ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಪಮಾನ ಏರಿಕೆ; ತಂಪು ಪಾನೀಯಕ್ಕೆ ಬೇಡಿಕೆ

Last Updated 8 ಏಪ್ರಿಲ್ 2013, 8:26 IST
ಅಕ್ಷರ ಗಾತ್ರ

ಬಾಗಲಕೋಟೆ: ಹೋಳಿ ಹಬ್ಬದ ಬಳಿಕ ಮುಳುಗಡೆ ನಗರಿಯಲ್ಲಿ ಬಿಸಿಲ ತಾಪ ದಿನದಿಂದ ದಿನಕ್ಕೆ ಏರತೊಡಗಿದೆ. 37ರಿಂದ 39 ಡಿಗ್ರಿ ಸೆಲ್ಸಿಯಸ್‌ಗೆ ತಾಪಮಾನ ಏರಿಕೆ ಕಂಡಿದೆ. ಪರಿಣಾಮ ತಂಪು ಪಾನೀಯಕ್ಕೆ ಬೇಡಿಕೆ ಹೆಚ್ಚುತ್ತಿದೆ.

ಬಿಸಿಲ ಜಳಕ್ಕೆ ದಣಿದ ನಗರದ ಜನ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ನಗರದಲ್ಲಿ ತಂಪು ಪಾನೀಯ ಮಾರಾಟ ಮಳಿಗೆಗಳಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತಿದೆ.

ಎಳನೀರು, ಕಬ್ಬಿನ ಹಾಲು, ಮಜ್ಜಿಗೆ, ಲಸ್ಸಿ, ನಿಂಬೆ ಪಾನಕ, ಜೀರಾ ಸೋಡಾ, ಕಲ್ಲಂಗಡಿ, ಕರಬೂಜ, ದ್ರಾಕ್ಷಿ ಮತ್ತಿತರರ ಬ್ರಾಂಡೆಡ್ ಕಂಪೆನಿಗಳ ತಂಪು ಪಾನೀಯ, ಐಸ್‌ಕ್ರೀಮ್‌ಗೆ ಬೇಡಿಕೆ ಹೆಚ್ಚಿದೆ. ನಗರದ ಜ್ಯೂಸ್ ಸೆಂಟರ್ ಮತ್ತು ಐಸ್‌ಕ್ರೀಂ ಪಾರ್ಲರ್‌ಗಳಲ್ಲಿ ಕೂರಲು, ನಿಲ್ಲಲು ಆಗದಷ್ಟು ಜನ ದಟ್ಟಣೆ ಅಧಿಕವಾಗುತ್ತಿದೆ. ಬಗೆಬಗೆಯ ತಂಪು ಪಾನೀಯ ಮತ್ತು ಐಸ್‌ಕ್ರೀಂ ತಿಂದು ಫ್ಯಾನ್ ಗಾಳಿಗೆ ಮುಖವೊಡ್ಡಿ   ಆಹ್ಲಾದ ಪಡುತ್ತಿದ್ದಾರೆ.

ಆರೋಗ್ಯಕ್ಕೆ ಒಳಿತಲ್ಲ: ಬಿಸಿಲ ಪ್ರಖರತೆಗೆ ಮನೆಯೊಳಗಿನ ನೀರು ಬಿಸಿಯಾಗಿ ಕುಡಿಯಲು ಆಗುತ್ತಿಲ್ಲ ಎಂದು ಕೇವಲ ತಂಪು ಪಾನೀಯಗಳ ಮೊರೆಹೋಗುವುದು ಆರೋಗ್ಯಕ್ಕೆ ಒಳಿತಲ್ಲ.

ಎಳನೀರು, ಕಬ್ಬಿನಹಾಲು, ಮಜ್ಜಿಗೆ, ನಿಂಬೆ ಶರಬತ್ ದೇಹಕ್ಕೆ ಉತ್ತಮ. ಆದರೆ, ಬ್ರಾಂಡೆಡ್ ಕಂಪೆನಿಗಳ ಪಾನೀಯದಲ್ಲಿ ರಾಸಾಯನಿಕ ಪದಾರ್ಥಗಳ ಮಿಶ್ರಣ ಇರುವುದರಿಂದ ಈ ಪಾನೀಯ ಹೆಚ್ಚು ಸೇವಿಸಿದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

ಕಂಪೆನಿ ಪೇಯಗಳಲ್ಲಿ ಇಂಗಾಲದ ಡೈಆಕ್ಸೈಡ್ ಅಂಶ ಇರುವುದರಿಂದ ದಂತಗಳಿಗೆ ತೊಂದರೆಯಾಗುತ್ತದೆ. ಅತ್ಯಧಿಕ ಸೇವಿಸುವುದರಿಂದ ಡಯಾಬಿಟಿಸ್ ಬರುವ ಸಾಧ್ಯತೆ ಇದೆ. ದೇಹದ ಮೂಳೆ ಕೃಶವಾಗುತ್ತವೆ. ದೇಹದ ತೂಕ ಹೆಚ್ಚುತ್ತದೆ. ಬೊಜ್ಜು, ರಕ್ತದ ಒತ್ತಡ ಹೆಚ್ಚುತ್ತದೆ ಎಂಬುದು ವೈದ್ಯಕೀಯ ಪರೀಕ್ಷೆಗಳಿಂದ ಸ್ಪಷ್ಟವಾಗಿದೆ.

ಬಿಸಿಲ ದಾಹದಿಂದ ತಪ್ಪಿಸಿಕೊಳ್ಳಲು  ಆದಷ್ಟು ಹಣ್ಣಿನಿಂದ ತಯಾರಿಸಿದ ಪಾನೀಯ ಸೇವನೆ ಒಳಿತು ಎಂಬುದು ವೈದ್ಯರ ಸಲಹೆ.
ಜನ ಸಂಚಾರ ವಿರಳ:ಪ್ರತಿದಿನ ಬೆಳಿಗ್ಗೆ 10 ಗಂಟೆ ಹೊತ್ತಿಗಾಗಲೇ ಸುಡು ಬಿಸಿಲಿನ ಪ್ರಖರತೆ ಹೆಚ್ಚುವುದರಿಂದ ಮಧ್ಯಾಹ್ನದ ವೇಳೆಗೆ ನಗರದಲ್ಲಿ ಜನ ಸಂಚಾರ ವಿರಳವಾಗುತ್ತಿದೆ.

ರಾತ್ರಿ ವೇಳೆ ಸುಖ ನಿದ್ರೆ ಮಾಡಲೂ ಆಗದಂತಾಗಿದೆ. ಬಿಸಿಲಿನ ಪ್ರಖರತೆಗೆ ಕಾದು ಕಬ್ಬಿಣದಂತಾಗುವ ಟೆರೇಸ್ ಮನೆಗಳು ಮಧ್ಯರಾತ್ರಿಯಾದರೂ ತಣ್ಣಗಾಗದೇ ಬಿಸಿಯನ್ನು ಉಗುಳುತ್ತಿರುತ್ತವೆ. ಬಿಸಿಲ ಪ್ರಖರತೆಗೆ ಮನೆಯೊಳಗಿನ ಫ್ಯಾನ್ ಸಹ ಬಿಸಿ ಗಾಳಿಯನ್ನೇ ಉಗುಳುತ್ತದೆ. ಬೆಳಿಗ್ಗೆ ತಯಾರಿಸಿದ ಅಡುಗೆ ಮಧ್ಯಾಹ್ನದ ವೇಳೆಗೆ ಹಳಸಿಹೋಗುತ್ತಿದೆ. ಆಗಾಗ ಕೈಕೊಡುವ ವಿದ್ಯುತ್‌ನಿಂದ ಮನೆಯೊಳಗೆ ಕೂರಲು ಆಗದಂಥ ಸ್ಥಿತಿ ತಲೆದೋರುತ್ತಿದೆ.

ಹಿಂದಿನ ವರ್ಷಗಳಿಗಿಂತ ಈ ವರ್ಷ ಏಪ್ರಿಲ್ ಆರಂಭದಲ್ಲೇ ಬಿಸಿಲ ಪ್ರಖರತೆ ಗರಿಷ್ಠ ಪ್ರಮಾಣ ತಲುಪಿದ್ದು, ಮುಂದಿನ ಎರಡು ತಿಂಗಳು ಕಳೆಯುವುದು ಜನತೆಗೆ ಯಮಯಾತನೆಯಾಗಿದೆ. ಯುಗಾದಿ ಆಸುಪಾಸು ಮಳೆಯಾಗದಿದ್ದರೆ ಬಿಸಿಲೂರು ಬಾಗಲಕೋಟೆ ಜನತೆ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ತಲೆದೋರುವ ಸಾಧ್ಯತೆ ದಟ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT