ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಳೂರು: ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹ

Last Updated 1 ಜೂನ್ 2011, 10:50 IST
ಅಕ್ಷರ ಗಾತ್ರ

ಮೈಸೂರು: ಜಯಪುರ ಹೋಬಳಿ ತಳೂರು ಗೋಮಾಳ ಜಮೀನಿನಲ್ಲಿ ನಡೆಯುತ್ತಿರುವ ಬಿಳಿ ಕಲ್ಲು ಗಣಿಗಾರಿಕೆಯಿಂದ ಸಮೀಪದ ಮನೆಗಳಿಗೆ ಧಕ್ಕೆಯಾಗಿದ್ದು, ಗಣಿಗಾರಿಕೆ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾಪಂ ಮಾಜಿ ಸದಸ್ಯ ಟಿ.ಎಸ್. ಪುಟ್ಟಸ್ವಾಮಿ, ಮ್ಯಾಗ್ನೇಸೈಟ್ ಬಿಳಿ ಕಲ್ಲಿಗಾಗಿ ಇಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಆದರೆ ಗಣಿಯಲ್ಲಿ ಸ್ಫೋಟಕ್ಕೆ ಬಳಸುವ ಸಿಡಿ ಮದ್ದಿನಿಂದ ಸುತ್ತಲಿನ ಗ್ರಾಮಸ್ಥರ ನೆಮ್ಮದಿ ಭಂಗವಾಗಿದೆ. 20-30 ವರ್ಷಗಳ ಹಿಂದೆ ಕಟ್ಟಿದ ಆರ್‌ಸಿಸಿ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಹಲವು ಮನೆಗಳು ಗಣಿ ಅಬ್ಬರಕ್ಕೆ ಕುಸಿದಿವೆ. ಗ್ರಾಮದ ಚೋಳರ ಕಾಲದ ಶಂಭುಲಿಂಗೇಶ್ವರ ದೇವಾಲಯದ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಗ್ರಾಮದಲ್ಲಿ ಮದುವೆ ಕಾರ್ಯಗಳಿಗೆ ಆಸರೆಯಾಗಿದ್ದ ಛತ್ರ ಸಂಪೂರ್ಣವಾಗಿ ಹಾನಿಗೊಳಗಾಗಿದೆ ಎಂದು ಆರೋಪಿಸಿದರು.

ರೈತ ಟಿ. ಎಂ. ಪ್ರಕಾಶ್ ಮಾತನಾಡಿ, ಗಣಿಗಾರಿಕೆಯಿಂದ ಸುತ್ತಲಿನ ಜಮೀನುಗಳಲ್ಲಿ ಕೃಷಿ ಕೆಲಸ ಮಾಡುವುದು ಕಷ್ಟವಾಗಿದೆ. ಗಣಿ ಪ್ರದೇಶದಿಂದ ಹೊರಗೆ ಸಿಡಿಯುವ ಕಲ್ಲಿನ ಚೂರಿನಿಂದ ಅನೇಕ ರೈತರು ಗಾಯಗೊಂಡಿದ್ದಾರೆ. ಸಮೀಪದ ಜಮೀನುಗಳ ಕೊಳವೆ ಬಾವಿ ಬತ್ತಿ ಹೋಗಿದ್ದು, ಕೃಷಿ ಕೆಲಸಕ್ಕೆ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಗಣಿಯಿಂದ ಉಂಟಾಗುವ ಶಬ್ದ ಮಾಲಿನ್ಯಕ್ಕೆ ಗರ್ಭಿಣಿಯರು, ಮಕ್ಕಳು ಆತಂಕದಲ್ಲಿ ದಿನಗಳನ್ನು ಕಳೆಯುತ್ತಿದ್ದಾರೆ. ಆದ್ದರಿಂದ ಇಲ್ಲಿ ಗಣಿಗಾರಿಕೆ ನಡೆಸುವುದನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಯುವ ಕಾಂಗ್ರೆಸ್ ಮುಖಂಡ ಪಿ.ವಿ. ವಿಜಯಕುಮಾರ್ ಮಾತನಾಡಿ, ಗಣಿ ಮಾಲೀಕರು ಗ್ರಾಮಸ್ಥರ ನಡುವೆ ವೈಷಮ್ಯ ಬಿತ್ತಿ ತಮ್ಮ ಕೆಲಸ   ಸಾಧಿಸಿಕೊಳ್ಳುತ್ತಿದ್ದಾರೆ. ಗಣಿಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಭದ್ರತೆ ಇಲ್ಲ. ಈಚೆಗೆ ಗಣಿ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾವಲುಗಾರ ಮೃತಪಟ್ಟಾಗ ಅವರ ಕುಟುಂಬಕ್ಕೆ ಪರಿಹಾರ ನೀಡಿರಲಿಲ್ಲ. ಕೊನೆಗೆ ಗ್ರಾಮಸ್ಥರು, ಮೃತರ ಕುಟುಂಬ ವರ್ಗ ಪ್ರತಿಭಟನೆ ನಡೆಸಿದಾಗ ಕೇವಲ ರೂ.8 ಸಾವಿರ ಪರಿಹಾರ ನೀಡಿ ಗಣಿ ಮಾಲಿಕರು ಕೈ ತೊಳೆದುಕೊಂಡರು. ಗ್ರಾಮಸ್ಥರು ಈ ಬಗ್ಗೆ ದೂರು ನೀಡಲು ಹೋದರೆ ಗಣಿ ಮಾಲಿಕರು ರಾಜಕೀಯ ಪ್ರಭಾವ ಬಳಸಿ ದೂರು ಸ್ವೀಕರಿಸದಂತೆ ಒತ್ತಡ ಹೇರುತ್ತಾರೆ ಎಂದು ದೂರಿದರು.

ತಾಲ್ಲೂಕು ಆಡಳಿತದ ಬಳಿ ಇಲ್ಲಿ ನಡೆಯುತ್ತಿರುವ ಗಣಿಗಾರಿಕೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದು ಅಕ್ರಮವೋ ಸಕ್ರಮವೋ ಎಂಬುದು ತನಿಖೆಯಿಂದ ತಿಳಿಯುತ್ತದೆ. ಆದರೆ ಕೆಲವು ರಾಜಕೀಯ ಮುಖಂಡರು ತನಿಖೆಗೆ ಕ್ರಮ ಕೈಗೊಳ್ಳದೆ ಗಣಿ ಮಾಲಿಕರ ಪರ ಲಾಬಿ ನಡೆಸುತ್ತಿದ್ದಾರೆ. ಗ್ರಾಮಸ್ಥರ ಬೇಡಿಕೆಯಂತೆ ಇಲ್ಲಿ ಗಣಿಗಾರಿಕೆ ನಡೆಸುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತಳೂರು ಗ್ರಾಪಂ ಸದಸ್ಯ ಟಿ.ಪಿ. ಪ್ರಕಾಶ್, ಮಹದೇವಸ್ವಾಮಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT