ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಾತುರಿಯಲ್ಲಿ ಪುಸ್ತಕ ಖರೀದಿಗೆ ಹುನ್ನಾರ?

Last Updated 30 ಮೇ 2012, 19:30 IST
ಅಕ್ಷರ ಗಾತ್ರ

ಮೈಸೂರು: ಸಾರ್ವಜನಿಕ ಗ್ರಂಥಾಲಯದ ಪುಸ್ತಕ ಆಯ್ಕೆ ಸಮಿತಿಯು 2011ನೇ ಸಾಲಿನಲ್ಲಿ ಆಯ್ಕೆಗಾಗಿ ಬಂದಿರುವ ಪುಸ್ತಕಗಳನ್ನು ತರಾತುರಿಯಲ್ಲಿ ಆಯ್ಕೆ ಮಾಡಿ, ಖರೀದಿಗೆ ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಪ್ರತಿ ವರ್ಷ ಪುಸ್ತಕ ಖರೀದಿಗೆ ಬಂದ ಅರ್ಜಿಗಳನ್ನು ಪರಿಶೀಲಿಸಿ ಜುಲೈ ಮೊದಲ ವಾರದಲ್ಲಿ ಪಟ್ಟಿ ಬಿಡುಗಡೆ ಮಾಡಲು ಗ್ರಂಥಾಲಯ ಇಲಾಖೆ ನೀಲನಕ್ಷೆ ರೂಪಿಸುತ್ತಿತ್ತು. ಆದರೆ, ಈ ಬಾರಿ ತರಾತುರಿಯಲ್ಲಿ ಖರೀದಿಗೆ ಮುಂದಾಗಿರುವುದು ಸಾಹಿತ್ಯಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

2011ನೇ ಸಾಲಿಗೆ 7 ಸಾವಿರ ಪುಸ್ತಕಗಳು ಆಯ್ಕೆಗಾಗಿ ಬಂದಿದ್ದು, ಈ ಪುಸ್ತಕಗಳನ್ನು ಲೇಖಕರು, ಪ್ರಕಾಶಕರು ಫೆಬ್ರವರಿ 15ರಂದೇ ಸಲ್ಲಿಸಿದ್ದಾರೆ. ಆದರೆ, ಮೂರೂವರೆ ತಿಂಗಳಾದರೂ ಆಯ್ಕೆಗಾಗಿ ಬಂದಿರುವ ಪುಸ್ತಕಗಳ ಪಟ್ಟಿಯನ್ನು ಸಿದ್ಧಪಡಿಸಿಲ್ಲ. ಇದೀಗ ಜೂ. 18, 19 ಹಾಗೂ 20ರಂದು ಆಯ್ಕೆ ಸಮಿತಿ ಸಭೆ ಕರೆಯಲಾಗಿದೆ. ಜುಲೈನಲ್ಲಿ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಲು ಸಮಿತಿ ಉದ್ದೇಶಿಸಿದೆ.

ಇದರಿಂದಾಗಿ ಕೇವಲ ಒಂದೂವರೆ ತಿಂಗಳಿನಲ್ಲಿ ಏಳು ಸಾವಿರ ಪುಸ್ತಕಗಳನ್ನು ಓದಿ ಆಯ್ಕೆ ಮಾಡಲು ಹೊರಟಿರುವ ಕ್ರಮದ ಹಿಂದೆ ಭ್ರಷ್ಟಾಚಾರ, ದುರಾಡಳಿತ, ಬೇಜವಾಬ್ದಾರಿ ಹಾಗೂ ಪುಸ್ತಕ ಮಾಫಿಯಾ ಕೆಲಸ ಮಾಡುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ.

ಪುಸ್ತಕ ಪ್ರೇಮಿಗಳ ನಿರೀಕ್ಷೆ 
* ಆಯ್ಕೆಗೆ ಬಂದಿರುವ ಪುಸ್ತಕಗಳನ್ನು ಪಟ್ಟಿ ಮಾಡಿ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗುವ ಮೊದಲು ಪುಸ್ತಕಗಳ ಪ್ರದರ್ಶನ ಏರ್ಪಡಿಸಿ, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಬೇಕು.
* ಆಯ್ಕೆಗೆ ಬಂದಿರುವ ಪುಸ್ತಕಗಳ ಪಟ್ಟಿಯನ್ನು ಅಂತರ್ಜಾಲದಲ್ಲಿ ಪ್ರಕಟಿಸಬೇಕು.
* ಪುಸ್ತಕ ಪ್ರಥಮ ಮುದ್ರಣ ಆಗಿರುವ ಬಗ್ಗೆ ತಿಳಿದುಕೊಳ್ಳಲು ಪುಸ್ತಕದ ಹೆಸರು, ಲೇಖಕರ ಹೆಸರುಗಳ ದೃಢೀಕರಣ ಪತ್ರವನ್ನು ಪಡೆಯಬೇಕು.

* ಬೆಂಗಳೂರು ನಗರದಲ್ಲಿರುವ 5 ವಲಯಗಳ ಉಪನಿರ್ದೇಶಕರು ಆಯ್ಕೆಗಾಗಿ ಬಂದಿರುವ ಪುಸ್ತಕಗಳನ್ನು ತಮ್ಮ ಕಚೇರಿಯು ಕಳೆದ 10 ವರ್ಷಗಳಲ್ಲಿ ಖರೀದಿಸಿಲ್ಲ ಎಂದು ದೃಢೀಕರಿಸಿರಬೇಕು.
* 10 ವರ್ಷಗಳ ನಂತರ ಮುದ್ರಣಗೊಂಡ ಪುಸ್ತಕಗಳನ್ನು ಖರೀದಿಸಬಹುದು.
* ಸಾರ್ವಜನಿಕ ಪ್ರದರ್ಶನದ ನಂತರ ಬಂದ ಆಕ್ಷೇಪಣೆ ಪರಿಗಣಿಸಿ, ಸಿದ್ಧಪಡಿಸಿದ ಆಯ್ಕೆ ಪಟ್ಟಿ ಪುಸ್ತಕಗಳನ್ನು ಆಯ್ಕೆ ಸಮಿತಿ ಮುಂದಿಡಬೇಕು.
*ಆಯ್ಕೆ ಸಮಿತಿಯು ಸಾಕಷ್ಟು ಕಾಲಾವಕಾಶ ತೆಗೆದುಕೊಂಡು ಜವಾಬ್ದಾರಿಯಿಂದ ಉತ್ತಮ ಪುಸ್ತಕಗಳನ್ನು ಆಯ್ಕೆ ಮಾಡಿ, ಆಯ್ಕೆ ಪಟ್ಟಿಯನ್ನು ಮತ್ತೊಮ್ಮೆ ಸಾರ್ವಜನಿಕರ ಮುಂದೆ ಇಡಬೇಕು.
 415 ದಿನಗಳ ನಂತರ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆ ಬಾರದಿದ್ದರೆ ಅಂತಹ ಪುಸ್ತಕಗಳನ್ನು ಅಂತಿಮ ಪಟ್ಟಿ ಎಂದು ಪರಿಗಣಿಸಿ ಖರೀದಿಸಬೇಕು.
ಆರೋಪ ನಿರಾಧಾರ
ಮೇ 4ರಂದು ಸಭೆ ನಡೆದಿದೆ. ಜೂ. 18 ರಿಂದ ಮೂರು ದಿನ ಸಭೆ ಕರೆಯಲಾಗಿದೆ. 7 ಸಾವಿರ ಪುಸ್ತಕಗಳ ಗಣಕೀಕರಣ ಕೆಲಸ ನಡೆದಿದ್ದು, ಶೀಘ್ರವೇ ಅಂತರ್ಜಾಲದಲ್ಲಿ ಪಟ್ಟಿಯನ್ನು ಪ್ರಕಟಿಸಲಾಗುವುದು. ಕಳೆದ ವರ್ಷ ಆಯ್ಕೆ ಸಮಿತಿ ರಚನೆ ವಿಳಂಬವಾಗಿದ್ದರಿಂದ ಸೆಪ್ಟೆಂಬರ್‌ನಲ್ಲಿ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿತ್ತು. ಈ ಬಾರಿ ಜುಲೈನಲ್ಲೇ ಪ್ರಕ್ರಿಯೆ ಮುಗಿಸಬೇಕು ಎಂದು ತೀರ್ಮಾನಿಸಲಾಗಿದೆ. ಇದರ ಹಿಂದೆ ಯಾವ ಹುನ್ನಾರವೂ ಇಲ್ಲ. ಈ ಬಗ್ಗೆ ಯಾರೇ ಆರೋಪ ಮಾಡಿದರೂ ಅದು ನಿರಾಧಾರ. ಯಾವುದೇ ಸಮಯದಲ್ಲಿ ಬೇಕಿದ್ದರೆ ಈ ಬಗ್ಗೆ ಮಾಹಿತಿ ಪಡೆಯಬಹುದು. ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರುತ್ತದೆ.
-ವೆಂಕಟೇಶ್, ನಿರ್ದೇಶಕ, ಸಾರ್ವಜನಿಕ ಗ್ರಂಥಾಲಯ
ಪ್ರಕಾಶಕರಿಗೆ ಬಿಸಿ!
ವೆಂಕಟೇಶ್ ಅವರು ಆಯ್ಕೆ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆ ತಂದು ನಿಯಮಗಳನ್ನು ಬಿಗಿ ಮಾಡಿದ್ದಾರೆ. ಪುಸ್ತಕಗಳಿಗೆ ಬಾರ್‌ಕೋಡ್ ಅಳವಡಿಸುವ ವ್ಯವಸ್ಥೆ ಇದೆ. ಈ ಮೊದಲು ಇಬ್ಬರು ಅಟೆಂಡರ್‌ಗಳು ಪುಸ್ತಕ ಎಣಿಸುತ್ತಿದ್ದರು. ಆದರೆ, ಎಷ್ಟೋ ಬಾರಿ 300 ಪುಸ್ತಕ ಇರುತ್ತಿರಲಿಲ್ಲ. ಈಗ 40 ಜನ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದಾರೆ. ಇದರಿಂದಾಗಿ ಪ್ರಕ್ರಿಯೆ ತುಂಬ ಪಾರದರ್ಶಕವಾಗಿದೆ. ಈ ಹಿಂದೆ ಬೇಕಾಬಿಟ್ಟಿಯಾಗಿ ಪುಸ್ತಕ ನೀಡುತ್ತಿದ್ದ ಪ್ರಕಾಶಕರಿಗೆ ಇದು ನುಂಗಲಾರದ ತುತ್ತು. ಹೀಗಾಗಿ ಆರೋಪ ಮಾಡಿದ್ದಾರೆ. ವೆಂಕಟೇಶ್ ಉತ್ತಮ ಅಧಿಕಾರಿಯಾಗಿದ್ದು, ಪಾರದರ್ಶಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
-ವಸಂತಕುಮಾರ್, ಅಧ್ಯಕ್ಷ, ಪುಸ್ತಕ ಆಯ್ಕೆ ಸಮಿತಿ



ಆಯ್ಕೆ ಸಮಿತಿಯಲ್ಲಿ 22 ಜನ ಸದಸ್ಯರಿದ್ದಾರೆ. ಆದರೆ, ಆಯ್ಕೆ ಸಮಿತಿ ಸಭೆ ಕರೆದಾಗ ಸುಮಾರು 15 ಮಂದಿ ಮಾತ್ರ ಭಾಗವಹಿಸುತ್ತಾರೆ. ಈ ಸಮಿತಿಯು 7 ಸಾವಿರ ಪುಸ್ತಕಗಳನ್ನು ಆಯ್ಕೆ ಮಾಡಲು ಸತತವಾಗಿ ಸಭೆ ನಡೆಸಿದರೂ ಕನಿಷ್ಠ 30 ದಿನ ಬೇಕು.

ಹೀಗಿರುವಾಗ ತರಾತುರಿಯಲ್ಲಿ ಆಯ್ಕೆ ಆಗಿರುವ ಪುಸ್ತಕಗಳು ಭಾಷಾದೋಷ, ವಿಪರೀತ ಮುದ್ರಣದೋಷ, ತಾಂತ್ರಿಕ ದೋಷ, ಸಮಾಜ ಘಾತುಕ ವಿಷಯಗಳು, ದ್ವಂದ್ವಾರ್ಥ ಪದಗಳು, ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ವಿಚಾರಗಳು, ರಾಷ್ಟ್ರದ್ರೋಹಿ ಚಿಂತನೆಗಳಿಂದ ಕೂಡಿರುವ ಅಪಾಯವಿದೆ. ಹೀಗಾಗಿ ಇದರ ಹೊಣೆ ಹೊರುವವರು ಯಾರು  ಎಂಬ ಪ್ರಶ್ನೆ ಉದ್ಭವವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT