ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿಯ ಮಡಿಲು ಸೇರಿದ ಮಗು

Last Updated 1 ಜೂನ್ 2013, 12:26 IST
ಅಕ್ಷರ ಗಾತ್ರ

ಹಾಸನ: ಇಲ್ಲಿನ ಜಿಲ್ಲಾ ಆಸ್ಪತ್ರೆಯಿಂದ ಗುರುವಾರ ಅಪಹರಣವಾಗಿದ್ದ ನವಜಾತ ಶಿಶುವನ್ನು ಪೊಲೀಸರು ಪತ್ತೆ ಮಾಡಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ. ಮಗುವನ್ನು ಅಪಹರಣ ಮಾಡಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಹಿನ್ನೆಲೆ: ಬೇಲೂರು ತಾಲ್ಲೂಕು ಮಾದಿಹಳ್ಳಿಯ ಹೇಮಲತಾ ಎಂಬುವವರು ತಮ್ಮ ಮೂರನೇ ಹೆರಿಗೆಗಾಗಿ ಕಳೆದ ಮಂಗಳವಾರ (ಮೇ 28) ಇಲ್ಲಿನ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ಇದೇ ವಾರ್ಡ್‌ನಲ್ಲಿ ದಾಖಲಾಗಿದ್ದ ಸಕಲೇಶಪುರ ತಾಲ್ಲೂಕು ಒಣಗೂರಿನ ವಿದ್ಯಾ ಎಂಬ ಮಹಿಳೆ ಇವರ ಜತೆ ಸಲುಗೆ ಬೆಳೆಸಿಕೊಂಡಿದ್ದರು. ಗುರುವಾರ ಬೆಳಿಗ್ಗೆ 8.30ಕ್ಕೆ ಹೇಮಲತಾ ಗಂಡುಮಗುವಿಗೆ ಜನ್ಮ ನೀಡಿದ್ದರು. ಮಧ್ಯಾಹ್ನ ವಿದ್ಯಾ ಇವರ ಬಳಿ ಬಂದು, ಮಗುವಿಗೆ ಇಂಜೆಕ್ಷನ್ ಹಾಕಿಸಿಕೊಂಡು ಬರುತ್ತೇನೆ ಎಂದು ಮಗುವನ್ನು ಒಯ್ದಿದ್ದರು. ಇಂಜೆಕ್ಷನ್ ಹಾಕಿಸುವ ಬದಲು ಆಕೆ ಮಗುವನ್ನು ನೇರವಾಗಿ ತನ್ನ ಮನೆಗೆ ಒಯ್ದಿದ್ದರು.

ಆಸ್ಪತ್ರೆಯಲ್ಲಿ ಸಿಕ್ಕ ಆಕೆಯ ದಾಖಲೆ ಹಾಗೂ ದೂರವಾಣಿ ಸಂಖ್ಯೆಯ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ಗುರುವಾರ ರಾತ್ರಿ ಸಕಲೇಶಪುರ ಒಣಗೂರಿನಲ್ಲಿರುವ ಅವರ ಮನೆಗೆ ಹೋಗಿ ಮಹಿಳೆಯನ್ನು ಬಂಧಿಸಿದ್ದಾರೆ. ಮಗುವನ್ನು ತಂದು ಪಾಲಕರಿಗೆ ಒಪ್ಪಿಸಿದ್ದಾರೆ.

ಅತ್ತೆ, ಮಾವನ ಭಯ ಕಾರಣ
ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ವಿದ್ಯಾ, ಅತ್ತೆ, ಮಾವ ಹೀಯಾಳಿಸಬಹುದೆಂಬ ಭಯದಿಂದ ಮಗುವನ್ನು ಕದ್ದಿದ್ದೆ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

ಮದುವೆಯಾಗಿ ಮೂರು ವರ್ಷವಾದರೂ ವಿದ್ಯಾಗೆ ಮಗುವಾಗಿರಲಿಲ್ಲ. ಹಿಂದೆ ಎರಡು ಬಾರಿ ಗರ್ಭಪಾತವಾಗಿತ್ತು. ಮೂರನೇ ಬಾರಿ ಗರ್ಭಿಣಿಯಾಗಿದ್ದ ಆಕೆ ತಪಾಸಣೆಗಾಗಿ ಆಸ್ಪತ್ರೆಗೆ ಬಂದಿದ್ದರು. ಆದರೆ, ಈ ಬಾರಿಯೂ ಅದೇ ಸ್ಥಿತಿಯಾಗಿತ್ತು. ಬರಿಗೈಲಿ ಮನೆಗೆ ಹೋದರೆ ಅತ್ತೆ, ಮಾವ ಹೀಯಾಳಿಸಬಹುದು ಎಂಬ ಭಯದಿಂದ ಈ ಮಗುವನ್ನು ಅಪಹರಿಸಿದ್ದೆ ಎಂದು ಆಕೆ ಪೊಲೀಸರಲ್ಲಿ ಹೇಳಿಕೊಂಡಿದ್ದಾರೆ.

ಮಗು ಮಾರಾಟ
ಹತ್ತು ಸಾವಿರ ರೂಪಾಯಿಗೆ ಮಗುವೊಂದನ್ನು ಖರೀದಿಸುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ಇಮ್ತಿಯಾಜ್ ಎಂಬ ವ್ಯಕ್ತಿಯನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

ಹಾಸನ ಸರ್ಕಾರಿ ಆಸ್ಪತ್ರೆಯಿಂದ ಮಗುವೊಂದು ಕಾಣೆಯಾದ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಎಲ್ಲೆಡೆ ಶೋಧ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಹಳೆಯ ಬಸ್ ನಿಲ್ದಾಣದಲ್ಲಿ ಸಣ್ಣ ಮಗುವನ್ನು ಎತ್ತಿಕೊಂಡಿದ್ದ ಇಮ್ತಿಯಾಜ್ ಅವರನ್ನು ನೋಡಿದ ಪೊಲೀಸರು ವಿಚಾರಣೆ ನಡೆಸಿದಾಗ ಮಗು ಖರೀದಿ ಮಾಡಿದ ವಿಚಾರ ಬಯಲಿಗೆ ಬಂತು.

ಸಕಲೇಶಪುರ ತಾಲ್ಲೂಕು ಬಾಳ್ಳುಪೇಟೆಯ ಪಾರ್ವತಿ ಎಂಬ ಮಹಿಳೆ ಈ ಮಗುವನ್ನು ಇಮ್ತಿಯಾಜ್‌ಗೆ ಮಾರಾಟ ಮಾಡಿದ್ದರು.

ಪಾರ್ವತಿ ಅವರ ಅಕ್ಕ ಬುದ್ಧಿಮಾಂದ್ಯ ಮಹಿಳೆಯಾಗಿದ್ದು, ಆಕೆಗೆ ಮದುವೆ ಆಗಿರಲಿಲ್ಲ. ಈ ಮಗು ಅವರ ಹೊಟ್ಟೆಯಲ್ಲಿ ಜನಿಸಿತ್ತು. ಇಬ್ಬರು ಹೆಣ್ಣು ಮಕ್ಕಳನ್ನು ಮಾತ್ರ ಹೊಂದಿದ್ದ ಇಮ್ತಿಯಾಜ್, ಈ ಗಂಡು ಮಗುವನ್ನು ಸಾಕಲು ಮುಂದಾಗಿ ಪಾರ್ವತಿ ಅವರ ಕುಟುಂಬಕ್ಕೆ ಹತ್ತು ಸಾವಿರ ರೂಪಾಯಿ ಕೊಟ್ಟು ಮಗುವನ್ನು ಪಡೆದುಕೊಂಡಿದ್ದರು. ಮಗು ಹಸ್ತಾಂತರವಾಗಿ ಕೆಲವೇ ಕ್ಷಣಗಳಲ್ಲಿ ಪೊಲೀಸರು ಇವರನ್ನು ಹಿಡಿದಿದ್ದರು.

ಮಗುವನ್ನು ಈಗ ಶಿಶುಪಾಲನಾ ಮಂದಿರಕ್ಕೆ ಒಪ್ಪಿಸಲಾಗಿದೆ. ಹಾಸನ ನಗರ ಠಾಣೆಯಲ್ಲಿ ಎರಡೂ ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT