ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಪಂಗೆ ಜೆಡಿಎಸ್ ಸ್ಪಷ್ಟ ಬಹುಮತ

Last Updated 5 ಜನವರಿ 2011, 10:00 IST
ಅಕ್ಷರ ಗಾತ್ರ

ದೇವದುರ್ಗ: ಕಳೆದ 2005ರವರೆಗೂ ತಾಲ್ಲೂಕಿನ ಪಂಚಾಯಿತಿ ಮಟ್ಟದ ಚುನಾವಣೆಗೆ ಭದ್ರಕೋಟೆಯಾಗಿದ್ದ ಕಾಂಗ್ರೆಸ್ ಪಕ್ಷ ಮತ್ತು ರಾಜ್ಯದ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಮಂಗಳವಾರ ನಡೆದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣಾ ಫಲಿತಾಂಶದಿಂದ ತೀವ್ರ ಮುಖಭಂಗ ಅನುಭವಿಸಬೇಕಾಗಿ ಬಂದಿದೆ.

ತಾಪಂ ಒಟ್ಟು 21 ಕ್ಷೇತ್ರಗಳ ಪೈಕಿ ಜೆಡಿಎಸ್ ಪಕ್ಷ 13 ಕ್ಷೇತ್ರಗಳಲ್ಲಿ ಜಯಭೇರಿಯಿಂದ ಸ್ಪಷ್ಟ ಬಹುಮತ ಪಡೆದಂತಾಗಿದ್ದು, ಬಿಜೆಪಿ 05 ಮತ್ತು ಕಾಂಗ್ರೆಸ್ ಪಕ್ಷ ಕೇವಲ 03 ಸ್ಥಾನಗಳನ್ನು ಪಡೆಯುವ ಮೂಲಕ ಭದ್ರಕೋಟೆ ಛಿದ್ರವಾಗಿದೆ.

ತಾಲ್ಲೂಕಿನ ಆರು ಜಿಪಂ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ವಿಜೇತರಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಖಾತೆ ತೆರೆಯದೆ ಇರುವುದು ರಾಜಕೀಯ ಲೆಕ್ಕಚಾರ ಈಗ ಚರ್ಚೆಗೆ ಗ್ರಾಸವಾಗಿದೆ. ಕಳೆದ ಬಾರಿ ಕೊಪ್ಪರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಬಿಟ್ಟರೆ ಇತರ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಿತ್ತು.

ವಿಶೇಷ: ತಾಪಂ ಚುನಾವಣೆಯಲ್ಲಿ ಚಿಂಚೋಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಹಾದೇವಮ್ಮ ಅತಿ ಹೆಚ್ಚು 944 ಮತಗಳನ್ನು ಪಡೆಯುವ ಮೂಲಕ ತಾಲ್ಲೂಕಿಗೆ ಪ್ರಥಮ ಬಂದರೆ ವಂದಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜೇಶ್ವರಿ ಕೇವಲ 3 ಮತಗಳನ್ನು ಪಡೆಯುವ ಮೂಲಕ ಅತಿ ಕಡಿಮೆ ಅಂತರದಿಂದ ವಿಜೇತರಾಗಿದ್ದು, ತಾಪಂ ಇತಿಹಾಸದಲ್ಲಿಯೇ ಇಬ್ಬರೂ ಮಹಿಳೆಯರು ಅತಿ ಹೆಚ್ಚು ಮತ ಮತ್ತು ಕಡಿಮೆ ಮತಗಳನ್ನು ಪಡೆದು ವಿಜೇತರಾಗಿರುವುದು ವಿಶೇಷ ಎನಿಸಿದೆ.

ಮಂಗಳವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮತ ಏಣಿಕೆಯ ಆರಂಭದಿಂದಲೂ ಜಿಪಂ ಕ್ಷೇತ್ರಗಳ ಫಲಿತಾಂಶ ಮಾತ್ರ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ಹೊರತು ಪಡಿಸಿದರೆ ಬಹುತೇಕ ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮಧ್ಯಯೇ ನೇರ ಹಣಾಹಣಿಯ ಸ್ಪರ್ಧೆ ಏರ್ಪಟ್ಟಿರುವುದು ಕಂಡು ಬಂದಿತು.

ಈ ಬಾರಿಯ ಚುನಾವಣೆಯಲ್ಲಿ ಅರಕೇರಾ ಜಿಪಂ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಜಿಪಂ ಅಧ್ಯಕ್ಷ ರಾಮಣ್ಣ ಇರಬಗೇರಾ, ಗಲಗ ಜಿಪಂ ಕ್ಷೇತ್ರದದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ತಾಪಂ ಅಧ್ಯಕ್ಷ ಸಿದ್ದನಗೌಡ ಮೂಡಲಗುಂಡ, ಜಾಲಹಳ್ಳಿ ಕ್ಷೇತ್ರದ ಅಭ್ಯರ್ಥಿಯಾಗಿದ್ದ ತಾಲ್ಲೂಕಿನ ಹಿರಿಯ ಮುಖಂಡ ರಾಮನಗೌಡ ಕರಡಿಗುಡ್ಡ ಅವರ ಪತ್ನಿ ಮಲ್ಲಮ್ಮ, ಕೊಪ್ಪರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಹಿರಿಯ ಮುಖಂಡ ಎ. ಬುಡ್ಡನಗೌಡ ಪಾಟೀಲ ಪರಾಭವಗೊಂಡಿದ್ದಾರೆ.

ಒಂದು ರೀತಿಯಲ್ಲಿ ತಾಪಂ ಮತ್ತು ಜಿಪಂ ಕ್ಷೇತ್ರಗಳನ್ನು ಜಿದ್ದಾ, ಜಿದ್ದಿನ ಕಣಗಳನ್ನಾಗಿ ಸ್ವೀಕರಿಸಿದ್ದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರು ಸುಮಾರು 10 ದಿನಗಳ ಚುನಾವಣಾ ಪ್ರಚಾರದಲ್ಲಿ ಜೆಡಿಎಸ್ ಪಕ್ಷದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಆಡಳಿತಾರೂಢ ಬಿಜೆಪಿ ಪಕ್ಷದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರು ತಾಲ್ಲೂಕಿನಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಶ್ರೀರಕ್ಷೆ: ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಾಲ್ಲೂಕಿಗೆ ನೀಡಿದ ಅಭಿವೃದ್ಧಿಯ ಕೂಡುಗೆಯೇ ಪಕ್ಷದ ಗೆಲುವಿಗೆ ಶ್ರೀರಕ್ಷೆ ಎಂದು ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್ ಅವರು ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಮತದಾರರು ಪಕ್ಷದ ಅಭ್ಯರ್ಥಿಗಳ ಪರವಾಗಿ ಅಭೂತಪೂರ್ವ ಗೆಲುವು ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸಲಾಗುವುದು ಎಂದರು.

ಬಿಗಿ ಬಂದೋಬಸ್ತ್: ಮತ ಏಣಿಕೆ ಕೇಂದ್ರದ ಒಳಗೆ ಮತ್ತು ಹೊರಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ವಿವಿಧ ಪಕ್ಷದ ಅಭ್ಯರ್ಥಿಗಳ ಪರವಾಗಿ ಪಟ್ಟಣಕ್ಕೆ ಆಗಮಿಸಿದ್ದ ಸಾವಿರಾರು ಜನರು ಮತ ಏಣಿಕೆ ಕೇಂದ್ರದ ಸುತ್ತಲು ತಮ್ಮ ಅಭ್ಯರ್ಥಿಯ ಗೆಲುವಿನ ಬಗ್ಗೆ ಕಾತುರದಿಂದ ಕಾಯುತ್ತಿದ್ದ ಪ್ರಸಂಗ ಕಂಡು ಬಂದಿತು.

ವಿಜೇತರಾದ ಬಗ್ಗೆ ಸುದ್ದಿ ತಿಳಿದ ಕೂಡಲೇ ಪಕ್ಕದಲ್ಲಿ ಮಾರಾಟ ಮಾಡುತ್ತಿದ್ದ ರಂಗು, ರಂಗಿನ ಬಣ್ಣವನ್ನು ಒಬ್ಬರಿಗೊಬ್ಬರೂ ಹಚ್ಚಿಕೊಂಡು ಸಂಭ್ರಮಿಸಿದರು.

ಪಕ್ಷದ ಬಲಾಬಲ: ಈ ಬಾರಿಯ ಜಿಪಂ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ 36481 ಮತಗಳು, ಬಿಜೆಪಿಗೆ 27174 ಮತ್ತು ಕಾಂಗ್ರೆಸ್ ಪಕ್ಷಕ್ಕೆ 20460 ಮತಗಳು ಬಂದಿದೆ. ತಾಪಂಯಲ್ಲಿ ಜೆಡಿಎಸ್ ಪಕ್ಷಕ್ಕೆ 35332, ಬಿಜೆಪಿಗೆ 27533 ಮತ್ತು ಕಾಂಗ್ರೆಸ್ ಪಕ್ಷಕ್ಕೆ 23884 ಮತಗಳು ಬಂದಿರುತ್ತವೆ.

ಕೊಪ್ಪಳ: ಅತಂತ್ರ ಜಿಲ್ಲಾ ಪಂಚಾಯಿತಿ
ಕೊಪ್ಪಳ: ಕಳೆದ ಡಿ. 31ರಂದು ನಡೆದ ಚುನಾವಣೆಯಲ್ಲಿ ತನ್ನ ಹಕ್ಕು ಚಲಾಯಿಸಿರುವ ಜಿಲ್ಲೆಯ ಮತದಾರ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡಿಲ್ಲ. ಹೀಗಾಗಿ ನೂತನ ಜಿಲ್ಲಾ ಪಂಚಾಯಿತಿ ಅತಂತ್ರವಾಗಿ ಹೊರಹೊಮ್ಮಿದೆ.

ಜಿಲ್ಲೆಯಲ್ಲಿ ಮಂಗಳವಾರ ನಡೆದ ಮತ ಎಣಿಕೆ ಕಾರ್ಯದಿಂದ ಈ ಅಂಶ ಸ್ಪಷ್ಟವಾಗಿದ್ದು, ಜಿಲ್ಲಾ ಪಂಚಾಯಿತಿಯ ಅಧಿಕಾರದ ಚುಕ್ಕಾಣಿ ಯಾರು ಹಿಡಿಯುವರು ಎಂಬ ಚರ್ಚೆಗೆ ಈ ಫಲಿತಾಂಶ ದಾರಿ ಮಾಡಿಕೊಟ್ಟಿದೆ. ಜಿಲ್ಲೆಯಲ್ಲಿರುವ ಒಟ್ಟು 27 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ಬಿಜೆಪಿ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ 10 ಸ್ಥಾನಗಳಲ್ಲಿ ಗೆದ್ದಿದೆ. ಇನ್ನು ಜೆಡಿಎಸ್ 4 ಹಾಗೂ ಪಕ್ಷೇತರರು ಒಂದು ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT