ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರಾ ಹೋಟೆಲ್‌ನಲ್ಲಿ `ರಸ್ತೆ ಬದಿ ಆಹಾರೋತ್ಸವ'

ರಸಾಸ್ವಾದ
Last Updated 1 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಹಸಿದವನಿಗೆ ಮಾತ್ರ ಊಟದ ಬೆಲೆ ಗೊತ್ತಾಗುವುದು ಎಂಬುದು ಅಕ್ಷರಶಃ ಸತ್ಯ. ಅಂದು ಸಂಜೆ ಇನ್‌ಫೆಂಟ್ರಿ ರಸ್ತೆಯಲ್ಲಿನ ಸೌತ್ ಇಂಡೀಸ್ ಹೋಟೆಲ್‌ಗೆ ಹೋದಾಗ ಗಂಟೆ ಏಳಾಗಿತ್ತು. ಹಸಿದ ಹೊಟ್ಟೆಯಲ್ಲಿಯೇ ಟೇಬಲ್ ಮುಂದೆ ಕುಳಿತಾಗ ಎದುರಿಗಿದ್ದ ತಣ್ಣಗಿನ ನೀರಿನ ಲೋಟವನ್ನೇ ಮೊದಲು ಖಾಲಿ ಮಾಡಿ ಹಸಿವಿಗೆ ಬ್ರೇಕ್ ಹಾಕಬೇಕೆನಿಸಿತು. ಲೋಟ ಕೈಗೆತ್ತಿಕೊಳ್ಳುವಷ್ಟರಲ್ಲಿ `ದಯವಿಟ್ಟು ನಮ್ಮ ಸ್ವಾಗತ ಪೇಯವನ್ನು ಸ್ವಲ್ಪ ರುಚಿ ನೋಡಿ' ಎಂದರು ಬಾಣಸಿಗ ಎಂ. ವೇಲು.

ಪುದೀನಾ, ಲಿಂಬೆ, ನನಲಿ  (ಕೇರಳದಲ್ಲಿ ಸಿಗುವ ಒಂದು ಜಾತಿಯ ಹಣ್ಣು) ಸಿರಪ್ ಸೇರಿಸಿ ಮಾಡಿರುವ ತಂಪು ಪಾನೀಯ ಅರೆಕ್ಷಣ ಹಸಿವನ್ನು ತುಸು ಕಡಿಮೆ ಮಾಡಿತು. ಸುತ್ತಲೂ ಕಣ್ಣಾಯಿಸಿದರೆ ಇಡೀ ಹೋಟೆಲ್ ಸಾಂಪ್ರದಾಯಿಕ ಶೈಲಿಯಲ್ಲಿ ಕಂಗೊಳಿಸುತ್ತಿತ್ತು. ಮಡಕೆಯಲ್ಲಿ ಘಮಗುಟ್ಟುವ ಆಹಾರಪದಾರ್ಥಗಳು, ಭರಣಿಯಲ್ಲಿ ಇಟ್ಟ ಉಪ್ಪಿನಕಾಯಿ, ತೆಂಗಿನ ಗರಿಯ ಚಪ್ಪರ ಕಣ್ಣು ತಂಪಾಗಿಸಿ ಹಸಿವನ್ನು ಮರೆಸುವಂತಿತ್ತು. ಅಲ್ಲಿ ನಡೆದಿದ್ದುದು `ದಿ  ಸ್ಟ್ರೀಟ್ಸ್ ಆಫ್ ಸೌತ್ ಇಂಡಿಯಾ' ಎಂಬ ಆಹಾರೋತ್ಸವ. ಹಾಗಾಗಿ ಅದರ ಪರಿಕಲ್ಪನೆಯ ಎಳೆಯನ್ನು ವೇಲು ಬಿಚ್ಚಿಟ್ಟರು.

`ರಸ್ತೆ ಬದಿಯಲ್ಲಿ ಸಿಗುವ ಆಹಾರ ನಿಮಗೆ ಇಷ್ಟವೇ' ಎಂದು ಕೇಳಿದರು. ಬಿಸಿಬಿಸಿ ಬಜ್ಜಿಯ ನೆನಪಾಯಿತು. ಹ್ಞಾಂ ! ಎಂದಾಗ, `ನಮ್ಮಲ್ಲೂ ಅದೇ ರೀತಿಯ ಆಹಾರ ಸಿಗುತ್ತದೆ' ಎಂದು ನಸುನಕ್ಕರು. ರಸ್ತೆ ಬದಿಯಲ್ಲಿ ಎಲ್ಲರೂ ತಿನ್ನೋದಕ್ಕೆ ಇಷ್ಟಪಡುವುದಿಲ್ಲ. ಹಾಗಾಗಿ ನಾವು `ದಿ  ಸ್ಟ್ರೀಟ್ಸ್ ಆಫ್ ಸೌತ್ ಇಂಡಿಯಾ' ಎಂಬ ಆಹಾರ ಉತ್ಸವವನ್ನು ಆಯೋಜಿಸಿದ್ದು. ನಗರದಲ್ಲಿ ಈ ಪ್ರಯೋಗ ಮೊದಲ ಬಾರಿಯದ್ದು. ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ರಸ್ತೆ ಬದಿ ತಿಂಡಿ ತಿನಿಸುಗಳು ಇಲ್ಲಿವೆ ಎಂದು ವಿವರಿಸಿದರು.

ಮಾತು ಮುಗಿದ ಬಳಿಕ ಸರ್ವರ್, ಚಿಕ್ಕ ಬೌಲ್‌ನಲ್ಲಿ ಹಬೆಯಾಡುವ ಸೂಪ್ ತಂದಿಟ್ಟ. ಎಲ್ಲಾ ಕಡೆ ನೀಡುವ ಹಸಿರು ಬಣ್ಣದ ಸೂಪ್ ಇದು ಎಂದು ನಿರುತ್ಸಾಹವಿಲ್ಲದೇ ಬಾಯಿಗಿಟ್ಟೆ. ಅದ್ಭುತವಾಗಿತ್ತು. ಹೇಗೆ ಮಾಡಿದಿರಿ ಎಂಬಿತ್ಯಾದಿ ಪ್ರಶ್ನೆ ಕೇಳಿದರೆ ಸೂಪ್ ತಣ್ಣಗಾಗುತ್ತದೆ. ಮೊದಲು ಖಾಲಿ ಮಾಡಿ ಎಂದು ಕೈಯಲ್ಲೇ ಸನ್ನೆ ಮಾಡಿದ್ರು ವೇಲು.

`ಒಂದು ಕಟ್ಟು ಹರಿವೆ ಸೊಪ್ಪನ್ನು ಚೆನ್ನಾಗಿ ತೊಳೆದು ಬೇಯಿಸಿ ರುಬ್ಬಬೇಕು. ನಂತರ ಒಂದು ಬಾಣಲೆಗೆ ಸ್ವಲ್ಪ ಎಣ್ಣೆ, ಈರುಳ್ಳಿ, ಬೆಳ್ಳುಳ್ಳಿ ಹಾಕಿ ಬೇಯಿಸಿಕೊಂಡು ಅದನ್ನು ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ರುಬ್ಬಿಟ್ಟ ಹರಿವೆ ಸೊಪ್ಪನ್ನು ಹಾಕಿ ಕುದಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ' ಎಂದು ಸರಳ ಸೂಪ್‌ನ ಪಾಕವಿಧಾನವನ್ನು ತಿಳಿಸಿದರು. ಸೂಪ್ ಆದ ನಂತರ ಒಂದೊಂದು ನಮೂನೆಯ ಹೆಸರಿನಲ್ಲಿ ತಿಂಡಿಗಳು ಆ ಟೇಬಲ್ ಅನ್ನು ಅಲಂಕರಿಸಿದ್ದವು.

ಎದುರಿಗಿದ್ದ ಬಣ್ಣದ ಅನ್ನವನ್ನು ಕೈಗೆತ್ತಿಕೊಂಡಾಗ ಇದರ ಹೆಸರು ಮಧುರೈ ರೈಸ್ ಎಂದರು. ಹೆಸರು ವಿಚಿತ್ರವಾಗಿದೆ ಎಂದೆ. ಊಟದ ಹಿಂದೆ ಒಂದು ಕತೆಯಿದೆ ಅಂದರು.

ಮಧುರೈ ನಾಯಕರು ಊರು ಬಿಟ್ಟು ಇನ್ನೊಂದು ಊರಿಗೆ ವರ್ಷಾನುಗಟ್ಟಲೆ ಹೋಗುತ್ತಿದ್ದರಂತೆ. ವಾಪಸ್ ಬರುವಾಗ ಒಣಹಣ್ಣುಗಳನ್ನು ತುಂಬಾ ತರುತ್ತಿದ್ದರಂತೆ. ಹಾಗೆ ತಂದ ಹಣ್ಣುಗಳನ್ನು ಪುಲಾವ್ ಮಾಡುವಾಗ ಉಪಯೋಗಿಸುತ್ತಿದ್ದರಂತೆ. ಒಣಹಣ್ಣುಗಳೇ ಹೆಚ್ಚಾಗಿರುವ ಈ ಪುಲಾವ್‌ಗೆ ಮಧುರೈ ನಾಯಕರ ಪುಲಾವ್ ಎಂಬ ಹೆಸರು ಬಂದಿದೆಯಂತೆ. ಬಿಸಿ ಹದವಾಗಿತ್ತು. ಮಧುರೈ ಪುಲಾವ್ ಬಾಯಲ್ಲಿ ನೀರೂರಿಸುತ್ತಿತ್ತು.

ಬಿಸಿಬಿಸಿಯಾದ, ಚಿಕ್ಕದಾದ ಬಾಳೆಹಣ್ಣಿನ ದೋಸೆ, ಮೆಣಸಿನಕಾಯಿ ಬಜ್ಜಿ, ಉದ್ದಿನ ವಡೆ, ಕೊಟ್ಟು ಪರಾಠಾ, ಪೋಟಿ ಇಡ್ಲಿ, ನಾನಾ ಬಗೆಯ ತರಕಾರಿಯ ಕೂಟುಗಳ... ಆಂಧ್ರದ ಮೆಣಸಿನಕಾಯಿ ಬಜ್ಜಿ ಮೊದಲ ಬೈಟ್‌ಗೇ ಕಣ್ಣು, ಬಾಯಲ್ಲಿ ನೀರೂರಿಸಿತು. ಸೋರೆಕಾಯಿ ಚಟ್ನಿ ಮತ್ತು ಕಾಯಿಯ ಬಿಳಿ ಚಟ್ನಿಯೊಂದಿಗೆ ಆಪ್ಪಂ ಸವಿಯುವುದೇ ಒಂಥರಾ ಮಜಾ.  ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ ಈ ನಾಲ್ಕು ರಾಜ್ಯಗಳ ಸಾಂಬಾರು, ರಸಂ ಅಲ್ಲಿತ್ತು. ಕೇರಳದ ತೆಂಗಿನಕಾಯಿ ಕರಿ ಮಾತ್ರ ಸ್ವಲ್ಪ ಸಪ್ಪೆ ಎನಿಸಿತ್ತು.

ಖಾರ ತಿಂದ ಬಾಯಿಗೆ ಸಿಹಿ ಉಣಬಡಿಸದಿದ್ದರೆ ಹೇಗೆ? ಎಂದು ವೇಲು ಅವರು ಸಿಹಿ ಖಾದ್ಯಗಳನ್ನು ತಂದಿಟ್ಟರು. ಒಣಹಣ್ಣು ಮತ್ತು ಮಾವಿನ ಹಣ್ಣು ಸೇರಿಸಿ ಮಾಡಿದ ಪಾಯಸ, ಗೋಧಿ ಹಲ್ವಾ, ಕ್ಯಾಲಿಕಟ್ ಹಲ್ವಾ, ಅಕ್ಕಿ, ತೆಂಗಿನಕಾಯಿ ಹಾಲು ಹಾಕಿ ಮಾಡಿದ ಪಾಯಸ ಬಾಯಿ ಚಪ್ಪರಿಸುವಂತಿತ್ತು.

ಏಪ್ರಿಲ್ 3ರವರೆಗೆ ನಡೆಯುವ ಈ ಆಹಾರ ಹಬ್ಬದಲ್ಲಿ ನೀವೂ ರುಚಿ ನೋಡಬೇಕಾ...? 99451 16501 ಕರೆ ಮಾಡಿ, ನಿಮ್ಮ ಟೇಬಲ್ ಕಾಯ್ದಿರಿಸಿಕೊಳ್ಳಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT