ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪು ನಿರ್ಧಾರ: ಹೈಕಮಾಂಡ್‌ಗೆ ಸದಾನಂದಗೌಡ ಪರೋಕ್ಷ ಎಚ್ಚರಿಕೆ

Last Updated 5 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ರಾಜ್ಯ ರಾಜಕೀಯದಲ್ಲಿನ ವಸ್ತುಸ್ಥಿತಿ ಸರಿಯಾಗಿ ಮೌಲ್ಯಮಾಪನ ಮಾಡದೆ ಪಕ್ಷದ ವರಿಷ್ಠರು ತಪ್ಪು ನಿರ್ಣಯ ತೆಗೆದುಕೊಂಡರೆ ರಾಜ್ಯದ ಆರು ಕೋಟಿ ಜನ ಮುಂದಿನ ಚುನಾವಣೆಯಲ್ಲಿ ಸೂಕ್ತ ತೀರ್ಪು ನೀಡುತ್ತಾರೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಪರೋಕ್ಷವಾಗಿ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದರು.

`ನಾಯಕತ್ವ ವಿಷಯದಲ್ಲಿನ ಗೊಂದಲ ನಿವಾರಿಸಲು ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮುನ್ನ ಪಕ್ಷದ ವರಿಷ್ಠರು ಎಲ್ಲವನ್ನೂ ಅಳೆದು, ತೂಗಿ ಸರಿಯಾದ ಮೌಲ್ಯಮಾಪನ ಮಾಡಬೇಕು. ಆತುರದಲ್ಲಿ ತಪ್ಪು ಹೆಜ್ಜೆ ಇಟ್ಟರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ~ ಎಂದರು.

ಜನತಾ ದರ್ಶನದ ನಂತರ ಗೃಹ ಕಚೇರಿ `ಕೃಷ್ಣಾ~ದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, `ನಾಯಕತ್ವದ ಗೊಂದಲವನ್ನು ದೀರ್ಘ ಕಾಲ ಎಳೆಯುವುದು ಸರಿಯಲ್ಲ. ಸಾಧಕ- ಬಾಧಕಗಳನ್ನು ಅವಲೋಕಿಸಿ ಪಕ್ಷದ ವರಿಷ್ಠರು ಆದಷ್ಟು ಬೇಗ ತೀರ್ಮಾನ ತೆಗೆದುಕೊಳ್ಳಬೇಕು~ ಎಂದು ಒತ್ತಾಯಿಸಿದರು.

`ಏನು ಬೇಕಾದರೂ ಮಾಡಿ, ಗೊಂದಲವನ್ನು ನಿವಾರಿಸಿ ಎಂಬುದು ಜನರ ಅಪೇಕ್ಷೆ. ಇದನ್ನು ವರಿಷ್ಠರು ಅರ್ಥ ಮಾಡಿಕೊಳ್ಳಬೇಕು~ ಎಂದರು.

ಇದೇ 9ರಂದು ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ವರಿಷ್ಠರಿಂದ ಯಾವುದೇ ಸೂಚನೆ ಬಂದಿಲ್ಲ. ಬಿಕ್ಕಟ್ಟು ನಿವಾರಣೆ ಸಂಬಂಧ ವರಿಷ್ಠರು ನಗರಕ್ಕೆ ಬರುವ ವಿಷಯವೂ ಗೊತ್ತಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

`ಬರಗಾಲದಿಂದಾಗಿ ಜನ ಸಂಕಷ್ಟದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ನಾಯಕತ್ವ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಡಳಿತದಲ್ಲಿ ಸ್ಥಿರತೆ ಇರುವುದಿಲ್ಲ. ಆದ್ದರಿಂದ ವರಿಷ್ಠರು ಆದಷ್ಟು ಬೇಗ ಇದನ್ನು ಇತ್ಯರ್ಥಪಡಿಸಬೇಕು ಎಳೆದಾಡಬಾರದು~ ಎಂದರು.

ಈ ಮಧ್ಯೆ ಇದೇ 16ರಿಂದ ವಿಧಾನ ಮಂಡಲದ ಅಧಿವೇಶನ ಕರೆಯುವ ಸಂಬಂಧ ಗುರುವಾರ ಅಧಿಸೂಚನೆ ಹೊರಡಿಸಲಾಗಿದೆ. ಶುಕ್ರವಾರ ಸಚಿವ ಸಂಪುಟ ಸಭೆ ನಡೆಯಲಿದ್ದು, ಗೋ ಸಂರಕ್ಷಣಾ ಆಯೋಗ ರಚನೆ ಸೇರಿದಂತೆ 40ಕ್ಕೂ ಅಧಿಕ ವಿಷಯಗಳು ಚರ್ಚೆಗೆ ಬರಲಿವೆ.

ಶೆಟ್ಟರ್ ನಗರಕ್ಕೆ: ಗುರುವಾರ ಬೆಳಿಗ್ಗೆ ದೆಹಲಿಯಿಂದ ನಗರಕ್ಕೆ ಹಿಂತಿರುಗಿದ ಸಚಿವ ಜಗದೀಶ ಶೆಟ್ಟರ್ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ದೆಹಲಿಯಲ್ಲಿ ವರಿಷ್ಠರೊಂದಿಗೆ ನಡೆದ ಮಾತುಕತೆಯ ವಿವರಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ನನ್ನ ಅಭಿಪ್ರಾಯಗಳನ್ನು ವರಿಷ್ಠರಿಗೆ ತಿಳಿಸಿದ್ದೇನೆ. 3-4 ದಿನಗಳಲ್ಲಿ ಪಕ್ಷದ ವರಿಷ್ಠರು ಸೂಕ್ತ ತೀರ್ಮಾನ ತೆಗೆದುಕೊಳ್ಳುವ ವಿಶ್ವಾಸವಿದೆ~ ಎಂದರು. ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರನ್ನು ಭೇಟಿ ಮಾಡಿದ್ದೀರಾ ಎಂಬ ಪ್ರಶ್ನೆಗೆ ಯಾವುದೇ ಉತ್ತರ ನೀಡಲಿಲ್ಲ.

ಸಚಿವರಾದ ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ, ಎಂ.ಪಿ.ರೇಣುಕಾಚಾರ್ಯ, ಸಿ.ಎಂ.ಉದಾಸಿ, ಶಾಸಕ ಬೇಳೂರು ಗೋಪಾಲಕೃಷ್ಣ ಮೊದಲಾದವರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.

ನಾಟಕವಲ್ಲ: `ನಾಯಕತ್ವ ಬದಲಾವಣೆಗೆ ಒತ್ತಾಯಿಸಿ ನಾನು ಸೇರಿದಂತೆ 9 ಸಚಿವರು ರಾಜೀನಾಮೆ ನೀಡಿದ್ದು ನಾಟಕವಲ್ಲ. ಪಕ್ಷದಲ್ಲಿ  ಭಿನ್ನಾಭಿಪ್ರಾಯಗಳಿವೆ. ಅವನ್ನು ಸರಿಪಡಿಸಿ ಎಂದು ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸದಾನಂದಗೌಡ ಅವರನ್ನು ಒತ್ತಾಯಿಸಿದ್ದೆವು. ಆದರೆ ಸರಿಯಾದ ಸ್ಪಂದನೆ ಸಿಗದ ಕಾರಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯವಾಗಿತ್ತು~ ಎಂದು ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT