ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಸ್ವೀರ್‌ನೊಳಗೊಂದು `ಜಪಾನು'

Last Updated 18 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕಲಾಪ

ಜಪಾನಿ ನುಡಿಯಲ್ಲಿ `ಹಿಕಾರಿ' ಎಂದರೆ ಬೆಳಕು. ಭಾರತದಿಂದ ಮಿಂಚುಹುಳುವಿನಂತೆ ಹೊರಟ ಬೌದ್ಧಧರ್ಮ ಜಪಾನಿನಲ್ಲಿ ಬೆಳಕಾಯಿತು. ಜಗತ್ತಿಗೇ ಬೆಳಕು ಬೀರುವ ಸೂರ್ಯ ಮೊದಲು ಕಣ್ಣು ತೆರೆಯುವುದು ಅದೇ ದೇಶದಲ್ಲಿ. ಛಾಯಾಗ್ರಹಣದ ಪ್ರಾಣ ಕೂಡ ಬೆಳಕು.

`ತಸ್ವೀರ್' ಕಲಾ ಗ್ಯಾಲರಿ ಮತ್ತು ಜಪಾನ್ ಪ್ರತಿಷ್ಠಾನ ಈಗ `ಹಿಕಾರಿ'ಯ ಬೆನ್ನೇರಿ ಹೊರಟಿವೆ. ಇದೇ 20ರಂದು ಜಪಾನಿ ಛಾಯಾಗ್ರಾಹಕರ ಸಮಕಾಲೀನ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ನೆರಳು ಬೆಳಕಿನ ಜೊತೆಗೆ ಬದುಕನ್ನೂ ಸಮೀಕರಿಸುವ ಪ್ರಯೋಗ ಇದು. ಹಾಗಾಗಿ ಬೆಳಕಿನ ಪ್ರಖರತೆಯ ಮಧ್ಯೆಯೇ `ಮುಸುಕಿನ ಗುದ್ದಾಟ'ವೂ ಬಿಂಬಿತ. ಬೆಳಕನ್ನು ವಿಜ್ಞಾನದ ಮಾಧ್ಯಮವಾಗಿಯೂ ಕಾವ್ಯಧ್ವನಿಯಾಗಿಯೂ ಒಟ್ಟಿಗೆ ಹಿಡಿದಿಡಲಾಗಿದೆ.

ಪ್ರದರ್ಶಕರಲ್ಲಿ ಒಬ್ಬರಾದ ಯುಜಿ ಒಬಾಟರ ಕಲಾಕೃತಿಗಳಲ್ಲಿ ಬೆಳಕು ಸದಾ ಚಂಚಲೆ; ಕರಗುವ, ಹಾದುಹೋಗುವ, ಇಲ್ಲವಾಗುವ ನಶ್ವರತೆಯ ಪ್ರತೀಕ. ಜಪಾನಿನ ಸೌಂದರ್ಯಪ್ರಜ್ಞೆ, ಭೂದೃಶ್ಯ ಹಾಗೂ ಛಾಯಾಗ್ರಹಣ ಪರಂಪರೆಗೆ ಕನ್ನಡಿಯಾಗಿ ಇವರ ಕೃತಿಗಳು ಮೂಡಿ ಬಂದಿವೆ.

ಟೊಕಿಹಿರೊ ಸಾಟೊ ಅವರಿಗೆ ಬೆಳಕು ಕ್ರಿಯೆ, ಎಲ್ಲದರಲ್ಲೂ ಇಣುಕು ಹಾಕುವ ಸಂಗಾತಿಯಾಗಿ ತೋರಿದೆ. ಅವರ ಕಲಾಕೃತಿಗಳಿಗೆ ದೀಪಾವಳಿಯ ಸಿರಿ. ಸಡಗರದ ಸಂಕೇತ.

ಶಿಹೋ ಕಿಟೊ ಬೆಳಕಿನ ಜತೆಗೆ ನಗರ ಬದುಕನ್ನೂ ಬೆರೆಸಿದ್ದಾರೆ. ಸಾರ್ವಜನಿಕ, ಖಾಸಗಿ ಕ್ಷಣಗಳಲ್ಲಿ ಬೆಳಕು ರೂಪಕವಾಗಿ ಚಾರಿತ್ರಿಕವಾಗಿ ಕಾಣಿಸಿಕೊಂಡಿದೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವುದು ಕಿಮಿಕೊ ಯೋಷಿದಾ. ಅವರು ಚಿತ್ರಿಸಿರುವ ಎಲ್ಲ ಮುಖಗಳೂ ಬಣ್ಣ ಬೆಳಕಿನಲ್ಲಿ ಮಿಂದೆದ್ದ ಕಲಾಕೃತಿಗಳು. ಸ್ಟುಡಿಯೋದ ತೀಕ್ಷ್ಣ ಕಿರಣಗಳು ಅವರ ಛಾಯಾಚಿತ್ರಗಳ ಜೀವಾಳ.

ಛಾಯಾಗ್ರಾಹಕ ಹಾಗೂ ಬೆಳಕಿನ ಅವಿನಾಭಾವ ಸಂಬಂಧವನ್ನು ದೃಶ್ಯರೂಪದಲ್ಲಿ ತಂದಿದ್ದಾರೆ ಕೆನ್ ಕಿಟಾನೋ. ಇವರ ಕೃತಿಗಳಲ್ಲಿ ಹೆಚ್ಚಾಗಿ ಭಾವಚಿತ್ರವೇ ಕಾಣಿಸಿಕೊಂಡಿದ್ದರೂ ಅದಕ್ಕೊಂದು ಅಮೂರ್ತತೆ, ದಿವ್ಯತ್ವವಿದೆ.

ಇವರಲ್ಲಿ ಅನೇಕರು ಭಾರತದ ಜೊತೆಗೆ ಒಡನಾಟ ಹೊಂದಿದವರು. ಇಂದಿನ ಜಂಬೂದ್ವೀಪವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದವರು ಎನ್ನುವುದು ಮತ್ತೊಂದು ವಿಶೇಷ. ಅವರು ಕಂಡ ನಮ್ಮ ದೇಶ ಹೇಗಿದೆ ಎಂಬ ಕುತೂಹಲ ಇದ್ದವರೂ ಪ್ರದರ್ಶನಕ್ಕೆ ಬರಬಹುದು.

`ಕೇವಲ ಸುತ್ತಲೂ ನಡೆಯುತ್ತಿರುವ ವಿದ್ಯಮಾನಗಳನ್ನು ದಾಖಲಿಸುವ ಗೋಜಿಗೆ ಛಾಯಾಗ್ರಾಹಕರು ಹೋಗಿಲ್ಲ. ಬದಲಿಗೆ ತಮ್ಮ ಕಲಾಕೃತಿಗಳ ಭಾಗವೇ ಆಗಿದ್ದಾರೆ. ಛಾಯಾಗ್ರಹಣದ ತಥಾಕಥಿತ ಬಿಂಬಗಳನ್ನೇ ನೀಡುವುದಕ್ಕಿಂತ ಹೆಚ್ಚಾಗಿ ಅವುಗಳಲ್ಲಿ ತಮ್ಮ ಪ್ರಜ್ಞಾಪ್ರವಾಹವನ್ನು ಹರಿಯ ಬಿಟ್ಟಿದ್ದಾರೆ' ಎನ್ನುವುದು ಪ್ರದರ್ಶನದ ಸಹ ಸಂಯೋಜಕರೂ ಆಗಿರುವ ಶಿಹೊ ಕಿಟೊ ಮಾತು.

ತಸ್ವೀರ್ ನಿರ್ದೇಶಕ ಅಭಿಷೇಕ್ ಪೊಡ್ಡಾರ್ `ಜಪಾನಿ ಸಮಕಾಲೀನ ಛಾಯಾಗ್ರಹಣ ಕುರಿತಂತೆ ದೇಶದಲ್ಲಿ ಇದೇ ಮೊದಲ ಬಾರಿಗೆ ಪ್ರದರ್ಶನ ನಡೆಯುತ್ತಿದೆ. ಜಪಾನಿನಲ್ಲಿ ಪ್ರಸ್ತುತ ಬಹಳಷ್ಟು ಪ್ರಭಾವ ಬೀರಿರುವ ಛಾಯಾಗ್ರಾಹಕರ ಕಲಾಕೃತಿಗಳು ಇಲ್ಲಿವೆ' ಎನ್ನುತ್ತಾರೆ.

ಇದೇ 19 ಶುಕ್ರವಾರದಂದು ಸಂಜೆ 6.30ಕ್ಕೆ ಕಲಾಕೃತಿಗಳನ್ನು ಕುರಿತಂತೆ ಛಾಯಾಗ್ರಾಹಕರಾದ ಕಿಟೊ ಹಾಗೂ ಸಾಟೊ ಮಾತನಾಡಲಿದ್ದಾರೆ. ಅದೇ ದಿನ ಸಂಜೆ 7.30ಕ್ಕೆ ಪ್ರದರ್ಶನ ಉದ್ಘಾಟನೆಯಾಗಲಿದೆ. ಸಂಯೋಜಕರಾದ ನತಾನಿಯಲ್ ಗಾಸ್ಕೆಲ್, ಜಪಾನ್ ಪ್ರತಿಷ್ಠಾನದ ಕಲೆ ಮತ್ತು ಸಾಂಸ್ಕೃತಿಕ ವಿನಿಮಯ ವಿಭಾಗದ ನಿರ್ದೇಶಕರಾದ ಯುಸುಕೆ ಮತ್ಸುವೊಕಾ ಮತ್ತಿತರ ಗಣ್ಯರು ಈ ಸಂದರ್ಭದಲ್ಲಿ ಭಾಗವಹಿಸಲಿದ್ದಾರೆ. 20ರಿಂದ ಮೇ 10ರವರೆಗೆ ಸಾರ್ವಜನಿಕ ಪ್ರದರ್ಶನ ನಡೆಯಲಿದೆ. ಸಮಯ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ. ಸ್ಥಳ: ತಸ್ವೀರ್ ಗ್ಯಾಲರಿ, ಸುವಾ ಹೌಸ್, 26/1, ಕಸ್ತೂರಬಾ ರಸ್ತೆ ಕ್ರಾಸ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT