ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತವರಿಗೆ ಬಾ ತಂದೆ...!

Last Updated 6 ಜುಲೈ 2013, 19:59 IST
ಅಕ್ಷರ ಗಾತ್ರ

ಹರಟೆಕಟ್ಟೆಯಲ್ಲಿ ದುಬ್ಬೀರ ತಲೆ ಮೇಲೆ ಕೈಹೊತ್ತು ಚಿಂತಾಕ್ರಾಂತನಾಗಿ ಕುಳಿತಿದ್ದ. ಮಾತಿಲ್ಲ, ಕತೆಯಿಲ್ಲ, ಮುಖದಲ್ಲಿ ಮೂರು ಕಾಸಿನ ನಗುವಿಲ್ಲ. ಕೆದರಿದ ಕೂದಲು, ಬೋಳಿಸದ ಗಡ್ಡ... ಕೈಗೊಂದು ಬಾಟಲು ಕೊಟ್ಟುಬಿಟ್ಟಿದ್ದರೆ ಥೇಟ್ ದೇವದಾಸನೇ ಸರಿ...
`ಯಾಕೋ ಮಗಾ ಹಿಂಗಿದೀಯ? ಏನಾಯ್ತ್?' ಮಿಸ್ಸಮ್ಮ ಪ್ರೀತಿಯಿಂದ ವಿಚಾರಿಸಿದಳು. ದುಬ್ಬೀರ ಮಾತಾಡಲಿಲ್ಲ.

`ಯಾಕಲೆ ಗಡ್ಡ ಬಿಟ್ಟಿದೀಯ ? ನಿನ್ ಹಳೆ ಲವ್ವರು ಮತ್ತೆ ಕೈ ಕೊಟ್ಲಾ? ಅಥ್ವ ಸಿದ್ರಾಮಯ್ಯ ಅಗ್ಗದ ಮದ್ಯ ಕೊಡ್ಲಿಲ್ಲ ಅಂತ ಬೇಜಾರಾ?' ಗುಡ್ಡೆಗೆ ಒಳಗೇ ನಗು.

`ಎರಡಕ್ಕೂ ಅಲ್ಲ' ಎಂದ ತೆಪರೇಸಿ.
`ಮತ್ತೆ? ಇನ್ಯಾಕೆ?'
`ಹೋದ ವರ್ಷ... ಅದೇ ಯಡ್ಯೂರಪ್ಪ ಬಿ.ಜೆ.ಪಿ. ಬಿಟ್ರಲ್ಲ, ಆಗ ಮನೆ ಬಿಟ್ಟು ಹೋಗಿದ್ದ ದುಬ್ಬೀರನ ಹೆಂಡ್ತಿ ಪಮ್ಮಿ ಈಗ ವಾಪಾಸ್ ಬರ್ತಿನಿ ಅಂತ ಯಾರ ಯಾರ ಹತ್ರನೋ ಹೇಳಿ ಕಳ್ಸಿದಾಳಂತೆ. ಅದ್ಕೇ ಇವ್ನ ಗಾಬರಿಯಾಗಿ ತೆಲಿ ಕೆಡಿಸ್ಕಂಡ್ ಕುಂತಿದ್ದಾನೆ...'

ಮಿಸ್ಸಮ್ಮಗೆ ಸಿಟ್ಟು ಬಂತು `ಹೌದೇನೋ ದುಬ್ಬೀರ? ನಿನ್ ಮೂತಿಗಿಷ್ಟು. ಮುನಿಸ್ಕಂಡ್ ಹೋದ ಹೆಂಡ್ತಿ ವಾಪಾಸ್ ಬರ‌್ತೀನಿ ಅಂದ್ರೆ ಹೋಗಿ ಕರ ಕಂಡ್ ಬರೋದು ತಾನೆ? ಹೆಂಡತಿಯೊಬ್ಳು ಮನೆಯೊಳಗಿದ್ರೆ ಅದೆಷ್ಟೋ ಕೋಟಿ ರೂಪಾಯಿ ಅಂತ ಕವಿಗಳು ಹೇಳಿಲ್ವಾ? ಕೂತಿರೋದು ನೋಡು, ಒಳ್ಳೆ ಟೈರು-ಟ್ಯೂಬು ಇಲ್ಲದ ಹಳೇ ಲಾರಿ ತರ. ಮೊದ್ಲು ಹೋಗಿ ಕರ್ ಕಂಡ್ ಬಾ...' ಎಂದು ರೇಗಿದಳು.

ದುಬ್ಬೀರನಿಗೂ ಸಿಟ್ಟು ಬಂತು. `ಯಾಕ್ ಕರ‌್ಕಂಡ್ ಬರ‌್ಬೇಕು? ನಾನೇನ್ ಹೋಗು ಅಂದಿದ್ನಾ? ಹೋಗೋಳು ಹೋದ್ಲು, ಸುಮ್ನೆ ಹೋದ್ಲಾ? ನನ್ ಮನೇನ ಗುಡಿಸಿ ಗುಂಡಾಂತರ ಮಾಡಿ ಹೋದ್ಲು. ಹೋದ ವರ್ಷ ನೂರಾಹತ್ತು ಚೀಲ ಭತ್ತ ಬೆಳೆದಿದ್ದೆ. ಈ ಸಲ ಬರೀ ನಲವತ್ತು. ಪಕ್ಕದ ಮನೆ ಸಿದ್ರಾಮಣ್ಣ ನೂರಾಇಪ್ಪತ್ತೆರಡು ಚೀಲ ಬೆಳೆದು `ಜಂ' ಅಂತ ರಾಜನಂಗೆ ಓಡಾಡ್ತಾ ಅವ್ನೆ. ಅವುನ್ದಿರಲಿ, ಆ ಎದುರು ಮನೆ ಕುಮಾರ, ಅಪ್ಪ-ಮಗ ಇಬ್ರೇ ಸೇರಿ ನಲವತ್ತು ಚೀಲ ಭತ್ತ ಬೆಳೆದಿದ್ದಾರೆ. ನಂಗೆ ಹೊಟ್ಟೆ ಉರಿಯಾಕಿಲ್ವಾ?...' ಹೊಟ್ಟೆಯ ಸಿಟ್ಟನ್ನು ಹೊರ ಹಾಕಿದ ದುಬ್ಬೀರ.

`ಅಂದ್ರೇ ಅವಳಿದ್ದಾಗ ಮನೆ ಚೆನ್ನಾಗಿ ನಡೀತಿತ್ತು ಅಂತ ಆಯ್ತು. ಅದಿರ‌್ಲಿ, ಅವಳು ನಿನ್ನ ಮದುವೆಯಾದಾಗ ನಿನ್ನತ್ರ ಏನಿತ್ತಪ್ಪ? ಒಂದು ಚಾಪೆ, ಎರಡು ಪಾತ್ರೆ. ಆದ್ರೂ ಅವಳೊಬ್ಳೇ ಹೊಲ ಗದ್ದೆ ಅಂತ ತಿರುಗಿ ನಿನ್ ಸಂಸಾರನ ನೆಟ್ಟಗೆ ನಿಲ್ಲಿಸಿದ್ಲು. ಅಲ್ಲಿ ಇಲ್ಲಿ ಬಂಬು-ಗಳ ಹೊಂಚಿ ಮನೆ ಕಟ್ಟಿದ್ಲು. ಕಿಸೀಲಾರದ ಎರಡು ಚೀಲ ಭತ್ತ ಬೆಳೀತಿದ್ದೆ ನೀನು. ಅದನ್ನ ನೂರಾಹತ್ತು ಚೀಲಕ್ಕೆ ತಂದು ನಿಲ್ಸಿದ್ದು ಅವಳು. ನೀನು ಅವಳ್ನ ಸರಿಯಾಗಿ ನಡೆಸಿಕೊಳ್ಳಿಲ್ಲ ಅನ್ಸುತ್ತೆ, ಅದ್ಕೆ ಮನೆ ಬಿಟ್ಟು ಹೋಗಿದಾಳೆ, ಏನ್ ತಪ್ಪು?' ಮಿಸ್ಸಮ್ಮ ಪಮ್ಮಿ ಪರ ಬ್ಯಾಟಿಂಗ್ ಮಾಡಿದಳು.

ಮಿಸ್ಸಮ್ಮನ ವಾದ ಗುಡ್ಡೆಗೆ ಏಕೋ ಸರಿ ಕಾಣಲಿಲ್ಲ. `ಅಂದ್ರೇ ಎಲ್ಲ ದುಬ್ಬೀರುಂದೇ ತಪ್ಪು ಅನ್ನು. ಪಮ್ಮಿ ಏನೂ ಮಾಡೇ ಇಲ್ವಾ? ಅವಳು ದುಡುದ್ಲು, ದುಡ್ಡು ಮಾಡಿದ್ಲು, ಮನೆ ಕಟ್ಟಿದ್ಲು ಎಲ್ಲ ಸರಿ. ಆದ್ರೆ ಆ ದುಡ್‌ನ ಬೇಕಾಬಿಟ್ಟಿ ಖರ್ಚು ಮಾಡೋದು ಸರಿನಾ? ಪೂಜೆ, ಪುನಸ್ಕಾರ ಅಂತ ಮಠಗಳಿಗೆ, ಸ್ವಾಮಿಗಳಿಗೆ, ದೇವರಿಗೆ ಅಂತ ಕೇಳಿದಷ್ಟು ಕೊಟ್ಲು. ತನ್ನ ತವರು ಮನೇರ್ ನೆಲ್ಲ ಗುಟ್ಟಾಗಿ ಕರೆದು ಹಣ ಸಾಗಿಸಿದ್ಲು. ಹಿಂಗೆಲ್ಲ ಮಾಡಿದ್ರೆ ಮನೆ ಉಳೀತದಾ ಅಂತ ದುಬ್ಬೀರ ಕೇಳೋದು ತಪ್ಪಾ? ನಾನು ಬೇರೆ ಮನೆ ಮಾಡ್ತೀನಿ, ಒಬ್ಳೆ ನೂರಾಐವತ್ತು ಚೀಲ ಭತ್ತ ಬೆಳೆದು ತೋರಿಸ್ತೀನಿ ಅಂತ ಹೋದೋಳು ಬೆಳೆದದ್ದೆಷ್ಟು? ಜುಜುಬಿ ಆರು ಚೀಲ. ಸಾಕಾ? ಈಗ ವಾಪಾಸ್ ಬರ್ ತೀನಿ ಅಂದ್ರೆ ದುಬ್ಬೀರ ಹೋಗಿ ಆರತಿ ಎತ್ತಿ ಕರ‌್ಕಂಡ್ ಬರ‌್ಬೇಕಾ?' ಗುಡ್ಡೆ ದುಬ್ಬೀರನ ಪರ ವಾದಿಸಿದ.

`ಅಷ್ಟೇ ಅಲ್ಲ, ನಾನೇ ಹೋಗಿ ಮರ‌್ಯಾದೆ ಕೊಟ್ಟು ಕರೀಬೇಕಂತೆ. ನಾನ್ಯಾಕೆ ಕರೀಲಿ? ಊರಿನ ಹಿರಿಯರಾಗಿ ಈಶ್ವರಪ್ಪ, ಅನಂತಣ್ಣ, ಶೆಟ್ರು, ಶ್ಯಾನಭೋಗರು ಇದಾರೆ. ಅವರೆಲ್ಲ ಏನ್ ಹೇಳ್ತಾರೋ ನೋಡೋಣ...' ದುಬ್ಬೀರನ ಕೋಪ ಇನ್ನೂ ಆರಿರಲಿಲ್ಲ.

ಅಲ್ಲೆವರೆಗೆ ಏನೂ ಮಾತಾಡದೆ ಸುಮ್ಮನೆ ಕೂತಿದ್ದ ಕಡೇಮನಿ ಕೊಟ್ರೇಶಿ `ನಂಗ್ಯಾಕೋ ಈ ದುಬ್ಬೀರನ ಡೈವೋರ್ಸ್ ಸ್ಟೋರಿ ಹೆಚ್ಚು ಕಮ್ಮಿ ಬಿಜೆಪಿ ಅಂಡ್ ಯಡ್ಯೂರಪ್ಪ ನಡುವಿನ `ಕಿತ್ತೋದ್ ಸ್ಟೋರಿ' ತರ ಕಾಣ್ಸುತ್ತಪ್ಪ...' ಎಂದು ನಕ್ಕ. `ಹೌದು ಕಣಲೆ, ನಂಗೂ ಹಾಗೇ ಅನಿಸ್ತು' ಧ್ವನಿಗೂಡಿಸಿದ ಪರ್ಮೇಶಿ.

`ಅದೇನರೆ ಆಗಿರ್ಲಿ, ಪಮ್ಮಿ ವಾಪಾಸ್ ಬಂದ್ರೂ ಅವಳ ಮೂಗುದಾರ ನನ್ ಕೈಲಿ ಇರಬೇಕು. ಮನೆ ಯಜಮಾನ ನಾನೇ, ದುಡ್ಡು ಕಾಸು ಎಲ್ಲ ನಂದೇ...' ದುಬ್ಬೀರ ವಾದಿಸಿದ.

`ಅದ್ಸರಿ ಕಣಲೆ, ನೀನೇನೋ ಮೂಗುದಾರ ಹಾಕ್ಬೇಕು ಅಂತೀಯ. ಆದ್ರೆ ಎಲ್ಲ ಕಡೆ ಮೂಗು ತೂರ‌್ಸೀ ತೂರ‌್ಸೀ ಈಗವಳಿಗೆ ಮೂಗೇ ಇಲ್ಲವಂತೆ, ಏನ್ಮಾಡ್ತೀಯ?' ತೆಪರೇಸಿ ನಕ್ಕ.


`ಥೂ ನಿನ್ನ, ಹೇಳೋದ್ ನೋಡು. ಅದಿರ‌್ಲಿ, ಈಗ ಮುಖ್ಯಮಂತ್ರಿ ಸಿದ್ರಾಮಣ್ಣುಂಗೂ ಮೂಗುದಾರ ಹಾಕ್ತಾರೆ ಅಂತ ಪೇಪರ್‌ನಲ್ಲಿ ಬಂದಿತ್ತಪ್ಪ, ಏನದು?'

`ಅದಾ? ಸಿದ್ರಾಮಣ್ಣುಂಗೆ ಯಾವಾಗ್ಲು ಮೂಗಿನ ತುದೀಲೇ ಕೋಪ ಅಂತಿದ್ರಲ್ಲ, ಅದಕ್ಕಿರಬೇಕು. ಮೂಗುದಾರ ಅಂದ್ರೆ ಸರ್ಕಾರದ ರೈಲು ಹಳಿ ತಪ್ಪದಂಗೆ ನೋಡ್ಕೊಳ್ಳೋದು...' ತೆಪರೇಸಿ ವಿವರಿಸಿದ.

`ಓ ಹಂಗಾ, ರೈಲು ಅಂದಕೂಡ್ಲೆ ನೆನಪಾತು ನೋಡು, ನಮ್ಮ ರೈಲು ಮಂತ್ರಿ ಖರ್ಗೆ ಸಾಹೇಬ್ರು ಎಲ್ಲೆಲ್ಲಿಗೋ ಹೊಸ ರೈಲಿಗೆ ಹಳಿ ಜೋಡುಸ್ತದಾರಂತೆ. ಹಂಗೇ ಸಂಪುಟದಲ್ಲಿರೋ ಜನತಾಪರಿವಾರದ ಮಂತ್ರಿಗಳಿಗೂ ಮೂಲ ಕಾಂಗ್ರೆಸ್ಸಿಗರಿಗೂ ಒಂದು ಹಳಿ ಜೋಡಿಸಿಬಿಟ್ರೆ ಎಲ್ಲ ಸರಿ ಹೋಗಬಹುದು ಅಲ್ವಾ?' ಮಿಸ್ಸಮ್ಮ ಸಮನ್ವಯದ ಮಾತಾಡಿದಳು.

`ಕರೆಕ್ಟ್ ಹೇಳಿದಿ ಮಿಸ್ಸಮ್ಮ, ನಿಂಗೂ ತೆಲಿ ಐತಿ ಬಿಡು' ಗುಡ್ಡೆ ನಗಾಡಿದ.

`ಈಗ ಅದೆಲ್ಲ ಬೇಡ, ಮಾತು ಎಲ್ಲೆಲ್ಲಿಗೋ ಹೋಗ್ತಾ ಐತಿ. ಲೇ ದುಬ್ಬೀರ, ಈಗೇನಪ್ಪ, ನಿನ್ನೆಂಡ್ತಿನ ಕರ‌್ಕಂಡ್ ಬರ‌್ತಿಯೋ ಇಲ್ಲೊ?' ಕಡೆಮನಿ ಕೊಟ್ರೇಶಿ ಮತ್ತೆ ಹಳೆ ಟ್ರ್ಯಾಕಿಗೆ ಬಂದ.

`ಅಲೆ ಇವ್ನ, ಸ್ವಲ್ಪ ತಡಿಯಲೆ, ನೋಡ್ರಪ್ಪ ಬಿಜೆಪಿಯೋರು ಯಡ್ಯೂರಪ್ಪ ಅವರ‌್ನ ಯಾವಾಗ ಕರ‌್ಕಂಡ್ ಬರ‌್ತಾರೋ ಆಗ್ಲೇ ನಾನೂ ಪಮ್ಮಿನ ಕರ್ ಕಂಡ್ ಬರೋದು...' ದುಬ್ಬೀರ ಷರತ್ತು ಹಾಕಿದ.

`ಅಲೆ ಇವ್ನ, ಅದ್ಕೂ ಇದ್ಕೂ ಏನಲೆ ಸಂಬಂಧ? ಅದು ರಾಜಕೀಯ, ಇದು ಸಂಸಾರ...' ಕೊಟ್ರೇಶಿ ಆಕ್ಷೇಪಿಸಿದ.

`ಅಲ್ಲಲೆ, ಈಗಿನ್ನೂ ನೀನೇ ಹೇಳಿದಿ, ನಂದೂ ಯಡ್ಯೂರಪ್ಪ ಕೇಸು ಹೆಚ್ಚು ಕಮ್ಮಿ ಒಂದೇ ಅಂತ. ಆಗ್ಲೇ ಮರೆತ್ಯಾ?'
`ಈಗ ವಾದ ಬೇಡ, ನಮಗೆ ದುಬ್ಬೀರನ ಸಂಸಾರ ಸರಿ ಹೋಗೋದು ಮುಖ್ಯ. ನಾನು ಯಡ್ಯೂರಪ್ಪ ಅವರ್ ನ ಒಂದು ಕವನದ ಮೂಲಕ ವಾಪಾಸ್ ಬನ್ನಿ ಅಂತ ರಿಕ್ವೆಸ್ಟ್ ಮಾಡ್ಕಂತೀನಿ. ಆಮೇಲೆ ನೀನೂ ಪಮ್ಮೀನ ಒಂದು ಕವನದ ಮೂಲಕನೇ ವಾಪಾಸ್ ಕರೀಬೇಕು. ಒಪ್ಪಿಗೇನಾ?' ಗುಡ್ಡೆ ಷರತ್ತು ಹಾಕಿದ. `ಓಕೆ ಡನ್' ಎಂದ ದುಬ್ಬೀರ. ಗುಡ್ಡೆ ಕವನ ವಾಚಿಸಿದ.

ಕಟ್ಟಿದ ಪಕ್ಷ, ಮೆಟ್ಟಿದ ಸಿಂಹಾಸನಎಲ್ಲ ತೊರೆದು ಹೊರಟು ನಿಂದೆನೀ ಬಯಸಿದ್ದು ಯಾವುದೂ ಬರಲಿಲ್ಲ ನಿನ್ನ ಹಿಂದೆಹೊಸ ಪ್ರೇಯಸಿಗಿಂತ ಹಳೆ ಹೆಂಡತಿಯೇ ಲೇಸುಎಲ್ಲ ಮರೆತು ತವರಿಗೆ ಬಾ ತಂದೆ!

`ಓ.ಕೆ. ನಾ? ಪರ್ವಾಗಿಲ್ವಾ? ದುಬ್ಬೀರ, ಈಗ ನಿನ್ನ ಸರದಿ, ಸ್ವಲ್ಪ ರೊಮ್ಯಾಂಟಿಕ್ ಆಗಿ ಪಮ್ಮಿನ ಕರಿ' ಗುಡ್ಡೆ ಜಾಕ್ ಎತ್ತಿದ. ದುಬ್ಬೀರ ಸಜ್ಜಾದ.   

ಹೊಲ ಗದ್ದೆ, ಕೋಳಿ ಕೊಕ್ಕರೆಎಲ್ಲ ಬಿಟ್ಟು ಎಲ್ಲಿ ಹೋದೆ ನನ್ನ ಪಮ್ಮಿನಾನು ನಿನಗೇನು ಮಾಡಿದ್ದೆ ಕಮ್ಮಿಆದದ್ದಾಯಿತು ವಾಪಾಸು ಬಾಸಂಸಾರ ನಡೆಸೋಣ ಸ್ವಲ್ಪ ಹೆಚ್ಚುಕಮ್ಮಿ!

`ವಾಹ್, ಬೊಂಬಾಟ್. ದುಬ್ಬೀರ, ಒಪ್ಪಿದೆ ಕಣಲೆ. ಆದ್ರೂ ನೀನು ಯಡ್ಯೂರಪ್ಪ ಅವರ‌್ನ ನಿನ್ ಸಮಕ್ಕೆ ಹೋಲಿಸ್ಕಂಡಿದ್ದು ನನಗೆ ಸರಿ ಕಾಣ್ಲಿಲ್ಲಪ್ಪ. ಅವರೆಲ್ಲಿ, ನೀನೆಲ್ಲಿ? ಯಡ್ಯೂರಪ್ಪ ಯಾವತ್ತೂ ನಿಂತ ನೀರಲ್ಲ ಕಣಲೆ, ಸದಾ ಹರಿಯೋ ನದಿ ಇದ್ದ ಹಾಗೆ. ಬರೀ ನದಿಯಲ್ಲ, ಜೀವನದಿ ತಿಳ್ಕಾ...' ಕೊಟ್ರೇಶಿ ಕುಟುಕಿದ.

ತಕ್ಷಣ ಗುಡ್ಡೆ `ಲೇ ಕೊಟ್ರ, ನೀ ಏನೇ ಹೇಳು, ಯಡ್ಯೂರಪ್ಪ ಅವರನ ನದಿಗೆ ಹೋಲಿಸೋದು ಅಷ್ಟು ಸಮಂಜಸ ಅಲ್ಲ ಅನ್ಸುತ್ತಪ್ಪ...'

`ಯಾಕೆ?'

`ಯಾಕೇಂದ್ರೆ ಯಡ್ಯೂರಪ್ಪ ಬಿ.ಜೆ.ಪಿ.ಗೆ ವಾಪಾಸ್ ಹೋದ್ರೂ ಹೋಗಬಹುದು, ಆದ್ರೆ ನದಿ ಯಾವತ್ತಾದ್ರೂ ವಾಪಾಸ್ ಹರಿಯೋದನ್ನ ನೋಡಿದೀಯ?' ಗುಡ್ಡೆ ಜೋಕಿಗೆ ಎಲ್ಲರೂ ಬಿದ್ದು ಬಿದ್ದು ನಕ್ಕರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT