ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಬ್ರೇಜ್, ಅಬ್ಬಯ್ಯ ನಾಮಪತ್ರ ಸಲ್ಲಿಕೆ

Last Updated 17 ಏಪ್ರಿಲ್ 2013, 10:43 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿಧಾನಸಭಾ ಚುನಾವಣೆಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ತಬ್ರೇಜ್ ಸಂಶಿ, ಹು-ಧಾ ಪೂರ್ವ (ಮೀಸಲು) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ಅಬ್ಬಯ್ಯ , ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಚನ್ನಪ್ಪ ಮಲ್ಲಿಗವಾಡ, ಬಿಎಸ್‌ಪಿಯಿಂದ ನಿಂಗಪ್ಪ ಮರಗಾನೂರ ಹಾಗೂ  ಸೆಂಟ್ರಲ್ ಕ್ಷೇತ್ರದಿಂದ ನಾಲ್ವರು ಪಕ್ಷೇತರರು ಸೇರಿದಂತೆ ಎಂಟು ಮಂದಿ ಮಂಗಳವಾರ ನಾಮಪತ್ರ ಸಲ್ಲಿಸಿದರು.

ಮಧ್ಯಾಹ್ಯ 1 ಗಂಟೆಗೆ ತಮ್ಮ ನಾಮಪತ್ರ ಸಲ್ಲಿಸಲು ತಬ್ರೇಜ್ ಸಂಶಿ ಜೆಡಿಎಸ್ ಮುಖಂಡರು ಹಾಗೂ  ತಮ್ಮ ಅಪಾರ ಬೆಂಬಲಿಗರೊಂದಿಗೆ ಪಾಲಿಕೆಯ ಆವರಣದಲ್ಲಿನ ಹು-ಧಾ ಸೆಂಟ್ರಲ್ ಕ್ಷೇತ್ರದ ಚುನಾವಣಾ ಕಚೇರಿಗೆ ಆಗಮಿಸಿದರು.
ಇದಕ್ಕೂ ಮುನ್ನ ಕೇಶ್ವಾಪುರದ ಶಿವಗಂಗಾ ಲೇಔಟ್‌ನಲ್ಲಿರುವ ಪಕ್ಷದ ಚುನಾವಣಾ ಕಚೇರಿಯಿಂದ ಮೆರವಣಿಗೆ ಆರಂಭಿಸಿದರು. ಮೆರವಣಿಗೆಯಲ್ಲಿ ಪಕ್ಷದ ಹಿರಿಯ ಮುಖಂಡರಾದ ಬಸವರಾಜ ಹೊರಟ್ಟಿ, ಪಾಲಿಕೆಯ ಸದಸ್ಯರಾದ ರಾಜಣ್ಣ ಕೊರವಿ, ಅಲ್ತಾಫ್ ನವಾಜ ಕಿತ್ತೂರ, ಸಂತೋಷ ಹಿರೇಕೆರೂರ, ಕಿರಣ್‌ಕುಮಾರ ಹಿರೇಮಠ, ಫಾಲಿದಾ ಕಿಲ್ಲೇದಾರ ಮತ್ತಿತರರು ಪಾಲ್ಗೊಂಡಿದ್ದರು.

ಕೇಶ್ವಾಪುರದ ಬಸವೇಶ್ವರ ಸರ್ಕಲ್‌ನಲ್ಲಿ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಅಂಬೇಡ್ಕರ್ ಸರ್ಕಲ್‌ವರೆಗೆ ಮೆರವಣಿಗೆಯಲ್ಲಿ ಸಾಗಿ ಬಂದು ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಲ್ಯಾಮಿಂಗ್ಟನ್ ರಸ್ತೆ ಮುಖಾಂತರ ಜನತಾ ಬಜಾರ್ ಹತ್ತಿರ ಇರುವ ಸಂಗೊಳ್ಳಿ ರಾಯಣ್ಣ ಮೂರ್ತಿಗೆ  ಬಳಿಕ ಕಿತ್ತೂರು ಚನ್ನಮ್ಮ  ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಜೈಘೋಷದ ನಡುವೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಶಿ, `ಸಾಕಷ್ಟು ಉತ್ತಮ ರೀತಿಯಲ್ಲಿ ಪ್ರಚಾರ ಕಾರ್ಯ ಆರಂಭವಾಗಿದೆ. ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಉತ್ತಮ ಅಂತರದಲ್ಲಿ ಗೆದ್ದುಬರುವ ನಿರೀಕ್ಷೆ ಕಂಡು ಬರುತ್ತಿದೆ' ಎಂದರು.

ಕಾಂಗ್ರೆಸ್ ಮುಖಂಡರ ಗೈರು
ಇನ್ನು, ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ಅಬ್ಬಯ್ಯ ಕೂಡ ತಮ್ಮ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದರು.

ಹಳೇ ಹುಬ್ಬಳ್ಳಿಯ ಇಂಡಿ ಪಂಪ್‌ನಿಂದ ಮೆರವಣಿಗೆ ಆರಂಭಿಸಿದ ಅವರು ನ್ಯೂ ಇಂಗ್ಲಿಷ್ ಸ್ಕೂಲ್, ಬೂಸಪೇಟೆ, ಜವಳಿಸಾಲು, ದುರ್ಗದಬೈಲು, ಕಾಯಿನ್‌ರಸ್ತೆ, ಕೊಪ್ಪಿಕರ್ ರಸ್ತೆ ಮುಖಾಂತರ ಮೆರವಣಿಗೆಯಲ್ಲಿ ಬಂದು ಮಿನಿ ವಿಧಾನಸೌಧದಲ್ಲಿನ ಚುನಾವಣಾ ಕಚೇರಿಯಲ್ಲಿ ಮಧ್ಯಾಹ್ನ 12.30ಕ್ಕೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಆದರೆ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎ.ಎಂ.ಹಿಂಡಸಗೇರಿ ಸೇರಿದಂತೆ ಕಾಂಗ್ರೆಸ್ ಮುಖಂಡರ‌್ಯಾರೂ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಹಾಜರಿರಲಿಲ್ಲ.  ರಾಜಶೇಖರ ಮೆಣಸಿನಕಾಯಿ, ಮೋಹನ್ ಹಿರೇಮನಿ, ಬಾಬಾಜಾನ್ ಮುದೋಳ, ಸುಧಾ ಮಣಿಕುಂಟ್ಲಾ ಮತ್ತಿತರರು ಮಾತ್ರ ಈ ಸಂದರ್ಭದಲ್ಲಿ ಹಾಜರಿದ್ದರು.

ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ಬಯ್ಯ, `ಜನರು ಬದಲಾವಣೆ ಬಯಸಿದ್ದಾರೆ. ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ. ಜಿಲ್ಲೆಯಲ್ಲಿ ಕೂಡ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಚುನಾವಣಾ ಪ್ರಚಾರಕ್ಕೆ ತೆರಳಿದಾಗ ಹಿರಿಯರು, ಮಹಿಳೆಯರು, ಯುವಜನರು ತೋರಿಸುತ್ತಿರುವ ಅಭಿಮಾನವನ್ನು ಕಂಡಾಗ ಹಾಗೂ ಇಂದಿನ ಈ ಪ್ರಚಾರವನ್ನು ನೋಡಿದಾಗ ಗೆಲುವು ನಿಶ್ಚಿತ ಎಂದು ಅನ್ನಿಸುತ್ತಿದೆ' ಎಂದು ಹೇಳಿದರು.

ನಾಮಪತ್ರ ಸಲ್ಲಿಸಿದ ಪಕ್ಷೇತರರು  
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ನಾರಾಯಣ ಎಂ. ಬೆಂಗೇರಿ, ಸಯ್ಯದ್ ಮೆಹಬೂಬ್‌ಸಾಬ್ ತೋರಣಗಲ್,ಶ್ರೀಕಾಂತ ಕಬಡ್ಡಿ ಹಾಗೂ ವಿನೋದ ಯಲ್ಲಪ್ಪ ಪವಾರ್ ನಾಮಪತ್ರ ಸಲ್ಲಿಸಿದರು.

`ಈಗಿನ ರಾಜಕಾರಣದಲ್ಲಿ ತತ್ವಸಿದ್ಧಾಂತಗಳಿಲ್ಲ'
ಈಗಿನ ರಾಜಕಾರಣದಲ್ಲಿ ಪಕ್ಷಗಳಲ್ಲಿ ತತ್ವಸಿದ್ಧಾಂತಗಳಿಲ್ಲ ಗೆಲ್ಲುವುದಷ್ಟೇ ಮುಖ್ಯ, ಅದಕ್ಕೆ ನಮ್ಮ ಪಕ್ಷವೂ ಹೊರತಲ್ಲ' ಎಂದು ಜೆಡಿಎಸ್ ಸಂಸದೀಯ ಮಂಡಳಿ ಅಧ್ಯಕ್ಷ ಬಸವರಾಜ ಹೊರಟ್ಟಿ ಹೇಳಿದರು.

ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ತಬ್ರೇಜ್ ಸಂಶಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಕಳೆದ 30 ವರ್ಷದಿಂದ ರಾಜಕಾರಣದಲ್ಲಿದ್ದೇನೆ. ಆದರೆ ಇಂತಹ ರಾಜಕಾರಣ, ಗೊಂದಲ, ಭ್ರಷ್ಟಾಚಾರ ಇರಲಿಲ್ಲ' ಎಂದು ಹೇಳಿದ ಅವರು, ` ಇತರೆ ಪಕ್ಷಗಳಿಗೆ ಹೋಲಿಸಿದರೆ ನಮ್ಮ ಪಕ್ಷದಲ್ಲಿ ಅಂತಹ ಗೊಂದಲವೇನೂ ಇಲ್ಲ, ನಾವು ಉತ್ತಮ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದ್ದೇವೆ' ಎಂದರು.

ಈಗಾಗಲೇ ನಾವು ಉತ್ತಮ ರೀತಿಯಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದೇವೆ.19 ವಾರ್ಡ್‌ಗಳಲ್ಲಿಯೂ ಬೂತ್ ಮಟ್ಟದಲ್ಲಿ ಬೆಳಿಗ್ಗೆ 6ರಿಮದ 10ರವರೆಗೆ ಹಾಗೂ ಸಂಜೆ 4ರಿಂದ 9 ಗಂಟೆಯವರೆಗೆ ಮನೆ ಮನೆಯ ಪ್ರಚಾರ ಕಾರ್ಯ ಆರಂಭಿಸಿದ್ದೇವೆ' ಎಂದರು. 

ಸೋಮವಾರ ನಾಮಪತ್ರ ಸಲ್ಲಿಸಿದ್ದ ಪೂರ್ವ ಕ್ಷೇತ್ರದ ಅಭ್ಯರ್ಥಿ ಆಲ್ಕೋಡು ಹನುಮಂತಪ್ಪ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ಮಖಂಡರ‌್ಯಾರೂ ಹಾಜರಿರದೇ ಇರುವುದನ್ನು ಸಮರ್ಥಿಸಿಕೊಂಡ ಹೊರಟ್ಟಿ, ತಾವು ಬೆಂಗಳೂರಿನಲ್ಲಿದ್ದ ಕಾರಣ ಬಂದಿಲ್ಲ, ಅಷ್ಟಕ್ಕೂ ಆಲ್ಕೋಡು ಹಳೆ ಅಭ್ಯರ್ಥಿ, ಹೀಗಾಗಿ ಅವರಿಗಿಂತ ಹೊಸ ಅಭ್ಯರ್ಥಿಯಾಗಿರುವ ಸಂಶಿ ಅವರತ್ತ ಹೆಚ್ಚು ಗಮನ ಹರಿಸಿದ್ದೇವೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT