ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲ್ವಾರ್ ದಂಪತಿಯತ್ತಲೇ ಬೆರಳು ತೋರಿದ ಸಿಬಿಐ

Last Updated 16 ಏಪ್ರಿಲ್ 2013, 10:38 IST
ಅಕ್ಷರ ಗಾತ್ರ

ಗಾಜಿಯಾಬಾದ್ (ಪಿಟಿಐ): ಐದು ವರ್ಷದ ಹಿಂದೆ ನಡೆದ ಆರುಷಿ ಕೊಲೆ ಪ್ರಕರಣ ಕುರಿತಂತೆ ನ್ಯಾಯಾಲಯದಲ್ಲಿ ಮಂಗಳವಾರ ಸಾಕ್ಷ್ಯ ನುಡಿದ ಸಿಬಿಐ ಆರುಷಿ ಕೊಲೆಯನ್ನು ಆಕೆಯ ಪಾಲಕರಾದ ದಂತವೈದ್ಯ ದಂಪತಿ ರಾಜೇಶ್ ಹಾಗೂ ನೂಪುರ್ ತಲ್ವಾರ್ ಅವರೇ ಮಾಡಿದ್ದಾಗಿ ತಿಳಿಸಿದ್ದು, ಕೊಲೆ ವೇಳೆ ಘಟನಾಸ್ಥಳದಲ್ಲಿ ಹೊರಗಿನವರ್‍ಯಾರು ಇರಲಿಲ್ಲ ಎಂದು ಹೇಳಿದೆ.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ವಿಶೇಷ ಸಿಬಿಐ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶ ಎಸ್.ಲಾಲ್ ಅವರ ಪೀಠದೆದುರು ಹಾಜರಾಗಿ ಸಾಕ್ಷ್ಯ ನುಡಿದ ಪ್ರಕರಣ ತನಿಖೆಯ ನೇತೃತ್ವವಹಿಸಿದ ಸಿಬಿಐ ತನಿಖಾಧಿಕಾರಿ ಎ.ಜಿ.ಎಲ್.ಕೌಲ್ ಅವರು `ಕೊಲೆ ನಡೆದ ಸಮಯದಲ್ಲಿ ಆ ಮನೆಯನ್ನು ಮೂರನೇಯ ವ್ಯಕ್ತಿ ಪ್ರವೇಶಿಸಿರುವ ಕುರಿತಂತೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ' ಎಂದು ಹೇಳಿದರು ಎಂದು ಸಿಬಿಐ ವಕೀಲ ಆರ್.ಕೆ.ಸೈನಿ ಸುದ್ದಿಗಾರರಿಗೆ ತಿಳಿಸಿದರು.

'ತನಿಖೆಯ ವೇಳೆ ಘಟನಾಸ್ಥಳ ಪರಿಶೀಲಿಸಲಾಗಿ ಅಲ್ಲಿ ಕಟ್ಟಡದ ಮೇಲ್ಚಾವಣಿ ಮೇಲೆ ಹೇಮ್‌ರಾಜ್‌ನ ಮೃತದೇಹವನ್ನು ಎಳೆದಾಡಿ ನಂತರ ಅದನ್ನು ಕೂಲರ್ ಪ್ಯಾನಲ್‌ನಲ್ಲಿ ಸುತ್ತಿಟ್ಟ ಹಾಗು ಆರುಷಿ ಮಲಗುವ ಕೋಣೆಯ ಬಾಗಿಲನ್ನು ಹೊರಗಡೆಯಿಂದಲೇ ಬೀಗ ಹಾಕಿರುವ ಹಲವು ಗುರುತುಗಳು ಪತ್ತೆಯಾಗಿದ್ದು ಇವುಗಳು ತಲ್ವಾರ್ ದಂಪತಿಯೇ ಈ ಕೊಲೆ ಮಾಡಿದ್ದಾರೆ ಎನ್ನುವುದನ್ನು ಸೂಚಿಸುತ್ತವೆ ಆದರೆ ಇದಕ್ಕೆ ಪೂರಕವಾಗಿ ಅವರ ವಿರುದ್ಧ ಸಾಕಷ್ಟು ಪುರಾವೆಗಳು ಲಭ್ಯವಾಗಿಲ್ಲ ಎಂದು ಕೌಲ್ ತಿಳಿಸಿದರು' ಎಂದು ಸೈನಿ ಹೇಳಿದರು.

ಈ ಕೊಲೆ ಪ್ರಕರಣ ಕುರಿತಂತೆ ಸಿಬಿಐ 2010ರ ಡಿಸೆಂಬರ್‌ನಲ್ಲಿ ತಲ್ವಾರ್ ದಂಪತಿ ವಿರುದ್ಧ ಸಾಕ್ಷ್ಯವೆಂದು ಅಂಗೀಕರಿಸಬಹುದಾದ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು ಹೇಳಿ ಪ್ರಕರಣ ಪರಿಸಮಾಪ್ತಿ ವರದಿ ಸಲ್ಲಿಸಿತ್ತು. ಆದರೆ ಈ ವರದಿಯನ್ನು ತಿರಸ್ಕರಿಸಿದ ನ್ಯಾಯಾಧೀಶರು ವಿಚಾರಣೆ ಎದುರಿಸುವಂತೆ ತಲ್ವಾರ್ ದಂಪತಿಗೆ ನಿರ್ದೇಶನ ನೀಡಿದ್ದರು.

ತಲ್ವಾರ್ ದಂಪತಿ ವಿರುದ್ಧ ಕೊಲೆ, ಸಾಕ್ಷ್ಯ ನಾಶ, ಒಳಸಂಚು ಹಾಗೂ ಅಪರಾಧ ಕೃತ್ಯ ಎಸಗಲು ಸಮಾನ ಉದ್ದೇಶ ಹೊಂದಿದ ಆರೋಪಗಳನ್ನು ನ್ಯಾಯಾಲಯ ಹೊರಿಸಿದೆ.

14 ವರ್ಷದ ಬಾಲಕಿ ಆರುಷಿ 2008ರಲ್ಲಿ ನೋಯ್ಡಾದಲ್ಲಿರುವ ತನ್ನ ಮನೆಯಲ್ಲಿನ ಮಲಗುವ ಕೊಠಡಿಯಲ್ಲಿ ಹತ್ಯೆಯಾಗಿದ್ದಳು. ಒಂದು ದಿನದ ಬಳಿಕ ಮನೆ ಕೆಲಸಗಾರ ಹೇಮರಾಜ್ ಶವ ಕೂಡ ಮನೆಯ ಮಹಡಿ ಮೇಲೆ ಪತ್ತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT