ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರಾಹೋಟೆಲ್‌ನಲ್ಲಿ ಕೈಯಲ್ಲೇ ತಿನ್ನುವ ಸುಖ

Last Updated 18 ಜನವರಿ 2013, 19:59 IST
ಅಕ್ಷರ ಗಾತ್ರ

ಸಿಂಧೂ ನದಿಯ ನಾಗರಿಕತೆ ಕುರಿತು ಪಠ್ಯಗಳ್ಲ್ಲಲಿ ಓದಿದ ನಮಗೆ ಅಲ್ಲಿನ ಆಹಾರ ವೈವಿಧ್ಯ ಕುರಿತ ಮಾಹಿತಿ ಅಲಭ್ಯ. ಐದು ಪವಿತ್ರ ನದಿ (ಜೇಲಮ್, ಚಿನ್, ರವಿ, ಬಿಯಾಸ್ ಹಾಗೂ ಸಟ್ಲೆಜ್)ಗಳ ಈ ನಾಡನ್ನು ಪಂಜಾಬ್ ಎಂದು ಕರೆಯಲಾಗುತ್ತದೆ. ಅದರಲ್ಲಿ ಅರ್ಧ ಭಾಗದಷ್ಟು ಭಾರತದಲ್ಲಿ ಉಳಿದದ್ದು ಪಾಕಿಸ್ತಾನದ ಪಾಲಾಗಿದೆ. ಇಂಥ ವಿಶಿಷ್ಟ ನಾಡಿನ ವಿಶೇಷ ಬಗೆಯ ಅಪರೂಪದ ಖಾದ್ಯಗಳನ್ನು ಈಗ ಬೆಂಗಳೂರಿನ ಯಶವಂತಪುರದಲ್ಲಿರುವ ತಾಜ್ ವಿವಂತಾದಲ್ಲಿ ಉಣಬಡಿಸಲಾಗುತ್ತಿದೆ.

ಪಂಜಾಬಿ ಮಹಿಳೆಯರು ತಮ್ಮ ಜಡೆಯನ್ನು ಉದ್ದ ಮಾಡಿಕೊಳ್ಳಲು ಬಳಸುವ ಬಣ್ಣದ `ಪರಾಂದ' ಎಂಬ ಹೆಸರನ್ನೇ ಈ ರೆಸ್ಟೋರೆಂಟ್‌ಗೆ ಇಡಲಾಗಿದೆ. ಮಣ್ಣು, ನೀರು, ಅಗ್ನಿ, ಇದ್ದಿಲು ಹಾಗೂ ಅರಣ್ಯವನ್ನು ಆಧಾರವಾಗಿಟ್ಟುಕೊಂಡು ಜತೆಗೆ ಪರಾಂದಾದಷ್ಟೇ ವೈವಿಧ್ಯಮಯವಾಗಿ ರೆಸ್ಟೋರೆಂಟ್ ಅನ್ನು ವಿನ್ಯಾಸಗೊಳಿಸಲಾಗಿದೆ. ಒಣ ಮೆಣಸಿನ ಕಾಯಿ ಕೆಂಪು, ಅರಿಷಿಣದ ಹಳದಿ, ದಾಲ್ಚಿನ್ನಿಯ ಹಸಿರು ಸೇರಿದಂತೆ ಪಂಜಾಬಿ ಅಡುಗೆಗೆ ಅತಿ ಅಗತ್ಯವಾದ ಹನ್ನೊಂದು ಬಗೆಯ ಮಸಾಲೆ ಪದಾರ್ಥಗಳನ್ನೇ ಬಳಸಿ ಇಲ್ಲಿನ ಒಳಾಂಗಣವನ್ನು ವಿನ್ಯಾಸ ಮಾಡಲಾಗಿದೆ.

ಹಿನ್ನೆಲೆಯಲ್ಲಿ ಪಂಜಾಬಿನ ಜನಪದ ಗೀತೆಗಳ ಇಂಪು. ಜತೆಗೆ ಕೆಂಪು ಇಟ್ಟಿಗೆಯಿಂದ ನಿರ್ಮಿಸಿರುವ ಇದರ ಒಳಾಂಗಣ ಸಂಪೂರ್ಣವಾಗಿ ಪಂಜಾಬಿನ ಬೃಹತ್ ಚೌಕಿ ಮನೆಗಳಂತೆ ಕಾಣುತ್ತದೆ. ಒಳಾಂಗಣದಲ್ಲಿ 76 ಆಸನಗಳು ಹಾಗೂ ಹೊರಗೆ 20 ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಇಂಥ ಸುಂದರ ತಾಣದಲ್ಲಿ ವಾಯುವ್ಯ ಭಾರತದ ಅಪರೂಪದ ತಿನಿಸುಗಳನ್ನು ಉಣಬಡಿಸಲಾಗುತ್ತಿದೆ.

ಪಂಚತಾರಾ ಹೋಟೆಲ್‌ಗಳಲ್ಲಿ ಚಮಚ, ಚಾಕು, ಫೋರ್ಕ್‌ಗಳಲ್ಲೇ ತಿನ್ನಬೇಕೆಂದು ಅಂದುಕೊಂಡರೆ ಅದು ಇಲ್ಲಿ ಸುಳ್ಳಾಗಲಿದೆ. ಏಕೆಂದರೆ ಇಲ್ಲಿನ ಮುಖ್ಯ ಬಾಣಸಿಗ ಉ್ದ್ದದೀಪನ್ ಅವರು ಬರುವ ಅತಿಥಿಗಳಿಗೆ ಇಲ್ಲಿನ ಆಹಾರವನ್ನು ಕೈಯಲ್ಲೇ ತಿಂದು ರುಚಿ ಸವಿಯಿರಿ ಎಂದು ಮನವಿ ಮಾಡಿಕೊಳ್ಳುತ್ತಾರೆ. ಕೈಯಲ್ಲೇ ತಿನ್ನುವುದಾದಲ್ಲಿ ಪುಟ್ಟ ಬಟ್ಟಲಲ್ಲಿ ಮಾತ್ರೆ ಗಾತ್ರದ ಸುತ್ತಿಟ್ಟ ಕರವಸ್ತ್ರವನ್ನಿಟ್ಟು ಅದಕ್ಕೆ ಶುದ್ಧ ನೀರು ಸುರಿಯಲಾಗುತ್ತದೆ. ಹಿಗ್ಗಿದ ಕರವಸ್ತ್ರದಿಂದ ಕೈ ಒರೆಸಿಕೊಂಡರೆ ವಿಶೇಷ ಮಸಾಲ ಬಿಯರ್ ಅಥವಾ ಮಾಕ್‌ಟೈಲ್‌ಗಳಿಂದ ಪರಂದಾ ಸವಿಯನ್ನು ಆರಂಭಿಸಬಹುದು.

ಮಣ್ಣಿನ ಹೆಂಚಿನಲ್ಲಿ ಮಾಂಸವನ್ನು ಬೇಯಿಸಿದ `ತಂದೂರಿ ಭಾರ್ವನ್ ತುರಾಯ್', ಸಾಸಿವೆ ಎಣ್ಣೆಯಲ್ಲಿ ಹುರಿದ ಕೋಳಿಯ ತೊಡೆ `ಚಾಂಪ್ ಎ ಮುರ್ಗ್', ಕಂದು ಈರುಳ್ಳಿ ಹಾಗೂ ಬೆಳ್ಳುಳ್ಳಿಯೊಂದಿಗೆ ಹುರಿದ ಮಾಂಸದ `ತತ್ರೇ ಷೀಕ್'ನ ಸವಿ ನೋಡಲು ಹಾಗೂ ಸವಿಯಲು ರುಚಿಕಟ್ಟಾಗಿದೆ. ಕೇವಲ ಮಾಂಸಾಹಾರದ ಸ್ಟಾಟರ್‌ಗಳು ಮಾತ್ರವಲ್ಲದೆ ಹೀರೇಕಾಯಿ ಬಳಸಿ `ಹರಿಕೆ ಪಠಾಣ ದಿ ಅಮೃತ್‌ಸರ್ ಮಚ್ಚಿ ಕಬಾಬ್' ಬಾಯಲ್ಲಿ ನೀರೂರಿಸುತ್ತದೆ.
ಸ್ಟಾರ್ಟರ್‌ನ ರುಚಿ ನಾಲಿಗೆಯಲ್ಲಿ ಹರಿದಾಡಿ, ಮುಖ್ಯ ಭಾಗಕ್ಕೆ ಹೋಗುವುದಾದರೂ ಹೇಗೆ. ಅದಕ್ಕಾಗಿಯೇ ನಾಲಗೆಯ ರುಚಿ ಹೀರುವ ಇಂದ್ರಿಯಗಳನ್ನು ಶುಚಿಗೊಳಿಸಲು ಪುದೀನ ಬೆರೆಸಿದ ಬರ್ಫ್ ನೀಡಲಾಗುತ್ತದೆ.

ಅದರ ನಂತರವೇ ಮುಖ್ಯ ಆಹಾರದತ್ತ ಹರಿಯಬೇಕು ಚಿತ್ತ. ಹೆಸರುಕಾಳು, ಉದ್ದು, ಶುಂಠಿ, ಬೆಳ್ಳುಳ್ಳಿ ಹಾಗೂ ಈರುಳ್ಳಿ ಬೆರೆಸಿ ತಯಾರಿಸಿದ ಚೌಂಕ್‌ವಾಲಿ ದಾಲ್ ಎಂಬ ಕರಿ ಅಮೃತಸರ್ ಹಾಗೂ ಗ್ರ್ಯಾಂಡ್ ಟ್ರಂಕ್ ರಸ್ತೆಯ ವಿಶೇಷಗಳಲ್ಲೊಂದು. ಕರಿಮೆಣಸು ಬೆರೆಸಿ ತಯಾರಿಸಿದ `ಕುಕ್ಕಡ್ ಟಿಕ್ಕ ಶರ್ಕಾ ಪಾಯಜ್' ಎಂಬ ಚಿಕನ್ ಹಾಗೂ ಲಾಹೋರ್‌ನ ಮುಖ್ಯ ಬಾಣಸಿಗ ಬೆಲಿರಾಮ್ ಅವರ ಗೌರವಾರ್ಥ ಅವರದ್ದೇ ಹೆಸರಿನ `ಮೀಟ್ ಬೇಲಿರಾಮ್' ಇಲ್ಲಿನ ವಿಶೇಷ ಕರಿಗಳಲ್ಲೊಂದು.

ಇವುಗಳಿಗೆ ಲಾಚೇದಾರ್ ಚೋಟಿ ಪರೋಟಿ, ಸಾದಿ ರೋಟಿ, ಅಮೃತಸರ್ ಕುಲ್ಚಾ, ಲಾಹೋರ್ ನಾನ್ ಇತ್ಯಾದಿ ರುಚಿಯನ್ನು ಮತ್ತಷ್ಟು ಹೆಚ್ಚಿಸಲಿವೆ. ಮುಂಬೈನ  ಪ್ರಖ್ಯಾತ ಪಾರ್ಸಿ ಡೈರಿ ಕುಲ್ಫಿಯಿಂದ ವಿಶೇಷವಾಗಿ ತಯಾರಿಸಲಾದ ಬಾಯಲ್ಲಿ ಕರಗುವ ಕುಲ್ಫಿಯೊಂದಿಗೆ ಇಲ್ಲಿನ ಭೋಜನ ಕೊನೆಗೊಂಡರೂ ಅಂತಿಮವಾಗಿ ಉಡುಗೊರೆಯಾಗಿ ನೀಡುವ ಪಾನ್ ಡಬ್ಬ ಮನೆ ಮುಟ್ಟಿದರೂ ಪರಂದಾ ಸವಿಯನ್ನು ನೆನಪಿಸಲಿದೆ.

ಇಷ್ಟೆಲ್ಲಾ ಖಾದ್ಯಗಳನ್ನು ತಯಾರಿಸಲು ಬಳಸುವುದು ಸಾಮಾನ್ಯಕ್ಕಿಂತ ಶೇ 1ರಷ್ಟು ಕಡಿಮೆ ಎಣ್ಣೆ, ಚೀಸ್ ಹಾಗೂ ಕೊಬ್ಬಿನ ಪದಾರ್ಥ ಎಂದರೆ ಹುಬ್ಬು ಮೇಲೇರುತ್ತದೆ. ಹೀಗಾಗಿ ಕೇವಲ ಕುಟುಂಬದೊಂದಿಗೆ ವಾರಾಂತ್ಯದಲ್ಲಿ ಮಾತ್ರವಲ್ಲ, ವಾರದ ದಿನಗಳಲ್ಲಿ ಸಹೋದ್ಯೋಗಿಗಳೊಂದಿಗೆ ಹೆಚ್ಚು ಉದರಭಾರವಿಲ್ಲದ ರುಚಿಯಾದ ಊಟಕ್ಕೆ ತಾಜ್ ವಿವಂತಾದ `ಪರಿಂದಾ'ಗೆ ಭೇಟಿ ನೀಡಬಹುದು. ಊಟದ ನಂತರವೂ ಹೆಚ್ಚು ಚಟುವಟಿಕೆಯಿಂದರಲು `ಪರಂದಾ' ಆಹಾರ ಹೆಚ್ಚು ಅನುಕೂಲ.

ರೆಸ್ಟೂರಾ: ಪರಂದಾ
ಅಡುಗೆ ಶೈಲಿ: ಪಂಜಾಬಿ
ವಿಶೇಷ ತಿನಿಸುಗಳು: ಚಪ್ಲಿ ಕಬಾಬ್, ಪಟಿಯಾಲಾ ಪಥಾರಿ ಗೋಷ್, ತಂದೂರಿ ಲೊಬ್‌ಸ್ಟರ್, ಮಚ್ಚಿ ಮಸಾಲೆದಾರ್, ಮೀಟ್ ಬೇಲಿರಾಮ್
ಸ್ಥಳ: ಲಾಬಿ ಲೆವೆಲ್, ವಿವಂತಾ ಬೈ ತಾಜ್, ಯಶವಂತಪುರ
ಸಮಯ: ಮಧ್ಯಾಹ್ನ 12.30ರಿಂದ 3 ಹಾಗೂ ರಾತ್ರಿ 7ರಿಂದ ಮಧ್ಯರಾತ್ರಿಯವರೆಗೆ
ಉಡುಪು: ಸ್ಮಾರ್ಟ್ ಕ್ಯಾಷುಯಲ್
ಒಬ್ಬರಿಗೆ ಸರಾಸರಿ ಮೊತ್ತ: ರೂ. 1250
ದೂರವಾಣಿ: 6690 0111
ರುಚಿ: ಉತ್ತಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT