ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರು ತೀರಿಕೊಂಡಿತು

Last Updated 13 ಜುಲೈ 2013, 19:59 IST
ಅಕ್ಷರ ಗಾತ್ರ

`ಕಾರ್ಗಿಲ್ ಯುದ್ಧದಲ್ಲಿ ದಫೇದಾರ್ ಮಲ್ಲಯ್ಯ ಮೇಗಳಮಠ ವೀರ ಮರಣ ಅಪ್ಪಿದರು ಎಂದು ತಿಳಿಸಲು ಗಡಿ ಭದ್ರತಾ ಪಡೆ ವಿಷಾದ ವ್ಯಕ್ತಪಡಿಸುತ್ತದೆ'.

ಕೊಪ್ಪಳ ತಾಲ್ಲೂಕು ಅಳವಂಡಿ ಗ್ರಾಮದ ಯೋಧ ಮಲ್ಲಯ್ಯ, ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಸಮರದಲ್ಲಿ ಅಸುನೀಗಿದಾಗ, ಅವರ ತಾಯಿ ಗಂಗಮ್ಮ ಮೇಗಳಮಠ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಬಂದ ತಂತಿ ಸಂದೇಶ ಇದು. ಅಷ್ಟರಲ್ಲಿ ಮಲ್ಲಯ್ಯ ಅವರ ಸಾವಿನ ಗುಮಾನಿ ಊರಲ್ಲಿ ಹರಡಿತ್ತಾದರೂ ತಾರ್‌ನಲ್ಲಿದ್ದ ಆ ಒಂದು ವಾಕ್ಯ ಅವರ ನಿಧನ ವಾರ್ತೆಯನ್ನು ಅಧಿಕೃತಗೊಳಿಸಿತ್ತು.

ತಾರ್ ಬರುತ್ತಿದ್ದಂತೆ ದುಃಖದ ಕಟ್ಟೆ ಒಡೆದಿತ್ತು. ಇಡೀ ಊರು ತನ್ನ ಮಗನನ್ನು ಕಳೆದುಕೊಂಡಂತೆ ಕಣ್ಣೀರು ಹಾಕಿತ್ತು. ಸಾವಿನ ಸುದ್ದಿ ಎಂದರೆ ಜನಕ್ಕೆ ತಾರ್ ಮೇಲೆ ಅಷ್ಟೊಂದು ವಿಶ್ವಾಸ. ಪ್ರಥಮ ಹಾಗೂ ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಯುದ್ಧ ಇಲಾಖೆ ಇಂತಹ `ವಿಷಾದ ಸಂದೇಶ'ಗಳನ್ನು ಲೆಕ್ಕವಿಲ್ಲದಷ್ಟು ಕಳುಹಿಸಿತ್ತು. ಸಂದೇಶ ರವಾನಿಸುವ ಸಲುವಾಗಿ ಯುದ್ಧ ಭೂಮಿಯಲ್ಲಿ ತಂತಿ ಇಲಾಖೆಯನ್ನು ತೆರೆಯಲಾಗುತ್ತಿತ್ತು. ತಂತಿ ಇಲಾಖೆಯಲ್ಲಿದ್ದ ಸುಂದರ ಯುವತಿಯರು ತಮ್ಮ ಕಣ್ಣಾಲಿ ತೇವ ಮಾಡಿಕೊಂಡೇ ನೋವಿನ ಸಂದೇಶ ರವಾನೆ ಮಾಡುತ್ತಿದ್ದರು.

ಮದುವೆ ದಿನ ಶುಭಾಶಯ ಹೇಳಬೇಕಿದ್ದರೆ, ಮಗಳ ಪ್ರಸವದ ಸುದ್ದಿಯನ್ನು ಅಳಿಯನಿಗೆ ತಿಳಿಸಬೇಕಿದ್ದರೆ, ವಯಸ್ಸಾದ ಅಪ್ಪ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರೆ, ವಿಚಾರಣೆ ಎದುರಿಸಲು ನ್ಯಾಯಾಲಯಕ್ಕೆ ಹೋಗಲು ಆಗದಿದ್ದರೆ, ಸರ್ಕಾರದಿಂದ ಹಿರಿಯ ಅಧಿಕಾರಿಗಳಿಗೆ ತುರ್ತು ಆದೇಶ ನೀಡಬೇಕಿದ್ದರೆ... ಹೀಗೆ ಹತ್ತು-ಹಲವು ಕಾರಣಗಳಿಗೆ ತಂತಿ ಸಂದೇಶಗಳು ವಿನಿಮಯ ಆಗುತ್ತಿದ್ದವು. ಯಾರಾದರೂ ನಿಧನ ಹೊಂದಿದರೆ ತಂತಿ ಸಂದೇಶದ ಮೂಲಕ ತುರ್ತು ಬುಲಾವ್ ಬರುತ್ತಿತ್ತು. ಇದೇ ಉದ್ದೇಶಕ್ಕೆ ಅಧಿಕವಾಗಿ ಬಳಕೆ ಆಗಿದ್ದರಿಂದ ತಾರ್ ಎಂದರೆ `ನಿಧನ ವಾರ್ತೆ'ಯೇ ಎಂಬುವಷ್ಟು ಅದಕ್ಕೆ ಕುಖ್ಯಾತಿ ಬಂದಿತ್ತು.

ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಜೈಲಿನಲ್ಲಿದ್ದ ಕಸ್ತೂರ ಬಾ ಅವರಿಗೆ ಮಹಾತ್ಮ ಗಾಂಧಿ ಒಂದು ತಂತಿ ಸಂದೇಶ ಕಳುಹಿಸಿದ್ದರು. `ದೇವರು ನಿನಗೆ ಧೈರ್ಯ, ವಿಶ್ವಾಸ ಮತ್ತು ಮಾನಸಿಕ ಶಾಂತಿ ನೀಡಲಿ' ಎನ್ನುವ ಅವರ ಹಾರೈಕೆಗೆ ತಾರ್‌ಗಳ ಚರಿತ್ರೆಯಲ್ಲಿ ಈಗಲೂ ಅತ್ಯಂತ ವಿಶಿಷ್ಟ ಸ್ಥಾನ ಇದೆ.

ಅಬ್ಬಬ್ಬಾ, ತಾರ್‌ನ ಆ ಒಂದೊಂದು ಸಂದೇಶದಲ್ಲಿ ಇರುತ್ತಿದ್ದ 10-15 ಶಬ್ದಗಳು ಎಷ್ಟೊಂದು ಭಾವೋತ್ಕರ್ಷಕ್ಕೆ ಕಾರಣವಾಗಿದ್ದವು. ಮನಸ್ಸಿಗೆ ಮುದ ನೀಡುವಂತಹ ಸಾಹಿತ್ಯ ಭಾಷೆ ಇಲ್ಲವೆ ಭಾವಲೋಕಕ್ಕೆ ಕರೆದೊಯ್ಯುವಂತಹ ಕವಿವಾಣಿ ಯಾವುದೂ ಈ ಸಂದೇಶಗಳಲ್ಲಿ ಇರುತ್ತಿರಲಿಲ್ಲ. ಆದರೆ, ಬದುಕಿಗೆ ಗಾಢವಾಗಿ ತಟ್ಟುವಂತಹ ಮಾಹಿತಿ ಹೊತ್ತು ತರುತ್ತಿದ್ದ ಕಾರಣ, ಆ ನಿರ್ಜೀವ ಶಬ್ದಗಳಿಗೆ ಏಕಾಏಕಿ ಜೀವ ಬಂದು ಬಿಡುತ್ತಿತ್ತು. ಭಾವನೆಗಳೆಲ್ಲ ಕಾರಂಜಿಯಂತೆ ಪುಟಿದೇಳುತ್ತಿದ್ದವು. ಹೀಗಾಗಿ ಅಳುವ ಕಡಲು ಉಕ್ಕೇರುತ್ತಿತ್ತು. ಆಗಾಗ ನಗೆಯ ಹಾಯಿದೋಣಿ ಸಹ ಕಾಣುತ್ತಿತ್ತು.

`ನಿನ್ನ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದಳು', `ಅಮ್ಮ ತೀರಿಕೊಂಡಳು' ಎನ್ನುವಂತಹ ಸಂದೇಶಗಳು ಸ್ವೀಕರಿಸಿದ ವ್ಯಕ್ತಿಯ ಕಣ್ಣಲ್ಲಿ ನೀರು ಉಕ್ಕುವಂತೆ ಮಾಡುತ್ತಿದ್ದವು. ಮೊದಲನೆಯದು ಹರ್ಷದ ಧಾರೆಯಾದರೆ, ಎರಡನೆಯದು ನೋವಿನ ಅಶ್ರುತರ್ಪಣ. ತಾರ್ ಜನರ ಭಾವನೆಗಳೊಂದಿಗೆ ಚೆಲ್ಲಾಟ ಆಡುತ್ತಿತ್ತು.

`ಹಳದಿ ಬಣ್ಣದ ಲಕೋಟೆ ಹೊತ್ತು ನಾನು ಯಾವುದಾದರೂ ಮನೆ ಬಾಗಿಲು ಬಡಿದರೆ ಸಾಕು, ಮನೆ ಮಂದಿಯ ಭಾವನೆ ಕ್ಷಣಾರ್ಧದಲ್ಲಿ ಬದಲಾವಣೆ ಆಗಿಬಿಡುತ್ತಿತ್ತು. ಕೆಲವರು ಅಳುವುದಕ್ಕೇ ಶುರು ಮಾಡುತ್ತಿದ್ದರು. ಏನೋ ಕೆಟ್ಟ ಸುದ್ದಿ ಬಂದಿದೆ ಎನ್ನುವುದು ಅವರ ಅಭಿಪ್ರಾಯ ಆಗಿರುತ್ತಿತ್ತು. ಸಾವಿನ ಸಂದೇಶಗಳನ್ನು ಹೊತ್ತೊಯ್ಯುವುದು ನನಗೂ ಕಷ್ಟ ಎನಿಸುತ್ತಿತ್ತು' ಎಂದು ಹೇಳುತ್ತಾರೆ ನಿವೃತ್ತ ಅಂಚೆ ಪೇದೆ ಗಂಗಾಧರ ಮಣ್ಣೂರು.

ದಶಕಗಳ ಹಿಂದೆ ಬೇಹುಗಾರಿಕೆಯನ್ನು ತುಂಬಾ ಸರಳಗೊಳಿಸಿದ್ದ ಮಾಧ್ಯಮ ಈ ತಂತಿ ಸಂದೇಶ. ಸಮುದ್ರದ ತಳ ಹಾಗೂ ಭೂಮಿಯ ಒಡಲು ಎರಡರಲ್ಲೂ ಹರಡಿಕೊಂಡಿದ್ದ ತಂತಿಗಳಲ್ಲಿ ಹರಿದಾಡುತ್ತಿದ್ದ ಸಂದೇಶಗಳ ಮೇಲೆ ನಿಗಾ ಇಟ್ಟರೆ ವಿದೇಶಕ್ಕೆ ಹೋಗುತ್ತಿದ್ದ ಮಾಹಿತಿ, ಅಲ್ಲಿಂದ ಬರುತ್ತಿದ್ದ ಸಂಕೇತ ಸುಲಭವಾಗಿ ಸಿಕ್ಕು ಬಿಡುತ್ತಿತ್ತು.

ತಂತಿ ಸಂದೇಶವನ್ನು ನ್ಯಾಯಾಲಯ ಕಾನೂನು ದಾಖಲೆಯನ್ನಾಗಿ ಮಾನ್ಯ ಮಾಡಿತ್ತು. ಎಸ್‌ಎಂಎಸ್, ಇ-ಮೇಲ್ ಇಲ್ಲವೆ ಫ್ಯಾಕ್ಸ್‌ಗೆ ಈಗ ಆ ಮಾನ್ಯತೆ ಇಲ್ಲ. ವಿಚಾರಣೆಗೆ ಹಾಜರಾಗಲು ಆಗದವರು ತಂತಿ ಮೂಲಕವೇ ಸಂದೇಶ ಕಳುಹಿಸುತ್ತಿದ್ದರು. ಪತ್ರಿಕೆಗಳು ಮಾರಾಟವಾಗದ ಕುಗ್ರಾಮಗಳಿಂದ ಸಹ ಸುದ್ದಿಗಳು ತಾರ್ ಮೂಲಕ ಬರುತ್ತಿದ್ದವು. ಸೇನೆಯಲ್ಲಿ ತಾರ್ ಒಂದೇ ಸಂಪರ್ಕ ಮಾಧ್ಯಮವಾಗಿತ್ತು. `ಸೈನಿಕರಿಗೆ ರಜೆ ಸಿಗದೆ ಊರಿಗೆ ಬರಲಾಗದಿದ್ದರೆ ಅವರ ಪತ್ನಿಯರು `ತೀವ್ರ ಅನಾರೋಗ್ಯ'ದ ತಾರ್ ಕಳುಹಿಸುತ್ತಿದ್ದರು. ಆಗ ಸುಲಭವಾಗಿ ರಜೆ ಸಿಗುತ್ತಿತ್ತು' ಎಂಬ ತಮಾಷೆ ಮಾತು ಸೈನ್ಯದಲ್ಲಿ ಈಗಲೂ ಪ್ರಚಲಿತದಲ್ಲಿದೆ.

`ವಸಾಹತು ವ್ಯವಸ್ಥೆ ಇದ್ದ ಕಾಲಕ್ಕೆ ಭಾರತದಲ್ಲಿ ತಾರ್‌ಗಳ ಅವಲೋಕನ ಇಲ್ಲದೆ ಯಾವ ರಾಷ್ಟ್ರಮಟ್ಟದ ರಾಜಕೀಯ ನಾಯಕರು ಇಲ್ಲವೆ ಉನ್ನತ ಸರ್ಕಾರಿ ಅಧಿಕಾರಿಗಳ ದಿನಚರಿ ಪೂರ್ಣಗೊಳ್ಳುತ್ತಿರಲಿಲ್ಲ' ಎಂದು ದಾಖಲಿಸಿದ್ದಾರೆ ಇತಿಹಾಸಕಾರ ಡೆವಿಡ್ ಆರ್ನಾಲ್ಡ್. ಹೀಗಾಗಿ ಭಾರತದ ರಾಜಕೀಯ ಚರಿತ್ರೆಯ ಅವಿಭಾಜ್ಯ ಅಂಗವಾಗಿದೆ ತಂತಿ ಸಂದೇಶ. ಅವುಗಳನ್ನೆಲ್ಲ ಕ್ರಮವಾಗಿ ಜೋಡಿಸಿಟ್ಟರೆ ಇತಿಹಾಸದ ಪುಟಗಳಾಗಿ ಆಗಿನ ಘಟನಾವಳಿಗಳ ಮೇಲೆ ಬೆಳಕು ಚೆಲ್ಲುತ್ತವೆ.

`ತಂತಿ ಸಂದೇಶದ ಸೌಲಭ್ಯ ಸಿಕ್ಕಿದ್ದರಿಂದಲೇ 1857ರಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ಕಾಲಕ್ಕೆ ಭಾರತದಲ್ಲಿ ಬ್ರಿಟಿಷ್ ಅಧಿಪತ್ಯ ಕೊನೆಗೊಳ್ಳದಂತೆ ನೋಡಿಕೊಳ್ಳಲು ಸಾಧ್ಯವಾಯಿತು' ಎಂದು ಆಗಿನ ಬ್ರಿಟಿಷ್ ಅಧಿಕಾರಿಯೊಬ್ಬರು ಹೇಳಿರುವುದು ದಾಖಲಾಗಿದೆ. ಚೀನಾ ವಿರುದ್ಧ ಇಂಗ್ಲೆಂಡ್-ಫ್ರಾನ್ಸ್‌ಗಳು ಒಟ್ಟಾಗಿ  ಯುದ್ಧ ಸಾರಿದ್ದವು. ಸಮರದಲ್ಲಿ ಭಾರತೀಯ ಸೇನೆಯೂ ಪಾಲ್ಗೊಂಡಿತ್ತು. `ಭಾರತೀಯ ಸೇನೆಯನ್ನು ತಕ್ಷಣ ವಾಪಸು ಕಳುಹಿಸಬೇಕು. ದೇಶದಲ್ಲಿ ಗಲಭೆ ಹೆಚ್ಚುವ ಸಾಧ್ಯತೆ ಇದೆ' ಎಂಬ ಸಂದೇಶ ಕಳುಹಿಸಿ ಸೈನ್ಯವನ್ನು ಕರೆಯಿಸಲಾಯಿತು. ವಾಪಸು ಬಂದ ಸೇನೆ ಸ್ವಾತಂತ್ರ್ಯ ಸಂಗ್ರಾಮವನ್ನು ಯಶಸ್ವಿಯಾಗಿ ಹತ್ತಿಕ್ಕಿತು.

ತಂತಿ ಸಂದೇಶ ಅತ್ಯಂತ ಕ್ಷಿಪ್ರ ಹಾಗೂ ಸಂಕ್ಷಿಪ್ತ ಸಂಪರ್ಕ ಮಾಧ್ಯಮವಾಗಿ ಹೆಸರಾಗಿದೆ. ಆದರೆ, ಐರ್ಲೆಂಡ್‌ನ ಆಸ್ಕರ್ ವೈಲ್ಡ್ ಅವರಷ್ಟು ಸಂಕ್ಷಿಪ್ತ ಸಂದೇಶ ಕಳುಹಿಸಿ, ಅಷ್ಟೇ ಪುಟ್ಟ ಉತ್ತರವನ್ನು ಪಡೆದ ಬೇರೊಬ್ಬ ವ್ಯಕ್ತಿ ಇಲ್ಲ. ಪ್ಯಾರಿಸ್‌ನಲ್ಲಿ ವಾಸವಾಗಿದ್ದ ಆಸ್ಕರ್, ತಮ್ಮ ಹೊಸ ಪುಸ್ತಕಕ್ಕೆ ಸಿಕ್ಕ ಪ್ರತಿಕ್ರಿಯೆ ಕುರಿತಂತೆ ಕೇಳಲು ಅವರ ಬ್ರಿಟನ್ ಪ್ರಕಾಶಕರಿಗೆ `?' ಎಂಬ ಸಂದೇಶ ಕಳುಹಿಸಿದ್ದರು. ಅದಕ್ಕೆ ಪ್ರಕಾಶಕರು ಕೊಟ್ಟ ಉತ್ತರ `!'.

ಜವಾಹರಲಾಲ್ ನೆಹರು ಅವರು 1947ರ ಅಕ್ಟೋಬರ್‌ನಲ್ಲಿ ಬ್ರಿಟನ್ ಪ್ರಧಾನಿ ಕ್ಲೆಮೆಂಟ್ ಆ್ಯಟ್ಲಿ ಅವರಿಗೆ 163 ಶಬ್ದಗಳ ಸುದೀರ್ಘ ಸಂದೇಶ ಕಳುಹಿಸಿದ್ದರು. ಕಾಶ್ಮೀರದ ವಿಷಯವಾಗಿ ಭಾರತದ ನಿಲುವನ್ನು ಅದು ವಿವರಿಸುತ್ತಿತ್ತು. ತಾರ್‌ಗಳ ರಾಜನೆಂದರೆ ಅದು ಮಾರ್ಕ್ ಟ್ವೇನ್ ಅವರು 1897ರಲ್ಲಿ ಕಳುಹಿಸಿದ್ದು. ಲಂಡನ್‌ನಲ್ಲಿದ್ದ ಅವರು, ತಮ್ಮ ನಿಧನದ ಸುದ್ದಿ ಪ್ರಕಟಿಸಿದ ಅಮೆರಿಕದ ಪತ್ರಿಕೆ ಸಂಪಾದಕರಿಗೆ ಹೀಗೆ ಸಂದೇಶ ಕಳುಹಿಸಿದ್ದರು: `ನನ್ನ ನಿಧನದ ವರದಿಗಳು ಅತಿ ಉತ್ಪ್ರೇಕ್ಷೆಯಿಂದ ಕೂಡಿವೆ' (ದಿ ರಿಪೋರ್ಟ್ಸ್ ಆಫ್ ಮೈ ಡೆತ್ ಆರ್ ಗ್ರೇಟ್ಲಿ ಎಕ್ಸಾಗ್ರೇಟೆಡ್).

ರೈಟ್ ಸಹೋದರರ ವಿಮಾನ ಯಶಸ್ವಿಯಾಗಿ ಹಾರಾಡಿದಾಗ ಅದರ ಸಂಭ್ರಮ ಕ್ಷಿಪ್ರಗತಿಯಲ್ಲಿ ಎಲ್ಲರನ್ನೂ ತಲುಪಿದ್ದು ತಾರ್‌ನಿಂದ ಹೊರತು ವಿಮಾನದಿಂದಲ್ಲ. ಜಗದ್ವಿಖ್ಯಾತ ಟೈಟಾನಿಕ್ ಹಡಗು ಮುಳುಗುವಾಗ ಅಲ್ಲಿನ ಜನ ಎದುರಿಸಿದ ಗಂಡಾಂತರ ಸನ್ನಿವೇಶಗಳನ್ನು ತಂತಿ ಸಂದೇಶಗಳೇ ಎಳೆ-ಎಳೆಯಾಗಿ ಬಿಡಿಸಿಟ್ಟಿದ್ದವು.

ಸಂದೇಶ ರವಾನೆಗೆ ದೊಡ್ಡ ಇತಿಹಾಸವೇ ಇದೆ. ಆರಂಭದ ದಿನಗಳಲ್ಲಿ ಸಂಪರ್ಕ ಸಾಧಿಸಲು ಹೊಗೆ ಹಾಕಲಾಗುತ್ತಿತ್ತು. ಎತ್ತರದ ಕಟ್ಟಡಗಳು ಇಲ್ಲವೆ ಹಡಗುಗಳಲ್ಲಿ ಬಾವುಟ ಹಾರಿಸುವ ಮೂಲಕವೂ ಸಂದೇಶ ವಿನಿಮಯ ಮಾಡಿಕೊಳ್ಳುವ ಪದ್ಧತಿ ರೂಢಿಯಲ್ಲಿತ್ತು.

ಭಾರತದಲ್ಲಿ ಪಾರಿವಾಳಗಳನ್ನು ಸಂದೇಶ ವಾಹಕಗಳಾಗಿ ಬಳಸಿದ ದೊಡ್ಡ ಪರಂಪರೆಯೇ ಇದೆ. 1844ರ ಮೇ 24ರಂದು ಸ್ಯಾಮ್ಯುವೆಲ್ ಮೋರ್ಸ್ ವಾಷಿಂಗ್ಟನ್‌ನಿಂದ ಬಾಲ್ಟಿಮೋರ್‌ನಲ್ಲಿದ್ದ ತಮ್ಮ ಸಹಾಯಕ ಅಲ್‌ಫ್ರೆಡ್ ವೇಲ್‌ಗೆ `ದೇವರು ಏನು ಮಾಡಿದ (ವಾಟ್ ಹಾತ್ ಗಾಡ್ ರಾಟ್?)' ಎಂಬ ಸಂದೇಶ ಕಳುಹಿಸುವ ಮೂಲಕ ತಂತಿ ಸಂಪರ್ಕದ ಕ್ರಾಂತಿಗೆ ಮುನ್ನುಡಿ ಬರೆದರು.

ಧ್ವನಿ ತರಂಗಗಳ ಮೂಲಕ ಶಬ್ದವನ್ನು ಗ್ರಹಿಸುವ ವ್ಯವಸ್ಥೆ ಅದಾಗಿತ್ತು. ಶಬ್ದದ ರೂಪದಲ್ಲಿದ್ದ ಸಂದೇಶವನ್ನು ಧ್ವನಿ ತರಂಗವಾಗಿ ಪರಿವರ್ತಿಸಿ ತಂತಿಗಳ ಮೂಲಕ ರವಾನೆ ಮಾಡಲಾಗುತ್ತಿತ್ತು. ಸ್ವೀಕರಿಸಿದ ಧ್ವನಿ ತರಂಗವನ್ನು ಮತ್ತೆ ಶಬ್ದದ ರೂಪಕ್ಕೆ ತರಲಾಗುತ್ತಿತ್ತು. ಇದೇ ತಂತಿ ಸಂದೇಶ.

ವೃತ್ತಿಯಿಂದ ಶಸ್ತ್ರ ಚಿಕಿತ್ಸಕರಾಗಿದ್ದ ಐರ್ಲೆಂಡ್‌ನ ವಿಲಿಯಂ ಬ್ರೂಕ್ ಓ ಶೌಘ್ನೆಸ್ಸಿ ಅವರನ್ನು ಭಾರತದಲ್ಲಿ ತಂತಿ ವ್ಯವಸ್ಥೆ ಅಳವಡಿಸಲು ಈಸ್ಟ್ ಇಂಡಿಯಾ ಕಂಪೆನಿಯಿಂದ ನೇಮಕ ಮಾಡಿಕೊಳ್ಳಲಾಯಿತು. ಕೋಲ್ಕತದಿಂದ ಡೈಮಂಡ್ ಹಾರ್ಬರ್‌ವರೆಗೆ ಹೂಗ್ಲಿ ನದಿ ದಂಡೆಯಗುಂಟ ವಿಲಿಯಂ ತಂತಿಯನ್ನು ಎಳೆದರು. ಮೂರು ವರ್ಷಗಳಲ್ಲಿ ತಂತಿ ಮಾರ್ಗವನ್ನು ಆಗ್ರಾ, ಚೆನ್ನೈ ಮತ್ತು ಬೆಂಗಳೂರು ನಗರಗಳಿಗೆ ವಿಸ್ತರಣೆ ಮಾಡಲಾಯಿತು. 4,000 ಮೈಲುಗಳಷ್ಟು ಉದ್ದದ ತಂತಿ ಮಾರ್ಗಗಳು ಸಂದೇಶಗಳನ್ನು ರವಾನೆ ಮಾಡುತ್ತಿದ್ದವು.

ತಾರ್ ಸೇವೆ ಒದಗಿಸುವಲ್ಲಿ ವೆಸ್ಟರ್ನ್ ಯೂನಿಯನ್ ಸಂಸ್ಥೆ ಜಗತ್ತಿನಲ್ಲೇ ಹೆಸರುವಾಸಿ ಆಗಿತ್ತು. 2006ರಿಂದ ಆ ಸಂಸ್ಥೆ ತನ್ನ ಸೇವೆಯನ್ನು ಸ್ಥಗಿತಗೊಳಿಸಿತು. ಅಮೆರಿಕದಲ್ಲಿ ತಂತಿ ಸಂದೇಶ ಈಗ ಇತಿಹಾಸದ ಭಾಗ. ಇಂಗ್ಲೆಂಡ್ ಮತ್ತು ಸ್ವೀಡನ್‌ಗಳಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕಲಷ್ಟೇ ತಾರ್ ಸೇವೆ ಸೀಮಿತ. ರಷ್ಯಾ, ಕೆನಡಾ, ಜರ್ಮನಿ, ಸ್ವಿಟ್ಜರ್ಲೆಂಡ್, ಬೆಲ್ಜಿಯಂ, ನೆದರ್ಲೆಂಡ್, ಸ್ಲೋವೇನಿಯಾ ಮತ್ತು ಬಹ್ರೇನ್‌ಗಳಲ್ಲಿ ತಾರ್ ಸೇವೆ ಇನ್ನೂ ಪೂರ್ಣಪ್ರಮಾಣದಲ್ಲಿ ಅಸ್ತಿತ್ವದಲ್ಲಿದೆ.

ಪ್ರಸ್ತುತ ಜಗತ್ತಿನಲ್ಲಿ ಕ್ಷಣಾರ್ಧದಲ್ಲಿ ಮಾಹಿತಿ ರವಾನೆ ಮಾಡಲು ಮೊಬೈಲ್, ಫ್ಯಾಕ್ಸ್ ಮತ್ತು ಕಂಪ್ಯೂಟರ್‌ಗಳು ಸನ್ನದ್ಧವಾಗಿವೆ. ಈ ಯಾವ ಸೌಲಭ್ಯವೂ ಇಲ್ಲದಿದ್ದ ಕಾಲದಲ್ಲಿ ಕ್ಷಿಪ್ರಗತಿಯಲ್ಲಿ ಮಾಹಿತಿ ಒದಗಿಸುತ್ತಿದ್ದ ಟೆಲಿಗ್ರಾಫ್ ಯಂತ್ರಗಳು ನೀಡಿದ ಸೇವೆ ಅನನ್ಯ. ನಿತ್ಯ ಹತ್ತು ಲಕ್ಷ ಸಂದೇಶಗಳನ್ನು ರವಾನೆ ಮಾಡುತ್ತಿದ್ದ ಸುವರ್ಣ ದಿನಗಳನ್ನು ಕಂಡಿದ್ದ ತಾರ್, ಕಳೆದ ಕೆಲವು ವರ್ಷಗಳಿಂದ ನಿತ್ಯ 5,000 ಸಂದೇಶಗಳಿಗಷ್ಟೇ ಸೀಮಿತಗೊಂಡಿತ್ತು.

ಹಿಂದೆ ಅಂಚೆ ಕಚೇರಿಯನ್ನು `ಅಂಚೆ ಮತ್ತು ತಂತಿ ಕಚೇರಿ' (ಡಾಕ್ ಔರ್ ತಾರ್ ಘರ್) ಎಂದೇ ಕರೆಯಲಾಗುತ್ತಿತ್ತು. ಬಳಿಕ ತಂತಿ ಇಲಾಖೆಯನ್ನು ಬೇರ್ಪಡಿಸಲಾಯಿತು. ಅದೇ `ಭಾರತ ಸಂಚಾರ ನಿಗಮ'ವಾಗಿ (ಬಿಎಸ್‌ಎನ್‌ಎಲ್) ರೂಪಾಂತರ ಹೊಂದಿತು. ಬಿಎಸ್‌ಎನ್‌ಎಲ್‌ಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದ ತಂತಿ ಸಂದೇಶ ವಿಭಾಗ ಇಂದು ಭಾನುವಾರ ರಾತ್ರಿಯಿಂದಲೇ ಶಾಶ್ವತವಾಗಿ ಕಣ್ಮುಚ್ಚಲಿದೆ.

ಕೋಟ್ಯಂತರ ಜನರ ನಿಧನ ವಾರ್ತೆಯನ್ನು ರವಾನಿಸಿದ ದಾಖಲೆ ತಾರ್‌ಗಿದೆ. ರೋಚಕ ನೆನಪುಗಳ ಆಗರವೇ ಆಗಿರುವ ತಾರ್ ಅವುಗಳನ್ನೆಲ್ಲ ನಮಗೆ ಸ್ಮರಿಸಿಕೊಳ್ಳಲು ಬಿಟ್ಟು, ಟಾಟಾ ಹೇಳಿ ಹೊರಟಿದೆ. ತಾರ್ ಜತೆ-ಜತೆಗೆ ಅದರ ಸಂದೇಶಗಳ ಅವಿಭಾಜ್ಯ ಭಾಗವಾಗಿದ್ದ ಡಾಟ್, ಡ್ಯಾಷ್, ಸ್ಟಾಪ್ ಶಬ್ದಗಳು ಸಹ ಜೀವ ಕಳೆದುಕೊಂಡಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT