ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಗೆಲೆ ಹೊತ್ತಿ ಉರಿದಾಗ...

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಸಂತ ಕಾಲದಲ್ಲಿ ಮರದ ಹಣ್ಣೆಲೆಗಳು ಉದುರಿ ಹೋಗುವುದು ಪ್ರಕೃತಿಯ ಸಹಜ ಕ್ರಿಯೆಯಾದ್ದರಿಂದ ರಸ್ತೆಗಳ ತುಂಬಾ ತರಗೆಲೆಗಳದ್ದೇ ಹಾಸು. ಉದ್ಯಾನಗಳಲ್ಲೂ ಇದು ಸ್ವಾಭಾವಿಕ.

ಸಿಲಿಕಾನ್ ಸಿಟಿಯಲ್ಲಿ 850 ಕ್ಕೂ ಹೆಚ್ಚು ಉದ್ಯಾನಗಳಿವೆ. 192.19 ಎಕರೆ ವಿಸ್ತೀರ್ಣದಲ್ಲಿರುವ ಕಬ್ಬನ್ ಉದ್ಯಾನದಲ್ಲಿ ವಿವಿಧ ಜಾತಿಯ ವೈವಿಧ್ಯಮಯ ಮರಗಳಿವೆ. ಹಸಿರ ನಡುವೆಯೂ ವಿಭಿನ್ನ ಬಗೆಯ ಹೂವುಗಳಿಂದಲೂ ಜನರನ್ನು ಆಕರ್ಷಿಸುತ್ತಿದೆ. ಪ್ರಕೃತಿಯ ಸೌಂದರ್ಯ ಆಸ್ವಾದಿಸುವ ಸಲುವಾಗಿಯೇ ವೃದ್ಧರು, ಪ್ರೇಮಿಗಳು, ಪ್ರವಾಸಿಗರು ಇಲ್ಲಿಗೆ ಬರುವುದು ಸಾಮಾನ್ಯ. ಇವರನ್ನೆಲ್ಲ ನಂಬಿಕೊಂಡು ತುತ್ತಿನ ಚೀಲ ತುಂಬಿಸಿಕೊಳ್ಳುವ ಬೀದಿ ವ್ಯಾಪಾರಿಗಳು ಸಹ ಈ ಉದ್ಯಾನದ ಅಂಗವೇ ಆಗಿದ್ದಾರೆ. ಆದರೆ ಇಂತಹ ಉದ್ಯಾನದಲ್ಲಿ ಮೇಲಿಂದ ಮೇಲೆ ತರಗೆಲೆಗಳಿಗೆ ಬೆಂಕಿ ಹಚ್ಚುವ ಪ್ರಕರಣಗಳು ಸಾಮಾನ್ಯವಾಗಿದೆ!

ಎಲೆ ಏಕೆ ಉದುರುತ್ತದೆ?

ಬೇಸಿಗೆಯಲ್ಲಿ ಹೆಚ್ಚುವ ಭೂಮಿಯ ತಾಪವನ್ನು ಕಡಿಮೆಗೊಳಿಸುವ ಸಲುವಾಗಿಯೇ ಪ್ರಕೃತಿಯು ಮರದಲ್ಲಿರುವ ಹಣ್ಣೆಲೆಗಳನ್ನು ಉದುರಿಸಿ ಭೂಮಿಯನ್ನು ತಂಪಾಗಿಸುತ್ತದೆ. ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾದಾಗ ಎಲೆಗಳ ಮೂಲಕ ವಾತಾವರಣಕ್ಕೆ ನೀರು ಆವಿಯಾಗುವುದನ್ನು ತಪ್ಪಿಸಲು ಉದುರುತ್ತದೆ. ಪ್ರಖರ ಸೂರ್ಯನ ಕಿರಣಗಳು ಭೂಮಿಯನ್ನು ನೇರವಾಗಿ ತಲುಪಿದರೆ ಮಣ್ಣಿನಲ್ಲಿರುವ ಸೂಕ್ಷ್ಮಾತಿ ಸೂಕ್ಷ ಜೀವಿಗಳು ಸಾಯುತ್ತವೆ. ಆದರೆ ಬಿದ್ದ ತರಗೆಲೆಗಳು ಸೂರ್ಯನ ಕಿರಣದಿಂದ ಸೂಕ್ಷ್ಮಜೀವಿಗಳನ್ನು ರಕ್ಷಿಸುತ್ತದೆ. ಇದರೊಂದಿಗೆ ತರಗೆಲೆಗಳು ಕ್ರಮೇಣ ಕೊಳೆತು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತದೆ.

ಆದರೆ ಮಣ್ಣಿನ ಫಲವತ್ತತೆ ಹೆಚ್ಚಿಸುವ ಇಂತಹ ತರಗೆಲೆಗಳನ್ನು ಬೆಂಕಿ ಹಚ್ಚಿ ಸುಡಲಾಗುತ್ತಿದೆ. ಉದ್ಯಾನಕ್ಕೆ ನಿತ್ಯ ಭೇಟಿ ನೀಡುವ ಸಾವಿರಾರು ಮಂದಿಯಲ್ಲಿ ಯಾರಾದರೊಬ್ಬರ ಬೇಜವಾಬ್ದಾರಿತನ ಮತ್ತು ನಿರ್ವಹಣೆಕಾರರೂ ಸ್ವಲ್ಪ ನಿರ್ಲಕ್ಷ್ಯ ತೋರಿದರೂ ತರಗೆಲೆಗಳಿಗೆ ಬೆಂಕಿ ಹತ್ತಿ ಉರಿಯುವ ಸಾಧ್ಯತೆ ಹೆಚ್ಚೇ ಇರುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಬಾರದು ಎಂಬ ಕಾನೂನಿದ್ದರೂ ಅದನ್ನು ಅಸಡ್ಡೆ ಮಾಡುವವರೇ ಹೆಚ್ಚು. ಉದ್ಯಾನಕ್ಕೆ ಭೇಟಿ ನೀಡುವ ಧೂಮಪಾನಿಗಳು ಎಲ್ಲೆಂದರಲ್ಲಿ ಉರಿಯುವ ಸಿಗರೇಟುಗಳನ್ನು ಎಸೆಯುತ್ತಿರುವುದರಿಂದಲೂ ಇಂತಹ ಅನಾಹುತ ಸಂಭವಿಸುತ್ತಿದೆ.

ಪ್ರತಿ ದಿನ ಉದುರುವ ತರಗೆಲೆಗಳನ್ನು ಒಟ್ಟು ಮಾಡಿ ಉದ್ಯಾನದಲ್ಲಿರುವ ಇಂಗು ಗುಂಡಿಗೆ ತುಂಬಿಸಲಾಗುತ್ತದೆ. ಆದರೂ ಕೆಲವೊಮ್ಮೆ ಹಾಗೇ ಬಿಟ್ಟ ಮತ್ತು ಹೊಸದಾಗಿ ಉದುರುವ ಎಲೆಗಳು ಬೆಂಕಿಗೆ ಆಹುತಿಯಾಗುತ್ತಿದೆ.
ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ  ಮಾತನಾಡಿದ ಪರಿಸರವಾದಿ ಅ.ನ.ಯಲ್ಲಪ್ಪ ರೆಡ್ಡಿ, `ತರಗೆಲೆಗಳಿಗೆ ಬೆಂಕಿ ಹಚ್ಚುವುದರಿಂದ ಪರಿಸರದಲ್ಲಿ ಇಂಗಾಲದ ಅಂಶ ಹೆಚ್ಚಾಗುತ್ತದೆ. ಇದರಿಂದ ತಾಪಮಾನ ಏರುತ್ತದೆ. ಉಷ್ಣಾಂಶ ತಾಳಲಾರದೇ ಸೂಕ್ಷ್ಮಾತಿ ಸೂಕ್ಷ್ಮ ಜೀವಿಗಳು ಸಾಯುತ್ತವೆ. ದಟ್ಟ ಹೊಗೆಯು ಸಣ್ಣಪುಟ್ಟ ಪಕ್ಷಿಗಳನ್ನು ಕೂಡ ಆಹುತಿಗೆ ತೆಗೆದುಕೊಳ್ಳುತ್ತದೆ. ಈ ಬಗ್ಗೆ ತೋಟಗಾರಿಕೆ ಇಲಾಖೆಯು ಎಚ್ಚರದಿಂದ ಕೆಲಸ ಮಾಡಬೇಕು~ ಎಂದು ಹೇಳಿದರು.

`ಉದುರುವ ಎಲೆಯು ಸಹ ಪ್ರಾಕೃತಿಕ ಸಂಪತ್ತು. ಉದ್ಯಾನದ ರಸ್ತೆಯ ಮೇಲೆ ಬೀಳುವ ತರಗೆಲೆಗಳನ್ನು ಪುಡಿ ಮಾಡಿ, ಎರೆಹುಳವನ್ನು ಮಿಶ್ರಣ ಮಾಡಿದರೆ ಉತ್ತಮ ಸಾವಯವ ಗೊಬ್ಬರವಾಗುತ್ತದೆ. ಇದಕ್ಕಾಗಿ ಬಿಬಿಎಂಪಿ ತೋಟಗಾರಿಕಾ ವಿಭಾಗವು ತರಗೆಲೆಯನ್ನು ಪುಡಿಮಾಡುವ ಯಂತ್ರಗಳನ್ನು ಖರೀದಿಸಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕಷ್ಟೆ~ ಎಂದರು.

`ಆದಷ್ಟು ಉದ್ಯಾನದ ಒಳಭಾಗದಲ್ಲಿ ಬೀಳುವ ತರಗೆಲೆಗಳನ್ನು ಹಾಗೇ ಉಳಿಸಿಕೊಳ್ಳುವುದು ಸೂಕ್ತ. ಇದರಿಂದ ಫಲವತ್ತತೆಯು ಹೆಚ್ಚುತ್ತದೆ. ಉದ್ಯಾನದಲ್ಲಿ ಸಾಕಷ್ಟು ವೈವಿಧ್ಯಮಯ ಹೂಗಿಡಗಳನ್ನು ಬೆಳೆಸಲು ಇದರು ಸಹಕಾರಿಯಾಗುತ್ತದೆ. ಬೆಂಕಿ ಅನಾಹುತದ ಪ್ರಕರಣಗಳನ್ನು ತಪ್ಪಿಸಲು ತೋಟಗಾರಿಕಾ ಇಲಾಖೆಯು ವಿಶೇಷ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಅಗತ್ಯವಿದೆ~  ಎಂದು ತಿಳಿಸಿದರು.

ಇಲಾಖೆ ಏನು ಹೇಳುತ್ತೆ?

ಈ ಬಗ್ಗೆ ಮಾತನಾಡಿದ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಜಗದೀಶ್, `ತರಗೆಲೆಗಳಿಗೆ ಬೆಂಕಿ ಹತ್ತಿ ಉರಿದ ಪ್ರಕರಣಗಳು ಈಚೆಗೆ ನಡೆದಿದ್ದು, ಇದನ್ನು ನಿಯಂತ್ರಣದಲ್ಲಿಡಲು ಇಲಾಖೆಯು ಪ್ರಯತ್ನಿಸುತ್ತಲೇ ಇದೆ. ಇದರೊಂದಿಗೆ ಸಾರ್ವಜನಿಕರ ಸಹಕಾರವು ಅಷ್ಟೇ ಅಗತ್ಯವಾಗಿದೆ~ ಎಂದರು. 

`ವಿಧಾನಸೌಧದ ಮುಂಭಾಗದಲ್ಲಿ ನಡೆಯುತ್ತಿರುವ ಮೆಟ್ರೊ ಕಾಮಗಾರಿ ಪರಿಣಾಮ ಕಬ್ಬನ್ ಉದ್ಯಾನದ ಬಾಲಭವನದ ಪ್ರವೇಶದ್ವಾರದಲ್ಲಿ ಜನಸಂಚಾರ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರ ಮೇಲೆ ನಿಗಾ ವಹಿಸುವುದು ಕಷ್ಟವಾಗುತ್ತಿದೆ. ಇಂತಹ ಚಟುವಟಿಕೆಗಳನ್ನು ನಿಗ್ರಹಿಸಲು ಮತ್ತು ಇಲ್ಲಿರುವ ಪ್ರಾಕೃತಿಕ ಸಂಪತ್ತನ್ನು ಕಾಪಾಡಿಕೊಳ್ಳಲು ಇಲಾಖೆಯು `ಟ್ರೀ~ ವಾರ್ಡನ್‌ಗಳನ್ನು ನೇಮಿಸಲಿದೆ ಎಂದು ಹೇಳಿದರು. 

ಯಾರು ಈ `ಟ್ರೀ~ ವಾರ್ಡನ್‌ಗಳು ?

ಲಾಲ್‌ಬಾಗ್‌ನಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ `ಟ್ರೀ~ವಾರ್ಡನ್‌ಗಳು 4 ಸದಸ್ಯರಿರುವ ಒಂದು ತಂಡ. ನಿತ್ಯ ಭೇಟಿ ನೀಡುವ ಹಾಗೂ ಉದ್ಯಾನದಲ್ಲಿ ಹೆಚ್ಚು ಸಮಯ ಕಳೆಯುವ 150 ಮಂದಿ ಸಾರ್ವಜನಿಕರಲ್ಲಿ ಕೆಲವರನ್ನು ಮಾತ್ರ ಆಯ್ಕೆ ಮಾಡಿ 5 ತಂಡಗಳಾಗಿ ರಚಿಸಲಾಗುತ್ತದೆ. ಇವರಿಗೆ ಇಲಾಖೆಯ ವತಿಯಿಂದ ಸದಸ್ಯತ್ವ ಚೀಟಿಯನ್ನು ನೀಡಲಾಗುತ್ತದೆ ಎಂದರು.

ಕಾನೂನು ಏನು ಹೇಳುತ್ತೆ?

ಕರ್ನಾಟಕ ಸ್ಥಳೀಯ ಸಂಸ್ಥೆ ಕಾಯ್ದೆ ಪ್ರಕಾರ ಉದ್ಯಾನ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ  ತರಗೆಲೆಗಳಿಗೆ ಬೆಂಕಿ ಹಚ್ಚುವುದು ಶಿಕ್ಷಾರ್ಹ ಅಪರಾಧ. ತರಗೆಲೆಗಳನ್ನು ಸಮರ್ಪಕವಾದ ಇಂಗು ಗುಂಡಿಗಳಿಗೆ ಹಾಕಿ ಚೊಕ್ಕವಾಗಿ ವಿಲೇವಾರಿ ಮಾಡಬೇಕು. ಆ ಮೂಲಕ ಪ್ರಕೃತಿ ರಕ್ಷಣೆಗೆ ಮುಂದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT