ. ಸಮಾಜದ ಕಣ್ಣಿಗೆ ಅವರದೇ ಗುಂಪು ಕಟ್ಟಿಕೊಂಡು ಮಾಡುವ ಹಣವಸೂಲಿ ದಂಧೆಯಂತೆ ಕಾಣಿಸುತ್ತದೆ ಎಂದು ಸಾಮಾಜಿಕ ವ್ಯವಸ್ಥೆಯನ್ನು ದೂರುತ್ತಾರೆ ಓಲ್ಗಾ.

ಐತಿಹಾಸಿಕ ಕಟ್ಟಡವೊಂದರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಯೋಜನೆಯಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಂಡ ಬಳಿಕ ಓಲ್ಗಾ ಆತ್ಮವಿಶ್ವಾಸ ಇಮ್ಮಡಿಸಿದೆ. ಮಾಡೆಲಿಂಗ್ ಕ್ಷೇತ್ರದತ್ತ ಒಲವು ಕೂಡ ಮೊಳಕೆಯೊಡೆದಿದೆ. ಈ ಯೋಜನೆ ಛಾಯಾಗ್ರಾಹಕ ವೆಂಕಟೇಶ್ ಅವರದ್ದಾಗಿದ್ದರೂ ರೂಪದರ್ಶಿಯಾಗಿ ಕಾಣಿಸಿಕೊಳ್ಳಲು ಅಗತ್ಯವಾಗಿದ್ದ ಖರ್ಚುವೆಚ್ಚಗಳನ್ನೆಲ್ಲವನ್ನೂ ಸ್ವತಃ ಓಲ್ಗಾ ಭರಿಸಿದ್ದರು.

ಐತಿಹಾಸಿಕ ಸ್ಮಾರಕದ ಮುಂದೆ ರೂಪದರ್ಶಿಯಾಗಿ ನಿಲ್ಲುವ ಅವಕಾಶ ಸಿಕ್ಕಿದ್ದೇ ಹೆಮ್ಮೆಯ ಸಂಗತಿ ಎನ್ನುವ ಓಲ್ಗಾ, ನೀರಿನ ವಿಚಾರದಲ್ಲಿ ಕದನ ನಡೆಸುತ್ತಿರುವ ಕರ್ನಾಟಕ ಮತ್ತು ತಮಿಳುನಾಡುಗಳ ನಡುವೆ ಸಾಂಸ್ಕೃತಿಕ ಸಂಬಂಧ ಬೆಸೆಯುವ ಕೊಂಡಿ ನಾನಾಗಿದ್ದೇನೆ ಎಂದು ಸಂತೋಷದಿಂದ ಹೇಳಿಕೊಳ್ಳುತ್ತಾರೆ. ಭಾರತೀಯ ಸಾಮಾಜಿಕ ವ್ಯವಸ್ಥೆಗೂ ವಿದೇಶಿ ವ್ಯವಸ್ಥೆಗೂ ಸಾಕಷ್ಟು ವ್ಯತ್ಯಾಸವಿದೆ. ಬಹುತೇಕ ಕಡೆ ಮಂಗಳಮುಖಿಯರ ಪರಿಸ್ಥಿತಿ ಮಾತ್ರ ಒಂದೇ. ಮಾಡೆಲಿಂಗ್‌ನಲ್ಲಿ ಅನೇಕ ಸಂದರ್ಭಗಳಲ್ಲಿ ರೂಪದರ್ಶಿಯನ್ನಾಗಿ ಬಳಸಿಕೊಳ್ಳಲಾಗುತ್ತದೆ. ಹಾಗೆಂದ ಮಾತ್ರಕ್ಕೆ ಅದು ಸಮಾಜದಲ್ಲಿ ಉನ್ನತ ಸ್ಥಾನ ನೀಡಿದಂತೆ ಎಂದು ಭಾವಿಸುವಂತಿಲ್ಲ.

ಕರ್ನಾಟಕ ಹೈಕೋರ್ಟ್ ಕಚೇರಿಯಲ್ಲಿ ಮಂಗಳಮುಖಿಯರಿಗಾಗಿ ಮೀಸಲಿರಿಸಿದ ಹುದ್ದೆಯಿದೆ. ಇಂಥ ಕ್ರಮ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ನಡೆಯಬೇಕು. ಸರ್ಕಾರಿ ಉದ್ಯೋಗಕ್ಕೆ ಹತ್ತು ಹಲವು ಬಗೆಯ ಮೀಸಲಾತಿಗಳಿರುವಾಗ ಮಂಗಳಮುಖಿಯರಿಗೂ ಮೀಸಲಾತಿ ನೀಡುವುದರಲ್ಲಿ ತಪ್ಪೇನಿದೆ ಎಂಬ ಪ್ರಶ್ನೆ ಅವರದು. ನಮಗೆ ಬೇಕಿರುವುದು ಅನುಕಂಪ, ಸವಲತ್ತುಗಳಲ್ಲ. ಸಮಾಜದಲ್ಲಿ ಎಲ್ಲರಂತೆ ಬದುಕುವ ಗೌರವ.

ಬೀದಿಗಳಲ್ಲಿ, ರಸ್ತೆ ಸಿಗ್ನಲ್‌ಗಳಲ್ಲಿ ಅಡ್ಡಗಟ್ಟಿ ಹಣ ಕೇಳುವವರ ಮನಃಪರಿವರ್ತನೆ ಕಷ್ಟವೇನಲ್ಲ. ಅವರಿಗೆ ಬದುಕಿಗೊಂದು ಸುಭದ್ರ ಗೌರವಯುತ ನೆಲೆ ಬೇಕು. ಅದಕ್ಕೆ ಪೂರಕವಾದ ನೀತಿ ಸರ್ಕಾರದಿಂದ ಜಾರಿಯಾದರೆ ಖಂಡಿತಾ ಸಾಮಾಜಿಕ ವ್ಯವಸ್ಥೆಯ ಒಂದು ಚಿತ್ರಣ ಬದಲಾಗುತ್ತದೆ. ಆ ಕಾಲ ಶೀಘ್ರವೇ ಬರಲಿ ಎಂಬ ಆಶಯ ಅವರದು.

ಸಮಾಜದೊಂದಿಗೆ ಬೆರೆತು ಪರಿವರ್ತನೆಯ ಪ್ರಯತ್ನದಲ್ಲಿ ತೊಡಗಿರುವ ಓಲ್ಗಾ ಅವರ ಪ್ರಯತ್ನಕ್ಕೆ ಮನೆಯವರ ಬೆಂಬಲವೂ ಇದೆ. ವಿವಾಹದ ಪ್ರಸ್ತಾಪಗಳೂ ಬಂದಿದ್ದವು. ಆದರೆ ತಮ್ಮ ಕರ್ತವ್ಯ ಹಾಗೂ ಗುರಿಯ ಬಗ್ಗೆ ಅಚಲ ನಿರ್ಧಾರ ತೆಗೆದುಕೊಂಡಿರುವ ಓಲ್ಗಾ, ವಿವಾಹ ತಮ್ಮ ಉದ್ದೇಶಕ್ಕೆ ಹಿನ್ನಡೆ ಉಂಟುಮಾಡಬಹುದು ಎಂಬ ಕಾರಣಕ್ಕೆ ಅದನ್ನು ನಿರಾಕರಿಸಿದ್ದಾರೆ. ಮನೆಯ ಸದಸ್ಯರೊಂದಿಗೆ ಚೆನ್ನಾಗಿ ಬದುಕುತ್ತಿದ್ದೇನೆ. ಮದುವೆಯಾದರೆ ಸ್ವಾಭಿಮಾನ ಮತ್ತು ಗೌರವಕ್ಕೆ ಧಕ್ಕೆ ಉಂಟಾಗಬಹುದು. ಆ ಜಂಜಾಟಗಳು ಬೇಡ. ಹೀಗೇ ಬದುಕು ಸಾಗಿಸುತ್ತೇನೆ ಎನ್ನುತ್ತಾರೆ ಓಲ್ಗಾ.

ಬೀದರ್ ಕೋಟೆ ಮತ್ತು ವೆಂಕಟೇಶ್

ತಮ್ಮನ್ನು ರೂಪದರ್ಶಿಯಾಗಿ ಬೆಳೆಸಿದ ಪತ್ರಿಕಾ ಛಾಯಾಗ್ರಾಹಕ ಕೆ. ವೆಂಕಟೇಶ್ ಅವರ ಮಾನವೀಯ ಮುಖವನ್ನು ಓಲ್ಗಾ ಮೆಚ್ಚಿಕೊಳ್ಳುತ್ತಾರೆ. ಸಾಮಾಜಿಕ ಕಾರ್ಯಕರ್ತೆಯಾಗಿ ದುಡಿಯುತ್ತಿರುವ ಓಲ್ಗಾ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಛಾಯಾಚಿತ್ರಗಳ ಮೂಲಕ ಬಿಂಬಿಸಿ, ಸಮಾಜದ ಮತ್ತು ಸರ್ಕಾರದ ಗಮನ ಸೆಳೆದು ಅದಕ್ಕೆ ಪರಿಹಾರ ದೊರಕಿಸಿಕೊಡುವ ಪ್ರಯತ್ನದಲ್ಲಿರುವ ಕೆ. ವೆಂಕಟೇಶ್ ಅವರಿಗೂ ದೀರ್ಘಕಾಲದ ಪರಿಚಯ.

ಹಲವು ವರ್ಷಗಳ ಹಿಂದೆಯೇ ಯೋಜನೆಯೊಂದಕ್ಕೆ ಸಂಬಂಧಿಸಿದಂತೆ ಓಲ್ಗಾ ಅವರನ್ನು ವೆಂಕಟೇಶ್ ಭೇಟಿ ಮಾಡಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಓಲ್ಗಾ ಅವರನ್ನು ಭೇಟಿ ಮಾಡಿದ ವೆಂಕಟೇಶ್ ತಮ್ಮ ಹೊಸ ಯೋಜನೆಯ ಬಗ್ಗೆ ವಿವರಿಸಿದರು. ಐದು ವರ್ಷಗಳ ಹಿಂದೆ ಬೀದರ್ ಕೋಟೆಯ ಛಾಯಾಚಿತ್ರ ತೆಗೆಯಲು ಹೋದ ವೆಂಕಟೇಶ್ ಅವರನ್ನು ಬಿರುಕು ಬಿಟ್ಟ ಕಟ್ಟಡ, ಕೆಳಗೆ ಬಿದ್ದ ಗೋಡೆಗಳು, ಮಾಸಿದ ಕುಸುರಿ ಕೆಲಸದ ಕೆತ್ತನೆಗಳು ಕಲಕಿದವು.

ತಾವು ತೆಗೆದ ಚಿತ್ರಗಳು ಪರಿಣಾಮಕಾರಿ ಎಂದೆನಿಸಲಿಲ್ಲ. ಪಾಳುಬಿದ್ದ ಕೋಟೆಗೂ ಮಾನವೀಯತೆಯ ಸ್ಪರ್ಶ ನೀಡುವ ಇರಾದೆ ಉಂಟಾಯಿತು. ಆಗ ಮನದಲ್ಲಿ ಬಂದದ್ದು ಮಂಗಳಮುಖಿಯರ ಬದುಕು. ಅವರ ಜೀವನಕ್ಕೂ ಈ ಬಿರುಕು ಬಿಟ್ಟ ಕೋಟೆಗೂ ವ್ಯತ್ಯಾಸವಿಲ್ಲ. ಇಬ್ಬರೂ ನಿರ್ಲಕ್ಷಿತರೇ ಎಂಬ ಸೂಕ್ಷ್ಮಗಳನ್ನು ತಳುಕು ಹಾಕಿದ ವೆಂಕಟೇಶ್ ಓಲ್ಗಾರನ್ನು ಕೋಟೆಯ ನಡುವೆ ರೂಪದರ್ಶಿಯಾಗಿ ನಿಲ್ಲಿಸಿ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿದರು. ವೃತ್ತಿಪರ ಛಾಯಾಗ್ರಾಹಕರಾಗಿದ್ದರೂ ಓಲ್ಗಾ ಅವರ ಅಭಿಪ್ರಾಯ, ಸಲಹೆಗಳಿಗೆ ವೆಂಕಟೇಶ್ ಸ್ವಾತಂತ್ರ್ಯ ನೀಡಿದ್ದರು.

ಕೋಟೆ ಮತ್ತು ಮಂಗಳಮುಖಿಯರ ಇಬ್ಬರ ಕಷ್ಟ, ನೋವುಗಳನ್ನೂ ಚಿತ್ರದಲ್ಲಿ ಕಟ್ಟಿಕೊಡುವ ವಿಭಿನ್ನ ಪ್ರಯತ್ನವದು. ಇತ್ತೀಚೆಗೆ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಈ ಚಿತ್ರಗಳ ಪ್ರದರ್ಶನವನ್ನೂ ಏರ್ಪಡಿಸಿದ್ದರು. ಕೋಟೆ ರಕ್ಷಣೆಯ ಕುರಿತು ಸರ್ಕಾರದ ಗಮನ ಸೆಳೆಯುವುದು ಮಾತ್ರವಲ್ಲ, ಮಂಗಳಮುಖಿಯರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವುದೂ ಅವರ ಈ ಪ್ರಯೋಗದ ಉದ್ದೇಶ. ಹೆಚ್ಚಿನ ಛಾಯಾಗ್ರಾಹಕರು ಕಮರ್ಷಿಯಲ್ ಆಗಿರುತ್ತಾರೆ. ಆದರೆ ವೆಂಕಟೇಶ್ ತಮ್ಮ ವೃತ್ತಿಯ ಜೊತೆಗೆ, ವೃದ್ಧರು, ಅನಾಥ ಮಕ್ಕಳು, ಬಡವರು ಮುಂತಾದವರಿಗಾಗಿ ಮೌಲ್ವಿಕವಾದ ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂಬ ಮೆಚ್ಚುಗೆ ಮಾತನ್ನಾಡುತ್ತಾರೆ ಓಲ್ಗಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT