ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ವ್ಯಕ್ತಿಯೊಬ್ಬ ಪೊಲೀಸರಿಗೆ  ಶರಣಾಗಿರುವ ಘಟನೆ ಕಾಟನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪಶು ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಪೆನ್ಷನ್ ಮೊಹಲ್ಲಾದ ನಿವಾಸಿಯಾಗಿದ್ದ ಮುಜಾಹಿದ್ (18) ಕೊಲೆಯಾದವರು. ಆರೋಪಿ ಚಲುವಾದಿಪಾಳ್ಯದ ನಿವಾಸಿ ಫೈರೋಜ್ (22) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮುಜಾಹಿದ್ ಮರಗೆಲಸ ಮಾಡುತ್ತಿದ್ದರು. ಫೈರೋಜ್ ಅವಿನ್ಯೂ ರಸ್ತೆಯ ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುತ್ತಿದ್ದ. ಒಂದು ವರ್ಷದ ಹಿಂದೆ ಇಬ್ಬರಿಗೂ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಆ ಸಂದರ್ಭದಲ್ಲಿ ಮುಜಾಹಿದ್, ಫೈರೋಜ್‌ಗೆ ಹೊಡೆದಿದ್ದ. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

`ಅಂಗಡಿಯೊಂದರಲ್ಲಿ ಕುಳಿತ್ತಿದ್ದ ಮುಜಾಹಿದ್‌ನನ್ನು ಪಶು ಆಸ್ಪತ್ರೆ ಕಾಂಪೌಂಡ್ ಒಳಗೆ ಕರೆದುಕೊಂಡು ಹೋದ ಆರೋಪಿ ಹಲ್ಲೆ ನಡೆಸಿದ್ದಾನೆ. ಕೆಳಗೆ ಬಿದ್ದ ಮುಜಾಹಿದ್ ತಲೆ ಮತ್ತು ಮುಖದ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ~ ಎಂದು ಇನ್‌ಸ್ಪೆಕ್ಟರ್ ನೂರೂಲ್ಲಾ ಷರೀಫ್ ತಿಳಿಸಿದ್ದಾರೆ. ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಫೋಟ: ಸಾವು

ಗುಜರಿ ವಸ್ತುಗಳ ಅಂಗಡಿಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟು ಮೂರು ಮಂದಿ ಗಾಯಗೊಂಡಿರುವ ಘಟನೆ ಹುಳಿಮಾವು ಗ್ರಾಮದಲ್ಲಿ ಶನಿವಾರ  ನಡೆದಿದೆ.

ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್, ಸೆಲ್ವಿ ಮತ್ತು ಸರವಣ ಎಂಬುವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕೃಷ್ಣನ್ ಎಂಬುವರು ಅಂಗಡಿ ಮಾಲೀಕರು. ಅಲ್ಲಿ ಮೂರು ಮಂದಿ ಕೆಲಸ ಮಾಡುತ್ತಿದ್ದರು. ಹಳೆಯ ವಸ್ತು, ತಾಮ್ರದ ತಂತಿ ಹೊಂದಿದ್ದ ವಯರ್ ಮಾರಲು ವ್ಯಕ್ತಿಯೊಬ್ಬ ಬಂದ. ವಯರ್‌ನಿಂದ ತಂತಿ ಬಿಡಿಸಿಕೊಡುವಂತೆ ಆತನಿಗೆ ಹೇಳಿದೆವು. ಆತ ಸುತ್ತಿಗೆಯಿಂದ ಬಡಿಯುತ್ತಿದ್ದ ವೇಳೆ ಸ್ಫೋಟ ಸಂಭವಿಸಿತು ಎಂದು ಗಾಯಾಳುಗಳು ತಿಳಿಸಿದ್ದಾರೆ. ಜಿಲೆಟಿನ್ ಕಡ್ಡಿ ಸ್ಫೋಟಿಸಿರುವ ಸಾಧ್ಯತೆ ಇದೆ.

ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಅವರು ವರದಿ ನೀಡಿದ ನಂತರ ಸ್ಫೋಟಕ್ಕೆ ಕಾರಣ ಗೊತ್ತಾಗಲಿದೆ. ಘಟನೆಯ ಬಗ್ಗೆ ವಿಸ್ತೃತ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರ ದೋಚಿ ಪರಾರಿ
ಬಿಸ್ಕೆಟ್ ಪೊಟ್ಟಣ ಖರೀದಿಸುವ ನೆಪದಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ದೋಚಿ ಪರಾರಿಯಾಗಿರುವ ಘಟನೆ ಕೊಡಿಗೇಹಳ್ಳಿಯ ಸಹಕಾರನಗರದಲ್ಲಿ ಶುಕ್ರವಾರ ನಡೆದಿದೆ.

ಚನ್ನಮ್ಮ ಸರ ಕಳೆದುಕೊಂಡವರು. ಅವರು ಚಿಲ್ಲರೆ ಅಂಗಡಿ ನಡೆಸುತ್ತಿದ್ದಾರೆ. ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳಲ್ಲಿ ಒಬ್ಬ ಅಂಗಡಿಗೆ ಬಂದು ಬಿಸ್ಕೆಟ್ ಪೊಟ್ಟಣ ಕೇಳಿದ್ದಾನೆ. ಈ ಸಂದರ್ಭದಲ್ಲಿ ಚನ್ನಮ್ಮ ಅವರು ಮೇಲಕ್ಕೆ ಎದ್ದಾಗ ಸರ ಕಿತ್ತುಕೊಂಡು ಇನ್ನೊಬ್ಬ ಆರೋಪಿ ಜತೆ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಸರ ಐವತ್ತು ಗ್ರಾಂ ತೂಕದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

ಅಪಘಾತ: ಸಾವು
ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ ಬೈಕ್ ಸವಾರ ಪಾದಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಗೂಡ್‌ಶೆಡ್ ರಸ್ತೆಯಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ. ಅಂಬರೀಶ್ ಆರಾಧ್ಯ (44) ಮೃತಪಟ್ಟವರು.  ದಾವಣಗೆರೆಯ ಹರಿಹರ ಪಟ್ಟಣದವರಾದ ಅವರು ಖಾಸಗಿ ಬ್ಯಾಂಕ್‌ವೊಂದರಲ್ಲಿ ಸಾಲ ವಸೂಲಾತಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು.
 
1.45ರ ಸುಮಾರಿಗೆ ಅವರು ಗೂಡ್‌ಶೆಡ್ ರಸ್ತೆಯಿಂದ ಶಾಂತಲಾ ಜಂಕ್ಷನ್ ಕಡೆ ಬರುತ್ತಿದ್ದ ವೇಳೆ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ಪಾದಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆದಿದ್ದಾರೆ. ಕೆಳಗೆ ಬಿದ್ದ ಅವರ ತಲೆಗೆ ತೀವ್ರ ಪೆಟ್ಟಾಗಿ ಮೃತಪಟ್ಟಿದ್ದಾರೆ. ಹೆಲ್ಮೆಟ್ ಹಾಕಿದ್ದರೂ ಬಿದ್ದ ರಭಸಕ್ಕೆ ತಲೆಗೆ ಗಂಭೀರ ಗಾಯಗಳಾಗಿದ್ದವು. ಚಿಕ್ಕಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT