ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರಸಿ ಮೇಲೆ ಹಸಿರ ಸಾಮ್ರಾಜ್ಯ

Last Updated 23 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬ್ಬಾ! ಇದೂ ಸಾಧ್ಯನಾ...? ಇಂಥದ್ದೊಂದು ಮಾತು ನಮ್ಮ ಮನದಲ್ಲಿ ಮೂಡುವುದು ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ‘ಕೌಸ್ತುಭ’ ಮನೆಯ ಅಂಗಳದ- ತಾರಸಿಗಳಲ್ಲಿರುವ ಅಪರೂಪದ ಸಸ್ಯಸಾಮ್ರಾಜ್ಯವನ್ನು ನೋಡಿದಾಗ.

ಮನೆಯ ಅಂಗಳದಲ್ಲಿ ಹವ್ಯಾಸಕ್ಕಾಗಿ ಹಾಗೂ ಸ್ವಂತ ಬಳಕೆಗಾಗಿ ಕೈತೋಟ ಅಭಿವೃದ್ಧಿ ಪಡಿಸುವುದು ಸಾಮಾನ್ಯ. ಆದರೆ ಇದೇ ಪುಟ್ಟ ಕೈತೋಟದಿಂದ ಹಣವನ್ನೂ ಹೇಗೆ ಗಳಿಸಬಹುದು ಎಂಬುದು ‘ಕೌಸ್ತುಭ’ದ ಮಾಲೀಕ ಜಿ.ಎಸ್. ಮಯ್ಯರವರನ್ನು ಮಾತನಾಡಿಸಿದರೆ ತಿಳಿಯುತ್ತದೆ.

ಬ್ಯಾಂಕೊಂದರ ಹಿರಿಯ ವ್ಯವಸ್ಥಾಪಕರಾಗಿ ನಿವೃತ್ತರಾದವರು ಗುಂಡ್ಮಿ ಸೂರ್ಯನಾರಾಯಣ ಮಯ್ಯ. ನಿವೃತ್ತಿ ನಂತರ ಬರುವ ಪಿಂಚಣಿಯಿಂದ ಹಾಯಾಗಿ ಕುಳಿತು ಜೀವನ ಸಾಗಿಸಲು ಬಯಸದ ಇವರ ಗಮನ ಹೋದದ್ದು ಕೈತೋಟದೆಡೆಗೆ. ಕೇವಲ ಹವ್ಯಾಸಕ್ಕೆ ಕೈತೋಟ ಮಾಡದೇ ಅದಕ್ಕೂ ವ್ಯಾವಹಾರಿಕವಾಗಿ ಬಳಸಿಕೊಳ್ಳಬಾರದೇಕೆ ಎಂಬ ಯೋಚನೆ ಅವರಿಗೆ ಹೊಳೆಯಿತು.

ಇದಕ್ಕಾಗಿ ತಮ್ಮ ಮನೆಯ ಒಟ್ಟಾರೆ ಜಾಗದ ಪೈಕಿ ೧೦/೪೦ ಅಡಿಯ ಸಿಮೆಂಟಿನ ಅಂಗಳ ಹಾಗೂ ತಾರಸಿಯಲ್ಲಿ ವಾಣಿಜ್ಯ ಬಳಕೆಗಾಗಿ ಕೈತೋಟ ಮಾಡುವ ಸಾಹಸಕ್ಕೆ ಕೈಹಾಕಿದರು. ಇದಾಗಿ ಈಗ ಆರು ವರ್ಷಗಳಾಗಿವೆ.

ಶೂನ್ಯದಿಂದ ಆರಂಭ
ಶೂನ್ಯಬಂಡವಾಳದೊಂದಿಗೆ ತಮ್ಮ ಕಾರ್ಯವನ್ನು ಪ್ರಾರಂಭಿಸಿದ ಮಯ್ಯರವರು ಮೊದಲಿಗೆ ನೂರಾರು ತೆಂಗಿನ ಕರಟಗಳಲ್ಲಿ ಮಣ್ಣು-, ಮರಳು-ಗೊಬ್ಬರ ತುಂಬಿ ಕೊತ್ತಂಬರಿ, ಮೆಂತ್ಯ ಹಾಗೂ ಪುದೀನಾಗಳನ್ನು ಬೆಳೆದರು. ಮನೆ ಬಳಕೆಯ ನಂತರ ಉಳಿಯುವ ಸೊಪ್ಪುಗಳನ್ನು ಪರಿಚಯಸ್ಥರಿಗೆ ನಿಗದಿತ ದರಕ್ಕೆ ನೀಡುವ ವ್ಯವಸ್ಥೆಯನ್ನು ಮಾಡಿಕೊಂಡರು.

ಇವರು ಬೆಳೆದ ಪರಿಮಳಯುಕ್ತ, ರಾಸಾಯನಿಕ –ವಿಷಮುಕ್ತ, ತಾಜಾ ಹಸಿರು ಸೊಪ್ಪಿಗೆ ಬೇಡಿಕೆ ಹೆಚ್ಚುತ್ತಿದ್ದಂತೆಯೇ ದೊಡ್ಡ ದೊಡ್ಡ ಪ್ಲಾಸ್ಟಿಕ್ ಟ್ರೇಗಳಲ್ಲಿ ಹಾಗೂ ಕುಂಡಗಳಲ್ಲಿ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಪಾಲಾಕ್, ದಂಟು, ಸಬ್ಬಸಿಗೆ ಮೊದಲಾದವುಗಳನ್ನೂ ಬೆಳೆದು ಮಾರತೊಡಗಿದರು.

ಒಮ್ಮೆ ಮೆಂತ್ಯ ಬೆಳೆದ ಟ್ರೇನಲ್ಲಿ ಅದರ ಕಟಾವಿನ ನಂತರ ಕೊತ್ತಂಬರಿ ಸೊಪ್ಪು, ಅದರ ನಂತರ ಪುದೀನಾ ಹೀಗೆ ಬೆಳೆಯುವುದರಿಂದ ರೋಗ ಬಾಧೆಗಳು ಕಾಡುವುದಿಲ್ಲ ಹಾಗೂ ಮಣ್ಣನ್ನೂ ಪದೇ ಪದೇ ಬದಲಾಯಿಸಬೇಕಾದ ಅವಶ್ಯಕತೆಯಿರುವುದಿಲ್ಲ. ಸೂರ್ಯನಾರಾಯಣ ಮಯ್ಯರಿಗೆ ನಿಯಮಿತ ಆದಾಯವನ್ನು ತರುತ್ತಿರುವ ಅವರ ಮನೆ ತೋಟದ ಇನ್ನಿತರ ವಿಶೇಷ ಬೆಳೆಗಳೆಂದರೆ ಸರ್ವಸುಗಂಧ ಎಲೆ (ಬಾಸುಮತಿ ಎಲೆ), ಮಜ್ಜಿಗೆ ಹುಲ್ಲು (ಲೆಮನ್ ಗ್ರಾಸ್), ಅರಿಶಿಣ ಹಾಗೂ ಕೆಸುವಿನ ಎಲೆಗಳು. ಸುಮಾರು ೧೫೦ ದೊಡ್ಡ ದೊಡ್ಡ ಪ್ಲಾಸ್ಟಿಕ್ ಟಬ್‌ಗಳಲ್ಲಿ ಮರಳು-, ಮಣ್ಣು-ಗೊಬ್ಬರ ತುಂಬಿ ಸರ್ವಸುಗಂಧ, ಅರಿಶಿಣ, ಮಜ್ಜಿಗೆ ಹುಲ್ಲು ಹಾಗೂ ಕೆಸುವನ್ನು ಬೆಳೆಸಿದ್ದಾರೆ.

ಬಾಸುಮತಿಯ ಎಲೆಗಳ ಕಟ್ಟು– ಸಸಿ ಮಾರುತ್ತಾರೆ. ಪಿತ್ತ ಶಮನಕಾರಿಯಾದ ಮಜ್ಜಿಗೆ ಹುಲ್ಲನ್ನು ಒಣಗಿಸಿ ಅದಕ್ಕೆ ಸ್ವಲ್ಪ ಒಣ ಶುಂಠಿ ಪುಡಿ ಹಾಗೂ ಏಲಕ್ಕಿ ಸೇರಿಸಿ ಪುಡಿ ಮಾಡಿ ಚಹಾ ಅಂಗಡಿಗಳಿಗೆ ನೀಡುತ್ತಾರೆ. ರಾಸಾಯನಿಕ ಮುಕ್ತ ಅರಿಶಿಣ ಪುಡಿ, ಕೆಸುವಿನ ಎಲೆ ಇವುಗಳಿಗೂ ಅಧಿಕ ಬೇಡಿಕೆ ಇದೆ.

ಸೊಪ್ಪು, ಎಲೆಗಳ ಮಾರಾಟದ ಜೊತೆಗೆ ಮಯ್ಯರು ತುಳಸಿ, ಕರಿಬೇವು, ಮೆಣಸು, ಕಫ ದೋಷವನ್ನು ನಿವಾರಿಸಲೆಂದು ಬೆಳೆಯುವ ನಾಗದಾಳಿ, ಮಧುಮೇಹಿಗಳಿಗಾಗಿ ಇನ್ಸುಲಿನ್ ಗಿಡ, ಸುಗಂಧ ದ್ರವ್ಯಕ್ಕಾಗಿ ಬಳಸುವ ಪಚ್ಚೆತೆನೆ, ಮೊದಲಾದ ಸಸಿಗಳನ್ನು ನೂರಾರು ಸಣ್ಣ ಸಣ್ಣ ನರ್ಸರಿ ಪ್ಲಾಸ್ಟಿಕ್ ಕವರುಗಳಲ್ಲಿ ಬೆಳೆಸಿ ಸ್ಥಳೀಯ ನರ್ಸರಿಗಳಿಗೆ ಮಾರುತ್ತಾರೆ.

ತವರೂರು ಮೈಸೂರಿನಲ್ಲಿಯೇ ನಶಿಸಿ ಹೋಗುತ್ತಿರುವ ಮೈಸೂರು ಚಿಗುರೆಲೆ, ಮಲ್ಲಿಗೆ, ನಂಜನಗೂಡಿನ ರಸಬಾಳೆಗಳನ್ನು ಮಯ್ಯರು ತಮ್ಮ ಸ್ವಂತ ಬಳಕೆಗಾಗಿ ಬೆಳೆದುಕೊಳ್ಳುತ್ತಿದ್ದಾರೆ. ಇವುಗಳ ಜೊತೆಗೆ ಗುಲಾಬಿ, ದಾಸವಾಳ, ಚೆಂಡು ಹೂವು, ಒಂದೆಲಗ, ಬಸಳೆ, ಮೂಲಂಗಿ, ತೊಂಡೆ, ಟೊಮೆಟೊ, ಸೀಮೆಬದನೆಗಳು ಇವರ ಮನೆಯ ತಾರಸಿಯ ತುಂಬ ಸಮೃದ್ಧವಾಗಿ ಬೆಳೆದು ನೋಡುಗರ ಮೈ-ಮನವನ್ನು ಪುಳಕಗೊಳಿಸುತ್ತಿವೆ.

ಸ್ವತಃ ನಿರ್ವಹಣೆ
ಕೆಲಸದವರನ್ನು ನೆಚ್ಚಿಕೊಳ್ಳದೇ  ಸ್ವತಃ ಗಿಡಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವುದು ಮಯ್ಯರ ಜೀವನಶೈಲಿಯ ಒಂದು ಭಾಗವೇ ಆಗಿದೆ. ದಿನವೂ ಬೆಳಿಗ್ಗೆ ನಾಲ್ಕೂವರೆ-ಐದು ಗಂಟೆಗೆಲ್ಲ ಎದ್ದು ಎಲ್ಲ ಗಿಡಗಳಿಗೂ ನೀರನ್ನು ಹಾಯಿಸಿ ಸ್ನಾನ- ತಿಂಡಿಗಳನ್ನು ಮುಗಿಸಿ ತಮ್ಮ ನಿಗದಿತ ಗ್ರಾಹಕರುಗಳಿಗೆ ಸೊಪ್ಪು -ಎಲೆಗಳನ್ನು ಕೊಡಲು ಇವರು ಹೊರಡುತ್ತಾರೆ. ಮಧ್ಯವರ್ತಿಗಳನ್ನು ಅವಲಂಬಿಸದೇ ತಾವು ಬೆಳೆದ ಉತ್ಪನ್ನಗಳನ್ನು ತಾವೇ ದಿನವೂ ಮೈಸೂರಿನಲ್ಲಿ ಸುಮಾರು ೩೦–-೪೦ ಕಿ.ಮಿ.ನಷ್ಟು ದೂರ ವಾಹನದಲ್ಲಿ ಓಡಾಡಿ ತಮ್ಮ ಗ್ರಾಹಕರಿಗೆ ತಲುಪಿಸುತ್ತಾರೆ.

ಗಿಡಗಳಿಗೆ ೩-೪ ದಿನಗಳಿಗೊಮ್ಮೆ ತೆಳ್ಳಗಿನ ಗಂಜಲದ ನೀರನ್ನು ಹಾಯಿಸುವುದನ್ನು ಬಿಟ್ಟರೆ ಬೇರೆ ಯಾವುದೇ ರಾಸಾಯನಿಕಗಳನ್ನು ಹಾಕುವುದಿಲ್ಲ. ಕಲಬೆರಕೆಯಿಲ್ಲದ ಗುಣಮಟ್ಟದ ಸರಕಾಗಿದ್ದರಿಂದ ಇವರ ಪದಾರ್ಥಗಳಿಗೆ ಪೂರೈಕೆಗಿಂತ ಹೆಚ್ಚಿನ ಬೇಡಿಕೆಯಿದೆ. ಒಂದು ಪುಟ್ಟ ಸಂಸಾರದ ನಿರ್ವಹಣೆಗೆ ಸಾಕಾಗಿ ಮಿಗುವಷ್ಟು ಹಣವನ್ನು ಮಯ್ಯರವರು ತಮ್ಮ ಮನೆ ತೋಟದಿಂದ ಪಡೆಯುತ್ತಿದ್ದಾರೆ.

ಕಸದಿಂದ ರಸ
ಅರ್ಧ ಅಡಿಯಷ್ಟು ಮಣ್ಣು ತುಂಬಿಸಬಹುದಾದ ಹಾಗೂ ಬೇರೆಯವರಿಗೆ ನಿರುಪಯುಕ್ತವೆನಿಸುವ ಯಾವುದೇ ಕಂಟೇನರ್‌ಗಳು ಮಯ್ಯರವರ ಪಾಲಿಗೆ ಅಮೂಲ್ಯ. - ಅದು ಒಡೆದ ಮಣ್ಣಿನ ಕುಂಡವಾಗಿರಬಹುದು, ಒಡೆದ ಪ್ಲಾಸ್ಟಿಕ್ ಮಗ್, -ಬಕೆಟ್‌ಗಳಾಗಿರಬಹುದು, ಹಾಲಿನ ಕವರ್‌ಗಳಾಗಿರಬಹುದು. ಇಂತಹ ಸುಮಾರು ೫೦೦-–೬೦೦ ಕುಂಡ, ಕವರುಗಳಲ್ಲಿ ಮಣ್ಣು ತುಂಬಿ ಮಯ್ಯರವರು ಎಲ್ಲಾ ತರಹದ ಸೊಪ್ಪಗಳನ್ನು ಬೆಳೆದು ಮಾರುತ್ತಿದ್ದಾರೆ.

‘ನಮಗೆ ಪ್ರಕೃತಿಯಲ್ಲಿ ಯಾವುದೇ ವಸ್ತುವೂ ನಿರುಪಯುಕ್ತವಲ್ಲ. ಅದನ್ನು ಉಪಯೋಗಿಸುವ ವಿಧಾನ ನಮಗೆ ಗೊತ್ತಿರಬೇಕಷ್ಟೆ’ ಎಂದು ಮಯ್ಯರವರು ನಸುನಗುತ್ತಾ ಉತ್ತರಿಸುತ್ತಾರೆ.

ಸಂತೃಪ್ತಿಯ ಜೀವನ
‘ಹಸಿರಿನ ಒಡನಾಟ ನನಗೆ ಸುಖ, ನೆಮ್ಮದಿ, ಶಾಂತಿಯನ್ನು ತಂದಿದೆ; ಮನ-ಮನೆ ಎರಡೂ ತಂಪಾಗಿದೆ ಎನ್ನುತ್ತಾರೆ ಸೂರ್ಯನಾರಾಯಣ ಮಯ್ಯರವರು.  ಡಿಪಾಸಿಟ್ ಕಲೆಕ್ಷನ್, ಸಾಲ ಮರು ಪಾವತಿಯ ತಲೆಬಿಸಿ ಹೀಗೆ ಪ್ರತಿದಿನವೂ ಹತ್ತು- ಹಲವಾರು ಒತ್ತಡದಿಂದ ಕೂಡಿರುತ್ತಿದ್ದ  ವೃತ್ತಿ ಜೀವನಕ್ಕಿಂತಲೂ ಈಗಿನ ಜೀವನವನ್ನೇ ನಾನು ಸಂತೋಷದಿಂದ ಅನುಭವಿಸುತ್ತಿದ್ದೇನೆ.

ವಾಕಿಂಗ್, ವ್ಯಾಯಾಮ, ಕಾಡು ಹರಟೆ, ಟಿ.ವಿ ವೀಕ್ಷಣೆ ಈ ಯಾವುದೂ ನನಗೆ ಅಗತ್ಯವೇ ಇಲ್ಲ. ಆರ್ಥಿಕ ಲಾಭ ಹಾಗೂ ಆರೋಗ್ಯಲಾಭವನ್ನು ನನ್ನ ಈ ತೋಟ ನನಗೆ ನೀಡುತ್ತಿದೆ. ಕೃಷಿಯನ್ನು ನಂಬಿದವರು ಯಾರೂ ಕೆಡುವುದಿಲ್ಲ ಎಂದು ಹೇಳುತ್ತಿದ್ದ ನನ್ನ ತಂದೆಯವರ ಮಾತನ್ನು ಸತ್ಯ ಮಾಡಿದ ನೆಮ್ಮದಿಯನ್ನು ನಾನು ಅನುಭವಿಸುತ್ತಿದ್ದೇನೆ’ ಎನ್ನುವ ಸಂತೃಪ್ತ ನುಡಿಗಳು ಮಯ್ಯರವರದು. ಪತಿಯ ಕೆಲಸಗಳಿಗೆಲ್ಲ ಬೆನ್ನೆಲುಬಾಗಿ ನಿಂತು ಸಹಕಾರ ನೀಡುತ್ತಿರುವವರು ಪತ್ನಿ ಶಾರದಾ.

ಬೇಸಾಯವೆಂದರೆ ಕಷ್ಟದ ಸರಮಾಲೆ ಎಂದು ದೂರುವವರಿಗೆ ದಿನವೂ ಕಾಂಚಾಣವನ್ನೆಣಿಸುತ್ತಿರುವ ಸೂರ್ಯನಾರಾಯಣ ಮಯ್ಯರವರು ಮಾದರಿ ವ್ಯಕ್ತಿಯಾಗಿ ನಿಲ್ಲುತ್ತಾರೆ.  ಸಂಪರ್ಕಕ್ಕೆ: ೦೮೨೧ ೨೪೪೫೦೨೦/ ೭೩೫೩೪೪೮೫೯೬.

-ಅಮರಜಾ ಹೆಗಡೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT