ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಹಶೀಲ್ದಾರ್ ವಸತಿಗೃಹಕ್ಕೆ ರೂ 30 ಲಕ್ಷ ವೆಚ್ಚ

Last Updated 13 ಅಕ್ಟೋಬರ್ 2011, 10:50 IST
ಅಕ್ಷರ ಗಾತ್ರ

ಸಾಗರ: ನಗರದ ಭೀಮನಕೋಣೆ ರಸ್ತೆಯಲ್ಲಿ ಉಪ ವಿಭಾಗಾಧಿಕಾರಿ ವಸತಿಗೃಹದ ಪಕ್ಕದಲ್ಲೆ ರೂ 30 ಲಕ್ಷ  ವೆಚ್ಚದಲ್ಲಿ ತಹಶೀಲ್ದಾರ್ ವಸತಿಗೃಹ ನಿರ್ಮಾಣವಾಗಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ವಸತಿಗೃಹ ನಿರ್ಮಾಣ ಕಾಮಗಾರಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ಪ್ರದೇಶದಲ್ಲಿ ನ್ಯಾಯಾಧೀಶರ ವಸತಿಗೃಹ ನಿರ್ಮಾಣಕ್ಕೆ ರೂ 4 ಕೋಟಿ ಮಂಜೂರಾಗಿದೆ ಎಂದರು.

ಉಪ ವಿಭಾಗಾಧಿಕಾರಿ ವಸತಿಗೃಹಕ್ಕೆ ರೂ ಒಂದು ಕೋಟಿ  ವೆಚ್ಚ ಮಾಡಿರುವುದು ಎಷ್ಟು ಸರಿ ಎಂದು ಕೇಳಿದ ಪ್ರಶ್ನೆಗೆ, ಅದು ಸರ್ಕಾರದ ನೀತಿಯಾಗಿದ್ದು, ಆ ಪ್ರಕಾರ ಹಣ ಬಿಡುಗಡೆಯಾಗಿದೆ ಎಂದು ಉತ್ತರಿಸಿದರು.

ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಉತ್ತಮ ಫಲಿತಾಂಶ ಪಡೆಯುತ್ತಿದ್ದು ಅದರ ಏಳಿಗೆಯನ್ನು ಸಹಿಸದೆ ಕೆಲವು ದುಷ್ಕರ್ಮಿಗಳು  ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕದಡುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಕೂಡ ದಿನೆ ದಿನೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಈಚೆಗೆ ಉಪನ್ಯಾಸಕ ಒಬ್ಬರು ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿರುವ ಬಗ್ಗೆ ದೂರು ಬಂದಿದ್ದು, ಅವರ ವಿರುದ್ಧ ಕ್ರಮ ಜರುಗಿಸುವಂತೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.

ಜೋಗದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿರುವ ಬಗ್ಗೆ ಈಚೆಗೆ ಮಾಜಿ ಶಾಸಕ ಕಾಗೋಡು ತಿಮ್ಮಪ್ಪ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅಲ್ಲಿನ ಯಾತ್ರಿ ನಿವಾಸವನ್ನು ಖಾಸಗಿಯವರಿಗೆ ವಹಿಸಿಕೊಡುವ ಮೂಲಕ ನಿರ್ವಹಿಸಲು ತೀರ್ಮಾನಿಸಲಾಗಿತ್ತು. ಆದರೆ, ಖಾಸಗಿಯವರು ಇದಕ್ಕೆ ಮುಂದೆ ಬರುತ್ತಿಲ್ಲ. ಈ ಕಾರಣದಿಂದ ವಿಳಂಬವಾಗುತ್ತಿದೆ ಎಂದರು.

ಲಿಂಗನಮಕ್ಕಿಯಲ್ಲಿ ಮೈಸೂರಿನ ಬೃಂದಾವನ ಮಾದರಿಯಲ್ಲಿ ಉದ್ಯಾನ ನಿರ್ಮಿಸಲು ಕರ್ನಾಟಕ ವಿದ್ಯುತ್ ನಿಗಮ ಭದ್ರತೆ ಕಾರಣದಿಂದ ಒಪ್ಪಿಗೆ ನೀಡುತ್ತಿಲ್ಲ. ಹೀಗಾಗಿ, ಈ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ರಾಧಾಕೃಷ್ಣ ಬೇಂಗ್ರೆ, ಉಪಾಧ್ಯಕ್ಷ ಡಿ.ರವಿ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್ ಸುಬ್ರು, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಡಾ.ಶಶಿಕುಮಾರ್, ಭೂನ್ಯಾಯ ಮಂಡಳಿ ಸದಸ್ಯ ಆರ್.ಸಿ. ಮಂಜುನಾಥ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT