ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾ.ಪಂ. ಅಧ್ಯಕ್ಷೆಯಾಗಿ ಸೋಲಿಗ ಮಹಿಳೆ

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆಯಾಗಿ ಪ್ರಥಮ ಬಾರಿಗೆ ಸೋಲಿಗ ಸಮುದಾಯದ ಮಹಾದೇವಿ ಅವಿರೋಧ ಆಯ್ಕೆಯಾಗಿದ್ದಾರೆ.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಪುಣಜನೂರು ಕ್ಷೇತ್ರ ಪ್ರತಿನಿಧಿಸುವ ಕಾಂಗ್ರೆಸ್‌ನ ಮಹಾದೇವಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ, ಚುನಾವಣಾಧಿಕಾರಿಯಾಗಿದ್ದ ಉಪ ವಿಭಾಗಾಧಿಕಾರಿ ಎ.ಬಿ. ಬಸವರಾಜು ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ (ಮಹಿಳೆ)ಕ್ಕೆ ಮೀಸಲಾಗಿತ್ತು. ಒಟ್ಟು 28 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಕಾಂಗ್ರೆಸ್- 15, ಬಿಜೆಪಿ- 12 ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಕಾಂಗ್ರೆಸ್‌ನ ಆಂತರಿಕ ಒಪ್ಪಂದದ ಅನ್ವಯ ಹೊಂಗನೂರು ಕ್ಷೇತ್ರದ ಸದಸ್ಯೆ ಪದ್ಮಾ ಚಂದ್ರು ಮೊದಲ 10 ತಿಂಗಳು ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿ, ರಾಜೀನಾಮೆ ನೀಡಿದ್ದರು.

ಮಹಾದೇವಿ ಅವರು ಮೂಲತಃ ಬೂದಿಪಡಗ ಗ್ರಾಮದವರು. ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ
ರಕ್ಷಿತಾರಣ್ಯದಲ್ಲಿ ಈ ಗ್ರಾಮವಿದ್ದು, ಪ್ರಸ್ತುತ ಅಲ್ಲಿಯೇ ವಾಸಿಸುತ್ತಿದ್ದಾರೆ. ಅವರು ವೃತ್ತಿಯಲ್ಲಿ ಕೃಷಿಕರು.

7ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿರುವ ಮಹಾದೇವಿ ಅವರಿಗೆ ಇಬ್ಬರು ಪುತ್ರರಿದ್ದಾರೆ. ಪತಿ ಜಡೆಯಪ್ಪ ಪುಣಜನೂರು ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 40 ಸಾವಿರದಷ್ಟು ಸೋಲಿಗರ ಜನಸಂಖ್ಯೆಯಿದೆ. ಜಾತಿ ಲೆಕ್ಕಾಚಾರದ ಹಿನ್ನೆಲೆಯಲ್ಲಿ ತಾಲ್ಲೂಕು ಪಂಚಾಯಿತಿಗೆ 2011ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಪುಣಜನೂರು ಕ್ಷೇತ್ರಕ್ಕೆ ಸೋಲಿಗ ಸಮುದಾಯದ ಮಹಿಳೆಯರಿಗೆ ಟಿಕೆಟ್ ನೀಡಲಾಗಿತ್ತು. ಕಾಂಗ್ರೆಸ್‌ನಿಂದ ಮಹಾದೇವಿ ಜಯ ಗಳಿಸಿದ್ದರು. ಈಗ ಚಾಮರಾಜನಗರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾದ ಪ್ರಥಮ ಸೋಲಿಗ ಮಹಿಳೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT