ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ಖರೀದಿಸಲೂ ತಾಕತ್ತು ಬೇಕು

Last Updated 19 ಜುಲೈ 2012, 9:20 IST
ಅಕ್ಷರ ಗಾತ್ರ

ಹನುಮಸಾಗರ: ಸದ್ಯ ತರಕಾರಿ ಮಾರುಕಟ್ಟೆಗೆ ಹೋಗಿ ಕಿಲೋ ಹಸಿಮೆಣಸಿನಕಾಯಿಯ ಬೆಲೆ ಎಷ್ಟು ಎಂದು ಕೇಳಿದರೆ ಮೆಣಸಿನ ಕಾಯಿ ತಿನ್ನುವುದಕ್ಕಿಂತ ಮೊದಲೇ ಅದರ ಬೆಲೆ ಕೇಳಿದಾಗ ಖಾರವೆನಿಸುತ್ತದೆ. ಕೇವಲ ಹಸಿಮೆಣಸಿನಕಾಯಿಯಷ್ಟೆ ಅಲ್ಲ ಪ್ರತಿಯೊಂದು ತರಕಾರಿಯ ಬೆಲೆ ಗಗನಕ್ಕೇರಿದ್ದು ಸಾಮಾನ್ಯ ಜನರ ಸ್ಥಿತಿ ಚಿಂತಾಜನಕವಾಗಿದೆ.

ಪ್ರತಿಯೊಂದು ತರಕಾರಿಯ ಬೆಲೆ ಕಿಲೋಗೆ ರೂ.50ರ ಆಸುಪಾಸಿನಲ್ಲಿದ್ದರೂ ಖರೀದಿಸುವ ತರಕಾರಿಯ ಪ್ರಮಾಣ ಕಡಿಮೆಯಾಗಿದೆ ಹೊರತು ಖರೀದಿಸುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ.ಕಿಲೋ ಹಸಿಮೆಣಸಿನಕಾಯಿ 45 ರೂಪಾಯಿ, ಟೊಮ್ಯಾಟೊ 40, ಬೀಟ್‌ರೂಟ್ 60. ಮೂಲಂಗಿ, ಮೆಂತೆಪಲ್ಲೆ, ಕೋತಂಬರಿ 10ರೂಪಾಯಿಗೆ 3 ಸೂಡು ಹೀಗೆ ತರಕಾರಿಯ ಬೆಲೆ ನಿಗದಿಯಾಗಿರುತ್ತದೆ.

ಗ್ರಾಹಕರು ತರಕಾರಿ ಬೆಲೆಯ ಬಗ್ಗೆ ತಕರಾರೇನಾದರೂ ಮಾಡಿದರೆ ಹೊಸದಾಗಿ ಮಾರ‌್ಕೇಟಿಗೆ ಬಂದಾರ‌್ಹಂಗ ಕಾಣ್ತೀರಲ್ರಿ ಎಂದು ವ್ಯಾಪಾರಸ್ಥರು ಕೇಳುತ್ತಾರೆ.

ಇದೇ ರೀತಿ ಬೆಲೆ ಏರಯತ್ತಲೇ ಹೋದರೆ ತರಕಾರಿ ಖರೀದಿ ಮಾಡಲು ಮಾರುಕಟ್ಟೆಗೆ ಹೋಗುವ ನಾವು ಕೈಚೀಲದಲ್ಲಿ ಹಣ ತುಂಬಿಕೊಂಡು ಹೋಗಿ ಜೇಬಿನಲ್ಲಿ ತರಕಾರಿ ಹಾಕಿಕೊಂಡು ಬರಬಹುದಾದ ಸಂದರ್ಭ ಬಂದರೂ ಬರಬಹುದು ಎಂದು ಗೊಣಗುತ್ತಲೆ ಕಿಲೋಗಟ್ಟಲೇ ಖರೀದಿಸುವ ಗ್ರಾಹಕರು ಕಾಲ ಕೇಜಿಗೆ ತೃಪ್ತಿಪಟ್ಟುಕೊಳ್ಳುತ್ತಾರೆ.

ಮಳೆ ಪ್ರಮಾಣ ತೀವ್ರವಾಗಿ ಕಡಿಮೆಯಾಗಿರುವುದು ಒಂದೆಡೆಯಾದರೆ ಕೃಷಿ ಪದ್ಧತಿ ಬದಲಾಗಿರುವುದು ಮತ್ತೊಂದು ಕಡೆಯಾಗಿದ್ದೆ ಬೆಲೆ ಏರಲು ಕಾರಣವಾಗಿದೆ ಎಂದು ರೈತರು ಹೇಳುತ್ತಾರೆ.ಜೋಳ, ಸಜ್ಜೆ, ಶೇಂಗಾ, ತೊಗರೆಯಂತಹ ಬೆಳೆಗಳ ಮಧ್ಯದಲ್ಲಿ ಅಕ್ಕಡಿ ಕಾಳುಗಳಾದ ಹೆಸರು, ಮಡಕೆ, ಕುಸುಬೆ, ಎಳ್ಳು, ಗುರೆಳ್ಳು, ಅವರೆಯಂತಹ ಧಾನ್ಯಗಳನ್ನು ರೈತರು ಬಿತ್ತನೆ ಮಾಡುವುದು ಕಡಿಮೆಯಾಗಿದೆ.

ಈ ಹಿಂದೆ ರೈತರು ಜಮೀನಿನಲ್ಲಿ ತಮ್ಮ ಕುಟುಂಬಕ್ಕೆ ಸಾಕಾಗುವಷ್ಟು ತರಕಾರಿ ಬೆಳೆಯುತ್ತಿದ್ದರು. ತರಕಾರಿಯ ಸ್ಥಾನವನ್ನು ಅಕ್ಕಡಿ ಕಾಳುಗಳು ತುಂಬುತ್ತಿದ್ದರಿಂದ ಹಳ್ಳಿಗಾರಾರೂ ಪಟ್ಟಣಕ್ಕೆ ಬಂದು ತರಕಾರಿ ಖರೀದಿಸುತ್ತಿದ್ದಿಲ್ಲ. ರೈತರು ಅಕ್ಕಡಿ ಕಾಳುಗಳನ್ನು ಬಿತ್ತುವುದನ್ನು ಮರೆತು ಕೇವಲ ವಾಣಿಜ್ಯ ಬೆಳೆಗಳಿಗೆ ಗಂಟು ಬಿದ್ದಿದ್ದಾರೆ. ಒಂದೆಡೆ ತರಕಾರಿ ಬೆಳೆಯುವುದು ಕಡಿಮೆ ಆಯಿತು ಮತ್ತೊಂದೆಡೆ ಗ್ರಾಮೀಣರು ಕೈ ಚೀಲ ಹಿಡಿದುಕೊಂಡು ತರಕಾರಿ ಮಾರುಕಟ್ಟೆಗೆ ಬರುವ ಸಂಪ್ರದಾಯ ಬೆಳೆಯಿತು. ಈ ಕಾರಣಗಳಿಂದ ತರಕಾರಿ ಬೆಲೆ ಏರಲು ಕಾರಣವಾಗಿದೆ ಎಂದು ತರಕಾರಿ ಖರೀದಿಸಲು ಬಂದಿದ್ದ ಸುರೇಶಬಾಬು ಜಮಖಂಡಿಕರ ಹೇಳುತ್ತಾರೆ.

ಸಾಮಾನ್ಯವಾಗಿ ಕೊಳವೆಬಾವಿಯಲ್ಲಿ ಕಡಿಮೆ ನೀರು ಹೊಂದಿದ ರೈತರ ಜೊತೆಗೆ ತರಕಾರಿಗೆ ಬೆಲೆ ಏರುತ್ತಿರುವುದನ್ನು ಗಮನಿಸಿದ ರೈತರು ಉಳಿದ ಬೆಳೆಗಳ ಕಡೆಗೆ ಗಮನ ನೀಡದೇ ತರೆಹವಾರಿ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ದೊಡ್ಡ ಬೆಳಿ ಹಾಕಿದ್ರ ಬೀಜ ಗೊಬ್ಬರಕ್ಕಾಗಿ ಸಾವಿರಾರು ರೂಪಾಯಿ ಖರ್ಚುಮಾಡಬೇಕು, ಏನೇ ಖರ್ಚು ಮಾಡಿ ಬೆಳೆದರೂ ಕೊನೆಗೆ ಕೈಗೆ ಫಸಲು ಬರುವ ಹೊತ್ತಿನೊಳುಗೆ ಮಾರುಕಟ್ಟೆಯಲ್ಲಿ ಬೆಲೆ ಕೈಕೊಟ್ಟಿರತೈತ್ರಿ, ವಾರಕ್ಕೊಮ್ಮೆ ಲಾಭ ತರುವ ತರಕಾರಿಹಂಗ ಉಳಿದ ಬೆಳಿ ಲಾಭ ಆಗಂಗಿಲ್ರಿ ಎಂದು ತರಕಾರಿ ಬೆಳೆಯುವ ರೈತ ಬಸವಂತಪ್ಪ ಗೌಡರ ಹೇಳುತ್ತಾರೆ.

ತಕ್ಕಡಿ ಹಿಡಿದ ರೈತರು: ತಮ್ಮ ಅಸಹಾಯಕತೆಯನ್ನು ಸಂದರ್ಭಕ್ಕೆ ತಕ್ಕಂತೆ ದುರುಪಯೋಗಪಡಿಸಿಕೊಳ್ಳುತ್ತಿದ್ದ ದಲ್ಲಾಳಿ ವ್ಯಾಪಾರಿಗಳಿಗೆ ಸೆಡ್ಡು ಹೊಡೆದಿರುವ ಬಹುತೇಕ ರೈತರು ಹತ್ತು ರೂಪಾಯಿ ಹೆಚ್ಚು ಕಡಿಮೆ ಸಿಕ್ಕರೂ ಚಿಂತೆ ಇಲ್ಲ ಸ್ವತಃ ತರಕಾರಿ ಮಾರಾಟಕ್ಕೆ ತಾವೇ ತಕ್ಕಡಿ ಹಿಡಿದು ಮುಂದಾಗಿರುವುದು ಸದ್ಯ ಹೊಸ ಬೆಳವಣಿಗೆಯಾಗಿದೆ.

ಇನ್ನು ಕೆಲ ಜಾಣ ರೈತರು ಕೇವಲ ಒಂದೇ ಬಗೆಯ ತರಕಾರಿಯನ್ನು ಬೆಳೆಯದೇ ಅಷ್ಟೇ ಜಮೀನಿನಲ್ಲಿ ನಾಲ್ಕಾರು ತರೆಹದ ಕಾಯಿಪಲ್ಯೆ ಹಾಕಿಕೊಂಡಿರುತ್ತಾರೆ. ಒಂದೇ ಬೆಳಿ ನಿಚ್ಚಿಕೊಂಡೇನಾದ್ರೂ ಕುಂತ್ರ ಕೂಳಗೇಡಿ ಆಗೋದಂತೂ ಗ್ಯಾರಂಟಿ, ಕೆಲವೊಂದು ಸಮಯದಲ್ಲಿ ಉಳ್ಳಾಗಡ್ಡಿ ಕೇಜಿ ಗೆ 8 ರೂಪಾಗೆ ಇಳಿದಿದ್ದರೆ ಟೊಮ್ಯಾಟೊ 50 ರೂಪಾಯಿಗೆ ಏರಿರತೈತ್ರಿ, ಸೌತಿಕಾಯಿ 4 ರೂಪಾಯಿಗೆ ಕಿಲೋ ಆಗಿದ್ರ ಚವಳಿಕಾಯಿ 40 ಆಗಿರತೈತಿ, ನಾಲ್ಕಾರು ನಮೂನೆಯ ತರಕಾರಿ ಬೆಳೆದ್ರ ಒಂದಕ್ಕಾದರೂ ಬೆಲೆ ಗಿಟ್ಟತೈತ್ರಿ ಎಂದು ಮನ್ನೇರಾಳದ ಮಹಾಂತಮ್ಮ ತಮ್ಮ ಅನುಭವ ಹೀಗೆ ಬಿಚ್ಚಿಡುತ್ತಾರೆ.

ಮಳೆಯರದೇ ದರ್ಬಾರು:  ಎಷ್ಟೋ ಜನ ರೈತ ಮಹಿಳೆಯರು ಸ್ವತಃ ತರಕಾರಿ ಮಾರಾಟಕ್ಕಿಳಿದು ಯಾರ ಹಂಗಿಲ್ಲದೇ ನಾಲ್ಕಾರು ಕಾಸು ಸಂಪಾದಿಸುವ ಮೂಲಕ ಸಂಸಾರದ ನೊಗವನ್ನು ಹೊತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT