ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಗತಿ ಬಹಿಷ್ಕಾರ: ಶಿಕ್ಷಕ ಪರಿಷತ್ ಎಚ್ಚರಿಕೆ

Last Updated 5 ಅಕ್ಟೋಬರ್ 2012, 19:20 IST
ಅಕ್ಷರ ಗಾತ್ರ

ಬೆಂಗಳೂರು: `ರಾಜ್ಯ ಸರ್ಕಾರವು ಗ್ರಾಮೀಣ ಆರೋಗ್ಯ ಆಯೋಗವನ್ನು ರಚಿಸಿ ಅದರ ಅಧ್ಯಕ್ಷ ಸ್ಥಾನಕ್ಕೆ ಕುಲಪತಿ ಡಾ.ಎನ್.ಪ್ರಭುದೇವ್ ಅವರನ್ನು ನೇಮಕ ಮಾಡಿದೆ. ಆ ಮೂಲಕ ಅವರು ಗೌರವಯುತವಾಗಿ ವಿಶ್ವವಿದ್ಯಾಲಯದಿಂದ ನಿರ್ಗಮಿಸಲು ಅವಕಾಶ ಮಾಡಿಕೊಟ್ಟಿದೆ. ಆದರೆ ಪ್ರಭುದೇವ್ ಅವರು ಎರಡೂ ಹುದ್ದೆಗಳನ್ನು ನಿರ್ವಹಿಸುತ್ತೇನೆಂದು ಹಟ ಹಿಡಿದಿರುವುದು ಅಕ್ಷಮ್ಯ~ ಎಂದು ಬೆಂಗಳೂರು ವಿವಿ ಶಿಕ್ಷಕರ ಪರಿಷತ್ತು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡ ಶಿಕ್ಷಕರ ಸಂಘಗಳು ಖಂಡಿಸಿವೆ.

ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಬಿ. ಹೊನ್ನು ಸಿದ್ಧಾರ್ಥ ಮತ್ತು ಸಂಘದ ಅಧ್ಯಕ್ಷ ಡಾ.ಎಂ.ನಾರಾಯಣಸ್ವಾಮಿ, `ಕುಲಪತಿ ಹುದ್ದೆಗೆ ರಾಜೀನಾಮೆ ನೀಡಿ ವಿವಿಯಿಂದ ನಿರ್ಗಮಿಸುವಂತೆ ರಾಜ್ಯ ಸರ್ಕಾರ ಪ್ರಭುದೇವ್‌ಗೆ ಸೂಚಿಸಬೇಕು. ಇಲ್ಲದಿದ್ದರೆ ಪ್ರಭುದೇವ್ ವಿವಿ ಬಿಟ್ಟು ಹೋಗುವವರೆಗೆ ತರಗತಿ ಬಹಿಷ್ಕಾರ, ಮುಷ್ಕರ, ಧರಣಿ ಸತ್ಯಾಗ್ರಹ ನಡೆಸಲಾಗುವುದು~ ಎಂದು ಎಚ್ಚರಿಕೆ ನೀಡಿದರು.

`ಕುಲಪತಿ ಹುದ್ದೆಯಿಂದ ಯಾರನ್ನೇ ಆಗಲಿ ವಜಾ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಹೀಗಾಗಿ ಸರ್ಕಾರ, ಬೆಂಗಳೂರು ವಿವಿ ಅವನತಿಯನ್ನು ತಡೆಯುವ ಸಲುವಾಗಿ ಪ್ರಭುದೇವ್ ಅವರನ್ನು ಆರೋಗ್ಯ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದೆ~ ಎಂದು ಅವರು ವ್ಯಾಖ್ಯಾನಿಸಿದರು.

`3 ವರ್ಷ 10 ತಿಂಗಳಿಂದ ಕುಲಪತಿಯಾಗಿರುವ ಪ್ರಭುದೇವ್ ವಿವಿಗೆ ಯಾವ ಕೊಡುಗೆಯನ್ನೂ ನೀಡಿಲ್ಲ. ಬದಲಿಗೆ ವಿದ್ಯಾರ್ಥಿಗಳು, ಶಿಕ್ಷಕರ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದೀಗ ಸರ್ಕಾರದ ಆದೇಶವನ್ನು ಪಾಲಿಸದೇ ವಿವಿ ಹಿತಕ್ಕೆ ಧಕ್ಕೆ ಉಂಟು ಮಾಡಲು ಹುನ್ನಾರ ನಡೆಸಿದ್ದಾರೆ~ ಎಂದು ಅವರು ಆರೋಪಿಸಿದರು.

`ಪ್ರಭುದೇವ್ ಅವರ ಸರ್ವಾಧಿಕಾರಿ ಧೋರಣೆ, ಸೇಡಿನ ಮನೋಭಾವ, ಸ್ವಜನ ಪಕ್ಷಪಾತ, ತಾರತಮ್ಯ, ಒಡೆದು ಆಳುವ ನೀತಿಗಳಿಂದಾಗಿ ವಿವಿ ಅವನತಿಯ ಅಂಚಿಗೆ ಬಂದು ನಿಂತಿದೆ~ ಎಂದು ಅವರು ದೂರಿದರು.

ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಹೊಸ ನಿಯಮಗಳ ಪ್ರಕಾರ ಬೋಧಕ ಸಿಬ್ಬಂದಿಗೆ ಬಡ್ತಿ ಅವಕಾಶಗಳನ್ನು ಕೊಡದಿರುವುದು ಸೇರಿದಂತೆ 19 ಸಮಸ್ಯೆಗಳಿಗೆ ಕುಲಪತಿಗಳೇ ಕಾರಣ ಎಂದು ಪಟ್ಟಿ ಮಾಡಿದರು.

ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ.ಮುನಿರಾಜಪ್ಪ ಮಾತನಾಡಿ, `ಆರೋಗ್ಯ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡ ಮೇಲೆ ಪ್ರಭುದೇವ್ ಅವರು ತಕ್ಷಣ ರಾಜೀನಾಮೆ ನೀಡಬೇಕಿತ್ತು. ಅದನ್ನು ಬಿಟ್ಟು ಕಡತ ನೋಡುವುದಿಲ್ಲ, ಆಡಳಿತ ವ್ಯವಹಾರಗಳಲ್ಲಿ ಭಾಗವಹಿಸುವುದಿಲ್ಲ, ಸುಮ್ಮನೆ ವಿವಿಗೆ ಬರುತ್ತೇನೆ ಎಂದು ಹೇಳಿದ್ದಾರೆ. ಹಾಗಾದರೆ ಅವರು ವಿವಿಗೆ ಯಾಕೆ ಬರಬೇಕು~ ಎಂದು ಪ್ರಶ್ನಿಸಿದರು.

`ಬಹುತೇಕ ಎಲ್ಲ ವಿಭಾಗಗಳಲ್ಲಿ ಕುಡಿಯುವ ನೀರು, ಶೌಚಾಲಯ, ಪ್ರಯೋಗಾಲಯಗಳಿಲ್ಲದೇ ಮೂಲಸೌಕರ್ಯಗಳ ಕೊರತೆ ಇದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಪ್ರಭುದೇವ್ ಸ್ಪಂದಿಸಿಲ್ಲ. ಶೈಕ್ಷಣಿಕ ವಾತಾವರಣ ಕಲುಷಿತಗೊಳ್ಳಲು ಕಾರಣರಾಗಿದ್ದಾರೆ~ ಎಂದು ಅವರು ಟೀಕಿಸಿದರು.

ಪರಿಷತ್ತಿನ ಕಾರ್ಯದರ್ಶಿ ಡಾ.ಎಂ.ಮುನಿರಾಜು, ಮಾಜಿ ಕಾರ್ಯದರ್ಶಿ ಪ್ರೊ.ರಾಮಚಂದ್ರೇಗೌಡ, ಸಂಘದ ಗೌರವ ಕಾರ್ಯದರ್ಶಿ ಡಾ.ಎಂ.ರಘುನಂದನ ಮೊದಲಾದವರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕುಲಪತಿ ರಾಜೀನಾಮೆಗೆ ಆಗ್ರಹಿಸಿ ಧರಣಿ
`ವಿಶ್ವವಿದ್ಯಾಲಯದ ಆಡಳಿತ ಕುಸಿಯಲು ಕಾರಣರಾದ ಪ್ರಭುದೇವ್ ಅವರು ಕೂಡಲೇ ರಾಜೀನಾಮೆ ನೀಡಬೇಕು~ ಎಂದು ಆಗ್ರಹಿಸಿ ಬೆಂಗಳೂರು ವಿವಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಹಾಗೂ ದಿನಗೂಲಿ ನೌಕರರ ಸಂಘಗಳ ಸದಸ್ಯರು ಕುಲಪತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

`ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ನಿರ್ದೇಶನದಂತೆ ಪಿಎಚ್‌ಡಿ ವ್ಯಾಸಂಗಕ್ಕೆ ಕಡ್ಡಾಯ ಶಿಕ್ಷಣದ (ಕೋರ್ಸ್ ವರ್ಕ್) ಪಠ್ಯವನ್ನು ರಚಿಸಿಲ್ಲ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ ಪಡೆಯಲು ಸಾಧ್ಯವಾಗುತ್ತಿಲ್ಲ~ ಎಂದು ಒಕ್ಕೂಟದ ಸಂಚಾಲಕರಾದ ಗೋವಿಂದಯ್ಯ, ರವಿಕುಮಾರ್, ಆರ್.ಶ್ರೀನಿವಾಸ್ ಮೊದಲಾದವರು ಆರೋಪಿಸಿದರು.

ದಿನಗೂಲಿ ನೌಕರರ ಸಂಘದ ಮುಖಂಡರಾದ ಸಂಪತ್, ಶಿವು, ಬಸವರಾಜು ಮಾತನಾಡಿ, `ನಾವು ಹತ್ತು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮನ್ನು ಕಾಯಂ ಮಾಡಿಲ್ಲ. ನಮಗೆ ಈಗಲೂ ತಿಂಗಳಿಗೆ 2 ರಿಂದ 3 ಸಾವಿರ ರೂಪಾಯಿ ಮಾತ್ರ ವೇತನ ನೀಡಲಾಗುತ್ತಿದೆ. ಇದನ್ನು ಹೆಚ್ಚಿಸಬೇಕು~ ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರ ಬಳಿಗೆ ಬಂದ ಕುಲಸಚಿವ ಪ್ರೊ.ಬಿ.ಸಿ.ಮೈಲಾರಪ್ಪ, `ನಿಮ್ಮ ಬೇಡಿಕೆಗಳನ್ನು ಸಿಂಡಿಕೇಟ್ ಸಭೆಯ ಮುಂದಿಟ್ಟು, ಒಪ್ಪಿಗೆ ಪಡೆಯಲು ಪ್ರಯತ್ನಿಸುತ್ತೇನೆ~ ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT