ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಹಶೀಲ್ದಾರ್ ಅಮಾನತಿಗೆ ಕಾಂಗ್ರೆಸ್ ಆಗ್ರಹ

Last Updated 23 ಫೆಬ್ರುವರಿ 2012, 6:40 IST
ಅಕ್ಷರ ಗಾತ್ರ

ತುರುವೇಕೆರೆ: ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಕ್ರಮ ಎಸಗಿರುವ ತಹಶೀಲ್ದಾರ್ ಟಿ.ಆರ್.ಶೋಭಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಂಗಳವಾರ ಸಂಜೆ ಆರಂಭವಾದ ಕಾಂಗ್ರೆಸ್ ಮುಖಂಡರ ಧರಣಿ ಅಹೋರಾತ್ರಿ ನಡೆದು ಬುಧವಾರವೂ ಮುಂದುವರಿಯಿತು.

ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಅಹವಾಲು ಸ್ವೀಕರಿಸಿ, ತಹಶೀಲ್ದಾರರ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಧರಣಿ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದು ವಿಧಾನಸೌಧದ ಪ್ರವೇಶ ದ್ವಾರದಲ್ಲಿ ಧರಣಿ ಕುಳಿತ ಕಾಂಗ್ರೆಸ್ ಮುಖಂಡರು ತಹಶೀಲ್ದಾರ್ ವಿರುದ್ಧ ಧಿಕ್ಕಾರ ಕೂಗಿದರು.

ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಎಚ್.ಬಿ.ನಂಜೇಗೌಡ ತಹಶೀಲ್ದಾರರು ಚುನಾವಣಾ ಪ್ರಕ್ರಿಯೆಯ ಪೂರ್ಣ ವೀಡಿಯೊ ಚಿತ್ರೀಕರಣ ಮಾಡಿಸದೆ ಕರ್ತವ್ಯಲೋಪ ಎಸಗಿದ್ದಾರೆ. ಜೆಡಿಎಸ್‌ಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದ  ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರವನ್ನು ತಡವಾಗಿ ಸಲ್ಲಿಸಲಾಗಿದೆ ಎಂಬ ನೆಪವೊಡ್ಡಿ ಸ್ಪರ್ಧೆಗೆ ಅವಕಾಶ ನೀಡಿಲ್ಲ ಎಂದು ದೂರಿದರು.

ಕಾಂಗ್ರೆಸ್ ಮುಖಂಡ ಟಿ.ಎಸ್.ದಾನಿಗೌಡ, ಮಾಜಿ ಶಾಸಕ ಎಸ್.ರುದ್ರಪ್ಪ, ಉಗ್ರಪ್ಪ, ಚೌದ್ರಿ ರಂಗಪ್ಪ, ಎನ್.ಆರ್.ಜಯರಾಮ್, ಗಂಗಾಧರಗೌಡ ಇತರರು ಮಾತನಾಡಿದರು.

ಇಂದು ಬಂದ್

ಬುಧವಾರ ಸಂಜೆವರೆಗೂ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸದ ಬಗ್ಗೆ ಹತಾಶರಾದ ಕಾಂಗ್ರೆಸ್ ಮುಖಂಡರು ಗುರುವಾರ ಪಟ್ಟಣ ಬಂದ್‌ಗೆ ಕರೆ ನೀಡಿರುವುದಾಗಿ ಪ್ರಕಟಿಸಿದರು.

ಹಿರಿಯ ಪೊಲೀಸ್ ಅಧಿಕಾರಿಗಳು ಬಂದ್ ಕರೆ ಹಿಂಪಡೆಯುವಂತೆ ಮುಖಂಡರ ಮನವೊಲಿಸಲು ಪ್ರಯತ್ನಿಸಿದರಾದರೂ ಮುಖಂಡರು ತಮ್ಮ ನಿಲುವಿಗೆ ಅಂಟಿಕೊಂಡು ಬಂದ್ ಆಚರಿಯೇ ಸಿದ್ದ ಎಂದು ಘೋಷಿಸಿದರು.

ಪ್ರತಿತಂತ್ರ: ಬುಧವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಶಾಸಕ ಎಂ.ಟಿ.ಕೃಷ್ಣಪ್ಪ ಕಾಂಗ್ರೆಸ್ ಮುಖಂಡರು ಸ್ವಾರ್ಥ ಸಾಧನೆಗಾಗಿ ಧರಣಿ ನಡೆಸುತ್ತಿದ್ದಾರೆ. ಶಾಸಕನಾಗಿ ನಾನು ಚುನಾವಣಾ ಸಭೆಯಲ್ಲಿ ಹಾಜರಿದ್ದು ಇಡೀ ಚುನಾವಣಾ ಪ್ರಕ್ರಿಯೆ ಕೂಲಂಕಷವಾಗಿ ಪರಿಶೀಲಿಸಿದ್ದೇನೆ. ತಹಶೀಲ್ದಾರ್ ಕಾನೂನು ಬದ್ಧವಾಗಿಯೇ ನಡೆದುಕೊಂಡಿದ್ದಾರೆ ಎಂದು ಚುನಾವಣಾಧಿಕಾರಿ ನಿಲವನ್ನು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಬಂದ್‌ಗೆ ಕರೆ ನೀಡಿರುವುದನ್ನು ಉಗ್ರವಾಗಿ ಖಂಡಿಸಿದ ಅವರು ಜನಪರವಲ್ಲದ ಇಂತಹ ನಿರ್ಧಾರಗಳಿಂದ ಸಾರ್ವಜನಿಕ ಜೀವನಕ್ಕೆ ಧಕ್ಕೆ ಆಗುತ್ತದೆ. ಕಾಂಗ್ರೆಸ್ ಬಂದ್ ಕರೆ ಹಿಂದೆ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಜೆಡಿಸ್ ಉಗ್ರ ಹೋರಾಟ ನಡೆಸುವ ಪ್ರತಿತಂತ್ರ ರೂಪಿಸಲಿದೆ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT