ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಳಬಾಳು ಹುಣ್ಣಿಮೆ: ಎಸ್.ಜಿ.ಸಿದ್ದರಾಮಯ್ಯ ವಿಷಾದ

Last Updated 6 ಫೆಬ್ರುವರಿ 2012, 10:25 IST
ಅಕ್ಷರ ಗಾತ್ರ

ಕಡೂರು (ಚಿಕ್ಕಮಗಳೂರು):`ನೆಲದ ಸಂಪತ್ತು ಕೊಳ್ಳೆಹೋಗುತ್ತಿದೆ. ರಾಜಕೀಯ ಮೌಲ್ಯಗಳು ದೂಳೀಪಟವಾಗಿವೆ. ಬದುಕಿನ ಎಲ್ಲ ಸಂಗತಿಗಳು ಅಳಿವಿನಂಚಿಗೆ ತಲುಪಿವೆ. ನಮ್ಮ ಕೃಷಿ ಜ್ಞಾನ, ಸಂಸ್ಕೃತಿ ನಾಶವಾಗುತ್ತಿದೆ. ಮತ್ತೆ ಇವೆಲ್ಲವನ್ನು ಮರುಪೂರಣಗೊಳಿಸಿಕೊಳ್ಳಲು ನಮ್ಮ ಮೂಲದ ಕಡೆಗೆ ಹೊರಳಬೇಕು~ ಎಂದು ಕವಿ ಡಾ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಪಟ್ಟಣದ ಎಪಿಎಂಸಿ ಪ್ರಾಂಗಣದ ಮಹಾಕವಿ ಲಕ್ಷ್ಮೀಶ ವೇದಿಕೆಯಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಏಳನೇ ದಿನವಾದ ಭಾನುವಾರ ಅವರು `ಶರಣರಲ್ಲಿ ಅಕಾಯಚರಿತರು~ ವಿಷಯ ಕುರಿತು ಉಪನ್ಯಾಸ ನೀಡಿದರು.

 ಜಾಗತೀಕರಣದ ಸಂದರ್ಭದಲ್ಲಿ ನಮ್ಮನ್ನು, ನಮ್ಮ ಸಂಸ್ಕೃತಿಯನ್ನು ಮರಪೂರಣಗೊಳಿಸಿಕೊಳ್ಳಲು ಬೇಕಾದ ಅಂಶ ನಮ್ಮ ಜನಪದ, ಜನಪದದಿಂದ ಬಂದಂತಹ ವಚನದಲ್ಲಿದೆ. ನಮ್ಮ ಪರಂಪರೆಯಲ್ಲಿ ಮೌಲ್ಯ, ಆದರ್ಶವಿದೆ. ಅದು ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಿದೆ. ಆದರೆ, ನಾವು ಈ ಬಗ್ಗೆ ಯೋಚಿಸುತ್ತಿಲ್ಲ.

ಜಗತ್ತಿನ ಸಾಹಿತ್ಯದಲ್ಲಿ ವಚನ ದೊಡ್ಡ ವಿಸ್ಮಯ. ನಮ್ಮ ವಚನಕಾರರು ಕಾಯಕದ ಮೂಲಕವೇ ಬದುಕು ಕಟ್ಟಿಕೊಂಡಿದ್ದರು. ವಚನಕಾರರ ಮೂಲ ಹುಡುಕಿದರೆ ಎಲ್ಲಿಯೂ ಅವರ ಗುರುತು ಸಿಗುವುದಿಲ್ಲ. ಆದರೆ, ಅವರು ತಮ್ಮ ಕಾಯಕಕ್ಕೆ ಮಾತ್ರ ಮಾನ್ಯತೆ ನೀಡಿದ್ದರು. ಸತ್ಯಶುದ್ಧ ಕಾಯಕ ಸಂಸ್ಕೃತಿ ಮೂಲಕವೇ ಬದುಕಿಗೆ ದಾರಿದೀಪವಾದ ವಚನ ಸಾಹಿತ್ಯ ಕಟ್ಟಿಕೊಟ್ಟರು ಎಂದು ಹೇಳಿದರು. 

`ಮಾಧ್ಯಮಗಳ ಸಾಮಾಜಿಕ ಹೊಣೆಗಾರಿಕೆ~ ವಿಷಯ ಕುರಿತು ಮಾತನಾಡಿದ `ಪ್ರಜಾವಾಣಿ~ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ, ಸಮಾಜದಲ್ಲಿ ಕಳೆದು ಹೋಗಿರುವ ಮೌಲ್ಯಗಳು ಮತ್ತು ಆದರ್ಶಗಳ ಮರುಸ್ಥಾಪನೆ ಮಾಡಬೇಕಾದ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದು ಹೇಳಿದರು.

ಸಮಾಜವನ್ನು ಸ್ವಚ್ಛವಾಗಿಡುವ ಜತೆಗೆ ಆದರ್ಶ ಸಮಾಜ ನಿರ್ಮಿಸುವ ಹೊಣೆಗಾರಿಕೆ ಸಮಾಜದ ಮೇಲಿದೆ. ಆದರೆ ಮಾಧ್ಯಮಗಳು ರೋಚಕ ಸುದ್ದಿಗಳನ್ನು ನೀಡುವ ಭರಾಟೆಯಲ್ಲಿ ಸಾತ್ವಿಕರ ಕೂಗು ಕಳೆದು ಹೋಗುತ್ತಿದೆ.
 
ಇಂದು ಸಾತ್ವಿಕರು ಚುನಾವಣೆಯಲ್ಲಿ ನಿಂತು ಆಯ್ಕೆಯಾಗುವ ಸ್ಥಿತಿಯಿಲ್ಲ. ಇತ್ತೀಚಿನ ಚುನಾವಣೆಗಳನ್ನು ನೋಡಿ ದರೆ ಮತದಾರರು ಕೂಡ ಆಸೆಬುರುಕ ರಾಗಿ ರುವುದು ಕಾಣಿಸುತ್ತಿದೆ. ಇದನ್ನು ನಿಯಂತ್ರಿಸಲು ಗುರುಪೀಠಗಳಿಂದಲೂ ಆಗುತ್ತಿಲ್ಲ ಎಂದು ವಿಷಾದಿಸಿದರು. ಸಮಾಜವನ್ನು ಒಂದುಗೂಡಿಸುವ ಕೆಲಸ ಮಾಧ್ಯಮಗಳಿಂದ ಆಗಬೇಕು.
 
ಇಲ್ಲದಿದ್ದರೆ ರಾಜಕಾರಣಿಗಳು ಮತ್ತು ಪತ್ರಕರ್ತರ ನಡುವೆ ಯಾವುದೇ ವ್ಯತ್ಯಾಸವಿಲ್ಲದಂತಾಗುತ್ತದೆ. ಪತ್ರಕರ್ತ ಯಾವಾಗಲು ಬಡವನೇ ಆಗಿರಬೇಕು. ಇಲ್ಲದಿದ್ದರೆ ಆತನ ಲೇಖನಿ ಅಂತಃಸತ್ವ ಕಳೆದುಕೊಂಡು ದುರ್ಬಲವಾಗುವ ಸಾಧ್ಯತೆ ಇರುತ್ತದೆ. ಸಾತ್ವಿಕರ, ಬಡವರ ಕೂಗಿಗೆಗೆ ಧ್ವನಿ ನೀಡಲು ಸಾಧ್ಯ ವಾಗು ವುದಿಲ್ಲ ಎಂದು ಅಭಿಪ್ರಾಯಪಟ್ಟರು.

ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕಾಗಿನೆಲೆ ಕನಕಗುರು ಪೀಠದ ಈಶ್ವರಾನಂದ ಸ್ವಾಮೀಜಿ, ಕೆರೆಗೋಡಿ -ರಂಗಾಪುರ ಮಠದ ಗುರುಪರದೇಶಿಕೇಂದ್ರ ಸ್ವಾಮೀಜಿ, ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಸಂಸದ ಜಿ.ಎಸ್.ಬಸವರಾಜು, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಶಾಸಕರಾದ ಡಿ.ಎಸ್.ಸುರೇಶ್, ಡಾ.ವೈ.ಸಿ. ವಿಶ್ವನಾಥ್, ಬಿ.ಸಿ.ನಾಗೇಶ್, ಎಸ್.ಕೆ.ಬಸವರಾಜನ್, ಮಾಜಿ ಸಚಿವ ಕೋಳಿವಾಡ, ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್, ಡಾ.ಎಸ್.ಪ್ರಭುಕುಮಾರ್,  ಸಾಹಿತಿ ಅಸಾದುಲ್ಲಾ ಬೇಗ್ ಇನ್ನಿತರರು ಇದ್ದರು.

`ರಾಜಕೀಯದಲ್ಲಿ ಮೌಲ್ಯ ಉಳಿದಿಲ್ಲ~
ಕಡೂರು: ಮಹಿಳೆಯರಲ್ಲಿ ತಿಳಿವಳಿಕೆ ಸ್ವಾವಲಂಬನೆ ಆತ್ಮವಿಶ್ವಾಸ ಇದ್ದು, ಮುಂದಿನ ದಿನಗಳು ಮಹಿಳೆಯರ ದಿನಗಳಾಗಲಿ ಎಂದು ವಿಧಾನಪರಿಷತ್ ವಿರೋಧಪಕ್ಷದ ನಾಯಕಿ ಮೋಟಮ್ಮ ಆಶಿಸಿದರು.

 ಕಡೂರು ಎಪಿಎಂಸಿ ಪ್ರಾಂಗಣದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಏಳನೇ ದಿನ ಭಾನುವಾರ ಅವರು ಮಾತನಾಡಿದರು. 

 ಇಂದು ಎಲ್ಲ ರಂಗಗಳನ್ನು ಅವಲೋಕಿಸಿದಾಗ ಮೌಲ್ಯಗಳು ಗಾಳಿಗೆ ತೂರಲ್ಪಟ್ಟಿವೆ. ರಾಜಕೀಯ ಕ್ಷೇತ್ರದಲ್ಲಿ ಮೌಲ್ಯಗಳು ಉಳಿದಿಲ್ಲ. ರಾಜಕೀಯ ಎನ್ನುವುದು ಮಾರುಕಟ್ಟೆಯಾಗಿದೆ. ಧಾರ್ಮಿಕ ಕ್ಷೇತ್ರಗಳಲ್ಲಿಯೂ ಒಡಕಿದೆ.

ಇನ್ನು ಕುಟುಂಬಗಳಲ್ಲಿ ಇಂದಿನ ಮಕ್ಕಳು ತಂದೆ-ತಾಯಿಯರ ಮಾತುಗಳನ್ನು ಕೇಳುವುದಿಲ್ಲ. ಏನಾದರೂ ಹೇಳಿದರೆ ತಲೆಮಾರಿನ ಅಂತರ ಎನ್ನುತ್ತಾರೆ. ಇದರಿಂದ ಕುಟುಂಬದಲ್ಲಿ ಪ್ರೀತಿ ಎಲ್ಲಿದೆ? ಮಕ್ಕಳು ಹೆತ್ತವರನ್ನು ಮರೆತು ವೃದ್ಧಾಶ್ರಮಗಳಿಗೆ ಅಟ್ಟುವ ಕಾಲ ಬಂದಿದೆ ಎಂದು ವಿಷಾದಿಸಿದರು.

  ಸ್ತ್ರೀಶಕ್ತಿ ಸಂಘಗಳು ಇಂದು ಚುನಾವಣೆ ಕಾಲದಲ್ಲಿ ರಾಜಕೀಯ ವ್ಯಾಪಾರಕ್ಕೆ ಸೀಮಿತಗೊಂಡಿವೆ. ಎಲ್ಲೋ ಕೆಲವರು ಸಂಘಗಳನ್ನು ಉಳಿಸಿ, ಬೆಳೆಸಿ, ಉಳಿತಾಯ ಮಾಡಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಏನೇ ಆದರೂ ಮಹಿಳೆಗೆ ಸ್ವಾವಲಂಬನೆ ಕಲಿಸುವ, ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದರು.

  ಇಂದಿನ ಮಕ್ಕಳಿಗೆ ಇಲ್ಲಿರುವ ನಾವೆಲ್ಲಾ ಒಂದೇ ಎಂಬ ಭಾವನೆ ಮೂಡಿಸಿದರೆ ಮುಂದೆ ಮೇಲು-ಕೀಳಿಲ್ಲದ ಸಮಾಜ ನಿರ್ಮಾಣವಾಗುತ್ತದೆ. ಇಲ್ಲದಿದ್ದಲ್ಲಿ ಸಮಾಜಘಾತುಕ ಶಕ್ತಿಗಳ ಕೈ ಮೇಲಾಗುತ್ತದೆ. ಅದಕ್ಕಾಗಿ ಮಕ್ಕಳಲ್ಲಿ ಸೌಹಾರ್ದತೆ ಕಲಿಸಿ ಎಂದು ಪೋಷಕರಿಗೆ ಕರೆ ನೀಡಿದರು.

 ತರಳಬಾಳು ಹುಣ್ಣಿಮೆ ಜಾತಿ-ಮತ-ಪಂಥ ಬೇಧವಿಲ್ಲದ, ರಾಜಕೀಯ,  ಸಾಹಿತ್ಯ, ಸಾಂಸ್ಕೃತಿಕ ಸೌಹಾರ್ದ ಸಂಗಮವಾಗಿದೆ.ಒಡೆದ ಮನಸ್ಸುಗಳನ್ನು ಕೂಡಿಸುವ, ಮೌಲ್ಯಗಳನ್ನು ಹುಡುಕುವ ಕಟ್ಟುವ ಕಾಲ ಬಂದಿದೆ ಎಂದರು. ಭಾಷಣ ಮುಗಿಯುವ ಮುನ್ನ ಮೋಟಮ್ಮ  ಗಣಪತಿ ಸ್ತುತಿ  ಹಾಗೂ ಜಾನಪದ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಸಭಿಕರ ಮನರಂಜಿಸಿದರು.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT