ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳು, ತೆಲುಗು ಮಕ್ಕಳ ಮಾದರಿ ಕನ್ನಡ ಶಾಲೆ

Last Updated 4 ಸೆಪ್ಟೆಂಬರ್ 2011, 11:35 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಶ್ರೀರಾಂಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಮಿಳು, ತೆಲುಗು ಮಾತೃ ಭಾಷೆಯ ಮಕ್ಕಳು ಮಾತ್ರ ಇದ್ದು ಕನ್ನಡ ಭಾಷಿಕ ಮಕ್ಕಳಿಗಿಂತ ಉತ್ತಮ ಸಾಧನೆ ತೋರುತ್ತಿದ್ದಾರೆ.

26 ಮಕ್ಕಳ ಪೈಕಿ 15 ತಮಿಳು ಹಾಗೂ 10 ತೆಲುಗು ಭಾಷಿಕ ವಿದ್ಯಾರ್ಥಿಗಳಿದ್ದು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಲಾಗುತ್ತಿದೆ.  ಏಕೈಕ ಕನ್ನಡ ಭಾಷಿಕ ವಿದ್ಯಾರ್ಥಿ ಇದ್ದಾನೆ. 25 ಮನೆಗಳಿರುವ ಈ ಗ್ರಾಮದಲ್ಲಿ ತಮಿಳು ಮಾತನಾಡುವ ಕಲ್ಲು ಕುಟಿಕ ಜನರು (ಬೋವಿ ಜನಾಂಗ) ಕಳೆದ 30 ವರ್ಷಗಳಿಂದ ವಾಸಿಸುತ್ತಿದ್ದಾರೆ.

ಈ ಊರಿನ 16 ಮಕ್ಕಳು ಶಾಲೆಗೆ ದಾಖಲಾಗಿದ್ದಾರೆ. ಎರಡು ವರ್ಷಗಳ ಹಿಂದೆ ಜಲ್ಲಿ ಕ್ರಷರ್‌ನಲ್ಲಿ ಕೆಲಸಕ್ಕೆಂದು ಆಂಧ್ರಪ್ರದೇಶದಿಂದ ಬಂದ ತೆಲುಗು ಭಾಷಿಕರು ಸಮೀಪದಲ್ಲಿ ಬೀಡು ಬಿಟ್ಟಿದ್ದು, ಅಲ್ಲಿನ ಗುಡಿಸಲುಗಳಿಂದ 10 ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಈ ಎಲ್ಲ ಮಕ್ಕಳು ಅಸ್ಖಲಿತವಾಗಿ ಕನ್ನಡ ಮಾತನಾಡುತ್ತಾರೆ.

ತಮಿಳು, ತೆಲುಗು ಮಕ್ಕಳು ಸುಲಲಿತವಾಗಿ ಕನ್ನಡ ಕಲಿಯುತ್ತಿರುವುದು ಒಂದು ವಿಶೇಷವಾದರೆ, ಭೌತಿಕ ಪರಿಸರವೂ ಆಕರ್ಷಕವಾಗಿದೆ. ಹಣ್ಣು, ತರಕಾರಿ, ಸೊಪ್ಪಿನ ಮಡಿಗಳು ಶಾಲೆ ಕೈತೋಟದಲ್ಲಿವೆ.

ಟೊಮೆಟೊ, ಈರುಳ್ಳಿ, ಬದನೆಕಾಯಿ, ಹೀರೆಕಾಯಿ, ಕುಂಬಳ, ಮೆಣಸಿನ ಕಾಯಿ ಗಿಡಗಳು ಫಲ ತುಂಬಿವೆ. ಕೀರೆ, ಸಬ್ಬಸಿಗೆ, ಕೊತ್ತಂಬರಿ ಸೊಪ್ಪು ಕೂಡ ಈ ಶಾಲೆಯ ತೋಟದಲ್ಲಿವೆ.  ಮಧ್ಯಾಹ್ನದ ಬಿಸಿಯೂಟಕ್ಕೆ ಬೇಕಾಗುವ ಎಲ್ಲ ತರಕಾರಿಗಳನ್ನು ಶಾಲೆಯ ಆವರಣದಲ್ಲೇ ಬೆಳೆಯಲಾಗುತ್ತಿದೆ.

 2000ನೇ ಇಸವಿಯಲ್ಲಿ ಆರಂಭವಾದ ಶಾಲೆಗೆ 2004ರಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಗೋಡೆಗಳ ಮೇಲಿನ ರಾಷ್ಟ್ರ ನಾಯಕರು, ವಿಜ್ಞಾನಿಗಳ ಚಿತ್ರಗಳು ಗಮನ ಸೆಳೆಯುತ್ತವೆ. ಕಮೋಡ್ ಶೌಚಾಲಯ, ಕುಡಿಯುವ ನೀರು, ನಳನಳಿಸುವ ಹೂದೋಟ ಈ ಶಾಲೆಯ ಆಕರ್ಷಣೆ. ಕೊಠಡಿಯ ಒಳಗೆ `ಆಡಿ ಕಲಿ- ನೋಡಿ ಕಲಿ~ ಕಲ್ಪನೆಗೆ ಪೂರಕ ಸನ್ನಿವೇಶ ಸೃಷ್ಟಿಸಲಾಗಿದೆ. ಶಾಲೆಯ ಇಬ್ಬರು ಶಿಕ್ಷಕರ ಪೈಕಿ ಸಿ.ಎನ್.ಶ್ರೀನಿವಾಸ್ ಜಿಲ್ಲಾ ಪ್ರಶಸ್ತಿ ಪಡೆದಿದ್ದರೆ, ನಟರಾಜ್ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

`ತಮಿಳು, ತೆಲುಗು ಮಾತೃಭಾಷೆ ಮಕ್ಕಳು ಕನ್ನಡ ಮಾಧ್ಯಮದಲ್ಲಿ ನಿರೀಕ್ಷೆ ಮೀರಿ ಕಲಿಯುತ್ತಿದ್ದಾರೆ. ಈ ಮಕ್ಕಳಿಗೆ ಕಲಿಸಲು ನಮಗೂ ಖುಷಿಯಾಗುತ್ತದೆ~ ಎಂದು ಶಿಕ್ಷಕ ಶ್ರೀನಿವಾಸ್ ಹೇಳುತ್ತಾರೆ. `ಶೈಕ್ಷಣಿಕ ಪ್ರಗತಿ ಹಾಗೂ ಶಾಲಾ ಪರಿಸರ ನಿರ್ವಹಣೆಯಲ್ಲಿ ಇದು ಅತ್ಯುತ್ತಮ ಶಾಲೆ~ ಎಂದು ಸಿಆರ್‌ಪಿ ಲಿಂಗರಾಜಪ್ಪ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT