ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಬ್ಬಲಿ ಜೀವಗಳಿಗೆ ಕೇರ್

Last Updated 13 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಆಶ್ರಯದಾತರು, ಅನ್ನದಾತರಿಲ್ಲದ ಪ್ರಾಣಿಗಳಿಗೆ ರಕ್ಷಣೆ ಕೊಡುತ್ತಿದ್ದ ‘ಕ್ಯೂಪಾ’ದ ಹೆಬ್ಬಾಳ ಶಾಖೆ ಸೂರಿಲ್ಲದೆ ಮುಚ್ಚಿಹೋಗಿದೆ. ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನೊಂದಿಗೆ ಸಂಸ್ಥೆ ಮಾಡಿಕೊಂಡಿದ್ದ 20 ವರ್ಷಗಳ ಅವಧಿಯ ಗುತ್ತಿಗೆ ಮುಕ್ತಾಯಗೊಂಡ ನಂತರ ಬೆಂಗಳೂರು ಉತ್ತರ ವಲಯದಲ್ಲೇ ಹೊಸ ಸ್ಥಳ ಸಿಗದಿರುವುದು ಮತ್ತು ಕಾರ್ಮಿಕರ ಕೊರತೆ ಇದಕ್ಕೆ ಕಾರಣ.

ತಬ್ಬಲಿ ಜೀವಗಳಿಗೆ ಆಪದ್ಬಾಂಧವನಂತೆ ನೆರವಿಗೆ ನಿಲ್ಲುತ್ತಿದ್ದ ತಾಣವೊಂದು ಸದ್ದಿಲ್ಲದೆ ಸ್ಥಗಿತಗೊಂಡಿರುವುದು ಪ್ರಾಣಿ ಪ್ರೇಮಿಗಳಲ್ಲಿ ಬೇಸರ ಮೂಡಿಸಿತ್ತು. ಇದರಿಂದಾಗಿ ಯಾವುದೋ ರಸ್ತೆಯಲ್ಲಿ ಅಪಘಾತಕ್ಕೊಳಗಾದ, ಕಾಯಿಲೆ ಬಿದ್ದ ಬೀದಿ ನಾಯಿ/ಬೆಕ್ಕುಗಳಿಗೆ ಆಶ್ರಯತಾಣ ಇಲ್ಲದಂತಾಯಿತು. ಇದೀಗ ಈ ಕೊರತೆ ನೀಗಲು ಅದೇ ಮಾದರಿಯಲ್ಲಿ ಹೊಸ ಸಂರಕ್ಷಣಾ ಕೇಂದ್ರವೊಂದು ಜಕ್ಕೂರು ಬಳಿ ಕಾರ್ಯಾರಂಭ ಮಾಡಲಿದೆ.

ಪ್ರಾಣಿಪ್ರಿಯರ ‘ಕೇರ್’
ಚಾರ್ಲೀಸ್ ಅನಿಮಲ್ ರೆಸ್ಕ್ಯೂ ಸೆಂಟರ್–- ‘ಕೇರ್’ ಎಂಬ ಈ ಹೊಸ ಕೇಂದ್ರ ಜಕ್ಕೂರು ಕೆರೆಯ ಬಳಿ ಕಾರ್ಯ ನಿರ್ವಹಿಸಲಿದೆ.
‘ಅನಾಥ ಪ್ರಾಣಿಗಳ ರಕ್ಷಣೆಗೆ ನಗರದಲ್ಲಿ ಕೇಂದ್ರಗಳು ಅತ್ಯವಶ್ಯ. ಬೀದಿಯಲ್ಲಿ ಗಾಯಗೊಂಡು, ಕಾಯಿಲೆ ಬಿದ್ದು ನರಳುವ ಪ್ರಾಣಿಗಳಿಗೆ ಅಗತ್ಯ ಶುಶ್ರೂಷೆ ಮತ್ತು ಅನ್ನ ನೀರು ಕೊಡುವುದು ನಮ್ಮ ಕರ್ತವ್ಯ. ಮಾತ್ರವಲ್ಲ ದುಬಾರಿ ವಿದೇಶಿ ತಳಿಗಳ ನಾಯಿಗಳನ್ನು ಸಾಕಿದವರೂ ಅವುಗಳಿಗಾಗಿ ಡೇ ಕೇರ್, ಬೋರ್ಡಿಂಗ್ ಸೌಕರ್ಯ ಬಯಸುತ್ತಾರೆ. ಅದಕ್ಕಾಗಿ ಸಮಾನ ಮನಸ್ಕರು ಒಟ್ಟಾಗಿ ‘ಕೇರ್’ ಶುರು ಮಾಡಿದೆವು. ಆದರೆ ಬೀದಿ ನಾಯಿಗಳೇ ನಮ್ಮ ಆದ್ಯತೆ’ ಎಂದು ವಿವರಿಸುತ್ತಾರೆ, ಸಂಸ್ಥೆಯ ಸ್ಥಾಪಕರಲ್ಲೊಬ್ಬರಾದ ಸುಧಾ ನಾರಾಯಣನ್.

ಆದಾಯ ತೆರಿಗೆ ಇಲಾಖೆಯ ಉದ್ಯೋಗಿಯಾಗಿರುವ ಸುಧಾ ಎರಡು ದಶಕಗಳ ಹಿಂದೆ ‘ಕರುಣಾ’ದಲ್ಲಿ ಸ್ವಯಂಸೇವಕರಾಗಿದ್ದು ನಂತರ 19 ವರ್ಷ ‘ಕ್ಯೂಪಾ’ದೊಂದಿಗೆ ಇದ್ದವರು. ಕ್ಯೂಪಾದಲ್ಲಿ ಪಶು ವೈದ್ಯಕೀಯ ಸೇವೆ ನೀಡುತ್ತಿದ್ದ ಡಾ.ಎಚ್.ಡಿ. ಲೋಹಿತ್, ನಿವೃತ್ತ ವಿಂಗ್ ಕಮಾಂಡರ್ ಲಿಂಗರಾಜು, ಟೆಕ್ಕಿ ಮೇಘಾ ವಿಜಯ್ ಅವರೂ ಹಲವಾರು ವರ್ಷಗಳಿಂದ ಅನಾಥ ಪ್ರಾಣಿಗಳಿಗೆ ನೆರವಾಗುತ್ತಾ ಬಂದವರೇ. ಇದೀಗ ಇವರ ಪರಿಶ್ರಮದಿಂದ ‘ಕೇರ್’ ಹುಟ್ಟಿಕೊಂಡಿದೆ.

ಪೇಯಿಂಗ್ ಗೆಸ್ಟ್, ಡೇ ಕೇರ್...
ದುಡಿಯುವ ತಾಯಂದಿರು ತಮ್ಮ ಮಕ್ಕಳನ್ನು ಡೇ ಕೇರ್ ಸೆಂಟರ್‌ನಲ್ಲಿ ಬಿಡುವುದು ಸಾಮಾನ್ಯ. ಪ್ಲೇ ಹೋಮ್‌ ಮುಗಿದ ನಂತರ ಪೋಷಕರು ಬರುವವರೆಗೆ ಬೋರ್ಡಿಂಗ್‌ನಲ್ಲಿ ಊಟ ನಿದ್ದೆ ಮಾಡಿ ಹೆತ್ತವರೊಂದಿಗೆ ಮನೆಗೆ ಮರಳುವ ಕಂದಮ್ಮಗಳು ನಗರದಲ್ಲಿವೆ. ಆದರೆ ತಮ್ಮ ಶ್ರೀಮಂತಿಕೆ, ಪ್ರತಿಷ್ಠೆಯ ಸಂಕೇತವೆಂದೇ ಪರಿಗಣಿಸಲಾಗುವ ದುಬಾರಿ ನಾಯಿಗಳನ್ನೂ ಡೇ ಕೇರ್, ಬೋರ್ಡಿಂಗ್‌ನಲ್ಲಿ ಬಿಟ್ಟು ಆಮೇಲೆ ಮನೆಗೆ ಕರೆದುಕೊಂಡು ಹೋಗುವ ಶ್ವಾನ ಪೋಷಕರೂ ಇದ್ದಾರೆ.

‘ಬೀದಿ ಪಾಲಾದ ಪ್ರಾಣಿಗಳಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ, ಊಟೋಪಹಾರದೊಂದಿಗೆ ಸೂರು ಒದಗಿಸಲಾಗುತ್ತದೆ. ಅಪಘಾತವಾದ ಸ್ಥಳದಿಂದ ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಸೇವೆಯೂ ‘ಕೇರ್’ನಲ್ಲಿ ಲಭ್ಯ. ಬೀದಿ ನಾಯಿಗಳಿಗೆ ಕೊಡುವ ಎಲ್ಲಾ ಚಿಕಿತ್ಸೆಗಳೂ ಉಚಿತ. ಇದನ್ನು ನಮ್ಮ ಸಂಸ್ಥೆಯ ದಾನಿಗಳು ಭರಿಸುತ್ತಾರೆ. ಇದರೊಂದಿಗೆ ಸಾಕುನಾಯಿಗಳಿಗೆ ಡೇ ಕೇರ್, ಬೋರ್ಡಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಹೇಳುತ್ತಾರೆ, ಡಾ. ಲೋಹಿತ್.

ಪ್ಯಾಸಿವ್ ಅಡಾಪ್ಷನ್
ಬೀದಿ ನಾಯಿಗಳನ್ನು ದತ್ತು ತೆಗೆದುಕೊಳ್ಳುವವರ ಸಂಖ್ಯೆ ನಗರದಲ್ಲಿ ಆಶಾದಾಯಕವಾಗಿದೆ ಎನ್ನುತ್ತಾರೆ ಸುಧಾ. ಇದು ಪೋಷಕರು ನಾಯಿಯನ್ನು ಪೂರ್ತಿಯಾಗಿ ತಮ್ಮ ವಶಕ್ಕೆ ತೆಗೆದುಕೊಂಡು ತಾವೇ ಸಾಕುವುದು ಪೂರ್ಣಪ್ರಮಾಣದ ದತ್ತು.

ಮತ್ತೊಂದು ವಿಧವೆಂದರೆ ಪ್ಯಾಸಿವ್ ಅಡಾಪ್ಷನ್. ನಾಯಿ/ ಬೆಕ್ಕುಗಳನ್ನು ಇಷ್ಟಪಡುವವರು ‘ಕೇರ್’ನಿಂದ ಆರಿಸಿಕೊಂಡು ಅದನ್ನು ‘ಕೇರ್’ನಲ್ಲೇ ಬಿಟ್ಟು ತಾವು ದಾನಿಗಳಷ್ಟೇ ಆಗಿ ಪೋಷಿಸುವುದು.

‘ಕೇರ್‌’ನಲ್ಲಿ ಅದರ ಪ್ರತಿದಿನದ ಸಮಸ್ತ ಖರ್ಚು ವೆಚ್ಚಗಳೂ ಸೇರಿ ತಿಂಗಳಿಗೆ 750 ರೂಪಾಯಿ ಶುಲ್ಕ ಪಾವತಿಸಿ ಬೇಕೆಂದಾಗ ತಮ್ಮ
‘ಸಾಕು’ಪ್ರಾಣಿಯೊಂದಿಗೆ ಕಾಲ ಕಳೆದು ಹೋಗಬಹುದು. ವಸತಿನಿಲಯದಲ್ಲಿರುವ ಮಕ್ಕಳನ್ನು ನೋಡಿಕೊಂಡು ಬರುವ ಹಾಗೆ!
ಕ್ಯೂಪಾದ ಮಾದರಿಯಲ್ಲೇ ಕೇರ್ ಕೂಡಾ ದೊಡ್ಡ ಪ್ರಮಾಣದಲ್ಲಿ ಬೀದಿ ನಾಯಿಗಳಿಗೆ ಆಶ್ರಯತಾಣವಾಗಬೇಕು ಎಂಬ ಆಸೆ ಈ
ತಂಡದ್ದು. ಅಗತ್ಯ ಸೌಕರ್ಯಗಳನ್ನು ಒದಗಿಸಲು ಹಣ ಸಹಾಯದ ನಿರೀಕ್ಷೆಯಲ್ಲಿದೆ ತಂಡ. ಸಂಪರ್ಕಕ್ಕೆ: ಸುಧಾ 98455 38270/ ಡಾ.ಲೋಹಿತ್ 98453 58602.

ಇಂದು ಉದ್ಘಾಟನೆ
‘ಕೇರ್’ ಸೆ.14ರ ಶನಿವಾರ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮಕ್ಕೆ ‘ಕೇರ್’ ತಂಡದೊಂದಿಗೆ ಯುವ ವ್ಯಂಗ್ಯಚಿತ್ರಕಾರ ಅನಂತ್ ಶಂಕರ್ ಅವರ ಸಹಯೋಗವಿದೆ. ಮಧ್ಯಾಹ್ನ 2.30ಕ್ಕೆ ಸಂಸ್ಥೆ ಉದ್ಘಾಟನೆಗೊಳ್ಳಲಿದ್ದು, ಅನಂತ್ ಶಂಕರ್ ಅವರ ‘ಕ್ರೇಜಿ ದೇಸಿ ಬುಕ್’ನ ಎರಡನೇ ಆವೃತ್ತಿಯೂ ಬಿಡುಗಡೆಯಾಗಲಿದೆ.

ಪ್ರಾಣಿಪ್ರಿಯರಿಗೆ ಇಲ್ಲೊಂದು ಮೋಜು ಕೂಡಾ ದೊರಕಲಿದೆ. ಪೋಷಕರು ನಾಯಿ/ಬೆಕ್ಕನ್ನು ದತ್ತು ತೆಗೆದುಕೊಳ್ಳುವ ಆ ಕ್ಷಣದಲ್ಲಿ ಅವರಿಗೆ ಏನನ್ನಿಸುತ್ತದೆ? ಅದೂ ತಮ್ಮ ಕುಟುಂಬದ ಸದಸ್ಯನೆಂದೋ? ಸಂಗಾತಿಯೆಂದೋ? ಸ್ನೇಹಿತನೆಂದೋ? ಅದನ್ನು ಒಂದು ಗೆರೆಯಲ್ಲಿ ಸೂಚಿಸಬೇಕು. ನಂತರ ಅನಂತ್ ಶಂಕರ್ ಅದನ್ನೇ ವ್ಯಂಗ್ಯಚಿತ್ರವಾಗಿ ರೂಪಿಸುತ್ತಾರೆ. ಕಾರ್ಯಕ್ರಮಕ್ಕೆ ನಿಮ್ ನಾಯಿ/ಬೆಕ್ಕನ್ನೂ ಕರಕೊಂಡು ಹೋಗಬಹುದಂತೆ. ಅಥವಾ ಅಲ್ಲೇ ದತ್ತು ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT