ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪುಗಳನ್ನು ತಿದ್ದಿಕೊಳ್ಳಲಾಗಿದೆ

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಎಂಟನೆಯ ತರಗತಿಗೆ ಸಿದ್ಧಪಡಿಸಲಾದ ಸಮಾಜವಿಜ್ಞಾನ ಪಠ್ಯರಚನಾ ಸಮಿತಿಯ ಅಧ್ಯಕ್ಷನಾಗಿರುವುದರಿಂದ ಈ ಪಠ್ಯಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ನೀಡುತ್ತಿದ್ದೇನೆ. ದ್ವಾರಕಾನಾಥ್ ಅವರು ಪ್ರಜಾವಾಣಿಯ ಲೇಖನದಲ್ಲಿ ಉಲ್ಲೇಖಿಸಿರುವ `ಅಖಂಡ ಭಾರತ~ದ ನಕ್ಷೆಯ ಬಗ್ಗೆ ನಮ್ಮ ಪಠ್ಯ ಪುಸ್ತಕ ರಚನಾ ಸಮಿತಿಯವರೇ ಭಿನ್ನಾಭಿಪ್ರಾಯ ಸೂಚಿಸಿ, ಅದಕ್ಕೆ ಸಂಬಂಧಿಸಿದ ನಿರ್ಣಯವನ್ನು ಎರಡು ತಿಂಗಳ ಹಿಂದೆಯೇ ಮಾಡಿದ್ದಾರೆ. ಜನವರಿ ತಿಂಗಳಲ್ಲಿ ಈ ಕುರಿತಂತೆ ಖುದ್ದಾಗಿ ನಾನೇ ಸಂಬಂಧಿಸಿದವರಿಗೆ ಪತ್ರ ಬರೆದು ಸಂಬಂಧಿಸಿದ ಭೂಪಟವನ್ನು ಕೈಬಿಡುವಂತೆ ಕೋರಿದ್ದೆನು. ಈ ಹಿನ್ನೆಲೆಯಲ್ಲಿ 8ನೆಯ ತರಗತಿ ವಿದ್ಯಾರ್ಥಿಗಳಿಗೆ ನೀಡುವ ಪಠ್ಯದಲ್ಲಿ ವಿವಾದಿತ ಭೂಪಟವನ್ನು ಸೇರಿಸುವುದಿಲ್ಲ ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ. ದ್ವಾರಕಾನಾಥ್ ಅವರು ಸುಮಾರು ಮೂರು ತಿಂಗಳ ಹಿಂದೆ ತಯಾರಾದ ಸಮಾಜ ವಿಜ್ಞಾನ ಪಠ್ಯದ ಕರಡನ್ನು ನೋಡಿ ಲೇಖನ ಬರೆದಿರುವುದರಿಂದ ಮಾಹಿತಿ ದೋಷವಾಗಿರಬಹುದು ಎಂದು ನನ್ನ ಅಭಿಪ್ರಾಯ

ವೇದಗಳ ಕಾಲವನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ ಸಹಜವಾಗಿಯೇ ವೈದಿಕ ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ಹಾಗೆ ನೋಡಿದರೆ ಇಲ್ಲಿಯವರೆಗೆ ಬಂದ ಸಮಾಜವಿಜ್ಞಾನ ಪಠ್ಯಗಳಿಗಿಂತ ಭಿನ್ನವಾಗಿ ಪ್ರಸ್ತುತ ಪಠ್ಯವನ್ನು ರಚಿಸಲಾಗಿದೆ. ಚರಿತ್ರೆ, ಭೂಗೋಳದೊಂದಿಗೆ ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನಗಳನ್ನು ಎನ್‌ಸಿಎಫ್-2005ರ ಪ್ರಕಾರ ರಚಿಸಲಾಗಿರುವುದನ್ನು ಗಮನಿಸಬಹುದು. ಇಲ್ಲಿಯವರೆಗೆ ಬಂದ ಪಠ್ಯಗಳಲ್ಲಿ `ದಾಸ~ ಹಾಗೂ `ದಸ್ಯು~ಗಳ ಇರುವುದನ್ನು ಪರಿಗಣಿಸಿರಲಿಲ್ಲ. ಅವರಿಗೆ ನೂರಾರು ದನಗಳು ಹಾಗೂ ಕೋಟೆಗಳಿದ್ದ ಮಾಹಿತಿಗಳೂ ಇರಲಿಲ್ಲ. ವೈದಿಕರನ್ನೂ ತಿರಸ್ಕರಿಸಿದ ಶ್ರೀಮಂತರಾದ `ಪಾಣಿ~ಗಳ ಬಗ್ಗೆಯೂ ಮಾಹಿತಿಗಳು ಇರಲಿಲ್ಲ. ಇವರೆಲ್ಲರನ್ನು ಕಾಲಾನುಕ್ರಮದಲ್ಲಿ ಸೋಲಿಸಿದ ನಂತರ ವೈದಿಕ ಸಂಸ್ಕೃತಿಯು ಪ್ರಬಲವಾಯಿತು ಎನ್ನುವ ವಿವರಗಳನ್ನು ಈ ಪಠ್ಯದಲ್ಲಿ ನೀಡಲಾಗಿದೆ. ಪಠ್ಯದಲ್ಲಿರುವ ಈ ಬಗೆಯ ವಿವರಗಳು ವೇದಗಳ ಕಾಲವನ್ನು ವೈಭವೀಕರಿಸುತ್ತದೆ ಎಂದರೆ ಅದು ಸರಿಯಲ್ಲ. ಬಹುತೇಕ ಸಮಾಜ ವಿಜ್ಞಾನ ಪಠ್ಯಗಳಲ್ಲಿ ಸಾಮಾನ್ಯವಾಗಿರುವ ನೂರಾರು ಸಂಖ್ಯೆಯಲ್ಲಿದ್ದ ಇಸವಿಗಳನ್ನು ಹಾಗೂ ಅನಗತ್ಯ ವಿವರಗಳನ್ನು ಪ್ರಸ್ತುತ ಪಠ್ಯದಿಂದ ಕೈಬಿಟ್ಟು ವಿದ್ಯಾರ್ಥಿಗಳು ಕ್ರಿಯಾಶೀಲರಾಗುವಂತೆ ವಿಷಯದ ಒಳನೋಟಗಳಿಗೆ ಮಹತ್ವ ನೀಡಿದ್ದನ್ನು ಗಮನಿಸಬಹುದಾಗಿದೆ.

ರಾಜ್ಯಶಾಸ್ತ್ರಕ್ಕೆ ಸಂಬಂಧಿಸಿದಂತೆ ದ್ವಾರಕಾನಾಥ್ ಅವರು ಮಾಡಿರುವ ಕೆಲವು ಆಕ್ಷೇಪಗಳನ್ನು ಈಗಾಗಲೇ ಸರಿಪಡಿಸಿಕೊಳ್ಳಲಾಗಿದೆ (ಉದಾಹರಣೆಗೆ ಕಮ್ಯುನಿಸ್ಟ್ ಸರ್ಕಾರದಲ್ಲಿ `ಸ್ವಾತಂತ್ರ್ಯವೇ ಇಲ್ಲದ ವ್ಯವಸ್ಥೆ ಕಂಡುಬರುತ್ತದೆ...ಇತ್ಯಾದಿ). ಉಳಿದಂತೆ ಬಹುತೇಕವಾಗಿ ಅವುಗಳು ಪಠ್ಯದ ವಿಷಯಕ್ಕಿಂತ ವಿದ್ಯಾರ್ಥಿಗಳ ಚಟುವಟಿಕೆಗಳಿಗೆ ಸಂಬಂಧಿಸಿದ್ದಾಗಿವೆ.

- ಪ್ರೊ. ವಿಜಯ್ ಪೂಣಚ್ಚ ತಂಬಂಡ
ಅಧ್ಯಕ್ಷರು, ಸಮಾಜ ವಿಜ್ಞಾನ ಪಠ್ಯ ರಚನಾ ಸಮಿತಿ (8ನೆಯ ತರಗತಿ), ಕರ್ನಾಟಕ ಪಠ್ಯ ಪುಸ್ತಕ ಸಂಘ(ರಿ), ಬೆಂಗಳೂರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT