ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಹಶೀಲ್ದಾರ್ ಮೇಲೆ ದೌರ್ಜನ್ಯ: ಪ್ರತಿಭಟನೆ

Last Updated 4 ಸೆಪ್ಟೆಂಬರ್ 2013, 10:22 IST
ಅಕ್ಷರ ಗಾತ್ರ

ತಿಪಟೂರು: ಗ್ರಾಮ ಲೆಕ್ಕಿಗರೊಬ್ಬರನ್ನು ವರ್ಗಾವಣೆ ಮಾಡಲಿಲ್ಲವೆಂಬ ಕಾರಣಕ್ಕೆ ಕೆಲವರು ಕಚೇರಿಗೆ ನುಗ್ಗಿ ತಹಶೀಲ್ದಾರ್ ಬಿ.ಆರ್.ಮಂಜುನಾಥ್ ಮೇಲೆ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ನಾಗರಿಕರು ತಾಲ್ಲೂಕು ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಕಚೇರಿಗೆ ತಾತ್ಕಾಲಿಕ ನಿಯೋಜನೆಗೊಂಡಿದ್ದ ಗ್ರಾಮ ಲೆಕ್ಕಿಗ ಡಿ.ಮಂಜುನಾಥ್ ಎಂಬುವರನ್ನು ತಾಲ್ಲೂಕಿನ ಶೆಟ್ಟಿಹಳ್ಳಿಗೆ ವರ್ಗಾವಣೆ ಮಾಡಲು ಕೋರಿ ಒತ್ತಡ ತಂದಿದ್ದರು. ವರ್ಗಾವಣೆ ಮಾಡಲು ತಹಶೀಲ್ದಾರ್ ನಿರಾಕರಿಸಿದ್ದರಿಂದ ಕಚೇರಿಗೆ ನುಗ್ಗಿದ್ದ ಕೆಲವರು ದೌರ್ಜನ್ಯ ಎಸಗಿದ್ದಾರೆ ಎಂದು ದೂರಿದರು.

ತಪ್ಪು ಮಾಡದಿದ್ದರೂ ತಹಶೀಲ್ದಾರ್‌ರಿಂದ ಕೈಮುಗಿಸಿ ಕ್ಷಮೆ ಯಾಚಿಸುವಂತೆ ಮಾಡಿದ್ದಾರೆ. ಸುಸೂತ್ರ ಆಡಳಿತ ನಡೆಸಲು ಬೆದರಿಕೆ ಒಡ್ಡಿ ಅಡ್ಡಿ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನಗರಸಭೆ ಸದಸ್ಯ ಯಧುನಂದನ ಇತರರು ಇದ್ದರು.

ಅಪಾರ ಜನ ತಾಲ್ಲೂಕು ಕಚೇರಿ ಬಳಿ ನೆರೆದು ಪ್ರತಿಭಟನೆಗೆ ಇಳಿದಿದ್ದನ್ನು ತಿಳಿದ ಶಾಸಕ ಕೆ.ಷಡಕ್ಷರಿ ಸ್ಥಳಕ್ಕೆ ಆಗಮಿಸಿದರು.
ತಹಶೀಲ್ದಾರ್ ಅವರಿಂದ ಸೋಮವಾರ ನಡೆದ ಘಟನೆಯ ವಿವರ ಕೇಳಿದರು. ಈ ಹಿಂದೆ ಅಮಾನತುಗೊಂಡಿದ್ದ ಗ್ರಾಮ ಲೆಕ್ಕಿಗ ಡಿ.ಮಂಜುನಾಥ್ ಕರ್ತವ್ಯ ತೃಪ್ತಿಕರವಾಗಿಲ್ಲದ ಕಾರಣ ತಾಲ್ಲೂಕು ಕಚೇರಿಗೆ ತಾತ್ಕಾಲಿಕ ನಿಯೋಜನೆ ಮಾಡಿಕೊಳ್ಳಲಾಗಿತ್ತು. ಅವರನ್ನು ಶೆಟ್ಟಿಹಳ್ಳಿಗೆ ವರ್ಗ ಮಾಡುವಂತೆ ನಾಗತಿಹಳ್ಳಿ ಕೃಷ್ಣಮೂರ್ತಿ, ಗಂಗರಾಜು ಮತ್ತಿತರರು ತಮ್ಮ ಮೇಲೆ ಒತ್ತಡ ಹಾಕಿದ್ದರು. ಮೊದಲು ನೋಡೋಣವೆಂದು ತಿಳಿಸಿದ್ದೆನಾದರೂ ಆ ವೃತ್ತದ ಜನ ಆಕ್ಷೇಪಿಸಿದ್ದರಿಂದ ಕಡೆ ಗಳಿಗೆಯಲ್ಲಿ ವರ್ಗಾವಣೆ ಮಾಡಿರಲಿಲ್ಲ.

ಏಕಾಏಕಿ ಕಚೇರಿಗೆ ಬಂದ ಕೆಲವರು ಇದೇ ವಿಷಯಕ್ಕೆ ತಮ್ಮ ಮೇಲೆ ಹರಿಹಾಯ್ದರು ಎಂದು ತಹಶೀಲ್ದಾರ್ ತಿಳಿಸಿದರು.
ತಪ್ಪಿಲ್ಲದಿದ್ದರೂ ತಾಲ್ಲೂಕು ದಂಡಾಧಿಕಾರಿ ಮೇಲೆಯೇ ಇಂತಹ ದೌರ್ಜನ್ಯ ನಡೆದರೆ ಶಾಸಕನಾದ ತಮ್ಮ ಬಗ್ಗೆ ಜನ ತಪ್ಪು ತಿಳಿಯುತ್ತಾರೆ. ಆಡಳಿತ ದೌರ್ಬಲ್ಯವೆಂದು ಭಾವಿಸುತ್ತಾರೆ. ಪ್ರಾಮಾಣಿಕ ಅಧಿಕಾರಿಗಳು ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಸಹಕಾರ ನೀಡಲಾಗುವುದು ಎಂದರು.

ಕೆಲ ಪ್ರತ್ಯಕ್ಷದರ್ಶಿಗಳು ಘಟನೆ ವಿವರಿಸಿ, ತಹಶೀಲ್ದಾರ್‌ರಿಂದ ಕೈಮುಗಿಸಿ ಕ್ಷಮೆ ಕೇಳುವಂತೆ ಮಾಡಿದ್ದು ನಿಜ ಎಂದು ತಿಳಿಸಿದರು.
ತಹಶೀಲ್ದಾರ್ ಮೇಲೆ ದೌರ್ಜನ್ಯ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದಲಿತ ಮುಖಂಡರು ಸೇರಿದಂತೆ ಹಲವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT