ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಕೂಡದು

Last Updated 9 ಅಕ್ಟೋಬರ್ 2012, 7:00 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: `ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನೀರು ಪ್ರಾಧಿಕಾರ ಆದೇಶಗಳನ್ನು ಹೊರಡಿಸುವ ಮೂಲಕ ಎಷ್ಟೇ ಒತ್ತಡ ಹೇರಿದರೂ ರಾಜ್ಯ ಸರ್ಕಾರ ಮಣಿಯಬಾರದು. ತಮಿಳುನಾಡಿಗೆ ಕಾವೇರಿ ನದಿಯ ಒಂದು ಹನಿ ನೀರನ್ನು ಬಿಡದಂತೆ ತಡೆಗಟ್ಟಬೇಕು~ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಯು ನಗರದಲ್ಲಿ ಸೋಮವಾರ ಆಯೋಜಿಸಿದ್ದ ಪ್ರತಿಭಟನಾ ರ‌್ಯಾಲಿ ಮತ್ತು ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾವೇರಿ ನೀರು ಪೂರೈಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದರು.

ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳು ಬರಗಾಲದಿಂದ ತತ್ತರಿಸುತ್ತಿವೆ. ಕೆಲ ಕಡೆ ಮಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಕೃಷಿ ಚಟುವಟಿಕೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕಕ್ಕೆ ಹೆಚ್ಚು ನೀರಿನ ಅಗತ್ಯವಿದೆ.

ಈ ಸಂಗತಿಯನ್ನು ಮುಖ್ಯಮಂತ್ರಿ ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನೀರು ಪ್ರಾಧಿಕಾರಕ್ಕೆ ಮನಗಾಣಿಸಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು. 

ರಾಜ್ಯದಲ್ಲಿ ಈಗಾಗಲೇ ಮುಂಗಾರು ಕೈಕೊಟ್ಟಿದೆ. ತಮಿಳುನಾಡಿಗೆ ಹಿಂಗಾರು ಮಳೆಯಾದರೆ, ಅಲ್ಲಿನ ನದಿ ಮತ್ತು ಆಣೆಕಟ್ಟುಗಳು ಭರ್ತಿಯಾಗುತ್ತವೆ. ತಮಿಳುನಾಡಿನಲ್ಲಿ ನಿರಾತಂಕವಾಗಿ ಕೃಷಿ ಚಟುವಟಿಕೆ ನಡೆಸಿದರೆ, ನಾವು ಎಲ್ಲವನ್ನೂ ಕಳೆದುಕೊಂಡು ಕೈಕಟ್ಟಿ ಕೂತಿರುತ್ತೇವೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾವೇರಿ ತುಂಬಿದಾಗಲೆಲ್ಲ, ತಮಿಳುನಾಡು ಸರ್ಕಾರ ಒಂದಿಲ್ಲೊಂದು ನೆಪ ಮಾಡಿಕೊಂಡು ನೀರನ್ನು ಬಿಡುವಂತೆ ಒತ್ತಾಯಿಸುತ್ತದೆ. ಬಗೆ ಬಗೆಯ ತಂತ್ರಗಳನ್ನು ಅನುಸರಿಸಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ದಿಟ್ಟ ನಿರ್ಣಯ ಕೈಗೊಳ್ಳಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಚ್.ನರಸಿಂಹಪ್ಪ, ತಮಿಳುನಾಡಿಗೆ ಕಾವೇರಿ ನದಿ ನೀರು ಬಿಟ್ಟರೆ ನಮ್ಮ ರಾಜ್ಯದ ಜಿಲ್ಲೆಗಳಲ್ಲಿ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ನೀರಿನ ತೀವ್ರ ಅಭಾವ ತಲೆದೋರಲಿದೆ. ಜನರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಕೂಡಲೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ಮಂಚೇನಹಳ್ಳಿ ವೆಂಕಟಪ್ಪ, ಟಿ.ರಾಮಕೃಷ್ಣಪ್ಪ, ಎಸ್.ರಾಜಪ್ಪ, ರಾಮಚಂದ್ರಪ್ಪ, ಜಿ.ಎಂ.ವೆಂಕಟೇಶ್, ಎಸ್.ಈಶ್ವರಾಚಾರಿ, ಬಿ.ನಾರಾಯಣಸ್ವಾಮಿ, ರಾಮರತ್ನಮ್ಮ, ವಿಮಲಮ್ಮ ಮತ್ತಿತರರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT