ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿಗಿಂತ ಮಿಗಿಲಾದ ವಸ್ತು ಬೇರೊಂದಿಲ್ಲ

Last Updated 26 ಡಿಸೆಂಬರ್ 2012, 5:55 IST
ಅಕ್ಷರ ಗಾತ್ರ

ಶಿರಾ: ನಮ್ಮೆಲ್ಲರ ಮೊದಲ ಗುರು ತಾಯಿ. ಇಡೀ ಕುಟುಂಬಕ್ಕೆ ಆಧಾರವಾಗುವ ಜೀವ ತಂತು. ಜಗತ್ತಿನ ಅತಿ ಎತ್ತರದ ವಸ್ತು ಎಂದರೆ ಅದು ತಾಯಿ ಮಾತ್ರ ಎಂದು ಖ್ಯಾತ ಚಲನಚಿತ್ರ ನಟ, ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಗಳ ದಶಮಾನೋತ್ಸವ ಅಂಗವಾಗಿ ನಾಲ್ಕನೇ ದಿನದ ಗ್ರಾಮೀಣ ಮಹಿಳಾ ಸಬಲೀಕರಣ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಕೆಟ್ಟ ತಾಯಿ ಎನ್ನುವ ವಸ್ತುವೇ ಇಲ್ಲ. ಕಳೆದ ಹತ್ತು ಹದಿನೈದು ದಿನಗಳಿಂದ ದೆಹಲಿಯಲ್ಲಿ ಏನು ನಡೆಯುತ್ತಿದೆ ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಸರ್ಕಾರ ಇನ್ನೂ ಕಾನೂನು ಮಾಡುವುದರಲ್ಲೇ ದಿನ ನೂಕುತ್ತಿದೆ. ಇದು ಘೋರ ಅನ್ಯಾಯ. ಮಹಿಳೆಯರೇ ಸಬಲೀಕರಣ ಎನ್ನುವುದನ್ನು ಕಿತ್ತುಕೊಳ್ಳಬೇಕಾದ ಪರಿಸ್ಥಿತಿ ಬಂದಿರುವುದು ವಿಷಾದನೀಯ ಎಂದರು.

ಕಿರುತೆರೆ ಕಲಾವಿದೆ, ಉಪನ್ಯಾಸಕಿ ಲಕ್ಷ್ಮೀ ಚಂದ್ರಶೇಖರ್ ಮಾತನಾಡಿ, ಹೆತ್ತವರು ಹೆಣ್ಣು ಮಕ್ಕಳನ್ನು ಹುಟ್ಟಿನಿಂದ ಕೇವಲ ಮದುವೆಗಾಗಿ ಬೆಳೆಸುವ ಮನೋಭಾವ ಬದಲಿಸಿಕೊಳ್ಳಬೇಕು. ನಾಳೆ ಮದುವೆ ಆದಾಗ ನಿನ್ನ ಗಂಡ, ಗಂಡನ ಮನೆಯವರು ಏನೆನ್ನಬಹುದು, ಹೇಗೆ ನಡೆದುಕೊಳ್ಳಬೇಕು ಎನ್ನುವ ತರಬೇತಿಯನ್ನೇ ನೀಡಲು ಆರಂಭಿಸುತ್ತೇವೆ. ಮದುವೆಯೊಂದೇ ಹೆಣ್ಣಿನ ಜೀವನದ ಉದ್ದೇಶವಲ್ಲ! ಆಕೆಗೂ ಮನಸ್ಸಿರುತ್ತದೆ, ಅದಕ್ಕೆ ಆಸೆ, ಸಾಧಿಸುವ ಹಂಬಲ ಇರುತ್ತದೆ ಎನ್ನುವುದನ್ನು ಮರೆಯಬಾರದು ಎಂದು ತಿಳಿಸಿದರು.

ಲೋಕವನ್ನು ತಿದ್ದುವ ಸಾಹಸ ಮಾಡುವ ಬದಲು ನಮ್ಮನ್ನು ನಾವು ಬದಲಾಯಿಸಿಕೊಂಡರೆ ಸಾಕು, ನಾವು ನೋಡುವ ನೋಟ ಬದಲಾಯಿಸಿಕೊಂಡರೆ ಬದುಕು ಸುಂದರವಾಗುತ್ತದೆ. ಬೇರೊಬ್ಬರು ನಮಗೆ ಪ್ರೇರಣೆಯಾಗಬೇಕಾಗಿಲ್ಲ. ನಮ್ಮಲ್ಲಿನ ಚೇತನವನ್ನು ಹುರಿದುಂಬಿಸಿದರೆ ಸಾಕು, ಆತ್ಮ ವಿಶ್ವಾಸ ಬೆಳೆದರೆ ಸಾಧನೆ ಸುಲಭವೆಂದು ಕ್ರೀಡಾ ಸಾಧಕಿ ಡಾ.ಮಾಲತಿ ಹೊಳ್ಳ ವಿದ್ಯಾರ್ಥಿಗಳಿಗೆ ತಿಳಿಸಿದರು.

ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಿದಾನಂದ್ ಎಂ.ಗೌಡ, ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ರಂಗಭೂಮಿ ಕಲಾವಿದೆ ಯಮುನಾ ಮೂರ್ತಿ, ಸಂಗೀತ ವಿದುಷಿ ಶ್ಯಾಮಲಾ ಜಿ.ಭಾವೆ, ಮಹಿಳಾ ಸಬಲೀಕರಣ ಕುರಿತು ಮಾತನಾಡಿದರು. ಮಹಿಳೆ ಮತ್ತು ಶಿಕ್ಷಣ ಕುರಿತು ಗೀತಾ ರಾಮಾನುಜಮ್, ಮಹಿಳೆ ಮತ್ತು ಮಾಧ್ಯಮ ಕುರಿತು ನಾಗಮಣಿ ಎಸ್.ರಾವ್, ಮಹಿಳೆ ಮತ್ತು ಉದ್ಯಮ ಕುರಿತು ಪದ್ಮಾ ಶೇಷಾದ್ರಿ ವಿಷಯ ಮಂಡಿಸಿದರು.

ಚಿಂತನ ಪ್ರಶಸ್ತಿ: ಬಾಲ್ಯದಿಂದಲೇ ಅಂಗವಿಕಲೆಯಾದರೂ ಆತ್ಮವಿಶ್ವಾಸ ಮತ್ತು ಸಂಕಲ್ಪದಿಂದ ಕ್ರೀಡೆಯಲ್ಲಿ ವಿಶಿಷ್ಟ ಸಾಧನೆಗೈದ, ಡಾ.ಮಾಲತಿ ಹೊಳ್ಳ ಅವರ ಕ್ರೀಡಾ ಸಾಧನೆಗಾಗಿ ಚಿಂತನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹೊಳ್ಳ 7 ಅಂತರಾಷ್ಟ್ರೀಯ ಚಿನ್ನದ ಪದಕ ಸೇರಿದಂತೆ 389 ಚಿನ್ನದ ಪದಕ, 24 ಬೆಳ್ಳಿ ಪದಕ, 5 ಕಂಚಿನ ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT