ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಬೇತಿ ಶಿಬಿರ ಬಹಿಷ್ಕರಿಸಿದ ಸದಸ್ಯರು

Last Updated 11 ಫೆಬ್ರುವರಿ 2012, 6:25 IST
ಅಕ್ಷರ ಗಾತ್ರ

ಕವಿತಾಳ: `ತರಬೇತಿಯಿಂದ ನಮಗೆ ಏನ್ ಉಪಯೋಗ, ನಿಮ್ಮ ಸಿಬ್ಬಂದಿಗೆ ತರಬೇತಿ ನೀಡಿ, ಮುಂಚಿತ ಮಾಹಿತಿ ನೀಡದೆ ಏಕಾ ಏಕಿ ಶಿಬಿರ ಏರ್ಪಡಿಸಿ ಬರೀ ದಾಖಲೆಗಾಗಿ ಕಾರ್ಯಕ್ರಮ ಮಾಡುತ್ತಿದ್ದೀರಿ ಎಂದು ಅಧಿಕಾರಳೊಂದಿಗೆ ವಾಗ್ವಾದ ಮಾಡಿದ ಸ್ಥಳೀಯ ಜನಪ್ರತಿನಿಧಿಗಳು ಸಭೆಯನ್ನು ಬಹಿಷ್ಕರಿಸಿದ ಘಟನೆ ಪಟ್ಟಣದಲ್ಲಿ ಶುಕ್ರವಾರ ನಡೆಯಿತು.

ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಕರ್ನಾಟಕ ಸಾಂಖ್ಯಿಕ ವ್ಯವಸ್ಥೆ ಅಭಿವೃದ್ದಿ ಸಂಸ್ಥೆ ಬೆಂಗಳೂರು ಮತ್ತು ಜಿಲ್ಲಾ ಸಂಖ್ಯಾ ಸಂಗ್ರಹಣ ಇಲಾಕೆ ವತಿಯಿಂದ ಪಟ್ಟಣದಲ್ಲಿ ಶುಕ್ರವಾರ ಏರ್ಪಡಿಸಿದ್ದ `ಪಹಣಿಯಲ್ಲಿ ಬೆಳೆ ವಿವರಗಳ ದಾಖಲಾತಿ ಮತ್ತು ಬೆಳೆ ಕಟಾವು ಪ್ರಯೋಗಗಳ ಮಹತ್ವ~ ಕುರಿತು ಏರ್ಪಡಿಸಿದ್ದ ತರಬೇತಿ ಶಿಬಿರವನ್ನು ಬಹಿಷ್ಕರಿಸಲಾಯಿತು.

ಅತ್ಯಂತ ಪ್ರಯಾಸಪಟ್ಟು ಕನ್ನಡದಲ್ಲಿ ಮಾತನಾಡಲು ಯತ್ನಿಸಿದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುನೀಲ್ ಬಿಸ್ವಾಸ್ ಸದಸ್ಯರ ಪ್ರಶ್ನೆಗಳಿಗೆ ಸಮರ್ಥನೆ ನೀಡಲಾರದೆ ತಡವರಿಸಿದರು.

ಇರಕಲ್‌ನಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಗ್ರಾಮಲೆಕ್ಕಿಗನ ವರ್ಗಾವಣೆ ಮಾಡುವುದಾಗಿ ತಹಸೀಲ್ದಾರರು ಬಹಿರಂಗವಾಗಿ ಹೇಳಿದ್ದರು ಆದರೆ ಕ್ರಮ ಕೈಗೊಂಡಿಲ್ಲ ಹಿರಿಯ ಅಧಿಕಾರಿಗಳೇ ಸುಳ್ಳು ಹೇಳಿದರೆ ಹೇಗೆ ಎಂದು ಅಮೀನಗಡ ಗ್ರಾಮ ಪಂಚಾಯಿತಿ ಸದಸ್ಯ ಹುಚ್ಚರಡ್ಡಿ ತರಾಟೆಗೆ ತೆಗದುಕೊಂಡರು.
 
ಗ್ರಾಮಲೆಕ್ಕಿಗರು ಕೈಗೆ ಸಿಗುತ್ತಿಲ್ಲ ಕೆಲಸಗಳು ವಿಳಂಬವಾಗುತ್ತಿವೆ ಈ ತರಬೇತಿಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅಮೀನಗಡ ಪಂಚಾಯಿತಿ ಅಧ್ಯಕ್ಷ ಮೌನೇಶ ದೊಡ್ಮನಿ, ಸಿದ್ದಲಿಂಗಪ್ಪ ಹೀರಾ, ಎಪಿಎಂಸಿ ನಿರ್ದೇಶಕ ಯಮನಪ್ಪ ದಿನ್ನಿ ಮತ್ತು ಬಲವಂತರಾಯ ವಟಗಲ್ ಅವರುಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕವಿತಾಳ, ಪಾಮನಕಲ್ಲೂರು, ಮಲ್ಲಟ ಮತ್ತು ಹಾಲಾಪುರ ಹೋಬಳಿ ವ್ಯಾಪ್ತಿಯ ಪಂಚಾಯಿತಿ ಸದಸ್ಯರಿಗೆ ತರಬೇತಿ ಹಮ್ಮಿಕೊಳ್ಳಲಾಗಿದ್ದರೂ ಬಹುತೇಕ ಮಹಿಳಾ ಸದಸ್ಯರ ಪತಿಯರು ಮತ್ತು ಸದಸ್ಯರಲ್ಲದವರು ಸಭೆಗೆ ಆಗಮಿಸಿದ್ದರು. ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ಅಧಿಕಾರಿಗಳು ಬಂದಬಂದವರಿಗೆಲ್ಲಾ ಮಾಹಿತಿ ಕಿಟ್‌ಗಳನ್ನು ವಿತರಿಸಿದರು.
 
ಸಭೆ ನಡೆಸಲು ಸಹಕರಿಸುವಂತೆ ಅಧಿಕಾರಿಗಳು ಪದೇ ಪದೇ ಮಾಡಿದ ಮನವಿಯನ್ನು ತಿರಸ್ಕರಿಸಿದ ಸದಸ್ಯರು ಸಭೆ ಬಹಿಷ್ಕರಿಸಿ ಹೊರ ನಡೆದರು. ತೋಟಗಾರಿಕೆ ಸಹಾಯಕ ನಿರ್ದೇಶಕ ಸತೀಶ, ಸಹಾಯಕ ಕೃಷಿ ನಿರ್ದೇಶಕ ಜಯಪ್ರಕಾಶ ಮತ್ತು ಶಿರಸ್ತೇದಾರ ರುದ್ರಗೌಡ ವೇದಿಕೆ ಮೇಲಿದ್ದರು. ಸಭೆ ವಿಫಲವಾದರೂ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಇನ್ನೊಂದು ದಿನ ಸಭೆ ನಡೆಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT