ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾ.ಪಂ. ಅಧಿಕಾರ: ಅತಂತ್ರಕ್ಕೆ ಸದ್ಯಕ್ಕಿಲ್ಲ ಮದ್ದು!

Last Updated 8 ಜನವರಿ 2011, 10:25 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಮೂರು ತಾ.ಪಂ.ಗಳು ಅತಂತ್ರವಾಗಿವೆ. ಆದರೂ, ಅಧಿಕಾರಕ್ಕೆ ಏರಲು ಇದುವರೆಗೂ ಯಾವ ಪಕ್ಷದಿಂದಲೂ ‘ಆಪರೇಷನ್’ ಸದ್ದಾಗಲಿ, ಮೈತ್ರಿಯ ಸಂಭ್ರಮವಾಗಲಿ ಕಾಣುತ್ತಿಲ್ಲ! ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ನಂತರವಷ್ಟೇ ಈ ರೀತಿಯ ಚಟುವಟಿಕೆಗಳಿಗೆ ಚಾಲನೆ ಸಿಗಲಿದೆಂಬ ವಿಶ್ಲೇಷಣೆಗಳಿದ್ದರೂ ಮುಖ್ಯಮಂತ್ರಿಗಳ ಜಿಲ್ಲೆಯಲ್ಲಿ ಫಲಿತಾಂಶ ಹೊರಬಿದ್ದು ನಾಲ್ಕು ದಿವಸವಾದರೂ ಮೂರು ಪಕ್ಷಗಳು ಯಾವ ಚಟುವಟಿಕೆ ತೋರದೆ ಮೈ ಕೊರೆಯುವ ಚಳಿಯಲ್ಲಿ ಮಂಕು ಹಿಡಿದು ಕುಳಿತಿವೆ.

ಆಡಳಿತ ಪಕ್ಷ ಬಿಜೆಪಿ ಇರುವುದರಿಂದ ಅದು ತನ್ನ ಅನುಕೂಲಕ್ಕೆ ತಕ್ಕಂತೆ ಮೀಸಲಾತಿ ನಿಗದಿಪಡಿಸುತ್ತದೆ. ಹಾಗಾಗಿ, ಮೀಸಲಾತಿ ವಿವರಗಳು ಪ್ರಕಟವಾಗುತ್ತಿದ್ದಂತೆ ಮೈತ್ರಿ, ಆಪರೇಷನ್ ಮತ್ತಿತರ ತಂತ್ರಗಳು ಚಾಲನೆ ಪಡೆಯುತ್ತವೆ. ಕೊನೆಗೂ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ ಎನ್ನುತ್ತಾರೆ ಕಾಂಗ್ರೆಸ್-ಜೆಡಿಎಸ್ ಮುಖಂಡರು.   

ಶಿಕಾರಿಪುರ, ಹೊಸನಗರ ತಾಲ್ಲೂಕು ಪಂಚಾಯ್ತಿ ಬಿಜೆಪಿ ಅಧಿಕಾರ ಹಿಡಿದಿದ್ದರೆ, ಸಾಗರ, ತೀರ್ಥಹಳ್ಳಿ ಕಾಂಗ್ರೆಸ್ ಪಾಲಾಗಿವೆ. ಉಳಿದ ಸೊರಬ, ಶಿವಮೊಗ್ಗ, ಭದ್ರಾವತಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಸೊರಬದಲ್ಲಿ ಮೂರು ಪಕ್ಷಗಳು ತಲಾ 6 ಸ್ಥಾನಗಳನ್ನು ಗೆದ್ದು ಸಮಾನಂತರದಲ್ಲಿದ್ದರೆ, ಶಿವಮೊಗ್ಗದಲ್ಲಿ ಬಿಜೆಪಿ 8, ಕಾಂಗ್ರೆಸ್ 4 ಹಾಗೂ ಜೆಡಿಎಸ್ 6 ಸ್ಥಾನಗಳನ್ನು ಪಡೆದಿವೆ. ಹಾಗೆಯೇ, ಭದ್ರಾವತಿಯಲ್ಲಿ ಕಾಂಗ್ರೆಸ್ 9, ಬಿಜೆಪಿ 3 ಮತ್ತು ಜೆಡಿಎಸ್ 6 ಸ್ಥಾನಗಳನ್ನು ಗಳಿಸಿವೆ. ಶಿವಮೊಗ್ಗ ತಾಲ್ಲೂಕಿನಲ್ಲಿ ಬಿಜೆಪಿ ಅತಿ ಹೆಚ್ಚಿನ ಸ್ಥಾನ ಪಡೆದಿದ್ದರೂ ಅಧಿಕಾರದ ಚುಕ್ಕಾಣಿ ಹಿಡಿಯಲು ಕನಿಷ್ಠ ಮೂರು ಸ್ಥಾನಗಳ ಕೊರತೆ ಎದುರಿಸುತ್ತಿದೆ. ಸೊರಬದಲ್ಲಿ ಯಾವ ಪಕ್ಷದ ಜತೆ ಹೋಗಬೇಕು ಎಂಬುದು ವರಿಷ್ಠರಿಗೆ ತಲೆನೋವಾಗಿದೆ. ಭದ್ರಾವತಿಯಲ್ಲಿ ವಿರೋಧ ಪಕ್ಷವಾಗಿರಲು ಬಯಸಿದೆ.

ಶಿವಮೊಗ್ಗ ಮತ್ತು ಸೊರಬದಲ್ಲಿ ಬಿಜೆಪಿ ತನ್ನ ಹಳೆಯ ಆಸ್ತ್ರ ‘ಆಪರೇಷನ್ ಕಮಲ’ವನ್ನು ಜಾರಿಗೆ ತರುತ್ತದೆಯೇ ಎಂಬುದು ಇದುವರೆಗೂ ಸ್ಪಷ್ಟವಾಗಿಲ್ಲ. ಕಾಂಗ್ರೆಸ್-ಜೆಡಿಎಸ್ ಸದಸ್ಯರಿಗೆ ಗಾಳ ಹಾಕಬೇಕೆ? ಬೇಡವೇ ಎಂಬ ಬಗ್ಗೆ ಇದುವರೆಗೂ ಪಕ್ಷದಲ್ಲಿ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಬಿಜೆಪಿ ಮೂಲಗಳು ದೃಢಪಡಿಸಿವೆ. ಪಕ್ಷದ ಶಾಸಕಾಂಗದ ಸಭೆ ನಡೆದರೂ ಜ. 9ರ ನಂತರವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ ಎಂಬ ಮಾಹಿತಿ ಬಿಜೆಪಿ ವಲಯದಲ್ಲಿದೆ.

ಭದ್ರಾವತಿಯಲ್ಲಿ ಹೆಚ್ಚಿನ ಸ್ಥಾನ ಪಡೆದಿರುವ ಕಾಂಗ್ರೆಸ್‌ಗೆ ಒಂದೇ ಒಂದು ಸ್ಥಾನದ ಕೊರತೆ ಇದೆ. ಅಲ್ಲಿ ಕಾಂಗ್ರೆಸ್ ಅಧಿಕಾರದ ಸೂತ್ರ ಹಿಡಿಯಲು ‘ಆಪರೇಷನ್ ಹಸ್ತ’ ತಂತ್ರ ಆಳವಡಿಸಲು ಸಜ್ಜಾಗಿದೆ. ಜೆಡಿಎಸ್ ಸದಸ್ಯರೊಬ್ಬರನ್ನು ಪಕ್ಷಕ್ಕೆ ಕರೆತಂದು ಆಡಳಿತ ನಡೆಸುವ ಚಿಂತನೆ ಕಾಂಗ್ರೆಸ್‌ಗಿದೆ. ಆದರೆ, ಸೊರಬದಲ್ಲಿ ಜೆಡಿಎಸ್ ಜತೆ ಮೈತ್ರಿ ಬೇಡ-ಬೇಕು ಎಂಬುದನ್ನು ಮುಖಂಡ ಕುಮಾರ ಬಂಗಾರಪ್ಪ ಅವರೇ ತೀರ್ಮಾನಿಸಬೇಕು ಎಂದು ಹೆಸರು ಹೇಳಲು ಇಚ್ಚಿಸದ ಪಕ್ಷದ ಪದಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಶಿವಮೊಗ್ಗ ತಾಲ್ಲೂಕಿನಲ್ಲಿ ಜೆಡಿಎಸ್ ಹೆಚ್ಚಿನ ಸ್ಥಾನ ಪಡೆದಿದೆ. ಮೇಲ್ಮಟ್ಟದಲ್ಲಿ ಮೈತ್ರಿ ಬಗ್ಗೆ ಚರ್ಚೆಗಳಾದರೆ ನಾವು ಇಲ್ಲಿ ಜೆಡಿಎಸ್ ಜತೆ ಹೋಗಲು ಸಿದ್ಧ ಎನ್ನುವುದು ಕಾಂಗ್ರೆಸ್‌ನ ಸದ್ಯದ ಮನಸ್ಥಿತಿ.

ಜಿಲ್ಲೆಯಲ್ಲಿ ಕನಿಷ್ಠ ಒಂದು ತಾ.ಪಂ.ನಲ್ಲಿ ಆದರೂ ಅಧಿಕಾರ ಅನುಭವಿಸಬೇಕು ಎನ್ನುವ ತುಡಿತದಲ್ಲಿರುವ ಜೆಡಿಎಸ್ ಈ ಬಗ್ಗೆ ಕಾರ್ಯತಂತ್ರ ರೂಪಿಸುತ್ತಿದೆ. ಅದಕ್ಕಾಗಿ ಅದು ಕಾಂಗ್ರೆಸ್ ಜತೆ ಮೈತ್ರಿಗೆ ಆಸಕ್ತಿ ತೋರಿದೆ. ಶಿವಮೊಗ್ಗ ತಾಲ್ಲೂಕಿನಲ್ಲಿ 6 ಸ್ಥಾನ ಪಡೆದಿರುವ ಜೆಡಿಎಸ್‌ಗೆ ಬಹುಮತಕ್ಕೆ ಮೂರು ಸ್ಥಾನಗಳು ಬೇಕು. ಕಾಂಗ್ರೆಸ್‌ನಲ್ಲಿ 4 ಸ್ಥಾನಗಳಿರುವುದರಿಂದ ಅದು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಬಹುದು. ಹಾಗೆಯೇ ಸೊರಬದಲ್ಲೂ ಮೈತ್ರಿಗೆ ಅವಕಾಶವಿದ್ದು ಕಾಂಗ್ರೆಸ್ ಮುಖಂಡರ ನಡೆಯನ್ನು ಅದು ಗಮನಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT