ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲ್ಲೂರು: ಮರ ಕಡಿದು ಅಕ್ರಮ ಮಾರಾಟ!

Last Updated 13 ಫೆಬ್ರುವರಿ 2011, 8:45 IST
ಅಕ್ಷರ ಗಾತ್ರ

ಯಲಬುರ್ಗಾ:  ತಾಲ್ಲೂಕಿನ ತಲ್ಲೂರ ಕೆರೆ ದಂಡೆಗೆ ಅರಣ್ಯ ಇಲಾಖೆ ವತಿಯಿಂದ ನೆಟ್ಟು ಬೆಳೆಸಿದ್ದ ಸುಮಾರು 40ಕ್ಕು ಹೆಚ್ಚು ವರ್ಷಗಳ ಹಳೆಯದಾದ ನೀಲಗಿರಿ ಮರಗಳನ್ನು ಪಕ್ಕದ ಹೊಲದವರು ಕಡಿದು  ಅಕ್ರಮ ಮಾರಾಟ ಮಾಡುತ್ತಿದ್ದಾರೆ ಎಂದು ಗ್ರಾಮದ ಕೆಲವರು ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ.

ತಾಲ್ಲೂಕಿನಲ್ಲಿಯೇ ಹಲವು ದೊಡ್ಡ ಕೆರೆಗಳಲ್ಲಿ ಒಂದಾದ ತಲ್ಲೂರು ಕೆರೆ ಈ ಪ್ರದೇಶದ ಜೀವಾಳ, ಸುತ್ತಮುತ್ತಲಿನ ಪ್ರದೇಶವು ಒತ್ತುವರಿಯಾಗದಿರಲಿ, ಮಣ್ಣಿನ ಕೊರೆತ ಉಂಟಾಗದಿರಲಿ ಹಾಗೂ ಜಾನುವಾರುಗಳಿಗೆ ನೆರಳು ಹಾಗೂ ಇನ್ನಿತರ ಕಾರಣಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸುಮಾರು ವರ್ಷಗಳ ಹಿಂದೆಯೇ ಅರಣ್ಯ ಇಲಾಖೆಯು ಕೆರೆಯ ಹಿಂದಿನ ವಿಶಾಲ ಪ್ರದೇಶದಲ್ಲಿ ಈ ನೀಲಗಿರಿ ಬೆಳೆಸಿದ್ದರು. ದೊಡ್ಡ ಮರಗಳಾಗಿ ಬೆಳೆದು ನಿಂತಿದ್ದ ಮರಗಳನ್ನು ಪಕ್ಕದ ಹೊಲದ ವೀರಮಳಿಯಪ್ಪ ಎಂಬವರು ಬೇರೆಯವರಿಗೆ ಸಾವಿರಾರು ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ ಹೀಗೆ ಮರಗಳ ಮಾರಣಹೋಮ ನಡೆದರೂ ಯಾವುದೇ ಕ್ರಮಕೈಗೊಳ್ಳದೇ ಮೌನವಾಗಿರುವ ಇಲಾಖೆಯ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾದಂತಿದೆ ಎಂದು ಸ್ಥಳೀಯರ ಆರೋಪ.

ಸರ್ಕಾರಿ ಸ್ವಾಮ್ಯಕ್ಕೆ ಸೇರಿದ್ದ ಈ ಮರಗಳನ್ನು ಯಾವುದೇ ಪರವಾನಿಗೆ ಇಲ್ಲದೇ ಕಡಿದು ಹಾಕಿದ್ದಲ್ಲದೇ ಅಕ್ರಮವಾಗಿ ಬೇರೆಕಡೆ ಸಾಗಿಸುತ್ತಿರುವುದರ ಹಿಂದೆ ಇಲಾಖೆ ಅಧಿಕಾರಿಗಳು ಒಳಗೊಂಡಂತೆ ಹಲವರ ಕೈವಾಡವಿದೆ. ಸಾವಿರಾರು ರೂಪಾಯಿ ಬೆಲೆ ಬಾಳುವ ನೀಲಗಿರಿ ಮರಗಳು ಭಾರೀ ದೊಡ್ಡ ಗಾತ್ರದ್ದಾಗಿದ್ದವು. ಇವುಗಳನ್ನು ಅಕ್ರಮವಾಗಿ ಮಾರಾಟ ಮಾಡಿ ಸರ್ಕಾರಕ್ಕೆ ವಂಚಿಸುವ ಯತ್ನ ನಡೆದಿದೆ ಎಂಬುದು ದೂರಲಾಗಿದೆ.

ತಾಲ್ಲೂಕಿನಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಇರುವುದರಿಂದ ಅಕ್ರಮ ಮರ ಕಡಿಯುವುದು ಹಾಗೂ ಸಾಗಾಟ ಮಾಡುವುದರ ನಿಯಂತ್ರಿಸುವ ಅಧಿಕಾರ ಇಲ್ಲದ ಕಾರಣ ಇಂತಹ ಕಟ್ಟಿಗೆ ಕಳ್ಳತನ ಅವ್ಯಾಹತವಾಗಿ ನಡೆಯುತ್ತಲೇ ಇದೆ, ಆದರೆ ಅಕ್ರಮ ಚಟುವಟಿಕೆಗಳನ್ನು ಕಣ್ಣಾರೆ ನೋಡಿಯೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರದೇ ನಿರ್ಲಕ್ಷಿಸುವ ಇಲ್ಲಿಯ ಅರಣ್ಯ ಇಲಾಖೆ ಅಧಿಕಾರಿಗಳು ಕಟ್ಟಿಗೆ ಕಳ್ಳರೊಂದಿಗೆ ಶಾಮೀಲಾಗಿರುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ತಾಲ್ಲೂಕಿನ ಬಹುತೇಕ ಅರಣ್ಯ ಪ್ರದೇಶ ಹಾಗೂ ರಸ್ತೆ ಬದಿಯಲ್ಲಿರುವ ಮರಗಳು ಕೊಡಲಿ ಪಟ್ಟಿಗೆ ಬಲಿಯಾಗಿ ಹೋಗಿವೆ. ಈ ಬಗ್ಗೆ ಅಧಿಕಾರಿಗಳಿಗೆ ಮೇಲಿಂದ ಮೇಲೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸುವುದು ಮಾತ್ರ ಬಾಕಿ ಉಳಿದುಕೊಂಡಿದೆ ಎಂದು ಸ್ಥಳೀಯ ಮರಿಬಸಪ್ಪ ಗಡ್ಡಿ, ಶಿವಪುತ್ರಪ್ಪ ಹಾಗೂ ಇತರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT