ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿಗೆ ಹಿನ್ನಡೆ

`ನೀರು ನಿರ್ವಹಣಾ ಮಂಡಳಿ' ರಚನೆ ಕೇಂದ್ರದ ವಿವೇಚನೆಗೆ
Last Updated 25 ಫೆಬ್ರುವರಿ 2013, 20:10 IST
ಅಕ್ಷರ ಗಾತ್ರ

ನವದೆಹಲಿ: ಕಾವೇರಿ ನ್ಯಾಯಮಂಡಳಿ `ಐತೀರ್ಪು' ಅನುಷ್ಠಾನಕ್ಕೆ `ನೀರು ನಿರ್ವಹಣಾ ಮಂಡಳಿ' ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂಬ ತಮಿಳುನಾಡು ಮನವಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸೋಮವಾರ ಯಾವುದೇ ಆದೇಶ ನೀಡಲು ನಿರಾಕರಿಸಿತು. ಇದರಿಂದಾಗಿ ನೆರೆಯ ರಾಜ್ಯಕ್ಕೆ ಪುನಃ ಹಿನ್ನಡೆಯಾದಂತಾಗಿದೆ.

ಕಾವೇರಿ ನೀರಿನ ವಿವಾದ ಕುರಿತು ವಿಚಾರಣೆ ನಡೆಸಿದ ನ್ಯಾ. ಆರ್.ಎಂ. ಲೋಧ ನೇತೃತ್ವದ ದ್ವಿಸದಸ್ಯ ನ್ಯಾಯಪೀಠವು, ಕಾವೇರಿ ನದಿ ನೀರು ಹಂಚಿಕೆಗೆ `ನಿರ್ವಹಣಾ ಮಂಡಳಿ' ರಚಿಸಬೇಕೆಂಬ ತಮಿಳುನಾಡು ಮನವಿ ತಳ್ಳಿಹಾಕಿತು. `ಸದ್ಯಕ್ಕಿದು ಕೇಂದ್ರ ಸರ್ಕಾರದ ವಿವೇಚನಾ ಅಧಿಕಾರಕ್ಕೆ ಸಂಬಂಧಪಟ್ಟ ವಿಷಯ' ಎಂದು ಅಭಿಪ್ರಾಯಪಟ್ಟಿತು.

ಕಾವೇರಿ ನ್ಯಾಯಮಂಡಳಿ ಐತೀರ್ಪು ಈಗಾಗಲೇ ಪ್ರಕಟವಾಗಿರುವುದರಿಂದ ನೀರು ಹಂಚಿಕೆಗೆ ತಕ್ಷಣ ನಿರ್ವಹಣಾ ಮಂಡಳಿ ರಚಿಸುವಂತೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಪರ ಹಿರಿಯ ವಕೀಲ ಸಿ.ಎಸ್.ವೈದ್ಯನಾಥನ್ ಮನವಿ ಮಾಡಿದರು.  ನ್ಯಾ. ಚಲಮೇಶ್ವರ್ ಅವರನ್ನೊಳಗೊಂಡ ನ್ಯಾಯಪೀಠ ಈ ವಕೀಲರ ಮನವಿ ಪುರಸ್ಕರಿಸಲಿಲ್ಲ.

`ತಮಿಳುನಾಡಿಗೆ 2.44ಟಿಎಂಸಿ ಅಡಿ ನೀರು ಬಿಡುಗಡೆ ಮಾಡಿಲ್ಲ' ಎಂದು ಆರೋಪಿಸಿ ಕರ್ನಾಟಕದ ವಿರುದ್ಧ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಆರೋಪದ ಅರ್ಜಿ ಸಂಬಂಧವೂ ನ್ಯಾಯಪೀಠ ಯಾವುದೇ ಆದೇಶ ಹೊರಡಿಸಲಿಲ್ಲ. ತನ್ನ ಆದೇಶದಂತೆ ಕರ್ನಾಟಕ ಈಗಾಗಲೇ 2.44ಟಿಎಂಸಿ ಅಡಿ ನೀರನ್ನು ನದಿ ಕೆಳಗಿನ ರಾಜ್ಯಕ್ಕೆ ಬಿಡುಗಡೆ ಮಾಡಿರುವುದರಿಂದ ಈ ಅರ್ಜಿ ಊರ್ಜಿತ ಆಗುವುದಿಲ್ಲ ಎಂದು ನ್ಯಾಯಪೀಠ ಹೇಳಿತು.

`ತಮಿಳುನಾಡಿಗೆ ಭೇಟಿ ನೀಡಿದ್ದ ಕೇಂದ್ರ ಜಲ ಆಯೋಗದ ತಜ್ಞರ ತಂಡದ ವರದಿ ಆಧರಿಸಿ ಫೆ. 7ರಂದು 2.44ಟಿಎಂಸಿ ನೀರು ಬಿಡುಗಡೆ ಮಾಡುವಂತೆ ನೀಡಿದ್ದ ಆದೇಶವನ್ನು ಕರ್ನಾಟಕ ಪಾಲಿಸಿದೆ' ಎಂಬ ಅಂಶವನ್ನು ನ್ಯಾಯಪೀಠ ಪರಿಗಣನೆಗೆ ತೆಗೆದುಕೊಂಡಿತು. ಇದೇ ಸಂದರ್ಭದಲ್ಲಿ ನ್ಯಾಯಪೀಠ 2.44 ಟಿಎಂಸಿ ಅಡಿ ನೀರು ಬಿಡುಗಡೆ ಕುರಿತು ನೀಡಿದ್ದ ಆದೇಶವನ್ನು ಪುನರ್ ಪರಿಶೀಲಿಸುವಂತೆ ಕೋರಿ ಕರ್ನಾಟಕ ಸಲ್ಲಿಸಿದ್ದ ಮತ್ತೊಂದು ಮಧ್ಯಂತರ ಅರ್ಜಿಯನ್ನು ವಿಲೇವಾರಿ ಮಾಡಿತು.

2007ರ ಫೆಬ್ರುವರಿ 5ರಂದು ಎನ್.ಪಿ.ಸಿಂಗ್ ನೇತೃತ್ವದ ಕಾವೇರಿ ನ್ಯಾಯಮಂಡಳಿ ನೀಡಿರುವ ಐತೀರ್ಪು ಪ್ರಶ್ನಿಸಿ ಕರ್ನಾಟಕ ಹಾಗೂ ತಮಿಳುನಾಡು ಸಲ್ಲಿಸಿರುವ ಸಿವಿಲ್ ಮೇಲ್ಮನವಿಗಳ ವಿಚಾರಣೆ ನಡೆಸಲು ನ್ಯಾಯಪೀಠ ತೀರ್ಮಾನಿಸಿತು. ಕರ್ನಾಟಕದ ಪರ ಹಿರಿಯ ವಕೀಲರ ಫಾಲಿ ಎಸ್. ನಾರಿಮನ್ ಮಾಡಿದ ಮನವಿ ಹಿನ್ನೆಲೆಯಲ್ಲಿ ಸಿವಿಲ್ ಅರ್ಜಿಗಳ ವಿಚಾರಣೆಗೆ ಆಗಸ್ಟ್ ಆರನೇ ತಾರೀಕನ್ನು ನಿಗದಿಪಡಿಸಿತು.

ಕೇಂದ್ರ ಸರ್ಕಾರದ ಪರ ವಕೀಲ ವಾಸಿಂ ಎ.ಖಾದ್ರಿ, ಕಾವೇರಿ ನ್ಯಾಯಮಂಡಳಿ ಐತೀರ್ಪು ಅಧಿಸೂಚನೆಯನ್ನು ಫೆ.19ರಂದು ಹೊರಡಿಸಲಾಗಿದೆ ಎನ್ನುವ ಸಂಗತಿಯನ್ನು ಕೋರ್ಟ್ ಗಮನಕ್ಕೆ ತಂದರು.

1990ರ ಜೂನ್ ಎರಡರಂದು ಕಾವೇರಿ ನೀರು ಹಂಚಿಕೆಗೆ ರಚಿಸಲಾದ ನ್ಯಾಯಮಂಡಳಿಯು ಕಾವೇರಿ ಜಲಾಶಯಗಳ ಸಂಗ್ರಹವನ್ನು 740 ಟಿಎಂಸಿ ಅಡಿ ಎಂದು ಅಂದಾಜು ಮಾಡಿ, ಕರ್ನಾಟಕಕ್ಕೆ 270, ತಮಿಳುನಾಡಿಗೆ 419, ಕೇರಳಕ್ಕೆ 30, ಪುದುಚೇರಿಗೆ 7 ಹಾಗೂ ಪರಿಸರ ಸಂರಕ್ಷಣೆಗೆ 10 ಟಿಎಂಸಿ ಅಡಿ ಎಂದು ಅಂದಾಜು ಮಾಡಿದೆ.

ಆದರೆ, ಕಾವೇರಿ ಐತೀರ್ಪಿಗೆ ಸಂಬಂಧಿಸಿದಂತೆ ಕೆಲವು ಸ್ಪಷ್ಟನೆಗಳನ್ನು ಕೇಳಿ ಸಂಬಂಧಪಟ್ಟ ರಾಜ್ಯಗಳು ನ್ಯಾಯಮಂಡಳಿ ಮುಂದೆ ಅರ್ಜಿ ಸಲ್ಲಿಸಿವೆ. ಅಲ್ಲದೆ, ಐತೀರ್ಪು ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟಿಗೂ ಸಿವಿಲ್ ಮೇಲ್ಮನವಿ ಸಲ್ಲಿಸಿವೆ.

ಕೇಂದ್ರ ಸರ್ಕಾರ ನ್ಯಾಯಮಂಡಳಿ ಐತೀರ್ಪು ಅಧಿಸೂಚನೆ ಹೊರಡಿಸದ ಹಿನ್ನೆಲೆಯಲ್ಲಿ ವರದಿ ಅನುಷ್ಠಾನ ಆಗಿರಲಿಲ್ಲ. ಆದರೆ, ಕೋರ್ಟ್ ಅಧಿಸೂಚನೆ ಹೊರಡಿಸಲು ಫೆ.20ರವರೆಗೆ ಗಡುವು ನೀಡಿತ್ತು. ಈ ಹಿನ್ನೆಲೆಯಲ್ಲಿ ಒಂದು ದಿನ ಮೊದಲೇ ಅಧಿಸೂಚನೆ ಪ್ರಕಟಿಸಲಾಯಿತು.

ಈಗ ಕಾವೇರಿ ಐತೀರ್ಪು ಅನುಷ್ಠಾನಕ್ಕೆ ಕಾವೇರಿ ನಿರ್ವಹಣಾ ಮಂಡಳಿ ರಚಿಸಬಾರದೆಂದು ಕರ್ನಾಟಕ ಆಗ್ರಹಿಸಿದೆ. ತಕ್ಷಣ ಮಂಡಳಿ ರಚಿಸಬೇಕೆಂದು ತಮಿಳುನಾಡು ಒತ್ತಾಯ ಮಾಡುತ್ತಿದೆ.

ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ಜಲ ಸಂಪನ್ಮೂಲ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಡಿ. ಸತ್ಯಮೂರ್ತಿ, ಕಾರ್ಯದರ್ಶಿ ಬಿ.ಜಿ. ಗುರುಪಾದಸ್ವಾಮಿ ಮತ್ತಿತರರ ವಿರುದ್ಧ ತಮಿಳುನಾಡು ಸರ್ಕಾರ ನ್ಯಾಯಾಲಯ ನಿಂದನೆ ಅರ್ಜಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT