ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮ್ಮವರಿಂದಲೇ ದ್ರೋಹ

Last Updated 10 ಜನವರಿ 2012, 19:30 IST
ಅಕ್ಷರ ಗಾತ್ರ

ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ದನಿ ಕಳೆದುಕೊಂಡಿರುವ ದಲಿತ ಸಮುದಾಯಕ್ಕೆ ದನಿ ನೀಡಬೇಕೆಂಬ ಉದ್ದೇಶದಿಂದಲೇ ಮೀಸಲು ಕ್ಷೇತ್ರಗಳ ರಚನೆಯಾಗಿದ್ದು.
 
ತಮ್ಮ ಸಮುದಾಯದ ನೋವು, ಸಂಕಟ, ಅವಮಾನಗಳನ್ನು ಅನುಭವಿಸಿ ಬಲ್ಲವರೇ ಈ ಕ್ಷೇತ್ರಗಳನ್ನು ಪ್ರತಿನಿಧಿಸಬೇಕೆಂಬ ಕಾರಣಕ್ಕಾಗಿಯೇ ದಲಿತರಿಗಷ್ಟೇ ಅಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿರುವುದು. ಇದು ದಲಿತ ಸಮುದಾಯಕ್ಕೆ ಸಂವಿಧಾನ ನೀಡಿರುವ ಸಾಮಾಜಿಕ ನ್ಯಾಯದ ಅತ್ಯುನ್ನತ ಕೊಡುಗೆ. ಆದರೆ ಸಂವಿಧಾನ ಅಸ್ತಿತ್ವಕ್ಕೆ ಬಂದು ಅರವತ್ತು ವರ್ಷಗಳ ನಂತರವೂ ಈ ಆಶಯ ಈಡೇರಿಲ್ಲ ಎನ್ನುವುದನ್ನು ಮತ್ತೆಮತ್ತೆ ನೆನೆಪಿಸುವ ಘಟನೆಗಳು ನಡೆಯುತ್ತಲೇ ಇವೆ.
 
ಪರಿಶಿಷ್ಟ ಜಾತಿಯ ಕಲ್ಯಾಣಕ್ಕಾಗಿ ರೂಪಿಸಲಾಗಿರುವ ಕಾರ‌್ಯಕ್ರಮಗಳನ್ನು ಆ ಸಮುದಾಯದ ಅರ್ಹ ಫಲಾನುಭವಿಗಳಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಿಸಲು ಮಾರ್ಗೋಪಾಯಗಳನ್ನು ಸೂಚಿಸಲಿಕ್ಕಾಗಿ ಕರ್ನಾಟಕ ಸರ್ಕಾರ ಆರುವರ್ಷಗಳ ಹಿಂದೆ ನ್ಯಾಯಮೂರ್ತಿ ಎ.ಜೆ.ಸದಾಶಿವ ನೇತೃತ್ವದ ಆಯೋಗವನ್ನು ರಚಿಸಿತ್ತು.

ಮೀಸಲಾತಿ ಸೌಲಭ್ಯವನ್ನು ಪರಿಶಿಷ್ಟ ಜಾತಿಯಲ್ಲಿಯೇ ಇರುವ ಮುಂದುವರಿದ ವರ್ಗಗಳು ಕಬಳಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿರುವ ಉಪಜಾತಿಗಳನ್ನು ಗುರುತಿಸಿ ಅವರ ಸ್ಥಿತಿಗತಿಯನ್ನು ಬೆಳಕಿಗೆ ತಂದು ನ್ಯಾಯ ಒದಗಿಸುವುದು ಕೂಡಾ ಆಯೋಗ ರಚನೆಯ ಹಿಂದಿನ ಉದ್ದೇಶ. ಆದರೆ ಈ ಆಯೋಗಕ್ಕೆ ದಲಿತ ಪ್ರತಿನಿಧಿಗಳೇ ಸಹಕಾರ ನೀಡುತ್ತಿಲ್ಲ ಎಂಬ ಆಘಾತಕಾರಿ ವಿಷಯ ಇದೀಗ ಬೆಳಕಿಗೆ ಬಂದಿದೆ.

 ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗೆ ಸೇರಿರುವ 36 ಶಾಸಕರು ಮತ್ತು ಆರು ಸಂಸದರಿದ್ದಾರೆ. ಇವರ ಸಲಹೆಯನ್ನು ಪಡೆಯಲು ನ್ಯಾ.ಸದಾಶಿವ ಆಯೋಗ ಸಭೆ ಕರೆದರೆ 36 ಶಾಸಕರಲ್ಲಿ ಮೂವರು ಮಾತ್ರ ಬಂದಿದ್ದರಂತೆ. ಆರರಲ್ಲಿ ಮೂವರು ಸಂಸದರು ಹಾಜರಾದರೂ ಹೆಚ್ಚು ಕಾಲ ಕೂರಲಾಗದೆ ಅವಸರದಲ್ಲಿ ಹೊರಟು ಹೋದರಂತೆ. ಸಭೆಯಲ್ಲಿ ಭಾಗವಹಿಸಿದವರು ಕೂಡಾ ತಮ್ಮ ಸಲಹೆಗಳನ್ನು ಲಿಖಿತ ರೂಪದಲ್ಲಿ ಇಲ್ಲವೇ ಮೌಖಿಕವಾಗಿ ನೀಡುವಷ್ಟು ವ್ಯವಧಾನವನ್ನೂ ತೋರಲಿಲ್ಲವಂತೆ.

ಜನಪ್ರತಿನಿಧಿಗಳ ಈ ಬೇಜವಾಬ್ದಾರಿ ನಡವಳಿಕೆ ಮತ್ತು ತಾವು ಪ್ರತಿನಿಧಿಸುತ್ತಿರುವ ಪರಿಶಿಷ್ಟ ಜಾತಿ ಜನರ ಬಗ್ಗೆ ಅವರು ಹೊಂದಿರುವ ನಿರ್ಲಕ್ಷ್ಯ ಖಂಡನೀಯ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಸರ್ಕಾರಿ ಯೋಜನೆಗಳ ಕೊರತೆ ಇಲ್ಲ.
 
ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯುವ ಕಾನೂನುಗಳ ಸಂಖ್ಯೆಯೂ ಕಡಿಮೆ ಇಲ್ಲ. ಹೀಗಿದ್ದರೂ ಬಹುಸಂಖ್ಯಾತ ದಲಿತರು ದಶಕಗಳ ಹಿಂದಿನ ಅದೇ ಬಡತನ, ಅವಮಾನ, ಅಸಹಾಯಕತೆಯ ಸ್ಥಿತಿಯಲ್ಲಿ ನರಳಾಡುತ್ತಿದ್ದಾರೆ.

ಇದಕ್ಕೆ  ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರ ಮತ್ತು ಪೂರ್ವಗ್ರಹಗಳು ಮುಖ್ಯ ಕಾರಣ. ಈ ದುಷ್ಟವ್ಯವಸ್ಥೆಯ ಮೇಲೆ ಕಣ್ಣಿಟ್ಟು ಫಲಾನುಭವಿಗಳಿಗೆ ಸೌಲಭ್ಯಗಳು ತಲುಪುವಂತೆ ಮಾಡಬೇಕಾದ ದಲಿತ ಜನಪ್ರತಿನಿಧಿಗಳಲ್ಲಿ ಬಹಳಷ್ಟು ಮಂದಿ ಅದೇ ವ್ಯವಸ್ಥೆಯ ಜತೆ ಷಾಮೀಲಾಗಿ ದಲಿತವಿರೋಧಿಗಳಾಗಿ ಪರಿವರ್ತನೆಗೊಂಡಿರುವುದು ವಿಪರ್ಯಾಸ. ಇಂತಹವರಿಗೆ ಬುದ್ಧಿ ಕಲಿಸಲು ಇರುವ ಒಂದು ಅವಕಾಶ ಚುನಾವಣೆ. ಅಲ್ಲಿಯೇ ಇಂತಹ ಕರ್ತವ್ಯಭ್ರಷ್ಟ ಪ್ರತಿನಿಧಿಗಳಿಗೆ ಪಾಠ ಕಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT