ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿಗೆ ನೀರು: ಮುಂದುವರಿದ ಪ್ರತಿಭಟನೆ

Last Updated 8 ಅಕ್ಟೋಬರ್ 2012, 7:55 IST
ಅಕ್ಷರ ಗಾತ್ರ

ಹಾಸನ: ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ನಗರದಲ್ಲಿ ನಡೆಯುತ್ತಿರುವ ಪ್ರತಿಭಟನೆ- ಹೋರಾಟ ಭಾನುವಾರವೂ ಮುಂದುವರಿದಿದೆ.

ನಗರದಲ್ಲಿ ಶಾಸಕ ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ, ಗೊರೂರು ಹೇಮಾವತಿ ಅಣೆಕಟ್ಟೆಯ ಸಮೀಪ ಕರ್ನಾಟಕ ರಕ್ಷಣಾ ವೇದಿಕೆಯವರು ಪ್ರತಿಭಟನೆ ನಡೆಸಿದ್ದಾರೆ.

ಭಾನುವಾರ ಬೆಳಿಗ್ಗೆ ಜೆಡಿಎಸ್ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಕಳೆದ ನಾಲ್ಕು ವರ್ಷದಿಂದ ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗದೆ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವರ್ಷ ಹೇಮಾವತಿ ಜಲಾಶಯವೇ ತುಂಬಿಲ್ಲ. ನಮ್ಮ ಜಿಲ್ಲೆಯಲ್ಲೇ ಬೆಳೆಗಳು ಒಣಗುತ್ತಿದ್ದರೆ ಹೇಮಾವತಿ ಜಲಾಶಯದಿಂದ ಪ್ರತಿನಿತ್ಯ ತಮಿಳುನಾಡಿಗೆ ಆರು ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿಸಲಾಗುತ್ತಿದೆ.
ಇಲ್ಲಿಂದ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಕಾರ್ಯಕರ್ತರು ಮೆರವಣಿಗೆ ಜತೆಯಲ್ಲೇ ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಅವರ ಅಣುಕು ಶವಯಾತ್ರೆಯನ್ನೂ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಮಧ್ಯಾಹ್ನದವರೆಗೂ ಪ್ರತಿಭಟನೆ ನಡೆಸಿದರು. ಮಧ್ಯಾಹ್ನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

`ಹೇಮಾವತಿ ಜಲಾಶಯದಿಂದ ನೀರು ಹರಿಸುವುದನ್ನು ನಿಲ್ಲಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಗೊರೂರಿನಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಜಾಗರಣೆ ಕಾರ್ಯಕ್ರಮವನ್ನು ರದ್ದುಮಾಡಿದ್ದೇವೆ~ ಎಂದು ಶಾಸಕ ರೇವಣ್ಣ ತಿಳಿಸಿದರು.

ಶಾಸಕ ಎಚ್.ಎಸ್.ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಜೆ.ಡಿ.ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ಜವರೇಗೌಡ, ಜಿಲ್ಲಾ ಪಂಚಾಯತಿ ಅಧ್ಯಕ್ಷ ಬಿ.ಆರ್.ಸತ್ಯನಾರಾಯಣ, ನಗರಸಭೆ ಅಧ್ಯಕ್ಷ ಸಿ.ಆರ್.ಶಂಕರ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ಜಲಾಶಯಕ್ಕೆ ಮುತ್ತಿಗೆ: ಗೊರೂರಿನ ಹೇಮಾವತಿ ಜಲಾಶಯದಿಂದ ನೀರು ಬಿಡುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಭಾನುವಾರ ಜಲಾಶಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.

ಬೆಳಿಗ್ಗೆ ಗೊರೂರಿನಲ್ಲಿ ಸೇರಿದ ನೂರಕ್ಕೂ ಹೆಚ್ಚು ಪ್ರತಿಭಟನಾಕಾರರು ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ಹೇಮಾವತಿ ಜಲಾಶಯದ ಗೇಟ್ ಬಳಿಗೆ ಬಂದರು. ಅಲ್ಲಿ ಪೊಲೀಸರು ಬಿಗಿ ಭದ್ರತಾ ವ್ಯವಸ್ಥೆ ಮಾಡಿದ್ದರಿಂದ ಸ್ವಲ್ಪ ಹೊತ್ತು ಗೇಟ್ ಮುಂದೆಯೇ ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

`ಹೇಮಾವತಿಯಿಂದ ಇನ್ನಷ್ಟು ನೀರನ್ನು ಬಿಟ್ಟರೆ ಹೋರಾಟವನ್ನು ತೀವ್ರಗೊಳಿಸುವುದು ಅನಿವಾರ್ಯವಾಗುತ್ತದೆ~ ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ರವೀಂದ್ರ ಕುಮಾರ್ ಎಚ್ಚರಿಕೆ ನೀಡಿದರು.

ಕಾರ್ಯಕರ್ತರು ಗೇಟನ್ನು ತಳ್ಳಿ ಒಳಗೆ ಪ್ರವೇಶಿಸಲು ಮುಂದಾದಾಗ ಪೊಲೀಸರು ಅವರನ್ನು ತಡೆದು ಬಂಧಿಸಿ ವಾಹನದಲ್ಲಿ ಕರೆದೊಯ್ದರು.

ತಾಝೀಮ್ ಪಾಷಾ, ಶಿವು, ಜಗನ್ನಾಥ್, ಮಹೇಶ್, ಮಧು, ಭಾರತಿ ಗೌಡ, ಪುನೀತ್ ಗೌಡ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಜೆಡಿಎಸ್ ಜಾಥಾ
ಅರಸೀಕೆರೆ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಜೆಡಿಎಸ್ ಪಕ್ಷದ ವತಿಯಿಂದ ನೂರಾರು ಕಾರ್ಯಕರ್ತರು ಪಟ್ಟಣದಲ್ಲಿ ಭಾನುವಾರ ಬೃಹತ್ ಪ್ರತಿಭಟನೆ ನಡೆಸಿದರು.

ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ನೇತೃತ್ವದಲ್ಲಿ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಬಿ.ಎಚ್.ರಸ್ತೆಯ ಮೂಲಕ ಸಾಗಿ ಪಿಪಿ ವೃತ್ತದಲ್ಲಿ ಸೇರಿ ಕೆಲ ಕಾಲ ರಸ್ತೆ ತಡೆ ನಡೆಸಿದರು.
ಪ್ರತಿಭಟನೆ ಸಮಯದಲ್ಲಿ ಪೊಲೀಸರು ಶಾಸಕ ಶಿವಲಿಂಗೇಗೌಡ ಸೇರಿದಂತೆ ಪುರಸಭಾ ಅಧ್ಯಕ್ಷ ಜಿ.ಟಿ. ಗಣೇಶ್, ಮಾಜಿ ಅಧ್ಯಕ್ಷರಾದ ಎಂ.ಸಮೀವುಲ್ಲಾ, ಎನ್.ಎಸ್ ಸಿದ್ದರಾಮಶೆಟ್ಟಿ, ಜೆಡಿ ಎಸ್ ಮುಖಂಡರು ಹಾಗೂ ನೂರಾರು ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದರು. 

ಧರಣಿ, ರಸ್ತೆ ತಡೆ
ಬೇಲೂರು: ಯಗಚಿ, ಹೇಮಾವತಿ ಜಲಾಶಯ ಗಳಿಂದ ತಮಿಳುನಾಡಿಗೆ ಕಾವೇರಿ ನದಿಯಿಂದ ನೀರು ಹರಿಸುತ್ತಿರುವುದನ್ನು ಖಂಡಿಸಿ ಜೆಡಿಎಸ್ ವತಿಯಿಂದ ಭಾನುವಾರ ಇಲ್ಲಿನ ತಾಲ್ಲೂಕು ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಯಿತಲ್ಲದೆ, ನೆಹರು ನಗರದಲ್ಲಿ ರಸ್ತೆ ತಡೆ ನಡೆಸಲಾಯಿತು.

ನೆಹರು ನಗರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಲು ಮೂಲಕ ರಸ್ತೆ ತಡೆ ನಡೆಸಿ ಕೇಂದ್ರ ರಾಜ್ಯ ಸರ್ಕಾರಗಳ ವರ್ತನೆಯನ್ನು ಖಂಡಿಸಿದರು. ರಸ್ತೆ ತಡೆ ನಡೆಸಿದ್ದರಿಂದ ಅರ್ಧಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತ ಸುಬ್ಬರಾಯ, ತಾಲ್ಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಬಿ.ಸಿ.ಮಂಜುನಾಥ್, ಜಿಲ್ಲಾ ಪಂಚಾಯಿತಿ ಸದಸ್ಯ ರಾದ ಬಿ.ಡಿ.ಚಂದ್ರೇಗೌಡ, ಎಂ.ವಿ.ಹೇಮಾವತಿ, ಪುರಸಭೆ ಮಾಜಿ ಅಧ್ಯಕ್ಷ ಎಚ್.ಎಂ.ದಯಾನಂದ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕಮಲಾ ಚನ್ನಪ್ಪ, ಸದಸ್ಯ ಸುಭಾನ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎ.ನಾಗರಾಜ್, ಜೆಡಿಎಸ್ ಮುಖಂಡ ರಾದ ಕೆ.ಸುದರ್ಶನ್, ಗಣೇಶ್, ಪಿ.ಎಂ.ದೇವರಾಜ್, ಕೆ.ಎಸ್.ಶಿವಪ್ಪಶೆಟ್ಟಿ ಇದ್ದರು.

ನೀರು ಸ್ಥಗಿತಗೊಳಿಸಲು ಆಗ್ರಹ
ಚನ್ನರಾಯಪಟ್ಟಣ: ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಪಟ್ಟಣದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ಪಕ್ಷದ ಮುಖಂಡರಾದ ಸಿ.ಎನ್. ಬಾಲಕೃಷ್ಣ, ಕೆ.ಎಲ್. ಶ್ರೀಧರ್, ಜಗದೀಶ್, ವಿ.ಎನ್. ರಾಜಣ್ಣ, ರವೀಶ್, ಕುಸುಮ ಬಾಲಕೃಷ್ಣ, ವಿಜಯ ಶಿವಲಿಂಗಪ್ಪ ಎನ್. ಬಸವರಾಜು, ಎಂ.ಬಿ. ತಿಮ್ಮೇಗೌಡ, ಬಿ.ಎಚ್. ಶಿವಣ್ಣ, ಪುಟ್ಟಸ್ವಾಮಿ ಮಾತನಾಡಿದರು.

ಪುರಸಭೆಯ ಅಧ್ಯಕ್ಷೆ ಭಾಗ್ಯ ಉಮೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರಂಗಮ್ಮ ರಾಮಕೃಷ್ಣೇಗೌಡ, ಮುಖಂಡರಾದ ಶಿವಶಂಕರ್ ಕುಂಟೆ, ಅಂಬಿಕ, ದೇವಿಕ, ಭಾಗ್ಯ ಉಮೇಶ್, ಕೆ.ಜೆ. ಸುರೇಶ್, ಸಿ.ವೈ ಸತ್ಯನಾರಾಯಣ್, ಸಿ.ಕೆ. ಗೋಪಾಲಕೃಷ್ಣ, ನಾಗರಾಜು, ರಘು, ಕಲ್ಪನ, ಬಿ.ಆರ್. ದೊರೆಸ್ವಾಮಿ, ಕೆ.ಎನ್. ಗಂಗಾಧರ್ ನೇತೃತ್ವ ವಹಿಸಿದ್ದರು.

`ಅಧಿಕಾರ ಬಿಡಲು ಸಿದ್ಧ~
ಆಲೂರು
: ಜನರಿಗಿಂತ ಅಧಿಕಾರ ಮುಖ್ಯವಲ್ಲ. ಕಾವೇರಿ ಭಾಗದ ರೈತರಿಗೆ ಅನ್ಯಾಯವಾಗಿ ನಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವ ಪರಿಸ್ಥಿತಿ ಬಂದರೆ ತಾವು ಸಿದ್ದರಿರುವುದಾಗಿ ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದ್ದಾರೆ.

ಮಿನಿವಿಧಾನಸೌಧದ ಮುಂಭಾಗದ ರಸ್ತೆ ಬದಿಯಲ್ಲಿ ಭಾನುವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತೆಗೆದು ಕೊಳ್ಳುವ ನಿಲುವಿಗೆ ಬದ್ಧವಿರುವುದಾಗಿ ಸ್ಪಷ್ಟಪಡಿಸಿದ ಅವರು, ರಾಜ್ಯವನ್ನು ಪ್ರತಿನಿಧಿಸುತ್ತಿರುವ ನಾಲ್ವರು ಕೇಂದ್ರ ಸಚಿವರ ವಿರುದ್ದ ಕಿಡಿಕಾರಿದರು.

ತಾಲ್ಲೂಕು ಜೆ.ಡಿ.ಎಸ್.ಅಧ್ಯಕ್ಷ ಕೆ.ಎಸ್.ಮಂಜೇಗೌಡ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಪುರುಷೋತ್ತಮ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರಾಧ, ಮಾಜಿ ಅಧ್ಯಕ್ಷೆ ಸುಜಾತಕುಮಾರ್, ಉಪಾಧ್ಯಕ್ಷ ಎಚ್.ಜೆ.ಜೀವನ್, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಎಚ್.ಬಿ.ಧರ್ಮರಾಜ್, ಮುಖಂಡ ವಿರುಪಾಕ್ಷಪ್ಪ, ರುದ್ರೇಗೌಡ, ಕದಾಳು ರಾಜಪ್ಪಗೌಡ, ಬಿ.ಸಿ.ಶಂಕರಾಚಾರ್, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಸುಬ್ಬಶೆಟ್ಟಿ, ಚುನಾಯಿತ ಜೆ.ಡಿ.ಎಸ್. ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT