ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮ್ಮೂರ ಶಾಲೆ ಉಳಿಸಿದ ಗ್ರಾಮಸ್ಥರು

Last Updated 17 ಸೆಪ್ಟೆಂಬರ್ 2011, 10:05 IST
ಅಕ್ಷರ ಗಾತ್ರ

ತಿಪಟೂರು: ಮಕ್ಕಳ ಕೊರತೆಯಿಂದ ಎಷ್ಟೋ ಸರ್ಕಾರಿ ಪ್ರಾಥಮಿಕ ಶಾಲೆ ಮುಚ್ಚುತ್ತಿದ್ದರೆ, ತಾಲ್ಲೂಕಿನ ಕೊಡಗೀಹಳ್ಳಿ ಗ್ರಾಮಸ್ಥರು ತಮ್ಮೂರಿನ ಶಾಲೆ ತೆರೆದಿರಲೆಂಬ ಉದ್ದೇಶದಿಂದ ಪರಸ್ಪರ ಕೈಜೋಡಿಸಿ ಶಾಲೆ ಮುಂದುವರಿ ಯುವಂತೆ ನೋಡಿಕೊಂಡಿದ್ದಾರೆ.

ತಾಲ್ಲೂಕಿನ ಗಡಿ ಭಾಗದಲ್ಲಿರುವ ಕೊಡಗೀಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸುಸಜ್ಜಿತ ಕೊಠಡಿ, ಮಾದರಿ ಕೈತೋಟ, ಇಬ್ಬರು ಶಿಕ್ಷಕರು ಸೇರಿದಂತೆ ಎಲ್ಲ ಸೌಲಭ್ಯ ಹೊಂದಿತ್ತು.

60 ಮನೆಗಳಿರುವ ಈ ಗ್ರಾಮದಲ್ಲಿ ಕ್ರಮೇಣ ಮಕ್ಕಳ ಸಂಖ್ಯೆ ಕ್ಷೀಣಸಿ ಈ ವರ್ಷ ಮಕ್ಕಳ ಸಂಖ್ಯೆ 4ಕ್ಕೆ ಇಳಿಯಿತು. ಒಬ್ಬರು ಶಿಕ್ಷಕರನ್ನು ಬೇರೆಡೆ ವರ್ಗಾಯಿಸಿ ಮತ್ತೊಬ್ಬರಿಂದ ಶಾಲೆ ನಡೆಸಬೇಕೆಂದರೂ ಕನಿಷ್ಠ 8 ಮಕ್ಕಳು ಸಿಗದಾದರು. ಶಾಲೆ ಮುಚ್ಚದೆ ಮಾರ್ಗವೇ ಇರಲಿಲ್ಲ. ಇದನ್ನರಿತ ಗ್ರಾಮಸ್ಥರು ಹೇಗಾದರೂ ಮಾಡಿ ಶಾಲೆ ಉಳಿಸಿಕೊಳ್ಳಬೇಕೆಂದು ಮಕ್ಕಳ ಹುಡುಕಾಟದಲ್ಲಿ ತೊಡಗಿದರು.

ಆ ಹುಡುಕಾಟದಲ್ಲಿ ತಮ್ಮೂರಿನ ತೋಟದ ಮನೆಗಳ ನಾಲ್ಕು ಮಕ್ಕಳು  ಕಾನ್ವೆಂಟ್‌ಗಳಲ್ಲಿ ಓದುತ್ತಿದ್ದುದು ಅರಿವಾಯಿತು. ಗ್ರಾಮಸ್ಥರೆಲ್ಲ ಸೇರಿ ಆ ಮನೆಗಳಿಗೆ ಹೋಗಿ ಪೋಷಕರನ್ನು ಮನವೊಲಿಸಿದರು. 5ನೇ ತರಗತಿಯ ಇಬ್ಬರು ಮಕ್ಕಳಿಗೆ ಶಾಲೆಗೆ ಬರಲು ಸೈಕಲ್ ಕೊಡಿಸುವುದಾಗಿ ತಿಳಿಸಿದರು. ಅದರಂತೆ ಎರಡು ಸೈಕಲ್‌ಗಳನ್ನು ಗ್ರಾಮಸ್ಥರೇ ಖರೀದಿಸಿ ಆ ಮಕ್ಕಳಿಗೆ ನೀಡಿದರು.

ಅಷ್ಟೇ ಅಲ್ಲದೆ ಗ್ರಾಮಸ್ಥರೇ ದುಡ್ಡು ಸಂಗ್ರಹಿಸಿ ಎಲ್ಲ ಮಕ್ಕಳಿಗೂ ಆಕರ್ಷಕ ಸಮವಸ್ತ್ರ ಹೊಲಿಸಿದರು. ಶಾಲೆಯಲ್ಲೆಗ ಮಕ್ಕಳ ಸಂಖ್ಯೆ 8ಕ್ಕೇರಿದ್ದು, ತರಗತಿಗಳು ಸಾಂಗವಾಗಿ ನಡೆದಿವೆ. ಮುಂದಿನ ವರ್ಷ ಒಂದನೇ ತರಗತಿಗೆ ಬರುವ 3 ಮಕ್ಕಳು ಲೆಕ್ಕಕ್ಕೆ ಸಿಕ್ಕಿರುವುದರಿಂದ ಶಾಲೆ ಮುಂದುವರಿಯುವ ಆಶಾಭಾವ ಅವರದ್ದು.

ಎರಡು ಸೈಕಲ್‌ಗಳನ್ನು ಶಾಲೆಗೆಂದು ಕೊಡಿಸಿದ್ದು ಆ ಮಕ್ಕಳು ಐದನೇ ತರಗತಿ ದಾಟಿದ ನಂತರ ಕೊಟ್ಟು ಹೋಗಬೇಕು. ಅವನ್ನು ಮುಂದಿನ ವರ್ಷ ದೂರದ ತೋಟದ ಮನೆಗಳಿಂದ ಶಾಲೆಗೆ ಬರುವ ಮಕ್ಕಳಿಗೆ ಮತ್ತೆ ನೀಡಲು ನಿರ್ಧರಿಸಲಾಗಿದೆ.

ಈ ಶಾಲೆಯ ಮತ್ತೊಂದು ವಿಶೇಷ ಇಲ್ಲಿನ ಆಕರ್ಷಕ ಕೈತೋಟ. ಶಾಲೆ ಸುತ್ತ ಯಥೇಚ್ಛ ನುಗ್ಗೆ ಮರಗಳಿದ್ದು, ತರಕಾರಿ ಬೆಳೆಯಲಾಗುತ್ತದೆ. ಇದಕ್ಕೆ ಗ್ರಾಮಸ್ಥರ ಸಹಕಾರವಿದೆ. ಶಾಲೆಯ ಬಿಸಿಯೂಟಕ್ಕೆ ಆಗುವಷ್ಟು ತರಕಾರಿ ಇಲ್ಲಿಯೇ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT