ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಂಗಗಳ ಉರುಳಿನಲ್ಲಿ ದಯಾನಿಧಿ

Last Updated 11 ಜೂನ್ 2011, 19:30 IST
ಅಕ್ಷರ ಗಾತ್ರ

`ಉನ್ನತ ತಂತ್ರಜ್ಞಾನದ ಕೇಂದ್ರವಾಗುವ ನಿಟ್ಟಿನಲ್ಲಿ ಭಾರತದ ಪಯಣ ಈಗಷ್ಟೇ ಆರಂಭವಾಗಿದೆ~ ಎಂದು ದೂರಸಂಪರ್ಕ ಖಾತೆ ಸಚಿವರಾಗಿದ್ದ ದಿನಗಳಲ್ಲಿ ದಯಾನಿಧಿ ಮಾರನ್ ತುಂಬು ಉತ್ಸಾಹದಲ್ಲಿ ಹೇಳಿದ್ದರು.

ಅವರ ಕಣ್ಣುಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಬೆಳಕಿದ್ದ ದಿನಗಳವು. ವಿಪರ್ಯಾಸವೆಂದರೆ, ಉನ್ನತ ತಂತ್ರಜ್ಞಾನದ ಹಾದಿಯಲ್ಲಿ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದ ಅವರೇ ಈಗ ಖಳನಾಯಕನ ಪೋಷಾಕಿನಲ್ಲಿ ಕಾಣಿಸುತ್ತಿರುವುದು.

ಕೇಂದ್ರದ ಮಾಜಿ ಸಚಿವ ಎ.ರಾಜಾ ಅವರತ್ತ ಕೇಂದ್ರೀಕೃತವಾಗಿದ್ದ `2ಜಿ ತರಂಗಾಂತರ~ ತನಿಖೆಯ ತೂಗುಗತ್ತಿ ಈಗ ದಯಾನಿಧಿ ಅವರತ್ತ ತಿರುಗಿದೆ. ಇದೇ ದಯಾನಿಧಿ, 2004ರಲ್ಲಿ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿ ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾದಾಗ, ಸಂಪುಟದ ಅತಿ ಕಿರಿಯ ಸದಸ್ಯ ಎನ್ನುವ ಅಗ್ಗಳಿಕೆಗೆ ಅವರು ಪಾತ್ರರಾಗಿದ್ದರು.

ಡಿಎಂಕೆ ಅಭ್ಯರ್ಥಿಯಾಗಿ ಎರಡು ಸಲ ಲೋಕಸಭೆಗೆ ಆಯ್ಕೆಯಾಗಿರುವ ಅವರು, 2009ರ ಚುನಾವಣೆಯಲ್ಲಿ ಚೆನ್ನೈನ ಕೇಂದ್ರವಲಯದಿಂದ 15ನೇ ಲೋಕಸಭೆಗೆ ಆರಿಸಿಬಂದಿದ್ದು, ಇದೀಗ ಜವಳಿ ಖಾತೆಯ ಸಚಿವರು. 

ರಾಜಕೀಯ ಮತ್ತು ಸಮಾಜವಿಜ್ಞಾನದಲ್ಲಿ ಕೂಡ ದಯಾನಿಧಿ ಅವರಿಗೆ ಆಸಕ್ತಿಯಿದೆ. ಈ ವಿಷಯಗಳಿಗೆ ಸಂಬಂಧಿಸಿದಂತೆ ಅವರು ಅದ್ಭುತ ಓದುಗ ಕೂಡ. ಪ್ರಚಲಿತ ವಿದ್ಯಮಾನಗಳು, ಅರ್ಥಶಾಸ್ತ್ರ, ಹಣಕಾಸು, ಜಾಗತಿಕ ವಾಣಿಜ್ಯ, ಮಾಧ್ಯಮ, ಮಾಹಿತಿ ತಂತ್ರಜ್ಞಾನ- ಹೀಗೆ, ಸಾಕಷ್ಟು ಆಸಕ್ತಿಯ ಕ್ಷೇತ್ರಗಳನ್ನು ಹೊಂದಿರುವ ದಯಾನಿಧಿ, ವಿವಿಧ ದೇಶಗಳಲ್ಲಿನ ಸಭೆ-ಕಮ್ಮಟಗಳಲ್ಲಿ ಭಾಗವಹಿಸಿರುವ ಜಾಣ.

ಅವರ ಹವ್ಯಾಸಗಳು ಕೂಡ ವಿಭಿನ್ನವಾದವು. ಅವರೊಬ್ಬ ಹವ್ಯಾಸಿ ರೇಡಿಯೊ ಆಪರೇಟರ್. ಮದ್ರಾಸ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವೀಧರರು. ಡಿಸೈನರ್ ವಿನ್ಯಾಸದ ಉಡುಪುಗಳನ್ನು ಧರಿಸುವ ಸೊಗಸುಗಾರ ಕೂಡ. ಗಾಲ್ಫ್, ಕ್ರಿಕೆಟ್, ಟೆನ್ನಿಸ್‌ನಲ್ಲಿ ಅವರಿಗೆ ಆಸಕ್ತಿ.

ತಮಿಳಿನ ಇತರ ರಾಜಕಾರಣಿಗಳಂತೆ ನಿರರ್ಗಳ ತಮಿಳಿನಲ್ಲಿ ಮಾತನಾಡದ ಅವರಿಗೆ ಇಂಗ್ಲಿಷ್ ಎಂದರೆ ಸಲೀಸು (ಆ ಕಾರಣದಿಂದಲೇ, ಚುನಾವಣಾ ಪ್ರಚಾರ ಸಭೆಗಳಲ್ಲಿ ದಯಾನಿಧಿ ಅವರಿಗೆ ಕರುಣಾನಿಧಿ ಪುತ್ರ ಸ್ಟಾಲಿನ್ ಜೊತೆಯಾಗುತ್ತಾರೆ).

ಹೀಗೆ, ರಾಜಕಾರಣದ ಹೊರತಾಗಿ ಹಲವು ಆಸಕ್ತಿ ಹೊಂದಿರುವ, ತಾರುಣ್ಯದ ಕಸುವನ್ನಿನ್ನೂ ಉಳಿಸಿಕೊಂಡಿದ್ದ, ಶ್ರೀಮಂತ ಮನೆತನದ ಕನಸುಕಂಗಳ ವ್ಯಕ್ತಿಯೊಬ್ಬ ಕಿರಿಯ ವಯಸ್ಸಿನಲ್ಲೇ ಕೇಂದ್ರ ಸಚಿವರಾದುದು ಸಹಜವಾಗಿಯೇ ನಿರೀಕ್ಷೆಗಳನ್ನು ಮೂಡಿಸಿತ್ತು. ವಿದ್ಯಾವಂತ ಯುವಜನ ರಾಜಕಾರಣಕ್ಕೆ ಬರಬೇಕು ಎನ್ನುವುದು ಎಲ್ಲ ಕಾಲದ ಕನವರಿಕೆಯಷ್ಟೇ.

ಇದಕ್ಕೆ ತಕ್ಕನಾಗಿ, ದಯಾನಿಧಿ ಅವರು ದೂರಸಂಪರ್ಕ ಸಚಿವರಾಗಿದ್ದ ಕಾಲದಲ್ಲಿಯೇ ಮೊಬೈಲ್ ಬಳಕೆ ದೇಶದಲ್ಲಿ ಅಪಾರ ಜನಪ್ರಿಯಗೊಂಡು, ಸ್ಥಿರ ದೂರವಾಣಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು. ಮೊಬೈಲ್ ದೂರವಾಣಿ ಕರೆದರವೂ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಯಿತು.

ಈ ಸಾಧನೆಗಾಗಿ ಅವರು ವಿವಿಧ ಸಂಸ್ಥೆಗಳ ಗೌರವಗಳಿಗೆ ಪಾತ್ರರಾದರು. ಜಾಗತಿಕ ಮಾರುಕಟ್ಟೆಯೂ ದಯಾನಿಧಿ ಅವರ ಚಟುವಟಿಕೆಗಳ ಬಗ್ಗೆ ಮಾತನಾಡಿತು. ವಿಪರ್ಯಾಸವೆಂದರೆ, ಆ ಅಗ್ಗಳಿಕೆಯ ದಿನಗಳಲ್ಲಿ (2004-2007) ಅವರು ತೆಗೆದುಕೊಂಡ ಕೆಲವು ನಿರ್ಧಾರಗಳೇ ಅವರನ್ನೀಗ ಆರೋಪಿಯ ರೂಪದಲ್ಲಿ ಬಿಂಬಿಸುತ್ತಿವೆ.

ಸ್ವತಂತ್ರ ಭಾರತ ಕಂಡ ಬಹುದೊಡ್ಡ ಭ್ರಷ್ಟಾಚಾರ ಪ್ರಕರಣಗಳಲ್ಲೊಂದಾದ `2ಜಿ ತರಂಗಾಂತರ~ದ ನೆರಳಿನಲ್ಲಿ ನಿಂತಿರುವ ದಯಾನಿಧಿ ಮಾರನ್ (ಜನನ: ಡಿಸೆಂಬರ್ 5, 1966) ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡೇ ಬೆಳೆದವರು.

ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ಅವರ ತವರು. ಅವರ ತಂದೆ ಮುರಸೋಳಿ ಮಾರನ್ (ತಾಯಿಯ ಹೆಸರು ಮಲ್ಲಿಕಾ ಮಾರನ್) ಕೂಡ ತಮಿಳುನಾಡು ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಭಾವವುಳ್ಳ ರಾಜಕಾರಣಿ ಆಗಿದ್ದವರು.

ಕೇಂದ್ರ ಸಂಪುಟದಲ್ಲಿ ಹಲವು ಖಾತೆಗಳನ್ನು ನಿರ್ವಹಿಸಿದ್ದ ಮುರಸೋಳಿ ಮಾರನ್, ಹೊಸ ಆರ್ಥಿಕ ನೀತಿಯ ಉದಾರೀಕರಣದ ಗಾಳಿಗೆ ದೇಶದ ಹೆಬ್ಬಾಗಿಲು ತೆರೆದ ಹರಿಕಾರರಲ್ಲಿ ಒಬ್ಬರಾಗಿದ್ದರು.
 
ದಯಾನಿಧಿ ಅವರ ಸೋದರ ಕಲಾನಿಧಿ ಮಾರನ್ ದೇಶದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಲ್ಲೊಂದಾದ, ಇಪ್ಪತ್ತೊಂದು ಚಾನಲ್‌ಗಳನ್ನು ಹೊಂದಿರುವ `ಸನ್ ನೆಟ್‌ವರ್ಕ್~ನ ಮಾಲೀಕರು.
 
ಕಲಾನಿಧಿ ಕಟ್ಟಿರುವ `ಸನ್ ಸಾಮ್ರಾಜ್ಯ~ದ ವಿಸ್ತರಣೆಯಲ್ಲಿ ದಯಾನಿಧಿ ಅವರ ಪಾಲೂ ಸಾಕಷ್ಟಿದೆ. ಆ ಪಾಲಿನಲ್ಲಿ ಕಾನೂನುಬದ್ಧ ಎಷ್ಟು, ಕಾನೂನುಬಾಹಿರ ಆದುದೆಷ್ಟು ಎನ್ನುವುದು ಈಗ ನಡೆಯುತ್ತಿರುವ ಚರ್ಚೆ.

ಏರ್‌ಸೆಲ್ ಎನ್ನುವ ಸಂಸ್ಥೆ ಬಯಸಿದ್ದ ಪರವಾನಗಿ ನೀಡಲು ಎರಡು ವರ್ಷ ಸತಾಯಿಸಿದ್ದ ದಯಾನಿಧಿ, ಆ ಸಂಸ್ಥೆ ಮ್ಯಾಕ್ಸಿಸ್ ಎನ್ನುವ ವಿದೇಶಿ ಸಂಸ್ಥೆಯೊಂದರ ತೆಕ್ಕೆಗೆ ಒಳಪಟ್ಟ ಕೂಡಲೇ ತಮ್ಮ ಮನಸ್ಸು ಬದಲಿಸಿದ್ದರು.
 
ಈ ಪರವಾನಗಿಗಳಿಗೆ ಪ್ರತಿಫಲವಾಗಿ ಮ್ಯಾಕ್ಸಿಸ್ ಕಮ್ಯುನಿಕೇಷನ್ಸ್ ಸಂಸ್ಥೆ ಸುಮಾರು 700 ಕೋಟಿ ರೂಪಾಯಿಯಷ್ಟು ದೊಡ್ಡ ಮೊತ್ತವನ್ನು `ಸನ್ ನೆಟ್‌ವರ್ಕ್~ನ ಯೋಜನೆಗಳಲ್ಲಿ ತೊಡಗಿಸಿದೆ ಎನ್ನುವುದು ದಯಾನಿಧಿ ಅವರ ಮೇಲಿರುವ ಆರೋಪ. ಇದಕ್ಕೆ ಸಂಬಂಧಿಸಿದ ವರದಿಯನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ತೆಹಲ್ಕಾ ಸುದ್ದಿ ನಿಯತಕಾಲಿಕದ ಮೇಲೆ ಅವರು ಕಾನೂನು ಸಮರ ಸಾರಿದ್ದರು.

ಶೇ.33.33 ಷೇರುಗಳಿಗಾಗಿ ಟಾಟಾ ಸಂಸ್ಥೆಯನ್ನು ಒತ್ತಾಯಿಸಿದ್ದಾರೆ ಎನ್ನುವ ವರದಿಗಳನ್ನು ಪ್ರಕಟಿಸಿದ ಪತ್ರಿಕೆಗಳ ಮೇಲೆಯೂ ಅವರು ಸಿಡಿಮಿಡಿಗೊಂಡು ಧಮಕಿ ಹಾಕಿದ್ದರು. ತಮ್ಮ ಸೋದರನೇ ಸುದ್ದಿಸಂಸ್ಥೆಗಳನ್ನು ನಡೆಸುತ್ತಿದ್ದರೂ ದಯಾನಿಧಿ ಅವರು ಮಾಧ್ಯಮಗಳೊಂದಿಗೆ ಸೌಹಾರ್ದ ಸಂಬಂಧ ಹೊಂದಿಲ್ಲದಿರುವುದು ಹಾಗೂ ತಮಗೆ ಪ್ರತಿಕೂಲವಾಗಿ ವರದಿಗಳು ಪ್ರಕಟವಾದಾಗಲೆಲ್ಲ ಸಿಡಿಮಿಡಿಗೊಳ್ಳುವುದು ನಡೆದೇ ಇದೆ.

ಚೆನ್ನೈನಲ್ಲಿನ ತಮ್ಮ ಮನೆಯನ್ನು ಟೆಲಿಫೋನ್ ಎಕ್ಸ್‌ಚೇಂಜ್‌ನಂತೆ ರೂಪಿಸಿಕೊಂಡಿದ್ದಾರೆ; 323 ದೂರವಾಣಿ ಸಂಪರ್ಕಗಳನ್ನು ಅವರ ಮನೆ ಹೊಂದಿದೆ; ಕುಟುಂಬದ ವಾಣಿಜ್ಯ ಉದ್ದೇಶಗಳಿಗಾಗಿ 3.4 ಕಿ.ಮೀ. ಉದ್ದದ ಕೇಬಲ್‌ಗಳನ್ನು ಗುಟ್ಟಾಗಿ ಹಾಕಿಸಲಾಗಿದೆ; ಇದರಿಂದ ಬಿಎಸ್‌ಎನ್‌ಎಲ್‌ಗೆ ಅಪಾರ ನಷ್ಟವಾಗಿದೆ- ಇಂಥ, ವಿಚಿತ್ರ ಆರೋಪಗಳೂ ದಯಾನಿಧಿ ಅವರ ಮೇಲಿವೆ.

ಆರೋಪ ಹಾಗೂ ಟೀಕೆಗಳ ದಾಳಿಗೆ ಪ್ರತಿದಿನವೂ ತುತ್ತಾಗುತ್ತಿರುವ ದಯಾನಿಧಿ ಮಾರನ್ ಅವರ ಸಚಿವಸ್ಥಾನ ಈಗ ತೂಗುಯ್ಯಾಲೆಯಲ್ಲಿದೆ. `2ಜಿ ತರಂಗಾಂತರ~ ಪ್ರಕರಣಕ್ಕೆ ಸಂಬಂಧಿಸಿದಂತೆ ಎ.ರಾಜಾ ಹಾಗೂ ಕನಿಮೊಳಿ ಈಗಾಗಲೇ ಜೈಲಿನಲ್ಲಿರುವುದು ಕೂಡ ದಯಾನಿಧಿ ಅವರ ನಾಳೆಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟಿಸಿದೆ.

ಅವರ ಕುಟುಂಬ ನೆಮ್ಮದಿ ಕೆಡಿಸಿಕೊಂಡಿದೆ (ದಯಾನಿಧಿ ಮಾರನ್ ಅವರ ಪತ್ನಿಯ ಹೆಸರು ಪ್ರಿಯಾ. ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ಎನ್ನುವ ಸೂತ್ರವನ್ನು ಈ ದಂಪತಿ ಪಾಲಿಸಿದ್ದಾರೆ).

ಹಾಗೆ ನೋಡಿದರೆ, ದಯಾನಿಧಿ ಅವರ ಬದುಕಿನಲ್ಲಿ ಏರಿಳಿತಗಳು ಹೊಸತೇನಲ್ಲ. ಅಜ್ಜ ಕರುಣಾನಿಧಿ ಅವರೊಂದಿಗೆ ಮಾರನ್ ಸೋದರರು ಈ ಮೊದಲು ಜಗಳವಾಡಿಕೊಂಡಿದ್ದಿದೆ.

ಕರುಣಾನಿಧಿ ಅವರ ವಾರಸುದಾರನಾಗಿ ಅವರ ಪುತ್ರ ಸ್ಟಾಲಿನ್‌ರನ್ನು ತಮಿಳುನಾಡಿನ ಜನ ಬಯಸುತ್ತಿದ್ದಾರೆ ಎನ್ನುವ `ದಿನಕರನ್~ ಪತ್ರಿಕೆಯ ಸಮೀಕ್ಷೆ ಕುಟುಂಬಗಳ ನಡುವೆ ಒಡಕು ತಂದಿತ್ತು. ಈ ಬಿರುಕು, ರಾಜಕೀಯ ಭವಿಷ್ಯವನ್ನು ಮಂಕಾಗಿಸಿತು ಎನ್ನುವಾಗಲೇ, ಅಜ್ಜನ ಕೈಕುಲುಕಿದ್ದ ದಯಾನಿಧಿ ಚುನಾವಣೆಯಲ್ಲಿ ಗೆದ್ದು ಕೇಂದ್ರ ಸಚಿವರಾಗಿದ್ದರು.

ಆದರೆ, ಈಗಿನ ಸಂದರ್ಭವೇ ಬೇರೆ. ಪ್ರಧಾನಿ ಮನಮೋಹನ್‌ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರೊಂದಿಗೆ ಕರುಣಾನಿಧಿ ಅವರು ನಿರುಪಾಯರಾಗಿರುವ ಸಂದರ್ಭದಲ್ಲಿ ದಯಾನಿಧಿ ಏಕಾಂಗಿಯಂತೆ ಕಾಣಿಸುತ್ತಿದ್ದಾರೆ.

ಅಪ್ಪನ ರಾಜಕೀಯ ವರ್ಚಸ್ಸು ಹಾಗೂ ಅಜ್ಜ ಕರುಣಾನಿಧಿ ಅವರ ಶ್ರೀರಕ್ಷೆ ಒಂದೆಡೆಯಾದರೆ, ಸೋದರನೊಂದಿಗೆ ಕಟ್ಟಿರುವ `ಸನ್ ಸಾಮ್ರಾಜ್ಯ~ದ ಪ್ರಭಾವಳಿಯಲ್ಲಿ ಸುಲಭವಾಗಿ ರಾಜಕಾರಣದ ಮೆಟ್ಟಿಲುಗಳನ್ನೇರಿದ ದಯಾನಿಧಿ, ಅಷ್ಟೇ ವೇಗವಾಗಿ ಇಳಿಮುಖವಾಗಿ ಸಾಗಿರುವುದು ಬದುಕಿನ ವಿರೋಧಾಭಾಸದಂತೆ ಕಾಣುತ್ತದೆ.

ದಯಾನಿಧಿ ಅವರ ನಾಳೆಗಳೇನಾದರೂ ಇರಲಿ. ಆದರೆ, ಅವರು ಅಂಟಿಸಿಕೊಂಡಿರುವ ಕಳಂಕಗಳು, ಈ ದೇಶದ ರಾಜಕಾರಣದ ಬಗ್ಗೆ ಜನಸಾಮಾನ್ಯರು ನಂಬಿಕೆ ಕಳೆದುಕೊಳ್ಳಲು ಹಾಗೂ ಎಗತಾಳೆ ಮಾಡಲು ದೊರೆತಿರುವ ಹೊಸ ಕಾರಣವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT