ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ, ಸೊಪ್ಪು, ಐಸ್‌ಕ್ರೀಂ ಮಾರಿದ ವಿದ್ಯಾರ್ಥಿಗಳು!

Last Updated 8 ಜನವರಿ 2011, 8:15 IST
ಅಕ್ಷರ ಗಾತ್ರ

ಮಡಿಕೇರಿ: ತರಕಾರಿ, ತರಕಾರಿ.., ಸೊಪ್ಪೋ ಸೊಪ್ಪು.., ಹಣ್ಣೋ ಹಣ್ಣು.., ಐಸ್‌ಕ್ರೀಂ ಐಸ್‌ಕ್ರೀಂ.., ಟೊಮ್ಯಾಟೋ ಕೆ.ಜಿ.ಗೆ ಬರೀ 25 ರೂಪಾಯಿ! ಎಲ್ಲವೂ ಫ್ರೆಶ್. ಬನ್ನಿ ಸಾರ್ ಬನ್ನಿ, ವ್ಯಾಪಾರ ಮಾಡಿ... -ಇದು ಎಲ್ಲೋ ನಗರ ಪ್ರದೇಶದ ಜನಜಂಗುಳಿಯ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿರುವ ಕೇಂದ್ರ ಎಂದು ತಿಳಿದರೆ ನಿಮ್ಮ ಊಹೆ ತಪ್ಪಾದೀತು. ಏಕೆ ಆಶ್ಚರ್ಯವೇ? ಮಡಿಕೇರಿ ತಾಲ್ಲೂಕಿನ ಹಾಕತ್ತೂರು ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಶುಕ್ರವಾರ ನಡೆದ ‘ಮಕ್ಕಳ ಸಂತೆ’ಯಲ್ಲಿ ಇಂತಹದೊಂದು ದೃಶ್ಯ ಎಲ್ಲರ ಗಮನಸೆಳೆಯಿತು.

‘ಮಕ್ಕಳ ಸಂತೆ’ಯಲ್ಲಿ ವಿದ್ಯಾರ್ಥಿಗಳು ತಮ್ಮ ಜಮೀನಿನಲ್ಲಿ ಬೆಳೆದ ಹಾಗೂ ಹೊರಗಿನಿಂದ ತಂದಿದ್ದ ವಿವಿಧ ರೀತಿಯ ತರಕಾರಿ, ಸೊಪ್ಪು, ಹಣ್ಣು, ಫ್ಯಾನ್ಸಿ ಡ್ರೆಸ್ ಮೊದಲಾದ ವಸ್ತುಗಳ ವ್ಯಾಪಾರ ಬಲು ಜೋರಾಗಿಯೇ ನಡೆಯಿತು.

ಗಣಕೆ, ಸಂಬಾರು, ಸಪ್ಪಸೀಗೆ ಮೊದಲಾದ ಸೊಪ್ಪು; ತಾಳೆ, ಸಪೋಟ, ಕಲ್ಲಂಗಡಿ, ಚಕ್ಕೋತ, ಹುಣಸೆ.. ಹೀಗೆ ವಿವಿಧ ರೀತಿಯ ಹಣ್ಣುಗಳು; ಕುಂಬಳ, ಬಾಳೆ, ಬೂದುಕುಂಬಳ, ಗೆಣಸು, ಬೆಳ್ಳಾರಿ ಸೌತೆ, ಹೀರೆ, ನುಗ್ಗೆ ಸೇರಿದಂತೆ ವಿವಿಧ ಬಗೆಯ ತರಕಾರಿ ಕಾಯಿಗಳು; ಬೀನ್ಸ್, ಆಲೂಗೆಡ್ಡೆ, ಬೀಟ್‌ರೂಟ್, ಹಾಗಲಕಾಯಿ ಜತೆಗೆ, ಐಸ್‌ಕ್ರೀಂ, ಜ್ಯೂಸ್, ಫ್ಯಾನ್ಸಿ, ಕಸೂತಿ ವಸ್ತುಗಳು ‘ಮಕ್ಕಳ ಸಂತೆ’ಯಲ್ಲಿ ಗ್ರಾಹಕರ ಮನಸೆಳೆದು ಇಷ್ಟವಾದ ಹಣ್ಣು, ತರಕಾರಿ, ಸೊಪ್ಪು ಮೊದಲಾದವನ್ನು ಕೊಂಡುಕೊಳ್ಳುವಂತೆ ಮಾಡಿತು.

ಹಾಕತ್ತೂರಿನ ಸರ್ಕಾರಿ ಪ್ರೌಢಶಾಲೆ ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ. ಈ ಶಾಲೆಯಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಎಲ್ಲ ರೀತಿಯ ಸೌಲಭ್ಯವಿದೆ. ವಿದ್ಯಾರ್ಥಿಗಳಿಗೆ ಹೊಲಿಗೆ ತರಬೇತಿ ಕೇಂದ್ರ ಕೂಡ ಇರುವುದು ವಿಶೇಷ. ಪಠ್ಯದ ಜತೆಗೆ, ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಉತ್ತಮ ಆಟದ ಮೈದಾನ, ಅಚ್ಚುಕಟ್ಟಾದ ಅಡಿಗೆ ಮನೆ ಹಾಗೂ ಉತ್ತಮ ಪರಿಸರ ಇರುವುದಕ್ಕೆ ಶಾಲಾ ಶಿಕ್ಷಕ ವೃಂದದ ಶ್ರಮ ಎದ್ದು ಕಾಣುತ್ತದೆ. ಮಕ್ಕಳಲ್ಲಿ ವ್ಯಾಪಾರಿ, ಸಂವಹನ, ವ್ಯವಹಾರಿಕ ಕೌಶಲ್ಯವನ್ನು ಮೂಡಿಸುವ ಉದ್ದೇಶದಿಂದ ‘ಮಕ್ಕಳ ಸಂತೆ’ ಹಮ್ಮಿಕೊಳ್ಳಲಾಗಿತ್ತು.

ಮಕ್ಕಳ ಸಂತೆ ಆರಂಭಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ, ‘ಕೃಷಿ, ಹೈನುಗಾರಿಕೆ, ಗುಡಿ ಕೈಗಾರಿಕೆ, ವ್ಯಾಪಾರ ಮೊದಲಾದ ವೃತ್ತಿ ಕಸುಬುಗಳಿಗೆ ತನ್ನದೇ ಆದ ಮಹತ್ವವಿದ್ದು, ಇಂತಹ ವೃತ್ತಿ ಕಸುಬುಗಳಿಗೆ ಗೌರವ ನೀಡುವುದು ಅಗತ್ಯವಾಗಿದೆ’ ಎಂದು ಪ್ರತಿಪಾದಿಸಿದರು.

‘ವಿದ್ಯಾರ್ಥಿಗಳು ವ್ಯಾಸಂಗದ ಜತೆಗೆ, ವ್ಯಾಪಾರ- ವಾಣಿಜ್ಯ ವ್ಯವಹಾರಗಳನ್ನು ತಿಳಿದುಕೊಂಡರೆ ಜೀವನ ಕೌಶಲ್ಯವನ್ನೂ ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ’ ಎಂದು ಸಲಹೆ ಮಾಡಿದರು.ಹಾಕತ್ತೂರಿನ ಸರ್ಕಾರಿ ಪ್ರೌಢಶಾಲೆ ಕಳೆದ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 93ರಷ್ಟು ಫಲಿತಾಂಶ ಪಡೆದಿದ್ದು, ಪ್ರಸಕ್ತ ಸಾಲಿನಲ್ಲಿ ಶೇ 100ರಷ್ಟು ಫಲಿತಾಂಶ ಪಡೆದರೆ ಎಲ್ಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟಿಸಿದರು. ‘ಶಕ್ತಿ’ ಪತ್ರಿಕೆಯ ಸಂಪಾದಕ ಬಿ.ಜಿ. ಅನಂತಶಯನ ಮಾತನಾಡಿ, ‘ವಿದ್ಯಾರ್ಥಿಗಳು ಓದಿನ ಜತೆಗೆ, ವ್ಯವಹಾರಿಕ ಜ್ಞಾನವನ್ನೂ ಬೆಳೆಸಿಕೊಳ್ಳಬೇಕು. ಇದರಿಂದ ತಮಗಿಷ್ಟ ಬಂದ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು’ ಎಂದು ಕಿವಿಮಾತು ಹೇಳಿದರು.

ಹಾಕತ್ತೂರು ಗ್ರಾ.ಪಂ. ಅಧ್ಯಕ್ಷ ಶರೀನ್ ಮಾತನಾಡಿ, ಮಕ್ಕಳ ಸಂತೆ ಏರ್ಪಡಿಸುವುದರಿಂದ ವಿದ್ಯಾರ್ಥಿಗಳಲ್ಲಿ ದಿನನಿತ್ಯದ ವ್ಯಾಪಾರ ಚಟುವಟಿಕೆ ಬಗ್ಗೆ ಅರಿವು ಮೂಡುತ್ತದೆ ಎಂದರು.ಜಿ.ಪಂ. ಸದಸ್ಯೆ ಬೀನಾ ಬೊಳ್ಳಮ್ಮ, ಸರ್ವ ಶಿಕ್ಷಣ ಅಭಿಯಾನದ ಕಾರ್ಯಕ್ರಮ ಅಧಿಕಾರಿ ಶಂಕರ್, ಸಾಹಿತಿ ಎನ್. ಮಹಾಬಲೇಶ್ವರಭಟ್, ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕುಶಾಲಪ್ಪ, ಶಾಲೆಯ ಸ್ಥಳ ದಾನಿಗಳಾದ ಗೌರಿ, ನಿವೃತ್ತ ಮೇಜರ್ ಜನರಲ್ ನಂದ, ಹಾಕತ್ತೂರು ಗ್ರಾ.ಪಂ. ಸದಸ್ಯರಾದ ಶಾರದಾ, ಗಂಗಾಧರ, ಮಲ್ಲಿಕಾ ರೈ, ಉಷಾರಾಣಿ, ಪುಟ್ಟಯ್ಯ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮತ್ತಿತರರು ಪಾಲ್ಗೊಂಡಿದ್ದರು. ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯ ಕೆ.ಎ. ರಾಮಚಂದ್ರ ಸ್ವಾಗತಿಸಿದರು. ಶಾಲೆಯ ಸಹ ಶಿಕ್ಷಕಿ ಪದ್ಮಾವತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT