ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿ ಮಮತೆಗೆ ನೃತ್ಯ ದರ್ಪಣ

ನಾದ ನೃತ್ಯ
Last Updated 20 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ದೇವರಿಗೂ ತಾಯಿಯ ಹೃದಯವಿದೆ, ಅವಳಿಗೂ ಭಾವನೆಗಳಿವೆ, ಅ೦ತಃಕರಣವಿದೆ ಎ೦ಬುದನ್ನು ಕಲಾವಿದೆ ಮಾಲಿಕಾ ಗಿರೀಶ್ ಪಣಿಕ್ಕರ್ ಅಭಿನಯದ ಮೂಲಕ ಅಭಿವ್ಯಕ್ತಪಡಿಸಿದರು.

ಕಲಾವಿದೆ ಮಾಲಿಕಾ ಚೆನೈನ ಕಲಾಕ್ಷೇತ್ರದ ನೃತ್ಯ ಸಾಂಗತ್ಯ ಬೆಳಸಿಕೊ೦ಡವರು. ಇ೦ದು ಅನೇಕ ದೇಶಗಳಲ್ಲಿ ಬಹು ಬೇಡಿಕೆಯ ನೃತ್ಯಕಲಾವಿದೆಯಾಗಿ ಬೆಳೆದಿದ್ದಾರೆ, ಮಲೇಷ್ಯಾ, ಸಿ೦ಗಪುರದಲ್ಲಿ ಅತಿ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದಾರೆ, ಕಳೆದ 25 ವರ್ಷಗಳಿ೦ದ ನೃತ್ಯದಲ್ಲಿ ಪರಿಣತಿ ಪಡೆದಿದ್ದಾರೆ.

ಇತ್ತೀಚೆಗೆ ಬೆ೦ಗಳೂರಿಗೆ ಅವರು ಆಗಮಿಸಿದ್ದರು. ಇದಕ್ಕಾಗಿ ಅ೦ತರಾಷ್ಟ್ರೀಯ ಕಲೆ ಮತ್ತು ಸಾ೦ಸ್ಕೃತಿಕ ಪ್ರತಿಷ್ಠಾನದ ಶ್ರೀವತ್ಸ ಶಾ೦ಡಿಲ್ಯ ಸೇವಾ ಸದನದಲ್ಲಿ  ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದರು.  ‘ಸ್ತ್ರೀ ಈಸ್ ಮಾ’ ಎ೦ಬ ಶೀರ್ಷಿಕೆಯಡಿಯಲ್ಲಿ ತಾಯಿಯ ಮನದ ಭಾವನೆಗಳ ಅನಾವರಣವನ್ನು ನೃತ್ಯದ ಮೂಲಕ ರಸಿಕರಿಗೆ ನೀಡಿದರು. ಸ೦ಗೀತ  ಮತ್ತು ಸಾಹಿತ್ಯ: ಪಿ. ವೆ೦ಕಟಸುಬ್ರಮಣಿಯ೦, ಪರಿಕಲ್ಪನೆ ಮತ್ತು ನೃತ್ಯ ಸ೦ಯೋಜನೆ:  ಮಾಲಿಕಾ ಗಿರೀಶ್ ಪಣಿಕ್ಕರ್.

ಮೊದಲಿನ ನೃತ್ಯಭಾಗದಲ್ಲಿ ಶಿವನು ಮನೆಗೆ ಬ೦ದಾಗ ಅವನನ್ನು ತಡೆದು ಬಾಲಕನು ನಿಲ್ಲಿಸುವುದು, ಶಿವನು ಆ ಬಾಲಕನ   ಶಿರಚ್ಛೇದನ ಮಾಡುವುದನ್ನು ಪ್ರಸ್ತುತಪಡಿಸಿದರು. ಆ ಕ್ಷಣಕ್ಕೆ ಬಾಲಕನ ಬಾಯಿಯಿ೦ದ ಬ೦ದ ಮೊದಲ ನುಡಿ ಅಮ್ಮ.  ಪಾರ್ವತಿ ಗಾಬರಿಯಾಗಿ ಬ೦ದು ನೋಡಿದಾಗ ಕ೦ದನ ಶಿರಚ್ಛೇದನ ಆದದ್ದನ್ನು ನೋಡಿ, ಕ೦ಗಾಲಾಗಿ ತನ್ನ ವೇದನೆಯನ್ನು ತೋಡಿಕೊ೦ಡಳು. ಅವಳಲ್ಲೂ ತಾಯಿಯ ಹೃದಯವಿದೆ, ಮತ್ತೆ ಬಾಲಕ ಆನೆಯ ಶಿರವನ್ನು ಪಡೆದು ಮುದ್ದು ಮುದ್ದಾಗಿ ಕ೦ಡಾಗ ಅವಳ ಆನ೦ದಕ್ಕೆ ಪಾರವೇ ಇಲ್ಲ.

ಇಲ್ಲಿ ಕಲಾವಿದೆಯು ತಾಯಿ ಮತ್ತು ಕ೦ದನ ಪ್ರೀತಿ–ವಾತ್ಸಲ್ಯವನ್ನು ನೈಜ ಅಭಿನಯದ ಮೂಲಕ ತೋರ್ಪಡಿಸಿದರು. ನ೦ತರ ಅಯ್ಯಪ್ಪನ ತಾಯಿ ಮತ್ತು ಅವನ ಭಾವನೆಗಳು, ಹನುಮ೦ತನ ತಾಯಿ ಮತ್ತು ಮಗನ ಪ್ರೀತಿ–ವಾತ್ಸಲ್ಯಗಳನ್ನು ಭಾವನಾತ್ಮಕ ನೃತ್ಯದ ಮೂಲಕ ಬಿಂಬಿಸಿದರು. ಮು೦ದಿನ ಪ್ರಸ್ತುತಿಯಲ್ಲಿ ಕು೦ತಿ ಮತ್ತು ಕರ್ಣನ ಹಾಗೆ ಗಾ೦ಧಾರಿಯ ವೇದನೆ ಮತ್ತು ಅವಳ ನೂರು ಮಕ್ಕಳ ಭಾವನೆಗಳ ಅನಾವರಣವಾಯಿತು. ಕಡೆಯ ಪ್ರಸ್ತುತಿಯಲ್ಲಿ ಇಂದು ಅನೇಕ ಮಕ್ಕಳು ವಿಶೇಷ ಚೇತನ ಮಕ್ಕಳನ್ನು ಸಲಹುವವರ ಮಾತೃತ್ವದ ಭಾವಗಳನ್ನು ದಾಟಿಸಿದರು. ಚೆನೈನ ಕಲಾಕ್ಷೇತದ ಸಲಹಾ ಮಂಡಳಿಯ ಅಧಿಕಾರಿಯಾಗಿ ನೇಮಕಗೊ೦ಡ ಕಲಾವಿದೆ ಮಾಳವಿಕಾ ಅವಿನಾಶ್ ಅವರಿಗೆ ಗೌರವ ಸಲ್ಲಿಸಲಾಯಿತು.

ನೃತ್ಯ ವೈಭವ
‘ಶಿವಪ್ರಿಯ ಸ್ಕೂಲ್ ಆಫ್‌ ಡ್ಯಾನ್ಸ್’ನ ಕಲಾವಿದ ಸ೦ಜಯ್ ಶಾ೦ತರಾಮ್ ಎರಡು ದಿನಗಳ ನೃತ್ಯ ವೈಭವವನ್ನು ಎಡಿಎ ರ೦ಗಮ೦ದಿರದಲ್ಲಿ ಆಯೋಜಿಸಿದ್ದರು. 200ಕ್ಕೂ ಹೆಚ್ಚು ಮಕ್ಕಳು ನೃತ್ಯವನ್ನು ಅಭಿನಯಿಸಿದರು. ಎರಡನೆಯ ದಿವಸ ಕರ್ನಾಟಕ ಕ್ಷೇತ್ರ ವೈಭವವನ್ನು ನೃತ್ಯದ ಮೂಲಕ ಅನಾವರಣಗೊಳಿಸಿದರು.  

ಜೋಡಿ ಮೋಡಿ
‘ಗಾಯನದ ಜೋಡಿ-ಮೋಡಿ’ ಎ೦ಬ ಶೀರ್ಷಿಕೆಯಡಿಯಲ್ಲಿ ಉಪಾಸನಾ ಮೋಹನ್ ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸುಗಮ ಸ೦ಗೀತದ ಕ್ಷೇತ್ರದ ದಿ.ಎಚ್.ಕೆ.ನಾರಾಯಣ ಮತ್ತು ಮೋಹನ್ ಅವರ ಸ೦ಗೀತ ಸ೦ಯೋಜನೆಯ ಭಾವಗೀತೆಗಳ ಗುಚ್ಛವನ್ನು ಕೇಳುಗರಿಗೆ ಉಣಬಡಿಸಿದರು. ಮೊದಲಿಗೆ  ಕಣವಿ ಅವರ ಪ್ರಸಿದ್ಧ ಗೀತೆ ‘ವಿಶ್ವವಿನೂತನ ವಿದ್ಯಾಚೇತನ’ವನ್ನು ಆಲಾಪನಾ ವಿದ್ಯಾರ್ಥಿಗಳು ಬಹಳ ಸೊಗಸಾಗಿ ಹಾಡಿದರು. ‘ಸಾವಿರ ಬಗೆಯಲಿ ಸಾಗುತಿದೆ’– ಲಕ್ಷ್ಮೀನಾರಾಯಣ ಭಟ್ಟರ ಈ ಕವಿತೆಗೆ ದ್ವನಿಯಾದರು ಉಪಾಸನಾ ವಿದ್ಯಾರ್ಥಿಗಳು. ಖ್ಯಾತ ಹಿನ್ನಲೆ ಗಾಯಕಿ ಇ೦ದೂ ವಿಶ್ವನಾಥ್ ಕ೦ಠಸಿರಿಯಲ್ಲಿ ಮೂಡಿಬ೦ದಿದ್ದು ‘ಶ್ರುತಿ ಸುಖ ನಿನದೆ’.  ಪು.ತಿ.ನ ಅವರ ‘ಗೋಕುಲ ಬಾಲಕ’ ಗೀತೆಗೆ  ಮೋಹನ್ ದನಿಯಾದರು, ‘ನಾನೇ ವೀಣೆ ನೀನೆ ತ೦ತಿ’ ಗೀತೆಗೆ  ಸುರೇಖಾ ಗಾಯನದ ಮೆರಗು ನೀಡಿದರು. 

 ‘ಬಯಲಿನೊಳಗೆ ಯಾರೋ’  ಗೀತೆ ಹಾಡುವ ಮೂಲಕ  ವರ್ಷ ಸುರೇಶ್ ಮೋಡಿ ಮಾಡಿದರು. ಇದು ಎಚ್‌.ಎಸ್‌.ವೆಂಕಟೇಶಮೂರ್ತಿ ಅವರ ಕವಿತೆ.  ಅಮೂಲ್ಯ ಶಾಸ್ತ್ರಿ ಅವರ ಧ್ವನಿಯಲ್ಲಿ  ‘ಜೋಗಿ ಕಾಡತಾನ’ ಗೀತೆ (ರಚನೆ –ರ೦ಜನಿ ಪ್ರಭು) ಮನಸೆಳೆಯಿತು. ‘ಮರೆಗೆ ನಿ೦ತು ಕಾಯುತ್ತಿರುವ’ ಹಾಡನ್ನು ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಹಾಡಿದ್ದು ವಿಶೇಷ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ರಚನೆ ಇದು.  ಕೃಷ್ಣ ಉಡುಪ (ಕೀ ಬೋರ್ಡ್),  ಆರ್. ಲೋಕೇಶ್ (ತಬಲ), ಎಲ್.ಎನ್. ವಸ೦ತಕುಮಾರ್ (ಕೊಳಲು), ಯಶೋಧರ (ರಿದ೦ ಪ್ಯಾಡ್) ಸಾಥ್‌ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT