ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಯಾರಿ ಇಲ್ಲದೇ ಕಸ ವಿಂಗಡಣೆ ಕಡ್ಡಾಯಗೊಳಿಸಿದ ಬಿಬಿಎಂಪಿ:ಗಾರ್ಡನ್ ಸಿಟಿ ಅಲ್ಲಲ್ಲ... ಗಾರ್ಬೇಜ್ ಸಿಟಿ...

Last Updated 10 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಾಕಷ್ಟು ಪೂರ್ವ ತಯಾರಿ, ಅಗತ್ಯ ಮೂಲ ಸೌಕರ್ಯ, ನಾಗರಿಕರ ವಿಶ್ವಾಸ- ಈ ಯಾವುದೂ ಇಲ್ಲದೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮೂಲದಲ್ಲೇ ಕಸ ವಿಂಗಡಣೆಯನ್ನು ಕಡ್ಡಾಯ ಮಾಡಿರುವುದರಿಂದ ರಸ್ತೆಗಳಲ್ಲಿ ಹಿಂದೆಂದಿಗಿಂತ ಹೆಚ್ಚು ಕಸ ಬೀಳಲಾರಂಭಿಸಿದೆ.

`ಮನೆಗಳಲ್ಲೇ ಕಸ ವಿಂಗಡಿಸಿ, ಹಸಿ ತ್ಯಾಜ್ಯವನ್ನು ಮಾತ್ರ ನೀಡುವ ವ್ಯವಸ್ಥೆಗೆ ನಾಗರಿಕರು ನಿಧಾನವಾಗಿಯಾದರೂ ಹೊಂದಿಕೊಳ್ಳುತ್ತಿದ್ದಾರೆ. ಆದರೆ ಬಹಳಷ್ಟು ಜನರು ಒಣ ಮತ್ತು ವೈದ್ಯಕೀಯ ತ್ಯಾಜ್ಯವನ್ನು ಮನೆಗಳಲ್ಲಿ ಇಟ್ಟುಕೊಳ್ಳಲಾಗದೇ ರಸ್ತೆಗಳಿಗೆ ಬಿಸಾಕುತ್ತಿದ್ದಾರೆ.
 
ಇದರಿಂದ ಕಸದ ಸಮಸ್ಯೆ ಪರಿಹಾರವಾಗುವ ಬದಲು ಉಲ್ಬಣಗೊಳ್ಳುತ್ತಿದೆ~ ಎಂದು ಸ್ವಯಂ ಸೇವಾ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ.ಹೈಕೋರ್ಟ್ ಆದೇಶದ ಪರಿಣಾಮವಾಗಿ ಕಸ ವಿಂಗಡಣೆ ಪದ್ಧತಿಯನ್ನು ಜಾರಿಗೆ ತಂದ ಪಾಲಿಕೆಯು ಅದರ ಬಗ್ಗೆ ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳಲ್ಲಿ ಪ್ರಚಾರ ನಡೆಸಿತು. ಜಾಹೀರಾತು, ಕರಪತ್ರ ವಿತರಣೆ, ಜನ ಜಾಗೃತಿ ಕಾರ್ಯಕ್ರಮಗಳಿಂದ ಕಸ ವಿಂಗಡಣೆಯ ಅಗತ್ಯದ ಬಗ್ಗೆ ನಾಗರಿಕರಿಗೆ ಮನವರಿಕೆ ಆಗಿರಬಹುದು.

ಆದರೆ ಕಸ ವಿಂಗಡಿಸಿ, ವೈದ್ಯಕೀಯ ಮತ್ತು ಒಣ ತ್ಯಾಜ್ಯಗಳನ್ನು ಒಂದು ವಾರದವರೆಗೆ ಮನೆಗಳಲ್ಲಿ ಇಟ್ಟುಕೊಳ್ಳಲಾಗದ ಜನರ ಅಸಹಾಯಕತೆ ಬಗ್ಗೆ ಪಾಲಿಕೆ ಯೋಚಿಸಲಿಲ್ಲ.ರಸ್ತೆಗಳನ್ನು ಸ್ವಚ್ಛಗೊಳಿಸುವಾಗ ಪೌರ ಕಾರ್ಮಿಕರು ಅಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಮತ್ತಿತರ ಒಣ ತ್ಯಾಜ್ಯವನ್ನು ಜನರು ನೀಡುವ ಹಸಿ ತ್ಯಾಜ್ಯದೊಂದಿಗೆ ಸೇರಿಸಿ ಲಾರಿಗಳಿಗೆ ಹಾಕುತ್ತಿದ್ದಾರೆ. ಪೌರ ಕಾರ್ಮಿಕರಿಗೆ ಪೂರ್ವಭಾವಿ ತರಬೇತಿ ನೀಡದೇ ಇರುವುದೇ ಇದಕ್ಕೆ ಕಾರಣ.

`ಪ್ರಜಾವಾಣಿ~ಯೊಂದಿಗೆ ಮಾತನಾಡಿದ `ಸಿಟಿಜನ್ ಆಕ್ಷನ್ ಫೋರಂ~ನ ಜಂಟಿ ಕಾರ್ಯದರ್ಶಿ ಎನ್.ಮುಕುಂದ, `ಯಾವುದೇ ಸಿದ್ಧತೆ ಇಲ್ಲದೇ ಪಾಲಿಕೆಯು ಹೊಸ ಪದ್ಧತಿಯನ್ನು ಜಾರಿಗೆ ತಂದಿದೆ. ಹೀಗಾಗಿ ಎಲ್ಲ ಗೊಂದಲಮಯವಾಗಿದೆ~ ಎಂದರು.

`ಪಲ್ಸ್ ಪೊಲಿಯೊ ಲಸಿಕೆ ಕಾರ್ಯಕ್ರಮದ ಬಗ್ಗೆ ನಡೆಸಿದ ಪ್ರಚಾರಾಂದೋಳನದ ಮಾದರಿಯಲ್ಲಿ ಕಸ ವಿಂಗಡಣೆ ಕುರಿತು ವ್ಯಾಪಕ ಜನ ಜಾಗೃತಿ ಮೂಡಿಸಬೇಕಾಗಿತ್ತು. ಮನೆ ಮನೆಗೆ ಭೇಟಿ ನೀಡಿ, ಚುನಾವಣೆ ವೇಳೆ ಮತದಾರರ ಮನವೊಲಿಸುವಂತೆ ಕಸ ವಿಂಗಡಣೆ ಬಗ್ಗೆಯೂ ಮನವರಿಕೆ ಮಾಡಿಕೊಡಬೇಕಾಗಿತ್ತು. ಹೈಕೋರ್ಟ್‌ಗೆ ಉತ್ತರ ನೀಡಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ಪಾಲಿಕೆ ಮಾಡುತ್ತಿದೆ~ ಎಂದು ಅವರು ಟೀಕಿಸಿದರು.

ಪ್ರತಿ ದಿನ ಸಂಗ್ರಹಿಸಿದ ಹಸಿ ತ್ಯಾಜ್ಯದ ಶೇಕಡಾವಾರು ಪ್ರಮಾಣದ ಬಗ್ಗೆ ಪಾಲಿಕೆ ತಿಳಿಸುತ್ತಿದೆ. ಆದರೆ ಎಷ್ಟು ಕಸ ಸಂಗ್ರಹಿಸಲಾಗುತ್ತಿದೆ? ಅದನ್ನು ಎಲ್ಲಿ ಹಾಕಲಾಗುತ್ತಿದೆ? ವಾರಕ್ಕೊಮ್ಮೆ ಸಂಗ್ರಹಿಸುವ ಒಣ ತ್ಯಾಜ್ಯವನ್ನು ಎಲ್ಲಿಗೆ ಸಾಗಿಸಲಾಗುತ್ತಿದೆ? ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಹೊಸ ಪದ್ಧತಿ ಬಗ್ಗೆ ನಿಗಾ ವಹಿಸಲು ವಾರ್ಡ್ ಮಟ್ಟದಲ್ಲಿ ರೆವಿನ್ಯೂ ಇನ್‌ಸ್ಪೆಕ್ಟರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಹಿರಿಯ ಮತ್ತು ಕಿರಿಯ ಆರೋಗ್ಯ ಇನ್‌ಸ್ಪೆಕ್ಟರ್ ಮೊದಲಾದ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ.

ಬೆಳಿಗ್ಗೆ ನಡೆಯುವ ಕಸ ಸಂಗ್ರಹ ಕಾರ್ಯವನ್ನು ಅಧಿಕಾರಿಗಳ ತಂಡ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಲು ಪಾಲಿಕೆಯಲ್ಲಿ ಯಾವುದೇ ವ್ಯವಸ್ಥೆ ಇದ್ದಂತಿಲ್ಲ.ಮೇಯರ್ ಡಿ.ವೆಂಕಟೇಶಮೂರ್ತಿ ಮತ್ತು ಆಯುಕ್ತ ರಜನೀಶ್ ಗೋಯಲ್ ಅವರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

`ವಿಶೇಷ ಸಭೆ ಕರೆಯಬೇಕಿತ್ತು~
ಮಹಾನಗರದ ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವ ಮಹತ್ವದ ವಿಷಯದ ಬಗ್ಗೆ ಪಾಲಿಕೆಯ ವಿಶೇಷ ಸಭೆ ಕರೆದು ಚರ್ಚಿಸಬೇಕಿತ್ತು. ಹಾಗೆ ಮಾಡಿದ್ದರೆ ಎಲ್ಲ ಸದಸ್ಯರಿಗೂ ಕಸ ವಿಂಗಡಣೆ ಬಗ್ಗೆ ಅರಿವು ಮೂಡುತ್ತಿತ್ತು.

ಕಸ ವಿಂಗಡಣೆ ಪದ್ಧತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸದಸ್ಯರೂ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಪಾಲಿಕೆ ಸದಸ್ಯರಿರಲಿ ಜನರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಪದ್ಧತಿಯನ್ನು ಜಾರಿಗೆ ತಂದಿರುವುದರಿಂದ ಕಸ ವಿಂಗಡಣೆಯು ವ್ಯವಸ್ಥಿತವಾಗುವ ಬದಲು ಅವ್ಯವಸ್ಥೆಯ ಕೂಪವಾಗಿ ಪರಿಣಮಿಸಿದೆ
ಪಾಲಿಕೆಯು ಈಗಾಗಲೇ ಕಸದ ಮೇಲೆ ಸೆಸ್ ವಿಧಿಸಿ ವರ್ಷಕ್ಕೆ 48 ಕೋಟಿ ರೂಪಾಯಿ ಆದಾಯ ಗಳಿಸಿದೆ.
 
ಇಂತಹ ಸೆಸ್ ದೇಶದ ಯಾವುದೇ ಭಾಗದಲ್ಲೂ ಇಲ್ಲ. ಈಗ ಸೆಸ್ ಜತೆಗೆ ಕಸ ವಿಂಗಡಿಸದೇ ಇದ್ದರೆ ದಂಡ ಹಾಕಲು ಪಾಲಿಕೆ ಹೊರಟಿದೆ. ಇದರಿಂದ ಸಮಸ್ಯೆಗೆ ಪರಿಹಾರ ಕಾಣುವ ಬದಲು ಕಗ್ಗಂಟಾಗುವ ಸಾಧ್ಯತೆಯೇ ಹೆಚ್ಚು.
- ಕೆ.ಚಂದ್ರಶೇಖರ್‌ಬಿಬಿಎಂಪಿ ಕಾಂಗ್ರೆಸ್ ಹಿರಿಯ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT