ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆ ಕಟ್ಟೋದೂ ಸಮಸ್ಯೆನಾ...

Last Updated 4 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೂದಲು ಮತ್ತು ನೀವು ಅದನ್ನು `ಅಭಿವ್ಯಕ್ತಿಗೊಳಿಸುವ~ ರೀತಿ ನಿಮ್ಮ ವ್ಯಕ್ತಿತ್ವದ ಅಭಿವ್ಯಕ್ತಿ. ನಿಮ್ಮ ಮನಃಸ್ಥಿತಿಯ ಪ್ರತಿಬಿಂಬವೂ ಹೌದು. ಉಡುಗೆ ತೊಡುಗೆ ಅಂದರೆ ಬರಿಯ ಬಟ್ಟೆ, ಆಭರಣ ಮತ್ತು ಪಾದರಕ್ಷೆ ಅಷ್ಟೇ ಅಲ್ಲ.

ಇವೆಲ್ಲವನ್ನೂ ಒಪ್ಪವಾಗಿ ಧರಿಸಿಯೂ ಕೂದಲಿನ ಬಗ್ಗೆ, ವಿನ್ಯಾಸದ ಬಗ್ಗೆ ಅಲಕ್ಷ್ಯ ತೋರಿದರೆ ನೀವು ಸಂಪೂರ್ಣವಾಗಿ ಸಿದ್ಧರಾಗಿಲ್ಲ ಎಂದೇ ಅರ್ಥ~ ಎಂದರು ಅಂತರರಾಷ್ಟ್ರೀಯ ಮಟ್ಟದ ಕೇಶವಿನ್ಯಾಸಕ `ಡೊಡೊ~.

ಅವರನ್ನು ಧರ್ಮೇಶ್ ಹಿಂಗೋರನಿ ಎಂದರೆ ಕೇಶವಿನ್ಯಾಸ, ಕೇಶ ಸೌಂದರ್ಯ ಕ್ಷೇತ್ರದಲ್ಲಿ ತಿಳಿಯದೇ ಇರಬಹುದು. `ಡೊಡೊ~ ಎಂದಾಕ್ಷಣ `ಓಹ್ ಅಸಾಮಾನ್ಯ ವ್ಯಕ್ತಿ~ ಎಂಬ ಉದ್ಗಾರ ಬರುವುದು ಸಾಮಾನ್ಯ.

ಮುಂಬೈನ ಕೊಲಾಬದಲ್ಲಿರುವ ತಾಜ್ ಪ್ರೆಸಿಡೆನ್ಸಿ ತಾರಾ ಹೋಟೆಲ್‌ನಲ್ಲಿ ಅಂತರರಾಷ್ಟ್ರೀಯ ಕೇಶಸೌಂದರ್ಯ ಉತ್ಪನ್ನ `ಟ್ರೆಸ್ಸಿಮೆ~ಯನ್ನು ಭಾರತದಲ್ಲಿ ಬಿಡುಗಡೆ ಮಾಡುವ ಸಮಾರಂಭದಲ್ಲಿ ಬುಧವಾರ ಭಾಗವಹಿಸಿದ್ದ `ಡೊಡೊ~, `ಮೆಟ್ರೊ~ದೊಂದಿಗೆ ಕೇಶ ಆರೋಗ್ಯ, ವಿನ್ಯಾಸ, ಸೌಂದರ್ಯದ ಬಗ್ಗೆ ತರಹೇವಾರಿ ಆಯಾಮಗಳನ್ನು ತೆರೆದಿಟ್ಟರು.

ಕೇಶ ಸೌಂದರ್ಯ ಎಂದಾಕ್ಷಣ ವಿವಿಧ ಉತ್ಪನ್ನಗಳು ನೆನಪಾಗುತ್ತವೇ ವಿನಾ ಕೇಶದ ಮೂಲ ಆರೋಗ್ಯದ ಬಗ್ಗೆ ಜನ ಗಮನಹರಿಸುವುದಿಲ್ಲ ಎಂದೆನಿಸುತ್ತದೆಯೇ?  
ನಿಜ. ಹೊಳೆಯುವ, ರೇಷಿಮೆಯಂತಹ ಕೂದಲು ತನ್ನದಾಗಬೇಕು ಎಂದು ಪ್ರತಿ ಹೆಣ್ಣುಮಗಳೂ ಬಯಸುತ್ತಾಳೆ. ಒಣಕೂದಲು, ಒರಟು ಕೂದಲು ಕೆಲವರಿಗೆ ವಂಶವಾಹಿನಿಯಲ್ಲಿ ಬರುವ ಸಮಸ್ಯೆಯಾಗಿರುತ್ತದೆ.

ಇನ್ನು ಕೆಲವರು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದರಿಂದ ಕೂದಲು ಒರಟಾಗುತ್ತದೆ. ಸಸ್ಯಾಹಾರ, ಮಾಂಸಾಹಾರ, ಕಾಳು, ಧಾನ್ಯ, ಸೊಪ್ಪು, ಸಮೃದ್ಧವಾಗಿರುವ ಪೌಷ್ಟಿಕ ಆಹಾರ ಸೇವಿಸಿದರೆ ಕೂದಲು ಸದಾ ನಳನಳಿಸುತ್ತದೆ. ಹೇರಳವಾಗಿ ನೀರು ಕುಡಿಯುವುದೂ ಕೂದಲ ಆರೋಗ್ಯಕ್ಕೆ ಮುಖ್ಯ.

ಪುರುಷರಿಗೆ ಕೇಶ ಸೌಂದರ್ಯದ ಆಸಕ್ತಿಯಿಲ್ಲ ಎಂದರ್ಥವೇ?
ಇಲ್ಲಪ್ಪಾ, ಮಹಿಳೆಯರಿಗಾಗಿ ಇರುವ ಸ್ಪಾ ಮತ್ತು ಹೇರ್‌ಕೇರ್, ಹೇರ್ ಸ್ಟೈಲಿಂಗ್ ಸಲೂನ್‌ಗಳು ಪುರುಷರಿಗಾಗಿಯೂ ಕಾರ್ಯನಿರ್ವಹಿಸುತ್ತಿವೆ. ಫ್ಯಾಷನ್, ಸೌಂದರ್ಯ, ವಿನ್ಯಾಸವೆಂದರೆ ಮಹಿಳೆಯರಿಗೆ ಮಾತ್ರ ಎಂಬ ದೃಷ್ಟಿಕೋನ ಈಗ ಇಲ್ಲ. ಪುರುಷರೂ ಅವರಿಗೆ ಸಮಸ್ಪರ್ಧಿಗಳಾಗಿ ಬೆಳೆದಿದ್ದಾರೆ.

ಹೇರ್ ಸ್ಟೈಲಿಂಗ್ ವೃತ್ತಿ ಬಗ್ಗೆ ಏನನಿಸುತ್ತದೆ?
ಹೇರ್ ಸ್ಟೈಲಿಂಗ್, ಹೇರ್ ಕಟಿಂಗ್ ನಮ್ಮಜ್ಜನ ಸಲೂನ್ ಜಮಾನದಿಂದಲೇ ಇತ್ತು. ಈಗ ಈ ತರಬೇತಿ, ಅಧಿಕೃತ ಶಿಕ್ಷಣ ನೀಡಲು ಶಿಕ್ಷಣ ಸಂಸ್ಥೆಗಳು ಇವೆ. ಯುವಜನರಿಗೂ ಇದೊಂದು ಕ್ರಿಯಾಶೀಲ ಕ್ಷೇತ್ರ ಎಂಬುದು ಅರ್ಥವಾಗಿದೆ. ಹೀಗಾಗಿ ಈ ಕ್ಷೇತ್ರಕ್ಕೆ ಬೇಡಿಕೆ ಹೆಚ್ಚುತ್ತಿದೆ. ಇದಕ್ಕೆ ಪೂರಕವಾಗಿ ಹೇರ್ ಕೇರ್ ಸ್ಪಾಗಳೆಂಬ ಪರಿಕಲ್ಪನೆಯೂ ಸೇರಿಕೊಂಡಿದೆ.

ಕೇಶ ವಿನ್ಯಾಸವೆನ್ನುವುದು ಪ್ರತಿನಿತ್ಯದ ಸವಾಲು. ಇದಕ್ಕೆ ಸರಳ ಪರಿಹಾರ ಸೂಚಿಸುವಿರಾ ಎಂದು ಹೆಣ್ಣುಮಗಳೊಬ್ಬಳು ಕೇಳಿದರೆ?
ದಿನಾ ಬೆಳಗ್ಗೆದ್ದು ತಲೆ ಬಾಚೋದು, ಅದಕ್ಕೊಂದು ವಿನ್ಯಾಸ ಮಾಡಿಕೊಳ್ಳೋದು ಕೆಲವರಿಗೆ ನಿಜಕ್ಕೂ ಸವಾಲೇ. (ಅಥವಾ ಅದು ಅವರ ಉದಾಸೀನವಿರಬಹುದೇ?) ಆದರೆ ನನ್ನ ಪ್ರಕಾರ, ಕೇಶ ವಿನ್ಯಾಸವೆಂದಾಕ್ಷಣ ಅದು ವಿಭಿನ್ನವಾಗಿರಬೇಕು ಎಂದರ್ಥವಲ್ಲ. ಇವತ್ತು ಕೂದಲನ್ನು ಕಟ್ಟದೆ ಬಿಟ್ಟರೆ ನಾಳೆ ಸರಳವಾಗಿ ತಿರುವಿ ತುರುಬಿನಂತೆ ಹಾಕಿಕೊಳ್ಳಿ. ನಾಡಿದ್ದು ಫ್ರೆಂಚ್ ನಾಟ್ ಇರಲಿ... ಹೀಗೆ ನೀವು ತೊಡುವ ಬಟ್ಟೆಯಂತೆ ದಿನಕ್ಕೊಂದು ಬಗೆಯಲ್ಲಿ ಸರಳವಾದ ಕೇಶ ವಿನ್ಯಾಸ ಮಾಡಿಕೊಂಡರಾಯಿತು. ಇದು ಯಾಕೆ ಸವಾಲು ಆಗಬೇಕು? ಇಷ್ಟಕ್ಕೂ ಅದು ಚಿಂತೆಯ ವಿಷಯವೇ?

ತಮಗೊಬ್ಬ ಕೇಶ ವಿನ್ಯಾಸಕನನ್ನು ನಿಯೋಜಿಸಿಕೊಳ್ಳುವಷ್ಟು ಪುರುಷ ಜಗತ್ತೂ ಬದಲಾಗಿದೆ. ಈ ಟ್ರೆಂಡ್‌ಗೆ ಏನು ಹೇಳುತ್ತೀರಿ?
ಆಗಲೇ ಹೇಳಿದೆ. ಪುರುಷರೂ ಸಮಕಾಲೀನ ಫ್ಯಾಷನ್ ಜಗತ್ತಿಗೆ, ಟ್ರೆಂಡ್‌ಗಳಿಗೆ ಬಹುಬೇಗನೆ ಸ್ಪಂದಿಸುತ್ತಿದ್ದಾರೆ. ಸೆಲೆಬ್ರಿಟಿಗಳು ತಮ್ಮ ಪ್ರತಿಯೊಂದು ಚಟುವಟಿಕೆಯನ್ನು ನಿಭಾಯಿಸಲು ಮ್ಯಾನೇಜರ್‌ಗಳನ್ನು ನಿಯೋಜಿಸಿದರೆ ವಸ್ತ್ರ ಮತ್ತು ಕೇಶದ ಆಯ್ಕೆ ಮತ್ತು ವಿನ್ಯಾಸದ ಬಗ್ಗೆ ಮಾರ್ಗದರ್ಶನ ನೀಡಲೂ ಮ್ಯಾನೇಜರ್‌ಗಳಿದ್ದಾರೆ. ಅದೆಲ್ಲಾ ಇಲ್ಲಿ ಮಾಮೂಲಿ.

ಕೇಶ ವಿನ್ಯಾಸ ಕ್ಷೇತ್ರದಲ್ಲಿ ನಿಮ್ಮ ಯಾನ ಶುರುವಾಗಿದ್ದು ಹೇಗೆ?
ಮೊದಲಿನಿಂದಲೂ ಅಂದಂದಿನ ಫ್ಯಾಷನ್ ಸೆಳೆಯುತ್ತಲೇ ಇತ್ತು. ಸೌಂದರ್ಯ ಕ್ಷೇತ್ರದಲ್ಲಿ ಕೇಶಕ್ಕೂ ಪ್ರಮುಖ ಸ್ಥಾನ ಗಳಿಸುತ್ತಾ ಬರುವುದನ್ನು ಗಮನಿಸುತ್ತಲೇ ಇದ್ದೆ. ಇಲ್ಲಿ (ಮುಂಬೈ)ನ ಜ್ಯೂಸ್ ಹೇರ್ ಅಕಾಡೆಮಿ ಕೇಶ ಸೌಂದರ್ಯ, ರಕ್ಷಣೆ ಮತ್ತು ವಿನ್ಯಾಸಕ್ಕೆ ಜಗತ್ಪ್ರಸಿದ್ಧ.

ನಾನು ಅದರಲ್ಲೇ ತರಬೇತಿ ಪಡೆದು 2009ರಲ್ಲಿ ನನ್ನದೇ ಆದ `ಜಿಡೊ ಸ್ಟುಡಿಯೊ~ ತೆರೆದೆ. ಇದು ಬಾಂದ್ರಾ ವೆಸ್ಟ್‌ನಲ್ಲಿದೆ. ಬಾಲಿವುಡ್ ಮತ್ತು ಸೆಲೆಬ್ರಿಟಿಗಳಿಗೂ ಹೇರ್ ಸ್ಟೈಲರ್ ಆದೆ. ಈಗ ತಿಂಗಳಿಗೊಂದೆರಡು ರಾಷ್ಟ್ರಕ್ಕಾದರೂ ಆಹ್ವಾನದ ಮೇರೆಗೆ ಭೇಟಿ ಕೊಟ್ಟು ತರಗತಿ, ತರಬೇತಿ, ಕಾರ್ಯಾಗಾರಗಳನ್ನು ನಡೆಸುತ್ತೇನೆ. ಸೌಂದರ್ಯ ರಕ್ಷಣೆಯ ಬಗ್ಗೆಯೂ ಜಿಡೊದಲ್ಲಿ ಚಿಕಿತ್ಸೆ, ಸೇವೆಗಳು ಲಭ್ಯ.

ಸಿನಿಮಾ ಕ್ಷೇತ್ರದೊಂದಿಗೆ ನಂಟು?
ಬಾಲಿವುಡ್‌ನಲ್ಲಿ ನನ್ನ ಕೇಶ ವಿನ್ಯಾಸವನ್ನು ಮೆಚ್ಚುತ್ತಾರೆ. `ರೇಸ್~, `ತಶ್ನ್~, `ಯುವ್ರಾಜ್~, `ವೆಲ್‌ಕಂ~, `ಮೆ ಔರ್ ಮಿಸೆಸ್ ಖನ್ನಾ~ ಮುಂತಾದ ಚಲನಚಿತ್ರಗಳಿಗೆ ಹೇರ್‌ಸ್ಟೈಲರ್ ಆಗಿದ್ದೆ. ಸಲ್ಮಾನ್ ಖಾನ್, ಅನಿಲ್ ಕಪೂರ್ ಅವರ ಖಾಸಗಿ ಹೇರ್‌ಸ್ಟೈಲರ್ ನಾನೇ.
 
ಈ ಬಾರಿಯ ಲ್ಯಾಕ್ಮೆ ಫ್ಯಾಷನ್ ಸಪ್ತಾಹಕ್ಕೆ ಅಧಿಕೃತ ಕೇಶ ವಿನ್ಯಾಸಕನಾಗಿದ್ದೆ. ಇದೀಗ `ಟ್ರೆಸ್ಸಿಮೆ~ ಎಂಬ ಅಂತರರಾಷ್ಟ್ರೀಯ ಬ್ರಾಂಡ್‌ಗೆ ಕೇಶವಿನ್ಯಾಸಕನಾಗಿಯೂ ಜವಾಬ್ದಾರಿ ಹೊತ್ತಿದ್ದೇನೆ.

ಕೂದಲು ನೇರಗೊಳಿಸುವ, ಕೆದರದಂತೆ `ಕಾಪಾಡುವ~ ಉತ್ಪನ್ನಗಳ ಬಳಕೆ ಹೆಚ್ಚುತ್ತಿದೆ. ಈ ಬಗ್ಗೆ?
ಹೌದು, ಇದೆಲ್ಲ ಈಗಿನ ಟ್ರೆಂಡ್. ಆದರೆ ಸ್ಟ್ರೇಟನಿಂಗ್ ಲೋಷನ್ ಆಗಲಿ, ಜೆಲ್ ಆಗಲಿ ದೀರ್ಘಕಾಲ ಬಳಸುವುದು ಸೂಕ್ತವಲ್ಲ. ಕೂದಲ ಬುಡ ಮತ್ತು ಬುರುಡೆಯಲ್ಲಿರುವ ಸಹಜ ತೇವಾಂಶವನ್ನು ಅದು ನಾಶಗೊಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT