ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿಗೆ ‘ಸುಪ್ರೀಂ’ ತರಾಟೆ

ಕಾವೇರಿ ನಿರ್ವಹಣಾ ಮಂಡಳಿ ರಚನೆ: ತುರ್ತು ವಿಚಾರಣೆಗೆ ನಕಾರ
Last Updated 3 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ: ಕಾವೇರಿ ನ್ಯಾಯಮಂಡಳಿ ಐತೀರ್ಪು ಅನು­ಷ್ಠಾನಕ್ಕೆ ‘ನಿರ್ವಹಣಾ ಮಂಡಳಿ’ ರಚಿಸಬೇಕೆಂಬ ತಮಿಳುನಾಡು ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾ­ಕ­ರಿಸಿತು. ಇದರಿಂದಾಗಿ ಆ ರಾಜ್ಯಕ್ಕೆ ತೀವ್ರ ಹಿನ್ನಡೆ­ಯಾಗಿದೆ.

ಸಕಾರಣವಿಲ್ಲದೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಒಂದರ ಹಿಂದೆ ಮತ್ತೊಂದರಂತೆ ಅರ್ಜಿ ಸಲ್ಲಿಸುತ್ತಿರುವುದಕ್ಕಾಗಿ ತಮಿಳುನಾಡು ಸರ್ಕಾರ­ವನ್ನು ನ್ಯಾಯಮೂರ್ತಿ ಆರ್. ಎಂ. ಲೋಧ ನೇತೃತ್ವದ ತ್ರಿಸದಸ್ಯ ಪೀಠ  ತರಾಟೆಗೆ ತೆಗೆದುಕೊಂಡಿತು.
‘ಕರ್ನಾಟಕ ಹಾಗೂ ತಮಿಳುನಾಡು ಸಾಮಾನ್ಯ ನೆರೆಹೊರೆಯವರಂತೆ ಕಚ್ಚಾಡುವುದು ಸರಿಯಲ್ಲ’ ಎಂದು ಅದು ಕಿವಿಮಾತು ಹೇಳಿತು.
‘ತಮಿಳುನಾಡು ಅರ್ಜಿಯ ತುರ್ತು ವಿಚಾರಣೆ ನಡೆ­ಸುವ ಅಗತ್ಯ ಕಾಣುವುದಿಲ್ಲ. ಕಾವೇರಿ ನ್ಯಾಯ­ಮಂಡಳಿ ಐತೀರ್ಪು ಸಂಬಂಧ ಸಲ್ಲಿಸಿರುವ ಸಿವಿಲ್‌ ಮೇಲ್ಮನವಿ ಜತೆಗೇ ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳ­ಬಹುದು ಎಂದು ನಾವು ಭಾವಿಸಿದ್ದೇವೆ’ ಎಂದು ನ್ಯಾಯಮೂರ್ತಿ ಲೋಧಾ ನಿಷ್ಠುರವಾಗಿ ಹೇಳಿದರು.

ತಕರಾರು: ತಮಿಳುನಾಡು ಪರ ಹಿರಿಯ ವಕೀಲ ಸಿ.ಎಸ್‌. ವೈದ್ಯನಾಥನ್‌ ಅವರು, ‘ಕರ್ನಾಟಕ ಮೇಕೆ­ದಾಟು ಬಳಿ ಜಲ ವಿದ್ಯುತ್‌ ಘಟಕ  ನಿರ್ಮಿಸುತ್ತಿದೆ. ಇದಕ್ಕಾಗಿ ಮೂರು ಜಲಾಶಯಗಳನ್ನು ಕಟ್ಟಲು ಉದ್ದೇಶಿ­ಸಿದೆ. ಇದು ನಮಗೆ ಹರಿದು ಬರುವ ನೀರಿನ ಮೇಲೆ ಪರಿಣಾಮ ಉಂಟುಮಾಡಲಿದೆ. ಈ ಕಾರಣಕ್ಕೆ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ತುರ್ತು ನಿರ್ದೇಶನ ನೀಡಬೇಕು’ ಎಂದು ಮನವಿ ಮಾಡಿದರು.

‘ಕೇಂದ್ರ ಸರ್ಕಾರ ಮೇ ಹಾಗೂ ನವೆಂಬರ್‌ ತಿಂಗಳಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವ ಪ್ರಸ್ತಾವ ಪರಿಶೀಲನೆಯಲ್ಲಿದೆ ಎಂದು ಹೇಳಿತ್ತು. ಆದರೆ ಈ ನಿಟ್ಟಿನಲ್ಲಿ ಏನೂ ಪ್ರಗತಿಯಾಗಿಲ್ಲ’ ಎಂದು ಆರೋಪಿಸಿದರು. ತಮಿಳುನಾಡು  ವಾದ ಪೀಠಕ್ಕೆ ಮನವರಿಕೆಯಾದಂತೆ ಕಂಡುಬರಲಿಲ್ಲ.

‘ನಿಮ್ಮ ಅರ್ಜಿಯನ್ನು ತುರ್ತು ವಿಚಾರಣೆಗೆ ಎತ್ತಿಕೊಳ್ಳುವ ಅಗತ್ಯ ಕಾಣುತ್ತಿಲ್ಲ. ಕರ್ನಾಟಕ ನಿಮ್ಮ ಪಾಲಿನ ನೀರು ಬಿಡದೆ ವಂಚಿಸಿದೆಯೇ? ಅದು ತನ್ನ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳುತ್ತಿರುವ ಯೋಜನೆಗಳು ಒಂದು ರಾತ್ರಿಯಲ್ಲಿ ಮುಗಿದುಹೋಗುವುದೇ?’ ಎಂದು ಖಾರವಾಗಿ  ಪ್ರಶ್ನಿಸಿತು,

‘ಈ ವರ್ಷ ಮುಂಗಾರು ಉತ್ತಮವಾಗಿದ್ದು, ನೀರಿನ ಕೊರತೆ ಆಗಿಲ್ಲ. ಅಕಸ್ಮಾತ್‌ ಬರಗಾಲ ಸ್ಥಿತಿ ತಲೆ­ದೋರಿದ್ದರೆ ಅರ್ಜಿಯ ತುರ್ತು ವಿಚಾರಣೆ ನಡೆಸಬಹುದಿತ್ತು. ದೇವರು ಕಣ್ಣು ಬಿಟ್ಟಿರುವುದರಿಂದ ತಮಿಳುನಾಡಿಗೆ ಸಾಕಷ್ಟು ನೀರು ಹರಿದು ಹೋಗಿದೆ’ ಎಂದು  ಅಭಿಪ್ರಾಯಪಟ್ಟಿತು.

ವಿನಾಕಾರಣ ಆತಂಕ:
‘ಕರ್ನಾಟಕದ ಯಾವುದೇ ಯೋಜನೆಗೂ ಅನುಮತಿ ನೀಡಿಲ್ಲ. ಆದರೂ ತಮಿಳುನಾಡು ಅನಗತ್ಯವಾಗಿ ಆತಂಕಕ್ಕೊಳಗಾಗಿದೆ’ ಎಂದು  ಕೇಂದ್ರ ಸರ್ಕಾರದ ಹಿರಿಯ ವಕೀಲ ಡಬ್ಲ್ಯು.ಎ. ಖಾದ್ರಿ ಹೇಳಿದರು. ‘ನೀವು ಒಂದೇ ಸಮನೆ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಪೀಡಿಸುತ್ತಿದ್ದೀರಿ. ನೀರು ಹಂಚಿಕೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಈ ವ್ಯವಸ್ಥೆ ಸರಿಯಾಗಿ ಕೆಲಸ ಮಾಡದಿದ್ದರೆ ಮುಂದಿನ ಕ್ರಮದ ಬಗ್ಗೆ ಚಿಂತಿಸಬಹುದು’  ಎಂದು ನ್ಯಾಯಪೀಠ ತಮಿಳುನಾಡು ಸರ್ಕಾರಕ್ಕೆ ತಿಳಿಸಿತು.

ಕರ್ನಾಟಕದ ವಕೀಲ ಎಫ್‌.ಎಸ್‌. ನಾರಿಮನ್‌, ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಕೇಳಿ ತಮಿಳುನಾಡು ನ್ಯಾಯಾಲಯದಲ್ಲಿ ಮೂರನೇ ಸಲ ಅರ್ಜಿ ಸಲ್ಲಿಸಿದೆ ಎಂದರು. ಈ ಹಂತದಲ್ಲಿ ನ್ಯಾಯಪೀಠವು ‘ನೀವು ರಾಮ್‌ ಹಾಗೂ ಶ್ಯಾಂ ಅವರಂತೆ ಸಾಮಾನ್ಯ ನೆರೆಹೊರೆಯವರಲ್ಲ. ಈ ರೀತಿ ಕಚ್ಚಾಡುವುದು ಸರಿಯಲ್ಲ’ ಎಂದು ಕಿವಿಮಾತು ಹೇಳಿತು. ತಮಿಳುನಾಡು ಅರ್ಜಿಗೆ ಪ್ರತಿ ಹೇಳಿಕೆ ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ನ್ಯಾಯಪೀಠ ಸೂಚಿಸಿತು.

ಹಿನ್ನೆಲೆ: 1990ರಲ್ಲಿ ನ್ಯಾ.ಎನ್‌.ಪಿ. ಸಿಂಗ್‌ ನೇತೃತ್ವದಲ್ಲಿ ರಚಿಸಲಾದ ಕಾವೇರಿ ನ್ಯಾಯಮಂಡಳಿಯಲ್ಲಿ ಎನ್‌.ಎಸ್‌. ರಾವ್‌ ಮತ್ತು ಸುಧೀರ್‌ ನಾರಾಯಣ್‌ ಸದಸ್ಯರಾಗಿದ್ದರು. 19 ವರ್ಷ ನದಿ ನೀರಿನ ವಿವಾದದ ವಿಚಾರಣೆ ನಡೆಸಿದ ನ್ಯಾಯಮಂಡಳಿ ಕಾವೇರಿ ಒಟ್ಟಾರೆ ನೀರಿನ ಪ್ರಮಾಣವನ್ನು 740 ಟಿಎಂಸಿ ಅಡಿ ಎಂದು ಅಂದಾಜಿಸಿತು.

ತಮಿಳುನಾಡಿಗೆ 419 (ಬೇಡಿಕೆ 562) ಟಿಎಂಸಿ ಅಡಿ, ಕರ್ನಾಟಕಕ್ಕೆ 270 (ಬೇಡಿಕೆ 465) ಟಿಎಂಸಿ ಅಡಿ, ಕೇರಳಕ್ಕೆ 30 ಟಿಎಂಸಿ ಅಡಿ ಹಾಗೂ ಪುದುಚೇರಿಗೆ ಏಳು ಟಿಎಂಸಿ ಅಡಿ ನೀರು ನಿಗದಿ ಮಾಡಿತು. 10 ಟಿಎಂಸಿ ಅಡಿ ನೀರನ್ನು ಪರಿಸರ ಸಂರಕ್ಷಣೆಗಾಗಿ ಮೀಸಲಿಟ್ಟಿತು. ನ್ಯಾಯಮಂಡಳಿ ತೀರ್ಪು ಜಾರಿಗೆ ನೀರು ನಿರ್ವಹಣಾ ಮಂಡಳಿ ಹಾಗೂ ನೀರು ನಿಯಂತ್ರಣ ಸಮಿತಿ ರಚಿಸುವಂತೆ ಐತೀರ್ಪಿನಲ್ಲಿ ಶಿಫಾರಸು ಮಾಡಿತು.

ಕಾವೇರಿ ನ್ಯಾಯಮಂಡಳಿ ಐತೀರ್ಪು ಅಧಿಸೂಚನೆ ಹೊರಡಿಸಲು ವಿಳಂಬ ಮಾಡಿದ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಈ ವರ್ಷದ ಮೊದಲಿಗೆ ತರಾಟೆಗೆ ತೆಗೆದುಕೊಂಡಿತ್ತು. ಫೆಬ್ರುವರಿ 20ರಂದು ಸರ್ಕಾರ ಅಧಿಸೂಚನೆ ಪ್ರಕಟಿಸಿತು. ನೀರು ಹಂಚಿಕೆಗೆ ಸದ್ಯ ಜಲ ಸಂಪನ್ಮೂಲ ಕಾರ್ಯದರ್ಶಿ ನೇತೃತ್ವದಲ್ಲಿ ಉಸ್ತುವಾರಿ ಸಮಿತಿ ರಚಿಸಲಾಗಿದೆ. ಇದು ತಾತ್ಕಾಲಿಕ ವ್ಯವಸ್ಥೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT