ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಳಮಟ್ಟದಲ್ಲಿ ಪರಿಣಾಮ ಬೀರದ ಆರ್ಥಿಕ ಸುಧಾರಣೆ

Last Updated 18 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಜಾಗತೀಕರಣಕ್ಕೆ ಮೊದಲಿನ ದಿನಗಳಲ್ಲಿ ಕಂಪೆನಿಗಳು ಸಾರ್ವಜನಿಕ ಖರೀದಿಗೆ ಬಿಡುಗಡೆ ಮಾಡಿದ್ದ ಷೇರು, ಬಾಂಡ್‌ಗಳ ಮೌಲ್ಯಕ್ಕಿಂತ ಈಗಿನ ಷೇರು, ಬಾಂಡ್‌ಗಳ ಮೌಲ್ಯ ನೂರುಪಟ್ಟು ಅಥವಾ ಅದಕ್ಕೂ ಹೆಚ್ಚಾಯಿತು. ಈ ಸಂದರ್ಭದಲ್ಲಿ ಭಾರತವು ಸೇವಾ ಕ್ಷೇತ್ರಕ್ಕೆ ಇದ್ದ ಜಾಗತಿಕ ಮಾರುಕಟ್ಟೆ ಮತ್ತು ಜಾಗತಿಕ ಬಂಡವಾಳದ ನೆರವಿನಿಂದ ಹೆಚ್ಚಿನ ಬೆಳವಣಿಗೆ ದರದ ಹಾದಿಯಲ್ಲಿತ್ತು.

ಅರ್ಥ ವ್ಯವಸ್ಥೆಯು ಜಾಗತಿಕ ಮಾರುಕಟ್ಟೆಯತ್ತ ದೃಷ್ಟಿ ಹಾಯಿಸಿದಂತೆಯೇ, ರಾಷ್ಟ್ರದ ನೀತಿ ನಿರೂಪಕರ ಕಣ್ಣೂ ಅತ್ತ ಹರಿಯಿತು. ಷೇರು ಮಾರುಕಟ್ಟೆಯಲ್ಲಿನ ವಿದೇಶಿ ಸಾಂಸ್ಥಿಕ ಹೂಡಿಕೆಗಳ ಮೇಲೆ ಅರ್ಥ ವ್ಯವಸ್ಥೆಯ ಅವಲಂಬನೆ ಹೆಚ್ಚಿದಂತೆ, ಈ ಹೂಡಿಕೆದಾರರಿಗೆ ಯಾವುದೇ ತಪ್ಪು ಸಂದೇಶ ರವಾನೆಯಾಗದಂತೆ ನೋಡಿಕೊಳ್ಳಲು ನೀತಿ ನಿರೂಪಕರು ಹೆಚ್ಚಿನ ಆದ್ಯತೆ ನೀಡಲು ಆರಂಭಿಸಿದರು. ದೇಶದ ಅರ್ಥ ವ್ಯವಸ್ಥೆಯ ಹೊಣೆ ಹೊತ್ತವರು ವಿದೇಶಿ ಮಾಪನ ಸಂಸ್ಥೆಗಳು ನೀಡುವ ಅಭಿಪ್ರಾಯಕ್ಕೆ ಹೆಚ್ಚು ಮಾನ್ಯತೆ ನೀಡಿದರು. ವಿದೇಶಿ ಮಾಪನ ಸಂಸ್ಥೆಗಳು ಭಾರತದ ಬಗ್ಗೆ ಸಂದೇಹ ವ್ಯಕ್ತಪಡಿಸುವ ಸಾಧ್ಯತೆ ಇದೆ ಎಂಬ ಸೂಚನೆ ಬಂದಾಗಲೆಲ್ಲ, ದೊಡ್ಡ ಪ್ರಮಾಣದ ಸುಧಾರಣಾ ಕ್ರಮಗಳನ್ನು ಘೋಷಿಸಲಾಯಿತು. ಆದರೆ, ಸುಧಾರಣೆಗಳು ಎಷ್ಟೇ ದೊಡ್ಡದಾಗಿದ್ದರೂ, ತಳ ಮಟ್ಟದಲ್ಲಿ ಅವುಗಳ ಒಟ್ಟು ಪರಿಣಾಮ ಸಣ್ಣದಾಗಿಯೇ ಇತ್ತು.

ವಿದೇಶಿ ಹೂಡಿಕೆದಾರರಿಗೆ ಸರಿಯಾದ ಚಿತ್ರಣ ನೀಡುವ ಪ್ರಯತ್ನದ ಭಾಗವಾಗಿ ಪ್ರಮುಖ ನಗರಗಳನ್ನು ದುರಸ್ತಿ ಮಾಡಲಾಯಿತು. ಆದರೆ, ಮೆಟ್ರೊಪಾಲಿಟನ್ ನಗರಗಳಲ್ಲಿ ವಿದೇಶಿ ಹೂಡಿಕೆದಾರನ ಅನುಭವಕ್ಕೆ ಬರುವ ಸಂಗತಿಗಳಿಗೆ ಹೆಚ್ಚಿನ ಆದ್ಯತೆ ಸಿಗಲಿಲ್ಲ. ಇದು ಆಶ್ಚರ್ಯದ ಸಂಗತಿ. ಭಾರಿ ವೇಗದೊಂದಿಗೆ ವಿಮಾನ ನಿಲ್ದಾಣಗಳನ್ನು ಆಧುನೀಕರಣಗೊಳಿಸಲಾಯಿತು. ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ನಡೆದ ಬೆಂಗಳೂರು, ಬಳಕೆಯಲ್ಲಿದ್ದ ಒಂದು ವಿಮಾನ ನಿಲ್ದಾಣವನ್ನು ಸ್ಥಗಿತಗೊಳಿಸಿ, ಹೊಸ ನಿಲ್ದಾಣ ನಿರ್ಮಿಸಿತು. ಪ್ರಮುಖ ನಗರಗಳಲ್ಲಿ ಮೇಲ್ಸೇತುವೆಗಳು ಕಾಣಿಸಿಕೊಂಡವು. ವಿದೇಶಿ ಹೂಡಿಕೆದಾರರನ್ನು ಚೆನ್ನಾಗಿ ಇಟ್ಟುಕೊಳ್ಳಲು ಆದ್ಯತೆ ನೀಡಿದ್ದರಿಂದಾಗಿ, ಆ ನಿಟ್ಟಿನ ಯಾವ ಕೆಲಸಕ್ಕೂ ಖರ್ಚು ಕಡಿಮೆ ಮಾಡಲಿಲ್ಲ. ಬೆಂಗಳೂರಿನ ನಗರ ನೀತಿ ನಿರೂಪಣೆ ಕೆಲಸವನ್ನು ಮಾಹಿತಿ ತಂತ್ರಜ್ಞಾನ ಉದ್ದಿಮೆಗೆ ಹಸ್ತಾಂತರಿಸಲಾಯಿತು – ನಂದನ್ ನಿಲೇಕಣಿ ನೇತೃತ್ವದಲ್ಲಿ ಬೆಂಗಳೂರು ಅಜೆಂಡಾ ಕಾರ್ಯಪಡೆ ರಚಿಸಲಾಯಿತು.

ಜಾಗತಿಕ ವಿದ್ಯಮಾನಗಳ ಮೇಲಿನ ಅವಲಂಬನೆ ಎಷ್ಟರಮಟ್ಟಿಗೆ ಇದೆ ಎಂಬುದು ತಕ್ಷಣಕ್ಕೆ ಗೊತ್ತಾಗಲಿಲ್ಲ. 2008ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಎದುರಾದಾಗ, ಭಾರತಕ್ಕೆ ಏನೂ ಆಗುವುದಿಲ್ಲ ಎಂದು ವಾದಿಸುವುದು ಸಾಮಾನ್ಯವಾಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾದ ಬೇಡಿಕೆ ಕುಸಿತ ಸರಿದೂಗಿಸಲು ಆಂತರಿಕ ಬೇಡಿಕೆ ಹೆಚ್ಚಿಸಬೇಕಿತ್ತು. ಆ ಹೊತ್ತಿನಲ್ಲಿ ವಿತ್ತೀಯ ಕೊರತೆ ಹೆಚ್ಚಲು ಅವಕಾಶ ಕೊಡಲಾಯಿತು. ಚುನಾವಣಾ ವರ್ಷದಲ್ಲಿ ಆದ ಈ ಬದಲಾವಣೆಯ ರಾಜಕೀಯ ಲಾಭ ಪಡೆದುಕೊಳ್ಳಲು, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಜಾರಿಗೊಳಿಸಲಾಯಿತು. ಸಾಕಷ್ಟು ಅನುದಾನ ಇರುವ ಯೋಜನೆಗಳನ್ನು ರಾಜ್ಯಗಳಲ್ಲಿ ಜಾರಿಗೆ ತರಲಾಯಿತು. 2009ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿತು. ಅರ್ಥ ವ್ಯವಸ್ಥೆಯಲ್ಲಿ ಎಲ್ಲವೂ ಸರಿ ಇದೆ ಎಂದು ಭಾಸವಾಯಿತು.

1991ರ ನಂತರ ದಶಕಗಳಲ್ಲಿ ಕಂಡ ತೀವ್ರಗತಿಯ ಬೆಳವಣಿಗೆ ಸಮ್ಮಿಶ್ರ ಫಲ ಕೊಟ್ಟಿತು. ಭಾರತೀಯ ಅರ್ಥ ವ್ಯವಸ್ಥೆಯಲ್ಲಿ ಮೂಡಿದ ಗಂಭೀರ ಬಿಕ್ಕಟ್ಟನ್ನು ಮರೆಮಾಚಲು ಇದು ಸಹಾಯ ಮಾಡಿತು. ಕೃಷಿ ವಲಯದ ಬೆಳವಣಿಗೆ ನಿಂತ ನೀರಿನಂತೆ ಆದ ಕಾರಣ, ಜನ ದೊಡ್ಡ ಸಂಖ್ಯೆಯಲ್ಲಿ ಬೇರೆ ಉದ್ಯೋಗ ಅರಸಲು ಆರಂಭಿಸಿದರು. ಇದು ಅನಿರೀಕ್ಷಿತ ಆಗಿರಲಿಲ್ಲ. ದೇಶಗಳು ಅಭಿವೃದ್ಧಿ ಸಾಧಿಸಿದಂತೆಲ್ಲ, ಸೀಮಿತ ಭೂಪ್ರದೇಶ ನಂಬಿಕೊಂಡಿರುವ ಕೃಷಿ ಕ್ಷೇತ್ರಕ್ಕೆ ಏಗಲು ಸಾಧ್ಯವಾಗಷ್ಟು ವೇಗದ ಬೆಳವಣಿಗೆ ಕಂಡುಬರುತ್ತದೆ. ಆಗ ಕೃಷಿಯಿಂದ ಜನ ವಿಮುಖರಾಗುತ್ತಾರೆ, ಅಭಿವೃದ್ಧಿಯ ವೇಗ ಸರಿದೂಗಿಸಲಾಗುತ್ತದೆ.

ಜನ ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುತ್ತಾರೆ. ಆದರೆ ಭಾರತದ ಸಂದರ್ಭದಲ್ಲಿ, ನಗರಗಳನ್ನು ವಿದೇಶಿ ಹೂಡಿಕೆದಾರರಿಗೆ ಆಕರ್ಷಕಗೊಳಿಸುವ ಪ್ರಯತ್ನದಲ್ಲಿ ಸಂಪನ್ಮೂಲಗಳ ಹಂಚಿಕೆ ಸರಿಯಾಗಿ ಆಗಲಿಲ್ಲ. ಇಡೀ ನಗರವನ್ನು ಅಭಿವೃದ್ಧಿಪಡಿಸುವ ಉದ್ದೇಶದ ಯೋಜನೆಗಳು ರೂಪುಗೊಳ್ಳಲಿಲ್ಲ. ಬೇರೆಯವರ ಗಮನ ಸೆಳೆಯುವ ಯೋಜನೆಗಳು ಮಾತ್ರ ರೂಪುಗೊಂಡವು. ಇದರ ಪರಿಣಾಮವಾಗಿ, ಮೂಲಭೂತ ಅಗತ್ಯಗಳನ್ನೂ ನಿರ್ಲಕ್ಷಿಸಲಾಯಿತು. ಇದು ನಗರಗಳಲ್ಲಿ ಅವ್ಯವಸ್ಥೆ ಸೃಷ್ಟಿಯಾಗಲು ಕಾರಣವಾಯಿತು.

ಇದಕ್ಕೆ ಬೆಂಗಳೂರಿಗಿಂತ ಉತ್ತಮ ಉದಾಹರಣೆ ಬೇರೆ ಬೇಕಿಲ್ಲ. ಇಲ್ಲಿ ಎಲೆಕ್ಟ್ರಾನಿಕ್‌ ಸಿಟಿ ಅಭಿವೃದ್ಧಿಪಡಿಸುವ ಮುನ್ನ, ಅಲ್ಲಿ ಕೆಲಸ ಮಾಡಲಿರುವ ಉದ್ಯೋಗಿಗಳು ವಾಸಿಸುವುದು ಎಲ್ಲಿ ಎಂಬ ಬಗ್ಗೆ ಆಲೋಚನೆಯೇ ನಡೆಯಲಿಲ್ಲ. ಎಲೆಕ್ಟ್ರಾನಿಕ್‌ ಸಿಟಿಯ ಕಂಪೆನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡವರು ನಗರದಲ್ಲಿ ತಮಗೆ ಇಷ್ಟಬಂದೆಡೆ ನೆಲೆಸಿದರು. ಅಲ್ಲಿಂದ ತಮ್ಮ ಕೆಲಸದ ಸ್ಥಳಕ್ಕೆ ಸಂಚರಿಸಲು ಆರಂಭಿಸಿದರು. ಭಾರಿ ಸಂಖ್ಯೆಯ ಉದ್ಯೋಗಿಗಳು ದೂರದ ಮಾರ್ಗ ಕ್ರಮಿಸಬೇಕಿದ್ದ ಕಾರಣ, ನಗರದ ರಸ್ತೆಗಳು ಸಂಚಾರ ದಟ್ಟಣೆಯಿಂದ ತುಂಬಿಹೋದವು. ಈ ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಲೋ ಎಂಬಂತೆ, ಹೊಸ ವಿಮಾನ ನಿಲ್ದಾಣವನ್ನು ನಗರದ ಉತ್ತರ ದಿಕ್ಕಿನಲ್ಲಿ ನಿರ್ಮಿಸಲಾಯಿತು. ಆದರೆ ನಗರದ ಬೆಳವಣಿಗೆಯ ಚಾಲಕ ಶಕ್ತಿಗಳಾದ ಐ.ಟಿ ಮತ್ತು ಬಿ.ಟಿ. ಉದ್ದಿಮೆಗಳು ನಗರದ ದಕ್ಷಿಣ ಭಾಗದಲ್ಲಿದ್ದವು. ಇದರಿಂದಾಗಿ ಸಾರಿಗೆ ವ್ಯವಸ್ಥೆಯ ಬೇಡಿಕೆ ಇನ್ನಷ್ಟು ತೀವ್ರವಾಯಿತು. ಬೆಂಗಳೂರು ಹಿಂದೆ ದಾಖಲಿಸಿದ್ದ ಯಶಸ್ಸಿನಿಂದ ಯಾವ ಪಾಠವನ್ನೂ ಕಲಿಯಲಿಲ್ಲ.

ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಬೆಂಗಳೂರಿನಲ್ಲಿ ಬೆಳೆಸುವ ಉದ್ದೇಶದಿಂದ ಯೋಜನೆ ರೂಪಿಸುವಾಗ, ಕಾರ್ಮಿಕರು ತಾವು ಕೆಲಸ ಮಾಡುವ ಸ್ಥಳದ ಸಮೀಪವೇ ವಾಸ್ತವ್ಯ ಹೂಡಲು ಅನುಕೂಲ ಕಲ್ಪಿಸಲಾಗಿತ್ತು. ಇದರಿಂದಾಗಿ 1970ರ ಅವಧಿಯಲ್ಲಿ ಬೆಂಗಳೂರು ನಗರ ಕಂಡ ತೀವ್ರಗತಿಯ ಬೆಳವಣಿಗೆಯು ಈಗ ಕಾಣುತ್ತಿರುವಂಥ ಸಂಚಾರ ಅವ್ಯವಸ್ಥೆಗೆ ಕಾರಣವಾಗಲಿಲ್ಲ.

ಇನ್ನೂ ತೃತೀಯ ವಿಶ್ವದಲ್ಲೇ ಇದ್ದ ದೇಶವೊಂದರಲ್ಲಿ ಅಭಿವೃದ್ಧಿ ಹೊಂದಿದ ದೇಶಗಳಲ್ಲಿರುವ ನಗರಗಳನ್ನು ನಿರ್ಮಿಸುವುದರ ಹಿಂದೆ ಮೂಲಭೂತ ಚಿಂತನೆಯೊಂದು ಇರಬೇಕು. ಹಳ್ಳಿಗಳಿಂದ ನಗರಕ್ಕೆ ಬರುವವರಿಗೆ ಇಲ್ಲಿನ ಜೀವನ ವೆಚ್ಚ ಭರಿಸುವುದು ಕಷ್ಟ. ಕಾರ್ಮಿಕರು ಹಳ್ಳಿಯಲ್ಲೇ ಇದ್ದುಕೊಂಡು, ಕೆಲಸಕ್ಕೆ ನಗರಕ್ಕೆ ಬಂದು–ಹೋಗುವಂತೆ ಮಾಡುವುದು ಈ ಸಮಸ್ಯೆಗೆ ಇರುವ ಪರಿಹಾರ. ಕೈಗಾರಿಕಾ ಬೆಳವಣಿಗೆ ಒಂದೇ ಪ್ರದೇಶದಲ್ಲಿ ಆಗಿರದಿದ್ದ ರಾಜ್ಯಗಳಲ್ಲಿ, ಕಾರ್ಮಿಕರು ತಮ್ಮ ಹಳ್ಳಿಗಳಲ್ಲೇ ಇದ್ದುಕೊಂಡು ಸಮೀಪದ ನಗರ, ಪಟ್ಟಣಗಳಲ್ಲಿರುವ ಕಾರ್ಖಾನೆಗೆ ಕೆಲಸಕ್ಕೆ ಹೋಗಿಬರುತ್ತಿದ್ದರು.

ಆದರೆ ದೇಶದ ಬಹುತೇಕ ಪ್ರದೇಶಗಳಲ್ಲಿ ಹೀಗಾಗಲಿಲ್ಲ. ಹೆಚ್ಚು ಹಿಂದುಳಿದಿರುವ ರಾಜ್ಯಗಳಾದ ಬಿಹಾರ್‌ ಮತ್ತು ಜಾರ್ಖಂಡ್‌ನ ಕಾರ್ಮಿಕರು ಕೆಲಸ ಹುಡುಕಲು ಸಾವಿರಾರು ಕಿಲೋ ಮೀಟರ್‌ ಪ್ರಯಾಣಿಸಬೇಕಿತ್ತು. ತಮ್ಮ ಉಳಿತಾಯದ ಹಣ ಬಳಸಿ, ಹಳ್ಳಿಯಲ್ಲಿ ಅಳಿದುಳಿದಿದ್ದನ್ನೇ ಮತ್ತೆ ಕಟ್ಟಲು ಸಾಧ್ಯವಾಗುತ್ತದೆ ಎಂದಾದರೆ ಅವರು ನಗರಗಳಲ್ಲಿ ಅಮಾನವೀಯ ಪರಿಸ್ಥಿತಿಯಲ್ಲೂ ಜೀವನ ನಡೆಸಲು ಸಿದ್ಧರಿದ್ದರು.

ಇಂಥ ಮಾದರಿಯ ಬೆಳವಣಿಗೆಗೆ ದೊಡ್ಡ ಬೆಲೆ ತೆರಬೇಕು. ಆರ್ಥಿಕ ಮಟ್ಟದಲ್ಲಿ ಇದು, ನಗರಗಳ ಕಾರ್ಮಿಕರ ಒಂದು ವರ್ಗ ಕಡು ಬಡತನದಲ್ಲಿ ಜೀವನ ಸವೆಸುವಂತೆ ಮಾಡಿತು. ಇದಕ್ಕೆ ಉದಾಹರಣೆ, ನಗರಗಳ ಕಟ್ಟಡ ನಿರ್ಮಾಣ ವಲಯ. ಸಾಮಾಜಿಕ ಮಟ್ಟದಲ್ಲಿ, ಕಾರ್ಮಿಕರ ದೊಡ್ಡ ವರ್ಗ ತಮ್ಮ ಕುಟುಂಬಗಳಿಂದ ತೀರಾ ದೂರದಲ್ಲಿ ನೆಲೆಸಬೇಕಾಯಿತು. ಇಂಥ ಕಾರ್ಮಿಕರು ತಮ್ಮ ಮಕ್ಕಳನ್ನು ಕಾಣುವುದೂ ಅಪರೂಪ ಎಂಬಂತೆ ಆಯಿತು. ಕುಟುಂಬದಿಂದ ದೂರ ಇರುವುದರ ಸಮಸ್ಯೆಯಿಂದ ಹೊರಬರಲು ಈ ಕಾರ್ಮಿಕರು ತಮ್ಮ ಸೀಮಿತ ಆದಾಯದ ದೊಡ್ಡ ಪಾಲನ್ನು ಮೊಬೈಲ್‌ ದೂರವಾಣಿಗಳ ಮೇಲೆ ಸುರಿಯಲು ಆರಂಭಿಸಿದರು. ಭಾರತದಲ್ಲಿ ಭಾರಿ ಪ್ರಮಾಣದಲ್ಲಿ ಮೊಬೈಲ್‌ ದೂರವಾಣಿ ಸಂಪರ್ಕ ಇದೆ ಎಂದು ಕೆಲವೊಮ್ಮೆ ಸಂಭ್ರಮಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಇದು ಒಂದು ಸಾಮಾಜಿಕ ಬಿಕ್ಕಟ್ಟು ಉದ್ಭವವಾಗುತ್ತಿರುವುದರ ಸಂಕೇತ.

ಬಡವರ ಆಕಾಂಕ್ಷೆಗಳಿಗೆ ಉತ್ತೇಜನ ನೀಡುವ ಮೂಲಕ ನಗರಗಳ ಜೀವನ ಮಟ್ಟದಲ್ಲಿ ಇರುವ ತೀಕ್ಷ್ಣ ಅಸಮಾನತೆಯನ್ನು ಕೆಲವೊಮ್ಮೆ ಒರೆಸಿ ಹಾಕಲಾಗುತ್ತದೆ. ಅಸಮಾನತೆಯ ಇನ್ನೊಂದು ತುದಿ ತಲುಪುವ ಆಸೆಯನ್ನು ಬಡವರು ಬೆಳೆಸಿಕೊಳ್ಳಲು ‘ಕಡುಬಡವ ಶ್ರೀಮಂತನಾದ’ ಕತೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಶ್ರೀಮಂತರಾಗಲು ಇರುವ ನ್ಯಾಯಯುತ ಮಾರ್ಗಗಳು ತೀರಾ ಸೀಮಿತವಾಗಿರುವ ಕಾರಣ, ಅಪರಾಧ ಕೃತ್ಯಗಳಿಗೆ ಇಳಿಯುವುದು ಕೆಲವೊಮ್ಮೆ ಆಕರ್ಷಕವಾಗಿ ಕಾಣಿಸುತ್ತದೆ. ತಮ್ಮ ಆಕಾಂಕ್ಷೆಗಳು ಅದೆಷ್ಟು ನಿರರ್ಥಕ ಎಂಬುದು ಅರಿವಾದಾಗ ಕೆಲವರು ಕೋಪದ ದವಡೆಗೆ ಸಿಲುಕುತ್ತಾರೆ.

ಈ ಸಿಟ್ಟು ಅತ್ಯಂತ ಸ್ಪಷ್ಟವಾಗಿ ಕಾಣಿಸುವುದು ರಾಜಕೀಯ ಕ್ಷೇತ್ರದಲ್ಲಿ. ನೀತಿ ನಿರೂಪಕರು ದೊಡ್ಡ ದನಿಯಲ್ಲಿ ಹೇಳುವ ಭಾರಿ ಬೆಳವಣಿಗೆ ದರ, ತಳಮಟ್ಟದಲ್ಲಿ 1991ರ ನಂತರದ ಭಾರತೀಯನಲ್ಲಿರುವ ಆಕಾಂಕ್ಷೆಗಳಿಗೆ ಅನುಗುಣವಾಗಿ ಸುಧಾರಣೆ ತರುವುದಿಲ್ಲ. ಬೇರೆ ದೇಶಗಳಮಟ್ಟಿಗೆ ಭಾರಿ ಎನ್ನಬಹುದಾದ ಬೆಳವಣಿಗೆ ದರ ನಮ್ಮ ದೇಶದಲ್ಲಿ ಇದ್ದರೂ, ಸರ್ಕಾರಗಳು ಅಧಿಕಾರ ಕಳೆದುಕೊಂಡ ಬಗೆಯು ಉದಾರೀಕರಣದ ನಂತರದ ಭಾರತದ ವಾಸ್ತವಕ್ಕೆ ಕನ್ನಡಿ ಹಿಡಿಯುತ್ತದೆ.

(ಲೇಖಕರು ಬೆಂಗಳೂರಿನ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್‌ನಲ್ಲಿ ಪ್ರೊಫೆಸರ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT