ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲ್ಲಣಿಸದಿರು...

Last Updated 7 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಮಕ್ಕಳು ಸಾವಿನ ಮನೆಯ ಬಾಗಿಲು ತಟ್ಟುತಿರುವ ಪ್ರಸಂಗಗಳು ಪದೇಪದೇ ವರದಿಯಾಗುತ್ತಿವೆ. ಇಂಥ ಸಂದರ್ಭದಲ್ಲಿ ಅಪ್ಪ ಅಮ್ಮ ಗದರಿದ್ದು, ದೊಡ್ಡವರು ಬುದ್ಧಿಮಾತು ಹೇಳಿದ್ದು, ಯಾವುದೋ ತಪ್ಪಿಗೆ ಶಿಕ್ಷಕರು ಶಿಸ್ತುಕ್ರಮ ಕೈಗೊಂಡದ್ದು ಅಥವಾ ಸಹಪಾಠಿಗಳ ಸಮ್ಮುಖದಲ್ಲಿ ಅವಮಾನ ಆದದ್ದು ಕಾರಣಗಳೆಂದು ಗೊತ್ತಾಗುತ್ತಿದೆ.

ದುಬಾರಿ ಶಾಲೆ, ಪುಸ್ತಕಗಳ ಮೂಟೆ, ಟ್ಯೂಶನ್, ನೃತ್ಯ, ಸಂಗೀತ, ಕರಾಟೆ... ಹೀಗೆ ಪಠ್ಯ ಹಾಗೂ ಇತರೆ ಚಟುವಟಿಕೆಗಳ ಭಾರ ಮಕ್ಕಳ ಮೇಲಿದೆ. ಹಾಗಾಗಿ ವಯಸ್ಸಿಗೆ ಮೀರಿದ ಮನೋಬಲ ಅವರಿಗೆ ಬೇಕಿರುತ್ತದೆ. ಆದ್ದರಿಂದಲೇ ಪೋಷಕರ ಬುದ್ಧಿಮಾತು, ಶಿಕ್ಷಕರ ನಿಂದನೆ, ಸಹಪಾಠಿಗಳ ಟೀಕೆಗಳಿಗೂ ಅವರು ಆತ್ಮಸ್ಥೈರ್ಯವನ್ನು ಕಳೆದುಕೊಳ್ಳುತ್ತಾರೆ. ಅತ್ತ ಮನೆಯಲ್ಲಿ ಮಕ್ಕಳೊಂದಿಗೆ ಬೆರೆಯಲು ಪುರುಸೊತ್ತಿಲ್ಲದ ಹೆತ್ತವರು. ಇತ್ತ ಪಾಠ ಪ್ರವಚನದ ಸೀಮೆ ದಾಟಲೊಲ್ಲದ ಶಿಕ್ಷಕರು... ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಧೃತಿಗೆಟ್ಟರೆ ದುರಂತದ ಹಾದಿಯಿಂದ ಈಚೆ ತರುವವರು ಯಾರೂ ಇಲ್ಲ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿಬರುವ ವಿಶ್ಲೇಷಣೆ.

`ಶಾಲೆಗಳಲ್ಲಿ ಮನಃಶಾಸ್ತ್ರಜ್ಞರ ನೇಮಕವಾಗಬೇಕಿದೆ' -ಇದು, ಕಳೆದ ವಾರ ವಿಜಾಪುರದ ಬಾಲಕ `ಆತ್ಮಾಹುತಿ' ಮಾಡಿಕೊಂಡಾಗ ವ್ಯಕ್ತವಾದ ಅಭಿಪ್ರಾಯ. ಆ ಪ್ರಕರಣ ಮನಸ್ಸಿನಿಂದ ಮಾಯವಾಗುತ್ತಿದೆ ಎನ್ನುವಷ್ಟರಲ್ಲಿ ನಗರದ ಸೇಂಟ್ ಜೋಸೆಫ್ಸ್ ಸಂಯುಕ್ತ ಪಿ.ಯು. ಕಾಲೇಜಿನ ವಿದ್ಯಾರ್ಥಿನಿ ಬುಧವಾರ ಪರೀಕ್ಷಾ ಕೊಠಡಿಯಿಂದ ಓಡಿಹೋಗಿ ಮೂರಂತಸ್ತಿನ ಮೇಲಿಂದ ಜಿಗಿದುಬಿಟ್ಟಳು.

ಹಾಗಿದ್ದರೆ ಮಕ್ಕಳ ಮಾನಸಿಕ ಬೇನೆಗಳಿಗೆ, ತಲ್ಲಣಗಳಿಗೆ, ಅವರೊಳಗಿನ ಪಲ್ಲಟಗಳಿಗೆ ಸಾಂತ್ವನ ಹೇಳುವ ತಜ್ಞರು ನಿಜಕ್ಕೂ ಬೇಕೆ?
ಶ್ರೀಮಂತರ ಮಕ್ಕಳಾಗಲೀ, ಕೊಳಚೆ ಪ್ರದೇಶದಲ್ಲಿ ವಾಸಿಸುವ ಮಕ್ಕಳೇ ಇರಲಿ ನಡವಳಿಕೆಯ ಸಮಸ್ಯೆ ಇದ್ದೇ ಇರುತ್ತದೆ. ತುಂಬು ಪ್ರೀತಿ ದೊರೆಯದೇ ಇರುವ ಮಕ್ಕಳು ಮನೆಯಲ್ಲೂ ಮನೆಯಿಂದಾಚೆಯೂ ಇತರರ ಗಮನ ಸೆಳೆಯುವಂತಹ ಚಟುವಟಿಕೆಗಳನ್ನು ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪ್ರತಿರೋಧ ಎದುರಾದಲ್ಲಿ ಅವರು ಮಾನಸಿಕ ಕ್ಷೋಭೆಗೆ ಒಳಗಾಗುವ ಅಪಾಯವಿದೆ. ಈ ಹಂತದಲ್ಲಿ ಅವರಿಗೆ ಅರಿವಿಲ್ಲದೇ ಚಿಕಿತ್ಸೆ ನೀಡುವ ಮನೋಚಿಕಿತ್ಸಕನ ಅಗತ್ಯ ಇದ್ದೇ ಇರುತ್ತದೆ.

ಎಲ್ಲ ಅಪ್ಪ ಅಮ್ಮಂದಿರಲ್ಲೂ ಒಬ್ಬ ಆಪ್ತಸಮಾಲೋಚಕ ಇದ್ದೇ ಇರುತ್ತಾನೆ. ಸಮಯದ ಅಭಾವದಿಂದಲೋ, ದುಡಿಯುವ ಧಾವಂತದಿಂದಲೋ ಅದನ್ನು ಕಳೆದುಕೊಂಡಿರುವ ಪೋಷಕರ ನಡುವೆ ಬೆಳೆಯುವ ಮಗು ಅನಾಥ ಪ್ರಜ್ಞೆಯನ್ನು ಹೊಂದುತ್ತದೆ. ಪ್ರತಿ ವಿಚಾರವನ್ನು ತಮ್ಮ ಇತಿಮಿತಿಯಲ್ಲೇ ತರ್ಕಿಸುವ ಮಕ್ಕಳಿಗೆ ಸಕಾಲಿಕ ಸಲಹೆ ದೊರೆತರೆ ಸಮಸ್ಯೆಗಳನ್ನು ಎದುರಿಸುವ ಬಗೆ ತಿಳಿಯುತ್ತದೆ. ಮನೆಯಲ್ಲಿ ಅಂತಹ ವಾತಾವರಣ ಸಿಗದೇ ಹೋದರೂ ಶಾಲೆಗಳಲ್ಲಿ ಮನಃಶಾಸ್ತ್ರಜ್ಞರನ್ನು ನೇಮಕ ಮಾಡಿಕೊಳ್ಳುವುದರಿಂದ ಅಂತಹ ಮಕ್ಕಳ ವ್ಯಕ್ತಿತ್ವದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂಬ ಅಭಿಪ್ರಾಯದಲ್ಲಿ ಹುರುಳಿದೆ.

  ಪ್ರತಿಷ್ಠಿತ ಶಾಲೆಗಳಲ್ಲಿ ಮಕ್ಕಳಿಗೆ ತಿಳಿಹೇಳಲು ಆಪ್ತಸಮಾಲೋಚಕರು, ಮನಃಶಾಸ್ತ್ರಜ್ಞರು, ಮನೋಚಿಕಿತ್ಸಕರು ಇದ್ದಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿ? ಸಮರ್ಪಕ ಶಿಕ್ಷಕರು ಮತ್ತು ಮೂಲಸೌಲಭ್ಯಗಳನ್ನೇ ಕಾಣದ ಈ ಶಾಲೆಗಳಲ್ಲಿ ಮನಃಶಾಸ್ತ್ರಜ್ಞರನ್ನು ನೇಮಿಸಿಕೊಳ್ಳುವುದು ಸಾಧ್ಯವೇ?
ಮನೋಚಿಕಿತ್ಸಕ ಡಾ.ಅ. ಶ್ರೀಧರ್ ಅವರು ಹೇಳುವುದು ಹೀಗೆ-

`ವಿದೇಶಗಳ ಶಾಲೆ ಕಾಲೇಜುಗಳಲ್ಲಿ ಸಾಮಾನ್ಯವಾಗಿ ಮನಃಶಾಸ್ತ್ರಜ್ಞರು ನೇಮಕಗೊಂಡಿರುತ್ತಾರೆ. ಆದರೆ ನಮ್ಮಲ್ಲಿ ಇದು ಹೊಸ ಚಿಂತನೆ. ಮಕ್ಕಳ ಮಾನಸಿಕ ಸ್ಥಿತಿಗತಿಗಳಲ್ಲಿ ಏರುಪೇರಾಗಲು ಮನೆ ಹಾಗೂ ಶಾಲೆಯ ವಾತಾವರಣವೇ ಪ್ರಮುಖ ಕಾರಣ. ಶಿಕ್ಷಕರು ಮಕ್ಕಳ ಸುಖ ದುಃಖಗಳನ್ನು ಆಲಿಸಲು ಒಂದು ಅವಕಾಶ ಕಲ್ಪಿಸಬೇಕು ಅದು ಸಾದ್ಯವಿಲ್ಲವೆಂದರೆ ಮನೋಚಿಕಿತ್ಸಕರನ್ನು ನೇಮಕ ಮಾಡಿಕೊಳ್ಳುವ ಆಯ್ಕೆ ನೀಡಬೇಕು'
`ಸರ್ಕಾರಿ ಶಾಲೆಗಳಲ್ಲಿ  ಕನಿಷ್ಠ ವಾರಕೊಮ್ಮೆ ಮನಃಶಾಸ್ತ್ರಜ್ಞರನ್ನು ಕರೆಸಿ, ಮಕ್ಕಳ ಮಾನಸಿಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು. ಮಗು ಮುಕ್ತವಾಗಿ ಮಾತನಾಡಲು ಅದೊಂದು ವೇದಿಕೆಯಾಗಬೇಕು. ಮಗುವಿನ ಕೋಪ, ರೋಷ, ಮೊಂಡಾಟ ಮಿತಿ ಮೀರಿದಾಗ ಶಿಕ್ಷಕರು ಈ ವಿಚಾರವನ್ನು ಪೋಷಕರು ಮತ್ತು ಮನಃಶಾಸ್ತ್ರಜ್ಞರ ಗಮನಕ್ಕೆ ತರಬೇಕು' ಎನ್ನುತ್ತಾರವರು.

ಮನೆಯಲ್ಲಿ ಮುಕ್ತ ವಾತಾವರಣ ಸಿಗಬೇಕು

`ಇದು ನಿಜಕ್ಕೂ ಉತ್ತಮ ಬೆಳವಣಿಗೆ. ಆದರೆ ಆಪ್ತ ಸಮಾಲೋಚಕ, ಮನಃಶಾಸ್ತ್ರಜ್ಞರು ನೇಮಕಗೊಂಡಾಕ್ಷಣ ಸಮಸ್ಯೆ ಬಗೆಹರಿಯುವುದಿಲ್ಲ' ಎಂಬುದು ಸತ್ವಂ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಡಾ. ದೀಪಕ್ ಷಾ ಅವರ ಅಭಿಪ್ರಾಯ.

`ಮನೆಯ ವಾತಾವರಣವೇ ಮಗುವಿನ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಮೊದಲೆಲ್ಲ ನೀತಿ ವಿಜ್ಞಾನವನ್ನು ಪಠ್ಯದಲ್ಲಿ ಅಳವಡಿಸಲಾಗಿತ್ತು. ಈಗ ಇದೇ ವಿಷಯನ್ನು ವಿಭಿನ್ನವಾಗಿ ನೀಡುವ ಮೂಲಕ ಮಗುವಿನ ಮನಸ್ಸಿಗೆ ಚಿಕಿತ್ಸೆ ನೀಡಬಹುದು. ಇದಲ್ಲದೇ ಮಕ್ಕಳು ಪೋಷಕರು ಹಾಗೂ ಶಿಕ್ಷಕರೊಂದಿಗೆ ಮುಕ್ತವಾಗಿ ಬೆರೆಯುವ ವಾತವಾರಣ ನಿರ್ಮಾಣವಾಗಬೇಕು. ಇದರೊಂದಿಗೆ ಪೋಷಕರು, ಶಿಕ್ಷಕರು ಮತ್ತು ಆಪ್ತಸಮಾಲೋಚಕರ ನಡುವೆ ಏರ್ಪಡುವ ಸ್ನೇಹದ ಕೊಂಡಿ ಮಗುವಿನ ಮಾನಸಿಕ ಸ್ಥಿತಿಯನ್ನು ಬಲಪಡಿಸಲಿದೆ' ಎಂದು ಅವರು ವಿಶ್ಲೇಷಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT